




@ ಸಿಶೇ ಕಜೆಮಾರ್
ಪುತ್ತೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ವಾಟ್ಸಪ್ಗಳನ್ನು ಅತೀ ಹೆಚ್ಚು ಜನರು ಬಳಸುತ್ತಿದ್ದು ಇದರಿಂದಲೇ ಹೆಚ್ಚಿನ ಜನರು ಮೋಸ ಕೂಡ ಹೋಗುತ್ತಿದ್ದಾರೆ. ಆದ್ದರಿಂದ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್, ಒಟಿಟಿ ಆಪ್ಗಳಾದ ಅರಟ್ಟೆ, ಡಿಸ್ಕಾರ್ಡ್ ಇತ್ಯಾದಿ ಓವರ್ ದಿ ಟಾಪ್ (ಒಟಿಟಿ) ಸಂದೇಶ ಸೇವೆಗಳಲ್ಲಿ ಖಾತೆ ರಚಿಸಲು ಮತ್ತು ಬಳಸಲು ಮೊಬೈಲ್ಗಳಲ್ಲಿ ಆ ಖಾತೆಗೆ ಲಿಂಗ್ ಆಗಿರುವ ಸಿಮ್ ಕಾರ್ಡ್ ಸಕ್ರೀಯ ಆಗಿರುವುದು ಕಡ್ಡಾಯವಾಗಿದೆ ಎಂದು 2025ರ ಹೊಸ ದೂರಸಂಪರ್ಕ ಸೈಬರ್ ಭದ್ರತಾ ತಿದ್ದುಪಡಿ ನಿಯಮಗಳಡಿ ಈ ಆದೇಶ ಹೊರಡಿಸಲಾಗಿದೆ.




ಆದೇಶದಲ್ಲಿರುವ ನಿಯಮಗಳೇನು?
ಮುಂದಿನ 120 ದಿನಗಳಲ್ಲಿ ಅಂದರೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ವಾಟ್ಸಾಪ್, ಟೆಲಿಗ್ರಾಂ, ಸಿಗ್ನಲ್ ಸೇರಿದಂತೆ ಎಲ್ಲ ಒಟಿಟಿ ಆಪ್ಗಳಲ್ಲಿ ಖಾತೆ ರಚಿಸಲು ಮತ್ತು ಬಳಸಲು ಆ ಮೊಬೈಲ್ ಸಂಖ್ಯೆಯ ಸಕ್ರಿಯ ಸಿಮ್ ಇರುವ ಫೋನ್ನಲ್ಲೇ ಲಾಗಿನ್ ಆಗಬೇಕಾಗುತ್ತದೆ. ಸಿಮ್ ತೆಗೆದುಬಿಟ್ಟರೆ ಅಥವಾ ಸಿಮ್ ನಿಷ್ಕ್ರಿಯಗೊಂಡರೆ ಆ ಆಪ್ ತಾನಾಗಿಯೇ ಲಾಗ್-ಔಟ್ ಆಗಲಿದೆ. ಅದನ್ನು ಮತ್ತೆ ಬಳಸಬೇಕಾದರೆ ಸಿಮ್ ಹಾಕಿ ಒಟಿಪಿ ಪಡೆದು ಲಾಗಿನ್ ಮಾಡಬೇಕಾಗುತ್ತದೆ. ವಾಟ್ಸಾಪ್ ವೆಬ್, ಡೆಸ್ಕ್ಟಾಪ್ ಆಪ್, ಟೆಲಿಗ್ರಾಂ ವೆಬ್ ಸೇರಿದಂತೆ ಎಲ್ಲ ವೆಬ್ ಆವೃತ್ತಿಗಳಲ್ಲಿ ಪ್ರತಿ 6 ಗಂಟೆಗೊಮ್ಮೆ ಸ್ವಯಂಚಾಲಿತ ಲಾಗ್-ಔಟ್ ಆಗಲಿದ್ದು ಮತ್ತೆ ಮೊಬೈಲ್ ಒಟಿಪಿ ಮೂಲಕವೇ ಲಾಗಿನ್ ಮಾಡಬೇಕಾಗುತ್ತದೆ. ಎಲ್ಲ ಆಪ್ ಕಂಪನಿಗಳು 120 ದಿನಗಳೊಳಗೆ (2026 ಮಾರ್ಚ್ ಅಂತ್ಯದೊಳಗೆ) ಈ ನಿಯಮಗಳ ಪಾಲನಾ ವರದಿ ಸಲ್ಲಿಸಬೇಕಾಗುತ್ತದೆ. ಭಾರತದಲ್ಲಿ ನೋಂದಾಯಿತ ಸಂಖ್ಯೆಗಳಿಗೆ ಮಾತ್ರ ಖಾತೆ ರಚನೆಗೆ ಅನುಮತಿ. ವಿದೇಶಿ ವರ್ಚುವಲ್ ನಂಬರ್ಗಳ ಮೂಲಕ ಖಾತೆ ತೆರೆಯಲು ಸಂಪೂರ್ಣ ನಿರ್ಬಂಧ ನೀಡಲಾಗಿದೆ.





