




ವರದಿ: ಸಿಶೇ ಕಜೆಮಾರ್



ಪುತ್ತೂರು: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಸರಕಾರ ಗ್ರಾಮೀಣ ಜೀವನೋಪಾಯ ಇಲಾಖೆ(ಎನ್ಆರ್ಎಲ್ಎಮ್)ಯ ಮೂಲಕ ಜಾರಿಗೆ ತಂದಿರುವ ಸಂಜೀವಿನಿ ಯೋಜನೆಯು ಗ್ರಾಮ ಪಂಚಾಯತ್ ಮಟ್ಟದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಬಹಳಷ್ಟು ಮಹಿಳೆಯರಿಗೆ ವೃತ್ತಿ ತರಬೇತಿ ನಿಡುವ ಜತೆಗೆ ಆರ್ಥಿಕ ನೆರವು ಕೂಡ ನೀಡುತ್ತಿದೆ. ಸಂಜೀವಿನಿ ಒಕ್ಕೂಟದ ಮೂಲಕ ಮಹಿಳಾ ಗುಂಪುಗಳನ್ನು ರಚಿಸಿ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಲು ಸಹಕಾರಿ ಆಗಿದೆ. ಈ ನಿಟ್ಟಿನಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಮಟ್ಟದ ಅನುಗ್ರಹ ಸಂಜೀವಿನಿ ಒಕ್ಕೂಟವು ಕೂಡ ಯಶಸ್ವಿ ಒಕ್ಕೂಟದ ಸಾಲಿಗೆ ಸೇರಲಿದೆ. ಸಂಜೀವಿನಿ ಒಕ್ಕೂಟದಿಂದ ಅನುದಾನದ ಸಹಕಾರವನ್ನು ಪಡೆದುಕೊಂಡು ಈ ಒಕ್ಕೂಟದ ಬಹುತೇಕ ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡುತ್ತಿದ್ದು ಅದರಲ್ಲಿ ಒಂದಿಷ್ಟು ಸಾಧಕ ಮಹಿಳೆಯರನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.





ರೇಖಾ ಯತೀಶ್ ಬಿಜತ್ರೆ
ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯೆಯೂ ಆಗಿರುವ ಬಿಜತ್ರೆ ನಿವಾಸಿ ರೇಖಾರವರು ಕಳೆದ 5 ವರ್ಷಗಳಿಂದ ಸಂಜೀವಿನಿ ಒಕ್ಕೂಟದ ಸದಸ್ಯೆಯಾಗಿದ್ದಾರೆ. ಸಂಜೀವಿನಿ ಒಕ್ಕೂಟದಿಂದ ಸಾಲ ರೂಪದಲ್ಲಿ ಅನುದಾನ ಪಡೆದುಕೊಂಡ ಇವರು ಹೈನುಗಾರಿಕೆ, ನಾಟಿ ಕೋಟಿ ಸಾಕಾಣಿಕೆಯೊಂದಿಗೆ ಮಲ್ಲಿಗೆ ಕೃಷಿಯನ್ನು ಕೂಡ ಮಾಡುತ್ತಿದ್ದಾರೆ. ವಿಶೇಷವಾಗಿ ಸಂಜೀವಿನಿ ಒಕ್ಕೂಟದಿಂದ ಟೈಲರಿಂಗ್ ಎಂಬ್ರಾಡರಿ ತರಬೇತಿ ಪಡೆದುಕೊಂಡಿದ್ದಾರೆ. ಇದಲ್ಲದೆ ಬಟ್ಟೆ ಚೀಲ ತಯಾರಿಕಾ ಘಟಕದಲ್ಲಿ ವೇಸ್ಟ್ ಆಗಿ ಉಳಿದ ಬಟ್ಟೆ ಚೀಲದ ತುಣುಕುಗಳನ್ನು ತೆಗೆದುಕೊಂಡು ಬಂದು ಅದರಿಂದ ಆಲಂಕಾರಿಕಾ ಹೂವಿನ ಮಾಲೆಗಳನ್ನು ತಯಾರಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಪತಿ ಯತೀಶ್ ಹಾಗೇ ಮನೆಯವರು ಕೂಡ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಸಂಜೀವಿನಿ ಒಕ್ಕೂಟದಿಂದ ನನಗೆ ಬಹಳಷ್ಟು ಪ್ರಯೋಜನ ಸಿಕ್ಕಿದೆ ಎನ್ನುತ್ತಾರೆ ರೇಖಾ ಬಿಜತ್ರೆಯವರು.
