




ರಾಮಕುಂಜ: ಮೂರು ದಿನ ನಡೆಯಲಿರುವ ಹಳೆನೇರಂಕಿ ಸರಕಾರಿ ಉ.ಹಿ.ಪ್ರಾ.ಶಾಲೆ ’ಶತಮಾನೋತ್ಸವ ಸಂಭ್ರಮ-2025’ಕ್ಕೆ ಡಿ.5ರಂದು ಬೆಳಿಗ್ಗೆ ಚಾಲನೆ ನೀಡಲಾಯಿತು.




ಬೆಳಿಗ್ಗೆ ಹಳೆನೇರಂಕಿ ಪೇಟೆಯ ಶ್ರೀಕೃಷ್ಣ ಜನ್ಮಾಷ್ಟಮಿ ಕಟ್ಟೆಯಿಂದ ಶಾಲೆಯ ತನಕ ಹಸಿರು ಹೊರೆಕಾಣಿಕೆ ಮೆರವಣಿಗೆ ಹಾಗೂ ವಾಹನ ಜಾಥಾ ನಡೆಯಿತು. ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ನಿವೃತ್ತ ಉಪನ್ಯಾಸಕರೂ, ಶಾಲೆಯ ಹಿರಿಯ ವಿದ್ಯಾರ್ಥಿಯೂ ಆದ ಹರಿನಾರಾಯಣ ಆಚಾರ್ಯ ಎರಟಾಡಿ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮಸ್ಥರು, ಶಾಲಾ ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಅಡಿಕೆ, ತೆಂಗಿನಕಾಯಿ ಸಹಿತ ತರಕಾರಿಗಳನ್ನು ಮೆರವಣಿಗೆಯಲ್ಲಿ ತಂದು ಸಮರ್ಪಣೆ ಮಾಡಿದರು. ಬಳಿಕ ಹರಿನಾರಾಯಣ ಆಚಾರ್ಯ ಅವರು ಹೊರೆಕಾಣಿಕೆಗಳಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿನಾರಾಯಣ ಆಚಾರ್ಯ ಅವರು, ಈ ಊರಿನ ಪ್ರಮುಖರು ಆಧುನಿಕ ಶಿಕ್ಷಣದ ಅಗತ್ಯ ಮನಗಂಡು ತಮ್ಮ ಸ್ವಂತ ಜಮೀನು ನೀಡಿ 100 ವರ್ಷಗಳ ಹಿಂದೆ ಈ ವಿದ್ಯಾಸಂಸ್ಥೆ ಸ್ಥಾಪಿಸಿದ್ದರು. ಇದೊಂದು ಹಿರಿಯರ ದೂರದರ್ಶಿತ್ವದ ಕೆಲಸ ಆಗಿದೆ. ಈ ವಿದ್ಯಾಸಂಸ್ಥೆಯಲ್ಲಿ ನೂರಾರು ಮಕ್ಕಳು ಶಿಕ್ಷಣ ಪಡೆದು ಈಗ ಸುಶಿಕ್ಷಿತ ಜೀವನ ನಡೆಸುವಂತೆ ಆಗಿದೆ. ಶತಮಾನೋತ್ಸವ ಆಚರಣೆ ಈ ಶಿಕ್ಷಣ ಸಂಸ್ಥೆಗೆ ನಾವೆಲ್ಲರೂ ಸೇರಿಕೊಂಡು ಸಲ್ಲಿಸುವ ಕೃತಜ್ಞತೆಯಾಗಿದೆ. ಮೂರು ದಿನ ನಡೆಯುವ ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ. ಊರಿನ ಜನರಿಗೆ ಈ ಶಿಕ್ಷಣ ಸಂಸ್ಥೆ ಇನ್ನಷ್ಟೂ ಜ್ಞಾನದ ಬೆಳಕು ನೀಡಲಿ ಎಂದು ಹೇಳಿ ಶುಭಹಾರೈಸಿದರು.





ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ ರೈ ರಾಮಮಜಲು, ಎಸ್ಡಿಎಂಸಿ ಅಧ್ಯಕ್ಷ ವೀರೇಂದ್ರ ಪಾಲೆತಡ್ಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕದ್ರ, ಶಾಲಾ ಶತಮಾನೋತ್ಸವ ಸಮಿತಿ ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಅಲೆಪ್ಪಾಡಿ, ತೇಜಸ್ವಿನಿಶೇಖರ ಗೌಡ ಕಟ್ಟಪುಣಿ, ವಸಂತಿ ಕಣೆಮಾರು, ಪುರುಷೋತ್ತಮ ಬರೆಂಬೆಟ್ಟು, ಜೊತೆ ಕಾರ್ಯದರ್ಶಿಗಳಾದ ಶೇಖರ ಗೌಡ ಹಿರಿಂಜ, ಪ್ರೇಮನಾಥ ಪದ್ಮುಂಜ, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತ ಬಿ., ನಿವೃತ್ತ ಮುಖ್ಯಶಿಕ್ಷಕರಾದ ಸಂಜೀವ ಪೂಜಾರಿ ಬಟ್ಲಡ್ಕ, ಸುಗಂಧಿ ಕೆ., ಹಾಗೂ ವಿವಿಧ ಸಮಿತಿ ಸಂಚಾಲಕರು, ಹಿರಿಯ ವಿದ್ಯಾಥಿಗಳು, ಪೋಷಕರು, ಊರಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕರೂ, ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆದ ವೈ.ಸಾಂತಪ್ಪ ಗೌಡ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಗೌಡ ನಿರೂಪಿಸಿದರು. ಶಾಲಾ ಶಿಕ್ಷಕರಾದ ಗೀತಾಕುಮಾರಿ ಎಂ., ದಯಾನಂದ ಒ., ನವೀನ್ ಎ., ಮತ್ತಿತರರು ಸಹಕರಿಸಿದರು.
ಇಂದು ಶತ ಸಂಭ್ರಮ ಉದ್ಘಾಟನೆ;
ಡಿ.6ರಂದು ಬೆಳಿಗ್ಗೆ ಧ್ವಜಾರೋಹಣ, ಶತ ಸಂಭ್ರಮ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಶತಮಾನೋತ್ಸವದ ಸವಿನೆನಪಿಗಾಗಿ ಸುಮಾರು 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳ ಉದ್ಘಾಟನೆ, ಮಹಾದಾನಿಗಳಿಗೆ ಗೌರವ ಸಮರ್ಪಣೆ ಈ ವೇಳೆ ನಡೆಯಲಿದೆ. ಮಧ್ಯಾಹ್ನ ಸ್ಥಳೀಯ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಂದ ನೃತ್ಯ ಕಲರವ, ಕಿರಿಯ ವಿಭಾಗದ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದೆ. ಸಂಜೆ ಪುಟಾಣಿ ಸಂಭ್ರಮ, ಬಳಿಕ ಶಾಲಾ ಮಕ್ಕಳಿಂದ ನೃತ್ಯ ರೂಪಕ ನಡೆಯಲಿದೆ.










