







ಪುತ್ತೂರು:ಕ್ರಿಶ್ಚಿಯನ್ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ಪುತ್ತೂರು ವಲಯದ 12 ಚರ್ಚ್ಗಳ ಸಹಯೋಗದೊಂದಿಗೆ ಡಿ.25ರಂದು ಕ್ರಿಸ್ಮಸ್ ಹಬ್ಬದ ಅಂಗವಾಗಿ ಭವ್ಯ ಮೆರವಣಿಗೆ ಪುತ್ತೂರಿನಲ್ಲಿ ನಡೆಯಲಿದ್ದು, ಮೆರವಣಿಗೆಯಲ್ಲಿ ಪುತ್ತೂರು ವಲಯದ ಎಲ್ಲಾ ಕ್ರಿಶ್ಚಿಯನ್ ಬಾಂಧವರು ಭಾಗವಹಿಸಲು ನಾವು ವಿನಂತಿಸುತ್ತಿದ್ದೇವೆ ಎಂದು ಸಮಿತಿಯ ಹಿರಿಯ ಸದಸ್ಯ ಮೌರಿಸ್ ಮಸ್ಕರೇನ್ಹಸ್ರವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿ, ಸಹಬಾಳ್ವೆಯನ್ನು ಸಾರುವ ಈ ಹಬ್ಬವನ್ನು ಜಗತ್ತಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಸಂಜೆ ೪ ಗಂಟೆಗೆ ಪುತ್ತೂರು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮುಖ್ಯ ದ್ವಾರದ ಮುಂಭಾಗದಿಂದ ಮೆರವಣಿಗೆಯು ದರ್ಬೆ-ಕಲ್ಲಾರೆ ಮಾರ್ಗವಾಗಿ ಪುತ್ತೂರು ಗಾಂಧಿ ಕಟ್ಟೆಯವರೆಗೆ ಸಂಭ್ರಮದ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಸಿಪಿಐಎಂ ನಾಯಕ, ನ್ಯಾಯವಾದಿ ಪಿ.ಕೆ.ಸತೀಶನ್, ನಿವೃತ್ತ ಪ್ರಾಂಶುಪಾಲ ಪ್ರೊ.ಝೇವಿಯರ್ ಡಿಸೋಜ, ಪತ್ರಕರ್ತ ಸಂಶುದ್ದೀನ್ ಸಂಪ್ಯರವರು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.



ಸರ್ವಧರ್ಮೀಯರ ಹಬ್ಬಗಳ ನಾಡು:
ಮುಂದುವರೆದು ಮಾತನಾಡಿದ ಮೌರಿಸ್ ಮಸ್ಕರೇನ್ಹಸ್ರವರು, ನಮ್ಮ ದೇಶ ಸರ್ವ ಧರ್ಮೀಯರ ಹಬ್ಬಗಳ ನಾಡು. ಇಲ್ಲಿನ ಆಚಾರ-ವಿಚಾರಗಳು ನಮ್ಮಲ್ಲಿ ಹೂತು ಹೋಗಿರುವ ನಂಬಿಕೆ ಋತುಗಳ ಬದಲಾವಣೆಯಿಂದ ಬೆಳೆದು ಬಂದಿರುವ ಸಂಸ್ಕಾರ ಹಬ್ಬ ಹರಿದಿನಗಳ ಹೊನಲನ್ನೇ ಹರಿಸಿವೆ. ನಾವು ಆಚರಿಸುವ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ತನ್ನದೇ ಆದ ವೈಶಿಷ್ಟ್ಯವಿದೆ. ಒಂದು ನಿರ್ದಿಷ್ಟ ಹಿನ್ನೆಲೆ ಇದೆ. ನಮ್ಮ ಸಂಸ್ಕೃತಿಯು ದೇಗುಲದಲ್ಲಿ ಹಬ್ಬಗಳು ದೀಪವಾಗಿ ನಿರಂತರ ಉರಿಯುತ್ತಲೇ ಇರುತ್ತದೆ. ಸಾವಿರಾರು ವರ್ಷಗಳ ಚರಿತ್ರೆ ಹೊಂದಿರುವ ನಮ್ಮ ನಾಡಲ್ಲಿ ನಮ್ಮ ಹಬ್ಬಗಳು ಮಾತ್ರವಲ್ಲದೆ ಇತರೆಡೆಗಳಿಂದ ಇತರ ಸಂಸ್ಕೃತಿಗಳಿಂದ ಅದೆಷ್ಟೋ ಹಬ್ಬಗಳು ಬಂದು ಸೇರಿಕೊಂಡಿದೆ. ಅವುಗಳಲ್ಲಿ ಹಲವು ನಮ್ಮ ಹಬ್ಬಗಳಾಗಿ ಬಿಟ್ಟಿವೆ. ಅವುಗಳಲ್ಲಿ ಕ್ರಿಸ್ಮಸ್ ಹಬ್ಬವೂ ಕೂಡ ಒಂದು ಎಂದರು