ಜಯಲಕ್ಷ್ಮೀ ಕಾಪಿಕಾಡ್
ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಿಯಾರು ಎಂಬುದಕ್ಕೆ ಅಜ್ಜಿಕಲ್ಲು ನಿವಾಸಿ ಜಯಲಕ್ಷ್ಮೀ ಕಾಪಿಕಾಡ್ರವರು ರೋಲ್ ಮಾಡೆಲ್ ತನ್ನ ಪತಿ ರಾಧಾಕೃಷ್ಣ ರೈಯವರ ಜೊತೆ ಸೇರಿಕೊಂಡು ಪುತ್ತೂರು ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಕಳೆದ 9 ವರ್ಷಗಳಿಂದ ಕ್ಯಾಂಟೀನ್ ನಡೆಸುತ್ತಿರುವ ಇವರು ಸಂಜೀವಿನಿ ಒಕ್ಕೂಟದ ಸದಸ್ಯೆಯಾಗಿದ್ದು ಒಕ್ಕೂಟದಿಂದ ಅನುದಾನ ಪಡೆದುಕೊಂಡಿದ್ದಾರೆ. ಸಂಜೀವಿನಿ ನನಗೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದೆ ಎಂದೆನ್ನುವ ಇವರು ಮಹಿಳೆಯರು ಜೀವನದಲ್ಲಿ ಮುಂದೆ ಬರಬೇಕು ಸ್ವಾವಲಂಭಿ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎನ್ನುತ್ತಾರೆ.
ಜ್ಯೋತಿ ಕಳೆಂಜಿಲ
ಪಾಪ್ಕಾರ್ನ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ…ಇಂತಜ ಪಾಪ್ಕಾರ್ನ್, ಖರ್ಜಿಕಾಯಿ ತಿಂಡಿಗಳನ್ನು ಮನೆಯಲ್ಲಿಯೇ ತಯಾರಿಸಿ ಲೈನ್ ಸೇಲ್ಗೆ ಬಿಡುವ ಜ್ಯೋತಿ ಕಳೆಂಜಿಲರವರು ಕೂಡ ಸಂಜೀವಿನಿ ಒಕ್ಕೂಟದ ಸಕ್ರೀಯ ಸದಸ್ಯೆಯಾಗಿದ್ದಾರೆ. ಕಳೆದ ೨ ವರ್ಷಗಳಿಂದ ಮನೆಯಲ್ಲಿಯೇ ಇಂತಹ ತಿಂಡಿಗಳನ್ನು ತಯಾರಿಸುತ್ತಿರುವ ಇವರು ಒಕ್ಕೂಟದಿಂದ ಆರ್ಥಿಕ ಸಹಕಾರವನ್ನು ಪಡೆದುಕೊಂಡಿದ್ದಾರೆ.ಪತಿ ಸದಾಶಿವರವರು ಕೂಡ ಒಬ್ಬ ಅನುಭವಿ ತಿಂಡಿ ಮೇಕರ್ ಆಗಿದ್ದು ಇವರ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಇನ್ನಷ್ಟು ವಿವಿಧ ಬಗೆಯ ತಿಂಡಿಗಳನ್ನು ತಯಾರಿಸಬೇಕು ಎಂದೇಳುವ ಜ್ಯೋತಿ ಕಳೆಂಜಿಲರವರು ಒಕ್ಕೂಟದಿಂದ ಬಹಳಷ್ಟು ಪ್ರಯೋಜನ ದೊರೆತಿದೆ ಎನ್ನುತ್ತಾರೆ.
