




ಪುತ್ತೂರು:ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಯೋರ್ವರಿಗೆ ಕರೆ ಮಾಡಿ ಪೀಡಿಸಿ ಬೆದರಿಕೆಯೊಡ್ಡಿದ್ದ ಆರೋಪಿಯನ್ನು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ನೆಟ್ಟಣಿಗೆಮುಡ್ನೂರು ಗ್ರಾಮದ ನೆಲ್ಲಿತ್ತಡ್ಕ ನಿವಾಸಿ ಸಮೀಕ್ಷಾ ಎಸ್.ರೈಯವರು ಈ ಕುರಿತು ನೀಡಿದ್ದ ದೂರಿನ ಮೇರೆಗೆ ಮಡ್ಯಂಗಳದ ನಿತೇಶ್ ರೈ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.



ಸುಮಾರು 6 ವರ್ಷಗಳಿಂದ ತನಗೆ ಪರಿಚಿತನಾಗಿದ್ದ ನಿತೇಶ್, ತನ್ನನ್ನು ಪ್ರೀತಿಸುವಂತೆ ಪದೇ ಪದೇ ಒತ್ತಾಯ ಮಾಡಿ ಪೀಡಿಸುತ್ತಿದ್ದುದಲ್ಲದೆ 2022ರ ಸೆ.28ರಂದು ಸಂಜೆ ಮೊಬೈಲ್ ಕರೆ ಮತ್ತು ಎಸ್ಎಂಎಸ್ ಮಾಡಿ ಪ್ರೀತಿಸುವಂತೆ ಒತ್ತಾಯ ಮಾಡಿ ಪೀಡಿಸಿದ್ದ.2022ರ ದ.29ರಂದು ಆರೋಪಿಯು ಕಾರಲ್ಲಿ ತಮ್ಮ ಮನೆಯ ಬಳಿ ಬಂದಿದ್ದು ತನ್ನ ತಂದೆಯವರು ನೋಡಿದಾಗ ಅಲ್ಲಿಂದ ಪರಾರಿಯಾಗಿದ್ದ.ಆರೋಪಿಯಿಂದ ತನಗೆ ಅಥವಾ ಮನೆಯವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಯುವತಿ ತಿಳಿಸಿದ್ದರು.





ಪೊಲೀಸರು ಆರೋಪಿ ವಿರುದ್ಧ ಕಲಂ 354(ಡಿ),506 ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ತನಿಖೆ ನಡೆಸಿ ಆರೋಪಿ ವಿರುದ್ಧ ಪುತ್ತೂರಿನ 1ನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.ಆರೋಪಿ ಪರ ನ್ಯಾಯವಾದಿ ಎಬಿನ್ ಪಿ ಪ್ರಾನ್ಸಿಸ್ ಬೆಳ್ತಂಗಡಿ ವಾದಿಸಿದ್ದರು.