ಮೊಬೈಲ್ನಲ್ಲಿ ವಾಟ್ಸಪ್ ಬಳಸೋದಕ್ಕೆ ಸಿಮ್ ಕಾರ್ಡ್ ಇರಲೇ ಬೇಕು !
ಪ್ರಸ್ತುತ ನಮ್ಮ ಮೊಬೈಲ್ಗಳಲ್ಲಿ ಒಮ್ಮೆ ಸಿಮ್ ಕಾರ್ಡ್ ಬಳಸಿ ಒಟಿಪಿ ಬಂದು ವಾಟ್ಸಾಪ್ ಇತ್ಯಾದಿ ಖಾತೆ ರಚಿಸಿದ ನಂತರ ಆ ಮೊಬೈಲ್ನಿಂದ ಸಿಮ್ ತೆಗೆದುಬಿಟ್ಟರೂ ಆಪ್ ಬಳಕೆ ಮುಂದುವರಿಯುತ್ತಿತ್ತು ಇದನ್ನೇ ದುರುಪಯೋಗಪಡಿಸಿಕೊಂಡು ಸೈಬರ್ ಅಪರಾಧಿಗಳು, ಉಗ್ರರು, ವಂಚಕರು ವಿದೇಶದಿಂದಲೇ ಭಾರತೀಯ ನಂಬರ್ ಖರೀದಿಸಿ, ಸಿಮ್ ನಿಷ್ಕ್ರಿಯಗೊಳಿಸಿ ವಾಟ್ಸಾಪ್/ಟೆಲಿಗ್ರಾಂ ಖಾತೆಗಳನ್ನು ರಚಿಸಿ ಅಪರಾಧ ನಡೆಸುತ್ತಿದ್ದಾರೆ. ಬಾಂಬ್ ಬೆದರಿಕೆ ಸಂದೇಶ, ಆನ್ಲೈನ್ ವಂಚನೆ ಸೇರಿದಂತೆ ಡ್ರಗ್ ಡೀಲಿಂಗ್ ಚಾಟ್ ಗ್ರೂಪ್ಗಳು ಇವೆಲ್ಲವನ್ನೂ ಟ್ರೇಸ್ ಮಾಡಲು ಪೊಲೀಸರಿಗೆ ತೊಂದರೆಯಾಗುತ್ತಿತ್ತು. ಈ ಹೊಸ ನಿಯಮದಿಂದ ಸಿಮ್ ಸಕ್ರಿಯವಾಗಿರದಿದ್ದರೆ ಖಾತೆ ಕೂಡ ಸಕ್ರಿಯವಿರದು ಇದರಿಂದ ಅಪರಾಧಿಗಳ ಗುರುತು ಸುಲಭವಾಗಲಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ಆದ್ದರಿಂದ ಇನ್ನು ಮುಂದಕ್ಕೆ ನಿಮ್ಮ ಮೊಬೈಲ್ಗಳಲ್ಲಿ ಸಿಮ್ ಕಾರ್ಡ್ ಇದ್ದರೆ ಮಾತ್ರ ನಿಮ್ಮ ವಾಟ್ಸಪ್ ಇತ್ಯಾದಿ ಖಾತೆಗಳು ಚಾಲ್ತಿಯಲ್ಲಿರುತ್ತವೆ ಇಲ್ಲದಿದ್ದರೆ ತನ್ನಷ್ಟಕ್ಕೆ ಲಾಗ್ಔಟ್ ಆಗುತ್ತವೆ.
ಸೈಬರ್ ಅಪರಾಧಗಳಿಗೆ ಕಡಿವಾಣ
ಕೇಂದ್ರ ಸರಕಾರದ ಈ ಮಹತ್ವದ ಆದೇಶದಿಂದಾಗಿ ಸೈಬರ್ ಅಪರಾಧಗಳಿಗೆ ಮತ್ತಷ್ಟು ಕಡಿವಾಣ ಬೀಳುವ ಸಾಧ್ಯತೆ ಇದೆ. ಪ್ರಸ್ತುತ ದಿನಗಳಲ್ಲಿ ಒಂದೊಮ್ಮೆ ಸಿಮ್ ಕಾರ್ಡ್ ಮೊಬೈಲ್ಗೆ ಹಾಕಿ ಒಟಿಪಿ ಪಡೆದು ವಾಟ್ಸಪ್ನಂತಹ ಖಾತೆಗಳನ್ನು ರಚಿಸಿಕೊಂಡು ಆ ಬಳಿಕ ಸಿಮ್ ತೆಗೆದು ಮನೆಯಲ್ಲಿಟ್ಟರೂ ಖಾತೆ ಚಾಲನೆಯಲ್ಲಿರುತ್ತದೆ. ಆದರೆ ಈ ಆದೇಶದಿಂದಾಗಿ ಯಾವ ಮೊಬೈಲ್ನಲ್ಲಿ ಖಾತೆ ರಚಿಸುತ್ತೇವೋ ಅದೇ ಮೊಬೈಲ್ನಲ್ಲಿ ಸಿಮ್ ಕಾರ್ಡ್ ಸಕ್ರೀಯವಾಗಿ ಇರಲೇಬೇಕಾಗುತ್ತದೆ. ಇಲ್ಲದಿದ್ದರೆ ಆಟೋಮ್ಯಾಟಿಕ್ ಆಗಿ ಖಾತೆ ನಿಷ್ಕ್ರೀಯವಾಗಲಿದೆ.







