







ಸ್ವಚ್ಛ ಗ್ರಾಮದತ್ತ ನಮ್ಮ ಚಿತ್ತ…ಇದು ನಮ್ಮ ಪ್ರಮಾಣವಾಗಿರಲಿ..


@ ಸಿಶೇ ಕಜೆಮಾರ್



ಅಂತೂ ಇಂತೂ 2025 ಕ್ಕೆ ಗುಡ್ಬೈ ಹೇಳುವ ಸಮಯ ಬಂದೇ ಬಿಟ್ಟಿದೆ ಹಾಗಂತ ಬದಲಾಗಿದ್ದು ಗೋಡೆಯ ಮೇಲೆ ನೇತು ಹಾಕಿದ್ದ ಕ್ಯಾಲೆಂಡರ್ ಮಾತ್ರ ಅನ್ನೋದು ಸತ್ಯ. ಹೊಸ ವರ್ಷ ಎಂದರೆ ಹೊಸ ಕ್ಯಾಲೆಂಡರ್ ವರ್ಷ ಎಂದೂ ಕರೆಯಬಹುದು ಅಂತೂ ಕ್ಯಾಲೆಂಡರ್ನ ಹೊಸ ವರ್ಷದ ಹೊಸ್ತಿಲಲ್ಲಿ ನಾವೆಲ್ಲರೂ ನಿಂತಾಗಿದೆ. 2025 ರ ಸಿಹಿ, ಕಹಿ ನೆನಪುಗಳೊಂದಿಗೆ ಡೈರಿಯ ಕೊನೇಯ ಪುಟವನ್ನು ಮಡಚಿ ಕಪಾಟಿನ ಬಾಗಿಲೊಳಗೆ ತುಂಬಿಸಿಯೂ ಆಗಿದೆ. ಬದಲಾವಣೆ ಕಾಲದ ನಿಯಮ ಹಳೆಯ ನೆನಪುಗಳು ಮಾಸಿ ಹೊಸ ಕನಸುಗಳು ಚಿಗುರಬೇಕಾಗಿದೆ. ಕಾಲದ ಹಕ್ಕಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅದು ಹಾರುತ್ತಲೆ ಇರುತ್ತದೆ. ನಿನ್ನೆಗಳನ್ನು ಹೊತ್ತುಕೊಂಡು ನಾಳೆಗಳ ಭವಿಷ್ಯದ ಕಡೆಗೆ ಹಕ್ಕಿಯ ಪಯಣ ಇದ್ದೆ ಇದೆ. ನಿನ್ನೆಗಳ ತಪ್ಪುಗಳನ್ನು. ಕಹಿಗಳನ್ನು ಕಾಲದ ಹಕ್ಕಿಯ ರೆಕ್ಕೆಗಳಿಗೆ ಕಟ್ಟಿ ಬಿಡೋಣ…ಅದು ಹಾರುತ್ತಲೆ ಇರಲಿ. ನಾಳೆಗಳ ಭವಿಷ್ಯದ ಕಡೆಗೆ ನಮ್ಮ ಜೀವನ ಪಯಣ ಸಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವು ಯೋಚಿಸಬೇಕಾಗಿರುವುದು, ಮಾಡಬೇಕಾಗಿರುವುದು ಬಹಳಷ್ಟು ಇದೆ. ನೂರಾರು ಯೋಚನೆ, ಯೋಜನೆಗಳನ್ನು ಹೊತ್ತುಕೊಂಡ ನಮ್ಮ ಕನಸಿನ ಪಯಣದಲ್ಲಿ ನಾವು ದಿಟ್ಟ ನಿರ್ಧಾರದೊಂದಿಗೆ ಪ್ರಮಾಣ ಮಾಡಬೇಕಾಗಿರುವ ಒಂದು ಮಹತ್ತರ ಕೆಲಸ ಇದೆ. ಅದುವೆ ಸ್ವಚ್ಛ ಗ್ರಾಮ. ಪ್ರಿಯ ಓದುಗರೆ, 2026ರಲ್ಲಿ ಸ್ವಚ್ಛತೆಗೆ ಸಂಬಂಧಪಟ್ಟ ಕೆಲವು ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದೆ. ಸ್ವಚ್ಛ ಮನಸ್ಸಿನಿಂದ ಪ್ರಮಾಣ ಮಾಡುವ ಮೂಲಕ ಸ್ವಚ್ಛ ಮನೆ, ಸ್ವಚ್ಛ ಗ್ರಾಮ ಸ್ವಚ್ಛ ದೇಶದತ್ತ ನಮ್ಮ ಪಯಣ ಸಾಗಬೇಕಾಗಿದೆ. ಬನ್ನಿ ಸ್ವಚ್ಛ ಮನಸ್ಸಿನಿಂದ ಈ ಕೆಳಗಿನ ಕೆಲಸಗಳನ್ನು ಮಾಡುತ್ತೇನೆ ಎಂದು ಪ್ರಮಾಣ ಮಾಡೋಣ…
ಪ್ರಮಾಣ 1- ನನ್ನದು ಸ್ವಚ್ಛ ಮನಸ್ಸು:
ಹೌದು ನನ್ನ ಮನಸ್ಸು ಸ್ವಚ್ಛವಾಗಿದೆ. ನನ್ನದು ಸ್ವಚ್ಛ ಮನಸ್ಸು ನನ್ನ ಮನಸ್ಸಲ್ಲಿ ಘನಘೋರವಾದ ಕತ್ತಲಗಳು, ನಾನು ಬಾಹ್ಯವಾಗಿ ಯಾವ ರೀತಿಯಲ್ಲಿ ಸ್ವಚ್ಚವಾಗಿದ್ದೇನೋ ಅದೇ ರೀತಿ ನನ್ನ ಮನಸ್ಸು ಕೂಡ ಸ್ವಚ್ಛವಾಗಿದೆ. ಹಾಗಂತ ಪ್ರಮಾಣ ಮಾಡುತ್ತೇನೆ. ಇಷ್ಟು ಹೇಳಿದ ಮೇಲೆ ಮುಗಿಯಿತಲ್ವ? ನನ್ನ ಮನಸ್ಸು ಸ್ವಚ್ಛವಾಗಿದೆ ಎಂದ ಮೇಲೆ ನಾನು ಪರಿಸರವನ್ನು ಹಾಳು ಮಾಡಲು ನೋಡುತ್ತೇನಾ? ಸಿಕ್ಕ ಸಿಕ್ಕ ಕಡೆಗಳಲ್ಲಿ ತ್ಯಾಜ್ಯ, ಕಸ ಕಡ್ಡಿಗಳನ್ನು ಎಸೆಯುತ್ತೇನಾ? ನನಗೂ ಗೊತ್ತು ನನ್ನ ಮನೆ, ನನ್ನ ಗ್ರಾಮ ನನ್ನ ರಸ್ತೆ ಸ್ವಚ್ಛವಾಗಿರಬೇಕು ಅಂತ ಇಷ್ಟೇಲ್ಲ ಗೊತ್ತಿರುವ ನಾನೇಕೆ ರಸ್ತೆ ಬದಿಗಳಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತೇನೆ. ಸತ್ತ ಕೋಳಿಗಳನ್ನು, ಆಡಿನ ತ್ಯಾಜ್ಯವನ್ನು ಗೋಣಿಯಲ್ಲಿ ಕಟ್ಟಿ ತೋಡಿಗೆ ಹಾಕುತ್ತೇನೆ. ಇಲ್ಲ ಇನ್ನು ಮುಂದೆ ನಾನು ಮಾಡೋದಿಲ್ಲ. ಇದು ನನ್ನ ಪ್ರಮಾಣ.

