




9/11, ಏಕ ನಿವೇಶನ ವಿನ್ಯಾಸ ಅನುಮೋದನೆ ಸಮಸ್ಯೆ ಬಗ್ಗೆ ಚರ್ಚೆ
ಸಭೆಯಲ್ಲಿ ಪಾಲ್ಗೊಂಡ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ
ಪುತ್ತೂರು: ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರು ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿ ಪ್ರಜಾ ಸೌಧದಲ್ಲಿ ನಗರಾಭಿವೃದ್ಧಿ ಇಲಾಖೆ,ನಗರ ಮತ್ತು ಗ್ರಾಮಾಂತರ ಯೋಜನೆ ಆಯುಕ್ತಾಲಯ, ಕಂದಾಯ ಇಲಾಖೆ,ಆರ್.ಡಿ.ಪಿ.ಆರ್, ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ 9/11 ಮತ್ತು ಏಕನಿವೇಶನ ವಿನ್ಯಾಸ ಅನುಮೋದನೆ, ಕನ್ವರ್ಷನ್ ಸಮಸ್ಯೆ ಮತ್ತು ಕಾನೂನು ತೊಡಕುಗಳ ಬಗ್ಗೆ ಚರ್ಚಿಸಿ, ವಿಚಾರ ವಿಮರ್ಶೆ ಮಾಡಿ ಸ್ಥಳದಲ್ಲೇ ಪರಿಹಾರ ಸೂಚಿಸಲಾಯಿತು.








ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸುಳ್ಯ ಯೋಜನಾ ಪ್ರಾಧಿಕಾರ (ಸೂಡ) ಅಧ್ಯಕ್ಷ ಕೆ.ಎಂ.ಮುಸ್ತಫ ಕನ್ವರ್ಷನ್, 9 & 11 ಗೆ ಪ್ರಮುಖವಾಗಿ ರಸ್ತೆ ಸಮಸ್ಯೆ ಹೆಚ್ಚಾಗಿದ್ದು, ಅರ್ಜಿದಾರರ ಮಾಲಕತ್ವದಲ್ಲಿ ಇಲ್ಲದೆ ಇರುವ ಜಮೀನುಗಳ ಬಗ್ಗೆ ರಸ್ತೆಯ ಅಂಶ ಬಿಟ್ಟು ಕೊಡುವ ಬದಲು ಹಾಲಿ ಇರುವ ರಸ್ತೆಯ ಬಗ್ಗೆ ಅಫಿಡವಿಟ್ ಪಡೆದುಕೊಂಡು ಅನುಮೋದನೆ ನೀಡುವುದು. 3 ಬಾರಿ ಪಂಚಾಯತ್ ಗೆ ಹೋಗಿ ಬರುವುದು, ವಿವಿಧ ಇಲಾಖೆಗಳಿಗೆ ಪತ್ರ ಬರೆದು ಕಾಲ ವಿಳಂಬವಾಗುವುದನ್ನು ತಪ್ಪಿಸಬೇಕೆಂದು ವಿನಂತಿಸಿದರು. ಈ ಬಗ್ಗೆ 10 ದಿನದ ಒಳಗಾಗಿ ಆದೇಶ ಹೊರಡಿಸುವುದಾಗಿ ಸರ್ಕಾರದ ಯು ಡಿ ಕಾರ್ಯದರ್ಶಿಯವರು ತಿಳಿಸಿದರು.

ಇತರ ವಿಷಯಗಳಾದ ಕಾಲ ಮಿತಿಯೊಳಗೆ ಅರ್ಜಿಗಳ ವಿಲೇವಾರಿ, ಈ ಭಾಗವನ್ನು ಹಿಲ್ ಮತ್ತು ಕೋಸ್ಟಲ್ ಏರಿಯಾ ಎಂದು ಪರಿಗಣಿಸಿ ರಸ್ತೆಯನ್ನು 13 ಫೀಟ್ ಗಳಿಗೆ ಇಳಿಸುವುದು, ಕಮರ್ಶಿಯಲ್ ಉದ್ದೇಶ 9 ಮೀಟರ್ ಗಳಿಗೆ ನಿರ್ಬಂದಿಸುವ ಬಗ್ಗೆ ನಿಯಮಾವಳಿಗಳನ್ನು ತಿದ್ದುಪಡಿ ಮಾಡುವುದಾಗಿ ಕಾರ್ಯದರ್ಶಿ ಹೇಳಿದರು.
ಸಭೆಯಲ್ಲಿ ಸರ್ಕಾರದ ನಗರಾಭಿವೃದ್ಧಿ ಕಾರ್ಯದರ್ಶಿ ದೀಪಾಚೋಳನ್ ಐ. ಎ. ಎಸ್, ನಗರ ಮತ್ತು ಗ್ರಾಮಾoತರ ಯೋಜನೆ ಆಯುಕ್ತರಾದ ವೆಂಕಟಾ ಚಲಪತಿ ಐ ಎ ಎಸ್, ನಿರ್ದೇಶಕರಾದ ತಿಪ್ಪೇಸ್ವಾಮಿ, ಜಂಟಿ ನಿರ್ದೇಶಕರಾದ ಗೋಪಾಲಕೃಷ್ಣ, ದ.ಕ.ಜಿಲ್ಲಾಧಿಕಾರಿ ಹೆಚ್.ವಿ. ದರ್ಶನ್ ಐ.ಎ.ಎಸ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನರ್ವಾಡೆ ವಿನಾಯಕ್ ಕಾರ್ಬಾರಿ ಮೈಸೂರು ಡಿಟಿಸಿಪಿ ವಿಭಾಗೀಯ ಅಧಿಕಾರಿ ಪಂಕಜಾ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತಿತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.







