




ಬಿಲ್ಲು ಮಾಡಿ ಹಣ ದುರುಪಯೋಗ ಆರೋಪ
ಲೋಕಾಯುಕ್ತ ಪೊಲೀಸರಿಂದ ನಗರಸಭೆಯಲ್ಲಿ ಕಡತ ಪರಿಶೀಲನೆ



ಪುತ್ತೂರು:2018ರಲ್ಲಿ ಪುತ್ತೂರು ನಗರಸಭೆಯಲ್ಲಿ ಕಸವಿಲೇವಾರಿಗಾಗಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದ 7 ಲಾರಿಗಳ ಪೈಕಿ 2 ವಾಹನಗಳನ್ನು ಮಾತ್ರ ಬಳಸಿ 5 ಲಾರಿಗಳ ಫೋರ್ಜರಿ ಬಿಲ್ಲು ಮಾಡಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿ ನಗರಸಭೆಯ ಸದಸ್ಯರಾಗಿದ್ದ ಎಚ್.ಮಹಮ್ಮದ್ ಆಲಿಯವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಡಿ.2ರಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿ ಪುತ್ತೂರು ನಗರಸಭೆಗೆ ಆಗಮಿಸಿ ಕಡತ ಪರಿಶೀಲನೆ ಮಾಡಿರುವುದಾಗಿ ತಿಳಿದು ಬಂದಿದೆ.