ಹೇಮಲತಾ ಗುರಿಕುಮೇರು ಪರ್ಪುಂಜ
ಚಿಕ್ಕಪುಟ್ಟ ಉದ್ಯೋಗ ಕೂಡ ಮಹಿಳೆಯರನ್ನು ಸ್ವಾವಲಂಭಿಗಳಾಗಿ ಜೀವನ ನಡೆಸಲು ಸಹಕಾರ ನೀಡುತ್ತದೆ ಎನ್ನುವುದಕ್ಕೆ ಪರ್ಪುಂಜ ಗುರಿಕುಮೇರು ನಿವಾಸಿ ಹೇಮಲತಾರವರು ನಮ್ಮ ಮುಂದೆ ಕಾಣಸಿಗುತ್ತಾರೆ. ಸಂಜೀವಿನಿ ಒಕ್ಕೂಟದಿಂದ ಅನುದಾನ ಪಡೆದುಕೊಂಡು ಮನೆಯಲ್ಲಿಯೇ ನೇಂದ್ರ ಬಾಳೆಕಾಯಿಯಿಂದ ಮಸಾಲ ಚಿಪ್ಸ್ ಸೇರಿದಂತೆ ಎರಡು ಬಗೆಯ ಚಿಪ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಯಾರಿಗಾದರೂ ಶುಚಿ ರುಚಿಯಾದ ಚಿಪ್ಸ್ ಬೇಕಿದ್ದರೆ ಇವರಲ್ಲಿ ಆರ್ಡರ್ ಕೊಟ್ಟರೆ ತಯಾರಿಸಿ ಕೊಡುತ್ತಾರೆ ಇದಲ್ಲದೆ ಸಂಜೀವಿನಿ ಸಂತೆಯಲ್ಲೂ ಮಾರಾಟ ಮಾಡುತ್ತಿದ್ದಾರೆ. ಪತಿ ತಿಮ್ಮಪ್ಪ ನಾಯ್ಕರವರು ಕೂಡ ಇವರ ಈ ಕೆಲಸಕ್ಕೆ ಸಹಕಾರ ನೀಡುತ್ತಿದ್ದಾರೆ.
ವಿಜಯಲಕ್ಷ್ಮೀ ಕೊಲ್ಲಾಜೆ ಕೊಂಬರಡ್ಕ
ಕಳೆದ 7 ವರ್ಷದಿಂದ ಟೈಲರಿಂಗ್ ವೃತ್ತಿ ಮಾಡುತ್ತಿರುವ ಕೊಲ್ಲಾಜೆ ಕೊಂಬರಡ್ಕ ನಿವಾಸಿ ವಿಜಯಲಕ್ಷ್ಮೀಯವರು ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಟೈಲರಿಂಗ್ ಆರಂಭಿಸಿ ಬಳಿಕ ಸಂಜೀವಿನಿ ಒಕ್ಕೂಟದಿಂದ ಸಾಲ ಪಡೆದು ಇದೀಗ ಇಬ್ಬರು ನೌಕರರನ್ನು ಇಟ್ಟುಕೊಂಡು ದೊಡ್ಡಮಟ್ಟದಲ್ಲಿ ಕುಂಬ್ರದಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದಾರೆ. ಸಂಜೀವಿನಿ ಒಕ್ಕೂಟವು ಸ್ವ ಉದ್ಯೋಗಕ್ಕೆ ನೆರವು ನೀಡಿದ್ದು ನನಗೆ ಬಹಳಷ್ಟು ಅನುಕೂಲವಾಗಿದೆ. ನನ್ನ ವೃತ್ತಿ ಬದುಕಿಗೆ ಒಕ್ಕೂಟ ಸಹಕಾರ ನೀಡಿದೆ ಎಂದೇಳುವ ಇವರು ವಿಜಯಲಕ್ಷ್ಮೀಯವರಿಗೆ ಪತಿ ನಾರಾಯಣ ರೈಯವರ ಸಹಕಾರ ಕೂಡ ಬಹಳಷ್ಟಿದೆ.
