




ಮಹತ್ತರ ಕನಸುಗಳು ನಮ್ಮನ್ನು ಗುರಿಗಳ ಕಡೆಗೆ ದೂಡುತ್ತವೆ-ವಂ. ಐವನ್ ಮೈಕಲ್ ರೋಡ್ರಿಗಸ್
ಕೃತಕ ಬುದ್ಧಿಮತ್ತೆಯಿಂದ ಮಾನವನ ನೈಸರ್ಗಿಕ ಬುದ್ಧಿಮತ್ತೆ ಕುಂಠಿತ-ವಂ|ಅಶೋಕ್ ರಾಯನ್ ಕ್ರಾಸ್ತಾ



ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಫಿಲೋ ಉತ್ಸವದ ಅಂಗವಾಗಿ ಸಾಧಕರ ದಿನಾಚರಣೆ ನಡೆಯಿತು. ಪಠ್ಯ ಹಾಗೂ ಪಠ್ಯೇತರ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.






ವಿಟ್ಲ ಶೋಕ ಮಾತಾ ದೇವಾಲಯದ ಧರ್ಮಗುರುಗಳಾದ ವಂ. ಐವನ್ ಮೈಕಲ್ ರೋಡ್ರಿಗಸ್ ಮಾತನಾಡಿ ಸಂತ ಫಿಲೋಮಿನಾದ ವಿದ್ಯಾರ್ಥಿಯಾಗಿರುವುದೇ ನಿಮಗೆ ದೊಡ್ಡ ಹೆಮ್ಮೆಯಾಗಿದೆ. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು, ಏಕೆಂದರೆ ಮಹತ್ತರ ಕನಸುಗಳು ನಮ್ಮನ್ನು ನಮ್ಮೊಳಗಿನ ಸಾಮರ್ಥ್ಯಕ್ಕಿಂತಲೂ ಮೀರಿದ ಗುರಿಗಳ ಕಡೆಗೆ ದೂಡುತ್ತವೆ. ಗುರಿ ಇಲ್ಲದ ಜೀವನವು ಬ್ರೇಕ್ ಇಲ್ಲದ ವಾಹನದಂತಿದ್ದು, ದಿಕ್ಕುತಪ್ಪಿದ ಹಾಗಾಗುತ್ತದೆ ಎಂದು ತಿಳಿಸಿದರು. ಪ್ರತಿಯೊಂದು ಸಂಬಂಧವೂ ಒಂದು ನಗುವಿನಿಂದ ಆರಂಭವಾಗುತ್ತದೆ. ಒಂದು ಸಂಬಂಧವನ್ನು ಉಳಿಸಿಕೊಳ್ಳಲು ಸೋತರೂ ಪರವಾಗಿಲ್ಲ. ಆದರೆ ಗೆಲ್ಲುವ ಪ್ರಯತ್ನದಲ್ಲಿ ಸಂಬಂಧ ಕಳೆದುಕೊಳ್ಳಬಾರದು ಎಂದು ಹೇಳಿ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.
ಗೌರವ ಅತಿಥಿ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಅನನ್ಯ ಪ್ರತಿಭೆಗಳು ಇವೆ. ಅವುಗಳ ಸಾಕಾರಕ್ಕೆ ಪರಿಶ್ರಮ ಮತ್ತು ದೇವರ ಮೇಲಿನ ನಂಬಿಕೆ ಅಗತ್ಯ. ವಿದ್ಯಾರ್ಥಿಗಳು ಸಾಧನೆಯ ಕಡೆಗೆ ಶ್ರಮ ವಹಿಸಬೇಕು. ತಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಮತ್ತು ಪೋಷಕರು ಮಾಡುವ ಮಾರ್ಗದರ್ಶನವನ್ನು ವಿದ್ಯಾರ್ಥಿಗಳು ಸದಾ ಗೌರವಿಸಬೇಕು ಎಂದು ಹೇಳಿದರು. ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ದಿವ್ಯ ಅನಿಲ್ ರೈ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿಗಳನ್ನು ಸದಾ ಉತ್ತೇಜಿಸಿ, ಬೆಂಬಲಿಸಿ ನೆರವಾಗುವ ಶಿಕ್ಷಕರಿಗೆ ಧನ್ಯವಾದ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆಯ(ಂI) ಅವಲಂಬನೆಯ ಹೆಚ್ಚಳದಿಂದ ಮಾನವನ ನೈಸರ್ಗಿಕ ಬುದ್ಧಿಮತ್ತೆ ಕುಂಠಿತವಾಗುತ್ತಿದೆ. ವಿದ್ಯಾರ್ಥಿಗಳು ಸದಾ ಸ್ಮಾರ್ಟ್, ಇನ್ನಷ್ಟು ಸ್ಮಾರ್ಟರ್ ಮತ್ತು ಕೊನೆಯಲ್ಲಿ ದಿ ಸ್ಮಾರ್ಟೆಸ್ಟ್ ಆಗಲು ಪ್ರಯತ್ನಿಸಬೇಕು ಎಂದು ಹೇಳಿದ ಅವರು ಸಾಧನೆ ಮಾಡಿದ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಶ್ರೀಪ್ರಕಾಶ್, ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆ ದೀಪ್ತಿ ಕೆ.ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿ, ವಂ. ಐವನ್ ಮೈಕಲ್ ರೋಡ್ರಿಗಸ್ರವರನ್ನು ಗೌರವಿಸಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿ ಪರಿಷತ್ ಸಂಯೋಜಕರಾದ ಕಂಪ್ಯೂಟರ್ ಸೈನ್ಸ್ ವಿಭಾಗದ ಗೋವಿಂದ ಪ್ರಕಾಶ್ ಸಿ. ಎಚ್., ವಾಣಿಜ್ಯ ವಿಭಾಗದ ಫಿಲೋಮಿನಾ ಮೊಂತೇರೊ, ಜೈವಿಕ ವಿಜ್ಞಾನ ವಿಭಾಗದ ಕವಿತಾ ಕಾರ್ಯಕ್ರಮ ಆಯೋಜಿಸಿದರು.
ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ ತೇಜಸ್ ಎ.ಕೆ. ಸ್ವಾಗತಿಸಿ ಜತೆ ಕಾರ್ಯದರ್ಶಿ ಶ್ರೀಯಾ ಎ. ಜಾನ್ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಲವಿಷಾ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿದರು.