ಮನುಷ್ಯತ್ವದ ಪ್ರೀತಿ ಸಾರುವ ಹಬ್ಬ:
ಮನುಷ್ಯ ಮನುಷ್ಯತ್ವದ ಬಗ್ಗೆ ಚಿಂತಿಸಲು ಮನುಷ್ಯತ್ವವನ್ನು ಇನ್ನೂ ಹೆಚ್ಚು ಪ್ರೀತಿಸಲು ಕರೆ ಕೊಡುವ ಹಬ್ಬವೇ ಕ್ರಿಸ್ಮಸ್. ಕ್ರಿಸ್ಮಸ್ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ದೇವರು ನಮ್ಮ ದೈವತ್ವವನ್ನು ಬಿಟ್ಟು ಮನುಷ್ಯತ್ವವನ್ನು ಬಯಸಿ ಮಗುವಾಗಿ ಜನಿಸಿದ ಪುಣ್ಯ ದಿನ. ವಿಚಿತ್ರವೆಂದರೆ ಯೇಸುಕ್ರಿಸ್ತ ದೇವರು ಶಿಶುವಾಗಿ ಹುಟ್ಟಿದ್ದು ಅರಮನೆಯಲ್ಲಲ್ಲ, ದನದ ಗೋದಲಿಯಲ್ಲಿ. ಮನುಷ್ಯ ಮನುಷ್ಯತ್ವವನ್ನು ಕಳೆದು ಹೋಗಿರುವ ಮನುಷ್ಯರ ಮಧ್ಯೆ ಅಲ್ಲ. ಮನುಷ್ಯನ ಉಳಿವಿಗೆ ಹಾಲುಣಿಸುವ ಹಸುಗಳ ಮಧ್ಯೆ ಕ್ರಿಸ್ತನ ಜನನ ಐತಿಹಾಸಿಕ. ಆ ಮಗುವನ್ನು ಮೊತ್ತ ಮೊದಲಾಗಿ ಕಾಣುವ ಭಾಗ್ಯ ಸಿಗುವುದು ಧರ್ಮಾಧಿಕಾರಿಗಳಿಗೆ ಅಲ್ಲ, ಕುರಿ ಕಾಯುವ ಕುರಿಗಾಹಿಗಳಿಗೆ. ಮಾನವನ ಊಹೆಗೂ ನಿಲುಕದ ಒಂದು ವಿಶೇಷ ಜನನ ನಮ್ಮ ಚರಿತ್ರೆಯಲ್ಲಿ ಕಾಣ ಸಿಗುತ್ತದೆ ಎಂದು ಮೌರಿಸ್ ಮಸ್ಕರೇನ್ಹಸ್ರವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ವಿನ್ಸೆಂಟ್ ತಾವ್ರೋ ಪುತ್ತೂರು, ಸೋನಾಲ್ ಲೋಬೋ ಪುತ್ತೂರು, ರೋಶನ್ ಲಸ್ರಾದೋ ಪುತ್ತೂರು, ವಿಲ್ರೋಯ್ ಡಿಸೋಜ ಸಿದ್ಯಾಳ ಬನ್ನೂರು, ಶಾನ್ ರೆಬೆಲ್ಲೋ ಬನ್ನೂರು ಉಪಸ್ಥಿತರಿದ್ದರು.
ಕಳೆದ ವರ್ಷದಿಂದ ಚಾಲನೆ..
ಕಳೆದ ಹಲವು ವರ್ಷಗಳ ಹಿಂದೆ ಈ ಮೆರವಣಿಗೆಯನ್ನು ಡೊನ್ ಬೊಸ್ಕೊ ಕ್ಲಬ್ ಹಾಗೂ ಕ್ರಿಸ್ಟೋಫರ್ ಅಸೋಸಿಯೇಷನ್ ರವರು ಮುನ್ನೆಡೆಸಿದ್ದರು. ಕಾರಣಾಂತರಗಳಿಂದ ಇದು ಕೆಲವು ವರ್ಷಗಳಿಂದ ಇದು ಸ್ಥಗಿತಗೊಂಡಿತ್ತು. ಮತ್ತೇ ಈ ಸಂಭ್ರಮವನ್ನು ಪುನಹ ಪ್ರಾರಂಭಿಸಲು ನಮ್ಮ ಯುವಜನತೆಯ ಒತ್ತಾಯ. ಆದ್ದರಿಂದ ಸೌಹಾರ್ದದ ಮತ್ತು ಕ್ರಿಸ್ಮಸ್ ಸಂಭ್ರಮದ ಸಂಕೇತವಾಗಿ ಕಳೆದ ವರ್ಷ ನಾವು ಕ್ರಿಶ್ಚಿಯನ್ ಹಬ್ಬಗಳ ಆಚರಣಾ ಸಮಿತಿ ಒಂದನ್ನು ರಚಿಸಿ ಮತ್ತೆ ಚಾಲನೆ ನೀಡಲಾಗಿದೆ ಎಂದು ಮೌರಿಸ್ ಮಸ್ಕರೇನ್ಹಸ್ ಹೇಳಿದರು.
ವೈಶಿಷ್ಟ್ಯತೆಗಳು..
*ಕಲ್ಲಡ್ಕ ಗೊಂಬೆಗಳು, *ಡಿ.ಜೆ,
*ನಾಸಿಕ್ ಬ್ಯಾಂಡ್, *ಸಾಂತಾಕ್ಲೋಸ್,
*ಸ್ತಬ್ಧ ಚಿತ್ರಗಳು, *ವಾದ್ಯಗೋಷ್ಠಿ
*ಸಾಂತಾಕ್ಲೋಸ್ ಧರಿಸುವವರಿಗೆ ರೂ.500 ಗಿಫ್ಟ್ ಕೂಪನ್