ಇವರುಗಳು ಅಲ್ಲದೆ ಬಹಳಷ್ಟು ಮಂದಿ ಮಹಿಳೆಯರು ಹೈನುಗಾರಿಕೆ ಸೇರಿದಂತೆ ವಿವಿಧ ರೀತಿಯ ಸ್ವ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಒಳಮೊಗ್ರು ಗ್ರಾಮ ಪಂಚಾಯತ್ ಮಟ್ಟದ ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ರೈ ಮೊಡಪ್ಪಾಡಿಯವರ ಸಹಕಾರ, ಪ್ರೇರಣೆ ಹಾಗೂ ಮಾರ್ಗದರ್ಶನ ಹಾಗೇ ಗ್ರಾಮ ಪಂಚಾಯತ್ ಆಡಳಿತ ಮಂಡಳಿ, ಅಧಿಕಾರಿ ವರ್ಗ ಹಾಗೇ ತಾಪಂ ಅಧಿಕಾರಿ ವರ್ಗದವರ ಸಹಕಾರ ಬಹಳಷ್ಟಿದೆ. ಮಹಿಳೆಯರಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸಿದ್ದರೆ ಅದಕ್ಕೆ ಆರ್ಥಿಕ ಬಲ ಕೊಡುವುದಲ್ಲದೆ ತರಬೇತಿಯನ್ನು ಕೂಡ ಒಕ್ಕೂಟ ನೀಡುತ್ತಿದೆ. ಒಳಮೊಗ್ರು ಗ್ರಾಮದ ಈ ಸಾಧಕ ಮಹಿಳೆಯರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಸಾಧನೆಗೊಂದು ಬಿಗ್ ಸಲ್ಯೂಟ್ ಹೇಳಲೇಬೇಕಾಗಿದೆ.
‘ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ನ ಸಂಪೂರ್ಣ ಸಹಕಾರ ಹಾಗೇ ಸಂಜೀವಿನಿ ಸದಸ್ಯರ ಸಹಕಾರದೊಂದಿಗೆ ಒಕ್ಕೂಟ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಸಮಾಜದಲ್ಲಿ ಮಹಿಳೆಯರು ಸ್ವಾಭಿಮಾನದಿಂದ ಬದುಕಬೇಕು, ಆರ್ಥಿಕವಾಗಿ ಸಬಲರಾಗಬೇಕು ಎಂಬುದೇ ಆಶಯ.’
ಚಂದ್ರಿಕಾ ರೈ ಮೊಡಪ್ಪಾಡಿ, ಎಂಬಿಕೆ ಅನುಗ್ರಹ ಸಂಜೀವಿನಿ ಒಕ್ಕೂಟ ಒಳಮೊಗ್ರು
…………
‘ ಸರಕಾರದಿಂದ ನಮ್ಮ ಒಕ್ಕೂಟಕ್ಕೆ ಆರಂಭದಲ್ಲಿ ರೂ.15 ಲಕ್ಷ ಅನುದಾನ ಬಂದಿದ್ದು ಪ್ರಸ್ತುತ ರೂ.50 ಲಕ್ಷದಷ್ಟು ಸಾಲ ವಿತರಣೆ ಮಾಡಿದ್ದೇವೆ. ವಿಶೇಷವಾಗಿ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಒಳ್ಳೆಯ ರೀತಿಯಲ್ಲಿ ಸಾಲ ವಸೂಲಾತಿ ಕೂಡ ಆಗುತ್ತಿದೆ.’
-ಚಂದ್ರಕಲಾ ಬಿ.ಸಿ ಕುಟ್ಟಿನೋಪಿನಡ್ಕ, ಎಲ್ಸಿಆರ್ಪಿ, ಸಮುದಾಯ ಸಂಪನ್ಮೂಲ ವ್ಯಕ್ತಿ
……
ಒಳಮೊಗ್ರು ಅನುಗ್ರಹ ಸಂಜೀವಿನಿ ಒಕ್ಕೂಟದಲ್ಲಿ ಒಟ್ಟು 37 ಸಂಘಗಳಿದ್ದು 440 ಸದಸ್ಯರಿದ್ದು ಒಕ್ಕೂಟದಲ್ಲಿ 15 ಮಂದಿ ಪದಾಧಿಕಾರಿಗಳಿದ್ದಾರೆ. ಒಕ್ಕೂಟವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಮಹಿಳೆಯರಿಗೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಗೀತಾ ಅಲಂಗೂರು ಕುಂಬ್ರ, ಅಧ್ಯಕ್ಷರು ಅನುಗ್ರಹ ಸಂಜೀವಿನಿ ಒಕ್ಕೂಟ









