




ಉಪ್ಪಿನಂಗಡಿ: ಪುರಾಣ ಪ್ರಸಿದ್ಧ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ನೇತ್ರಾವತಿ- ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವ ಶಿವಲಿಂಗಕ್ಕೆ ಡಿ.2ರಂದು ರಾತ್ರಿ ವಿಶೇಷ ಶಿವ ಪೂಜೆ ಹಾಗೂ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು.



ಕಳೆದೆರೆಡು ವರ್ಷದಲ್ಲಿ ಬಿಳಿಯೂರು ಎಂಬಲ್ಲಿ ನೇತ್ರಾವತಿ ನದಿಗೆ ಅಣೆಕಟ್ಟನ್ನು ಕಟ್ಟಿದ ಪರಿಣಾಮ ಅದರ ಹಿನ್ನೀರು ನದಿಯಲ್ಲಿ ಶೇಖರಣೆಗೊಳ್ಳುತ್ತಿದ್ದು, ಇದರಿಂದ ಉದ್ಭವಲಿಂಗವು ಜಲಾವೃತವಾಗುತ್ತಿದೆ. ಇದರ ಪರಿಣಾಮ ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲು ಅಸಾಧ್ಯವಾಗಿತ್ತು. ಈ ಮಧ್ಯೆ ಊರಿನ ಕೆಲ ಭಕ್ತಾದಿಗಳ ಸಹಕಾರದೊಂದಿಗೆ ಈ ಬಾರಿ ಉದ್ಭವಲಿಂಗದ ಮರಳು ತೆಗೆದು ಉದ್ಭವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಂತೆ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯರವರ ಪೌರೋಹಿತ್ಯದಲ್ಲಿ ಉದ್ಭವಲಿಂಗಕ್ಕೆ ವಿಶೇಷ ಶಿವ ಪೂಜೆ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭೀಷೇಕ, ಬಿಲ್ವಪತ್ರೆಯ ಅರ್ಚನೆ ಹಾಗೂ ರುದ್ರ ಪಾರಾಯಣ ನಡೆಯಿತು. ಇದರ ಕಾರಣಕ್ಕೆ ಉದ್ಭವಲಿಂಗಕ್ಕೆ ವಿಶೇಷ ಅಭಿಷೇಕ ಹಾಗೂ ಶಿವ ಪೂಜೆಯನ್ನು ನಡೆಸಲು ಸಂಕಲ್ಪಿಸಿ ಕ್ಷೇತ್ರದ ತಂತ್ರಿಗಳಿಂದ ಒಪ್ಪಿಗೆಯನ್ನು ಪಡೆಯಲಾಗಿದೆ.





ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್, ಸದಸ್ಯರಾದ ವೆಂಕಪ್ಪ ಪೂಜಾರಿ ಮರುವೇಲು, ಸೋಮನಾಥ, ಡಾ. ರಮ್ಯ ರಾಜಾರಾಮ್, ಗೋಪಾಲಕೃಷ್ಣ ರೈ ಬೆಳ್ಳಿಪ್ಪಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಟೀಂ ದಕ್ಷಿಣ ಕಾಶಿಯ ಅಧ್ಯಕ್ಷ ಪ್ರಸನ್ನ ಪೆರಿಯಡ್ಕ, ಪ್ರವರ್ತಕ ಸಚಿನ್ ಎ.ಎಸ್., ಟೀಂ ಅಘೋರದ ಅಧ್ಯಕ್ಷ ಬೃಜೇಶ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ವಿದ್ಯಾಧರ ಜೈನ್, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಪ್ರಮುಖರಾದ ಕೆ. ಜಗದೀಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕೈಲಾರು ರಾಜಗೋಪಾಲ ಭಟ್, ಹೇರಂಭ ಶಾಸ್ತ್ರಿ, ಕೀರ್ತೇಶ್, ಸಂತೋಷ್ ಶೆಟ್ಟಿ, ಕಾರ್ತಿಕ್ ಸೇಠ್, ಜಯಂತ ಪೊರೋಳಿ, ಕಂಗ್ವೆ ವಿಶ್ವನಾಥ ಶೆಟ್ಟಿ, ತಿಮ್ಮಪ್ಪ ಗೌಡ, ರವಿ ಇಳಂತಿಲ, ವಿಜಯ ಶಿಲ್ಪಿ ಕುಕ್ಕುಜೆ, ಸುದರ್ಶನ್, ಯು. ರಾಮ, ಸದಾನಂದ ಶೆಟ್ಟಿ, ರಾಜಶೇಖರ ರೈ ಕರಾಯ, ಮಾಧವ ಆಚಾರ್ಯ, ಹರೀಶ್ ಬಂಡಾರಿ, ಮಾಧವ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ನೀರು ಹರಿಸಲು ನನಗೂ ಹಕ್ಕಿಲ್ಲ: ಅಶೋಕ್ ಕುಮಾರ್ ರೈ
ಉದ್ಭವಲಿಂಗಕ್ಕೆ ಪೂಜೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ಕಟ್ಟಿರುವ ಅಣೆಕಟ್ಟಿನ ಗೇಟಿನ ಗಾತ್ರವನ್ನು ಇಲ್ಲಿನ ಮೂರು ಮಖೆ ಜಾತ್ರೆಗಳು ಮುಗಿಯುವ ತನಕ ನಾಲ್ಕು ಮೀಟರ್ಗಿಂತ ಎರಡು ಮೀಟರ್ ತಗ್ಗಿಸಬೇಕು ಎಂಬ ಭಕ್ತರ ಬೇಡಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಶೋಕ್ ಕುಮಾರ್ ರೈಯವರು, ಇದು ಸಾಧ್ಯವಾಗದ ಮಾತು. ಅಣೆಕಟ್ಟುಗಳ ನೀರು ಸಂಗ್ರಹವನ್ನು ನಮಗೆ ಬೇಕಾದ ಹಾಗೆ ಬದಲಾವಣೆ ಮಾಡಲು ನನಗೆ ಬಿಡಿ. ಮುಖ್ಯಮಂತ್ರಿಯವರಿಗೂ ಹಕ್ಕಿಲ್ಲ. ಕುಡಿಯುವ ನೀರು ಇಲ್ಲಿ ಮುಖ್ಯವಾಗುತ್ತದೆ. ಆದ್ದರಿಂದ ಗೇಟಿನ ಗಾತ್ರ ತಗ್ಗಿಸಲು ಸಾಧ್ಯವಿಲ್ಲ. ನಾನು ಈಗಾಗಲೇ ಇಲ್ಲಿಗೆ 352 ಕೋ.ರೂ.ನ ಯೋಜನೆಯೊಂದನ್ನು ಸಿದ್ಧಪಡಿಸಿ ಕಳುಹಿಸಿದ್ದು, ಇದು ಅಂತಿಮ ಹಂತದಲ್ಲಿದ್ದು ಮುಖ್ಯಮಂತ್ರಿಯವರ ಅಂಗೀಕಾರ ಪಡೆಯುವುದಷ್ಟೇ ಬಾಕಿ ಇದೆ. ಅದು ಆದಲ್ಲಿ ಕೂಡಲ ಸಂಗಮದಂತೆ ಉದ್ಭವ ಲಿಂಗದ ಬಳಿ ಕಾಮಗಾರಿ ನಡೆಯಲಿದ್ದು, ವರ್ಷದ ಎಲ್ಲಾ ದಿನಗಳಲ್ಲೂ ನದಿಗಿಳಿದು ಉದ್ಭವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದರು.








