




ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ಮೂಲೆ ಶ್ರೀ ರಕ್ತೇಶ್ವರಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪುನಃನಿರ್ಮಾಣ ಜೀರ್ಣೋದ್ಧಾರ ಕಾರ್ಯದ ವಿಜ್ಞಾಪನಾ ಪತ್ರದ ಬಿಡುಗಡೆ ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ನೆರವೇರಿದ್ದು, ಇದೀಗ ಶ್ರೀ ಕ್ಷೇತ್ರದ ಶಿಲಾನ್ಯಾಸವು ಜನವರಿ 2ರಂದು ಜರಗಲಿದೆ. ಈ ನಿಟ್ಟಿನಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಡಿ.12ರಂದು ಶ್ರೀ ಕ್ಷೇತ್ರದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.




ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ರೈ ಮಿಶನ್ಮೂಲೆ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಅಧ್ಯಕ್ಷ ಸತೀಶ್ ರೈ ಮಿಶನ್ಮೂಲೆ, ಗೌರವ ಸಲಹೆಗಾರರಾದ ಶಿವರಾಮ ಆಳ್ವ ಬಳ್ಳಮಜಲು, ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅರುಣ್ ಕುಮಾರ್ ಪುತ್ತಿಲ, ರಘುನಾಥ ರೈ ಕೆಯ್ಯೂರು, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತಂತ್ರಿಗಳಾದ ಕುಕ್ಕಾಡಿ ಪ್ರೀತಂ ಪುತ್ತೂರಾಯ, ಶ್ರೀ ಕ್ಷೇತ್ರದ ಅಧ್ಯಕ್ಷ ರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶೇಖರ್ ಬಿ.ಕೆ, ಆಂತರಿಕ ಲೆಕ್ಕ ಪರಿಶೋಧಕ ವಿಶ್ವನಾಥ ರೈ ಮಿಶನ್ಮೂಲೆ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಮುಕ್ರಂಪಾಡಿ, ಸತೀಶ್ ಎಂ, ಕೋಶಾಧಿಕಾರಿ ಮೋಹನ್ ಕುಮಾರ್, ಜೊತೆ ಕಾರ್ಯದರ್ಶಿಗಳಾದ ಸಂತೋಷ್ ರೈ, ಲಕ್ಷ್ಮಣ ಶೆಟ್ಟಿ, ಸುಂದರ ಕೆ. ಸಹಿತ ಹಲವರು ಭಕ್ತರು ಉಪಸ್ಥಿತರಿದ್ದರು.





ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣ:
ದೇವಸ್ಥಾನದ ಪುನಃನಿರ್ಮಾಣ ಕಾರ್ಯದ ಕುರಿತು ಅಷ್ಟಮಂಗಲ ಪ್ರಶ್ನಾಚಿಂತನೆಯನ್ನು ಶ್ರೀ ಕ್ಷೇತ್ರದಲ್ಲಿ ಇರಿಸಿದ್ದು ಸುತ್ತುಪೌಳಿ ದೇವಾಲಯ ನಿರ್ಮಾಣ, ಆದಿಯಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ಶ್ರೀ ರಕ್ತೇಶ್ವರಿ, ಶ್ರೀ ಚಾಮುಂಡೇಶ್ವರಿ ಗುಳಿಗ, ನಾಗದೇವರಿಗೆ ಆಲಯ ನಿರ್ಮಿಸಿ ಪ್ರತಿಷ್ಠಾಪನೆ, ಬ್ರಹ್ಮಕಲಶ ಕಾರ್ಯಕ್ಕೆ ಸುಮಾರು ರೂ.2.5 ಕೋಟಿ ವೆಚ್ಚದಲ್ಲಿ ಶ್ರೀ ರಕ್ತೇಶ್ವರಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನಿರ್ಮಾಣವಾಗಲಿದೆ.
ಜ.2:ಶಿಲಾನ್ಯಾಸ..
ಮೊಟ್ಟೆತ್ತಡ್ಕ ಮಿಶನ್ಮೂಲೆ ಶ್ರೀರಕ್ತೇಶ್ವರಿ-ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪುನ:ನಿರ್ಮಾಣ ಜೀರ್ಣೋದ್ಧಾರವು ತ್ವರಿತಗತಿಯಲ್ಲಿ ನಡೆಯುತ್ತಿದ್ದು ಇದರ ಶಿಲಾನ್ಯಾಸ ಕಾರ್ಯಕ್ರಮವು ಜ.2ರಂದು ಜರಗಲಿದೆ. ಈ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳಾದ ಮಾಣಿಲ ಮೋಹನ್ದಾಸ್ ಸ್ವಾಮೀಜಿ, ಹಾಸನ ಅರೆಮಾದನಹಳ್ಳಿಯ ಶ್ರೀ ಸುಜ್ಞಾನತೀರ್ಥ ಮಹಾ ಸ್ವಾಮೀಜಿರವರ ಸಹಿತ ಹಲವಾರು ಗಣ್ಯರು ಉಪಸ್ಥಿತರಿರುವರು.









