







ರಾಮಕುಂಜ: ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಸಹಯೋಗದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮ ಕಡಬ ಪ್ರೆಸ್ ಕ್ಲಬ್ನಲ್ಲಿ ಡಿ.೨೮ರಂದು ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಕಡಬ ಶಾಸ್ತ್ರಿ ಕ್ಲಿನಿಕ್ನ ವೈದ್ಯಾಧಿಕಾರಿ ಡಾ|ಸಿ.ಕೆ.ಶಾಸ್ತ್ರಿ ಮಾತನಾಡಿ, ಪಂಚೇಂದ್ರಿಯಗಳಲ್ಲಿ ಒಂದಾದ ಕಿವಿಯ ಶ್ರವಣ ಶಕ್ತಿ ಕಳೆದುಕೊಂಡರೆ ಮನುಷ್ಯ ಜೀವನದಲ್ಲಿ ಖಿನ್ನತೆಗೆ ಒಳಗಾಗುತ್ತಾನೆ, ಇಂದಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಶ್ರವಣ ದೋಷ ಕಾಣಿಸಿಕೊಳ್ಳುತ್ತಿದೆ. ಇದನ್ನು ಸಕಾಲದಲ್ಲಿ ತಪಾಸಣೆ ಮಾಡಿ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಂಡರೆ ಸಮಸ್ಯೆ ಪರಿಹಾರವಾಗಬಹುದು, ಇಂದಿನ ಆಧುನಿಕ ವೈದ್ಯಕೀಯ ಪದ್ದತಿಯಲ್ಲಿ ಶ್ರವಣ ದೋಷಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಇರುವುದರಿಂದ ಶ್ರವಣ ದೋಷದಿಂದ ಮುಕ್ತವಾಗಬಹುದು ಎಂದು ಹೇಳಿದರು. ಕಡಬ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ಅವರು ಹೇಳಿದರು.



ಟೀಮ್ ಈಶ್ವರ ಮಲ್ಪೆ ಸಂಘಟನೆಯ ಸಂಚಾಲಕ ಲವ ಬಂಗೇರ ಮಾತನಾಡಿ ನಮ್ಮ ಸಂಘಟನೆಯ ಮೂಲಕ ನಡೆಯುತ್ತಿರುವ ೬೮ನೇ ಶಿಬಿರ ಇದಾಗಿದ್ದು, ಶಿಬಿರಗಳಿಂದ ಸಾವಿರಾರು ಜನಕ್ಕೆ ಪ್ರಯೋಜನವಾಗಿದೆ. ಶ್ರವಣ ಸಮಸ್ಯೆಗೆ ಸಂಬಂಧಿಸಿದ ಶಿಬಿರಗಳು ನಡೆಯುವುದು ವಿರಳವಾಗಿದ್ದು ಪತ್ರಕರ್ತರ ಸಂಘದ ಸಹಕಾರದೊಂದಿಗೆ ನಾವು ದ.ಕ. ಜಿಲ್ಲೆಯಾದ್ಯಂತ ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಟೀಮ್ ಈಶ್ವರ್ ಮಲ್ಪೆ ತಂಡದ ವೈದ್ಯಾಧಿಕಾರಿಗಳಾದ ಡಾ. ಪವನ್, ಡಾ. ಉದಯನ್ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಯಿಲ ಉಪಸ್ಥಿತರಿದ್ದರು. ನಿಯೋಜಿತ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ ವಂದಿಸಿದರು. ಪತ್ರಕರ್ತರಾದ ಸುಧಾಕರ ಆಚಾರ್ಯ ಕಾಣಿಯೂರು, ಪ್ರವೀಣ್ರಾಜ್ ಕೆ.ಎಸ್., ತಸ್ಲಿಂ ಮರ್ದಾಳ, ದಿವಾಕರ ಮುಂಡಾಲ ಮತ್ತಿತರರು ಸಹಕರಿಸಿದರು.