ನಗರ ಸಭೆಯಲ್ಲಿ ಕಸವಿಲೇವಾರಿಗಾಗಿ 2018ರಲ್ಲಿ 7 ವಾಹನಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿತ್ತು.ಬಳಿಕ ಈ 7 ಲಾರಿಗಳ ಪೈಕಿ ಕೇವಲ 2 ವಾಹನಗಳನ್ನು ಮಾತ್ರ ಬಳಸಿಕೊಂಡು ಉಳಿದ 5 ಲಾರಿಗಳ ಫೋರ್ಜರಿ ಬಿಲ್ಲು ಮಾಡಿ ರೂ.61,62,೦೦೦ ಹಣವನ್ನು ದುರುಪಯೋಗಪಡಿಸಿದ್ದಲ್ಲದೆ ಸರಕಾರ ಮತ್ತು ಮೇಲಾಧಿಕಾರಿಗಳ ಆದೇಶದಂತೆ ಕಸವಿಲೇವಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸದೆ ನಗರಸಭೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾನಿರ್ದೇಶಕರಿಗೆ 2021ರ ಜ.12ಕ್ಕೆ ದೂರು ನೀಡಿದ್ದ ಮಹಮ್ಮದ್ ಆಲಿಯವರು ಆಗಿನ ಪೌರಾಯುಕ್ತೆ ರೂಪಾ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದ ರಾಮಚಂದ್ರ, ದ್ವಿತೀಯ ದರ್ಜೆ ಸಹಾಯಕ ಇಸಾಕ್ ಎಸ್(ತಾತ್ಕಾಲಿಕ), ಲೆಕ್ಕಾಧಿಕ್ಷಕ ಚಂದ್ರರಾಮ ದೇವಾಡಿಗ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಭ್ರಷ್ಟಾಚಾರ ನಿಗ್ರಹದಳ ರದ್ದುಗೊಂಡು ಲೋಕಾಯುಕ್ತ ಮತ್ತೆ ಅಸ್ತಿತ್ವಕ್ಕೆ ಬಂದ ಬಳಿಕ ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು.ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಡಾ|ಗಾನ ಪಿ ಕುಮಾರ್ ಮತ್ತು ಸಿಬ್ಬಂದಿಗಳು ಡಿ.2ರಂದು ಪುತ್ತೂರು ನಗರಸಭೆಗೆ ಭೇಟಿ ನೀಡಿ ಈ ಸಂಬಂಧ ಕಡತ ಪರಿಶೀಲನೆ ಮಾಡಿ ತೆರಳಿದ್ದಾರೆ.
ಭ್ರಷ್ಟಾಚಾರ ಹೊರ ಬರಲಿದೆ:
2018ರ ನಮ್ಮ ಆಡಳಿತದ ಅವಧಿಯ ಕೊನೆಯ ಸಂದರ್ಭ ನಗರಸಭೆ ಕಸವಿಲೇವಾರಿಗಾಗಿ 7 ಲಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿತ್ತು.ಅದನ್ನು ನಾವು ಉದ್ಘಾಟನೆಯನ್ನೂ ಮಾಡಿದ್ದೆವು.ನಮ್ಮ ಆಡಳಿತ ಅವಧಿ ಮುಕ್ತಾಯಗೊಂಡ ನಂತರ,ಕಸ ವಿಲೇವಾರಿ ಸಮಸ್ಯೆ ಕುರಿತು ನನಗೆ ಸಾರ್ವಜನಿಕರಿಂದ ದೂರು ಬಂದಿತ್ತು.ಈ ನಿಟ್ಟಿನಲ್ಲಿ ಪರಿಶೀಲನೆ ಮಾಡಿದಾಗ ನಮ್ಮ ಅವಧಿಯಲ್ಲಿ ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗಿದ್ದ 7 ಲಾರಿಗಳ ಪೈಕಿ 2 ಲಾರಿ ಮಾತ್ರ ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿತ್ತು.ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ವಾಹನಗಳು ರಿಪೇರಿಗೆ ಹೋಗಿವೆ ಎಂದು ಹೇಳಿದ್ದರು.ಆದರೆ ನಾನು ಇದನ್ನು ಆಳವಾಗಿ ಪರಿಶೀಲನೆ ಮಾಡಿದಾಗ, ತ್ಯಾಜ್ಯ ವಿಲೇವಾರಿ ಮತ್ತು ಕಸವಿಲೇವಾರಿಗಾಗಿ ಪುತ್ತೂರು ನಗರಭೆಯಲ್ಲಿ ಟೆಂಡರ್ ಮೂಲಕ ಪಡೆಯಲಾಗಿದ್ದ ವಾಹನಗಳ ಪೈಕಿ ನಾಲ್ಕು ವಾಹನಗಳನ್ನು ಮೂಡಬಿದ್ರೆ ನಗರಸಭೆಯವರು ಟೆಂಡರ್ ಮೂಲಕ ಪಡೆದುಕೊಂಡು ಅಲ್ಲಿ ಸದ್ರಿ ವಾಹನಗಳಿಗೆ ಜಿಪಿಎಸ್ ಬಳಸಿ ಕಸ ವಿಲೇವಾರಿ ಹಾಗು ತ್ಯಾಜ್ಯ ವಿಲೇವಾರಿಗೆ ಉಪಯೋಗಿಸಿಕೊಂಡಿರುವುದು ದಾಖಲೆಗಳ ಮೂಲಕ ಕಂಡು ಬಂದಿದೆ.ಇನ್ನೊಂದು ವಾಹನವನ್ನು ಮೂಲ್ಕಿ ನಗರ ಪಂಚಾಯತ್‌ನಲ್ಲಿ ತ್ಯಾಜ್ಯ ವಿಲೇವಾರಿಗೆ ಬಳಸುವುದು ದಾಖಲೆಯಿಂದ ತಿಳಿದು ಬಂದಿದೆ.ಈ 5 ವಾಹನಗಳನ್ನೂ ಪುತ್ತೂರು ನಗರಸಭೆಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಬಳಸದಿರುವುದು ಕಂಡು ಬಂದಿದ್ದು,ಪುತ್ತೂರು ನಗರಸಭೆ ಅಧಿಕಾರಿಗಳು ಮೂಡಬಿದ್ರೆ ನಗರಸಭೆ ಮತ್ತು ಮೂಲ್ಕಿ ನಗರ ಪಂಚಾಯತ್‌ನಲ್ಲಿನ ಕಸ ಮತ್ತು ತ್ಯಾಜ್ಯ ವಿಲೇವಾರಿ ವಾಹನಗಳನ್ನು ಸೇರಿಸಿಕೊಂಡು ಒಟ್ಟು 7 ವಾಹನಗಳಿಗೆ ಬಿಲ್ಲುಗಳನ್ನು ತಯಾರಿಸಿ ಸಂಬಂಧಪಟ್ಟವರಿಗೆ ಪಾವತಿಸಿದ್ದಾರೆ.ಇದರಿಂದ ಪುತ್ತೂರು ನಗರಸಭೆಯ ಅಧಿಕಾರಿಗಳು ಫೋರ್ಜರಿ ಬಿಲ್ಲು ಮಾಡಿ ಸರಕಾರದ ಹಣವನ್ನು ದುರುಪಯೋಗ ಮಾಡಿರುವುದು ಕಂಡು ಬಂದಿದೆ.ಈ ಕುರಿತು ತಾನು ನೀಡಿದ್ದ ದೂರಿಗೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಇದೀಗ ಕಡತ ಪರಿಶೀಲನೆಗೆ ಬಂದಿದ್ದಾರೆ ಎಂದು ಹೆಚ್.ಮಹಮ್ಮದ್ ಆಲಿ ಅವರು ತಿಳಿಸಿದ್ದಾರೆ.






