




ಪುತ್ತೂರು: ಸ್ವಚ್ಛ ಮನೆ, ಸ್ವಚ್ಛ ಗ್ರಾಮ, ಸ್ವಚ್ಛ ನಗರ, ಸ್ವಚ್ಚತೆಯೇ ಸಮೃದ್ಧಿ, ಸ್ವಚ್ಛತೆಯೇ ಸಂಸ್ಕೃತಿ ಎಂದು ಅದೆಷ್ಟೋ ಬೊಬ್ಬೆ ಹೊಡೆದರೂ ಜನ ಮಾತ್ರ ಬದಲಾದಂತೆ ಕಾಣುತ್ತಿಲ್ಲ, ರಸ್ತೆ ಬದಿಗೆ ಕಸ, ತ್ಯಾಜ್ಯ ಸುರಿಯಬೇಡಿ ಎಂದು ಗೋಗರೆದರೂ ಕಸ, ತ್ಯಾಜ್ಯಗಳು ರಸ್ತೆ ಬದಿಗೆ ಬಂದು ಬೀಳುತ್ತಲೇ ಇದೆ. ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊೖಲತ್ತಡ್ಕ-ಡಿಂಬ್ರಿ ರಸ್ತೆಯಲ್ಲಿ ಅಬ್ರೋಡ್ ಮದುವೆ ಹಾಲ್‌ನಿಂದ ಸ್ವಲ್ಪ ಮುಂದಕ್ಕೆ ಶಾಂತಿದಡಿ ಎಂಬಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿಯೇ ಪತ್ತೆಯಾಗಿದೆ. ಆದರೆ ಇದು ಅಪಾಯಕಾರಿ ಕಸವಾಗಿದೆ ಅದೇನೆಂದರೆ ಇಲ್ಲಿ ಮಕ್ಕಳಿಗೆ ಬಳಸಿದ ಪ್ಯಾಂಪರ‍್ಸ್, ಡೈಪರ‍್ಸ್‌ಗಳನ್ನು ಕಟ್ಟಿ ತಂದು ಬಿಸಾಡಿದ್ದಾರೆ.




ಕೊೖಲತ್ತಡ್ಕದಿಂದ ಡಿಂಬ್ರಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯಾಗಿದ್ದು ಈ ರಸ್ತೆಯ ಒಂದು ಬದಿ ಸಂಪೂರ್ಣವಾಗಿ ಪೊದೆಗಳಿಂದ ಮುಚ್ಚಿ ಹೋಗಿದೆ. ಪೊದೆಗಳಿಂದ ಮುಚ್ಚಿ ಹೋಗಿರುವ ಜಾಗದಲ್ಲಿಯೇ ಕಸ,ತ್ಯಾಜ್ಯದ ರಾಶಿ ತುಂಬಿ ಕೊಂಡಿದೆ. ಕಸ, ತ್ಯಾಜ್ಯ ಸೇರಿದಂತೆ ಮಕ್ಕಳಿಗೆ ಬಳಸಿದ ಪ್ಯಾಂಪರ‍್ಸ್, ಪ್ಯಾಡ್‌ಗಳನ್ನು ಕೂಡ ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಇಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಹಲವು ತಿಂಗಳುಗಳಿಂದ ಇಲ್ಲಿ ಈ ರೀತಿಯಾಗಿ ಕಸ, ತ್ಯಾಜ್ಯವನ್ನು ಸುರಿಯುತ್ತಿದ್ದಾರೆ ಆದರೆ ಯಾರೂ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ, ನಾಯಿಗಳು ಈ ತ್ಯಾಜ್ಯವನ್ನು ಎಳೆದುಕೊಂಡು ಹೋಗಿ ಚೆಲ್ಲಾಪಿಲ್ಲಿ ಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.





ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್‌ಗಳಿಂದ ಸ್ವಚ್ಛತೆಯ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಂದ ಹಾಗೂ ಅಲ್ಲಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಿದ ಪರಿಣಾಮ ಇದೀಗ ಮುಖ್ಯ ರಸ್ತೆಗಳ ಬದಿಯಲ್ಲಿ ಕಸ, ತ್ಯಾಜ್ಯ ಸುರಿಯುವ ದುರ್ಬದ್ಧಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದಾಗಿದ್ದು ಆದರೆ ಇದೀಗ ಒಳ ರಸ್ತೆಯ ಬದಿಗಳಲ್ಲಿ ಕಸ, ತ್ಯಾಜ್ಯ ಸುರಿಯವ ಕೆಲಸ ನಡೆಯುತ್ತಿದೆ. ಒಳ ರಸ್ತೆಗಳಲ್ಲಿ ಯಾರೂ ಹೋಗದ ಪ್ರದೇಶಗಳಲ್ಲಿ ಕಸ, ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
‘ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಗ್ರಾಮವನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ರೀತಿಯಾಗಿ ಕಸ, ತ್ಯಾಜ್ಯಗಳನ್ನು ರಸ್ತೆ ಬದಿಗೆ ಹಾಕುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ರಸ್ತೆ ಬದಿಗೆ ಕಸ, ತ್ಯಾಜ್ಯ ಹಾಕಿದವರ ಮೇಲೆ ಕಾನೂನಿನ ಪ್ರಕಾರ ದಂಡನೆ ವಿಧಿಸುವ ಕ್ರಮ ಮಾಡಲಾಗುವುದು.’
ಸುರೇಶ್ ಕೆ,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒಳಮೊಗ್ರು ಗ್ರಾಪಂ