ಪ್ರಮಾಣ 2-ನಮ್ಮ ತ್ಯಾಜ್ಯ ನಮ್ಮ ಹೊಣೆ:
ಹೌದು.. ನಾನು ತಿಂದು ಬಿಸಾಡಿರುವ ಈ ಪ್ಲಾಸ್ಟಿಕ್ ಇದು ನನ್ನ ತ್ಯಾಜ್ಯ. ನಾನು ಮಾರಾಟ ಮಾಡಿರುವ ಕೋಳಿಯ ರೆಕ್ಕೆಪುಕ್ಕ, ಚರ್ಮ ಇತ್ಯಾದಿಗಳು ಇದು ನನ್ನ ತ್ಯಾಜ್ಯ, ಅಂಗಡಿಯಿಂದ ತಂದ ಕುರುಕುರೆ ಪ್ಯಾಕೆಟ್, ಗುಟ್ಕಾ, ಪಾನ್ಕಿಂಗ್ನ ರ್ಯಾಪರ್ ಇತ್ಯಾದಿಗಳ ಕೂಡ ನನ್ನ ತ್ಯಾಜ್ಯ. ಒಟ್ಟಿನಲ್ಲಿ ನಮ್ಮಿಂದ ಉತ್ಪತ್ತಿಯಾದ ಅಥವಾ ಉತ್ಪತ್ತಿಯಾಗುವ ಕಸ, ಕಡ್ಡಿ, ಪ್ಲಾಸ್ಟಿಕ್ ಇತ್ಯಾದಿಗಳು ಇವುಗಳು ನನ್ನ ವ್ಯಾಜ್ಯ ಎನ್ನುವುದು ನಮ್ಮ ಅರಿವಿಗೆ ಬಂದರೆ ಅದರ ವಿಲೇವಾರಿ ಹೊಣೆ ಕೂಡ ನಮ್ಮದೇ ಆಗಿರುತ್ತದೆ. ಆದ್ದರಿಂದ ನಮ್ಮಿಂದ ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿ ಹೊಣೆ ಅದು ನಮ್ಮದು. ನಮ್ಮ ತ್ಯಾಜ್ಯ ನಮ್ಮ ಹೊಣೆ ಈ ಮನಸ್ಸು ನಮ್ಮದಾಗಬೇಕು. ಈ ವರ್ಷದಿಂದ ನಾನು ನನ್ನಿಂದ ಉಂಟಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ, ಒಂದು ವೇಳೆ ಎಸೆದರೂ ಅದು ನನ್ನ ತಪ್ಪಾಗುತ್ತದೆ. ನಾನು ಉಂಟು ಮಾಡಿದ ತ್ಯಾಜ್ಯದ ವಿಲೇವಾರಿ ನನ್ನ ಹೊಣೆಯಾಗಿರುತ್ತದೆ ಎಂದು ಈ ಮೂಲಕ ಪ್ರಮಾಣ ಮಾಡುತ್ತೇನೆ.
ಪ್ರಮಾಣ 3-ರಸ್ತೆ ಬದಿಗೆ ಕಸ ಎಸೆಯುವುದಿಲ್ಲ:
ಕಾರಲ್ಲೋ, ಬೈಕಲ್ಲೋ ಹೋಗುವಾಗ ಮನೆಯಿಂದ ಕಟ್ಟಿಕೊಂಡು ಹೋದ ಕಸದ ಚೀಲವನ್ನು ಜನರಿಲ್ಲದ ನಿರ್ಜನ ಪ್ರದೇಶ ನೋಡಿ ರಫಕ್ ಅಂತ ಬಿಸಾಡಿ ಹೋಗಿ ಬಿಡುವುದು… ಯೋಚನೆ ಮಾಡಿ, ನಮ್ಮ ಮನೆಯಲ್ಲಿ, ನಮ್ಮ ಕಛೇರಿಯಲ್ಲಿ ನಾವುಗಳೇ ಉಂಟು ಮಾಡಿದ ಕಸವನ್ನು ಚೀಲದಲ್ಲಿ ತುಂಬಿಸಿ ರಸ್ತೆಗೆ ಬದಿಗೆ ಎಸೆದು ಹೋಗುವುದು ಎಂದರೆ ನಾವೆಷ್ಟು ಮೂರ್ಖರು. ರಸ್ತೆ ಬದಿ ನೋಡಿದರೆ ಕೆಲವೊಂದು ಕಡೆಗಳಲ್ಲಿ ಕಸದ ರಾಶಿಯೇ ತುಂಬಿಕೊಂಡಿರುತ್ತವೆ. ಇದೆಲ್ಲಾ ಯಾರು ಮಾಡಿದ್ದು? ಯಾರೋ ಒಬ್ಬ ಬುದ್ಧಿಗೇಡಿ ಒಂದು ಚೀಲ ಕಸವನ್ನು ಎಸೆದು ” ಹೋಗಿಬಿಟ್ಟ, ಮರುದಿನ ನೋಡಿದರೆ ಆದೇ ಜಾಗದಲ್ಲಿ ಹತ್ತಿಪ್ಪತ್ತು ಕಸದ ಕಟ್ಟುಗಳು ಬಿದ್ದಿರುತ್ತವೆ. ಒಬ್ಬ ಮೂರ್ಖ ಮಾಡಿದ ತಪ್ಪನ್ನು ನಾವೆಲ್ಲರೂ ಮಾಡುವುದಾದರೆ ನಮಗೆ ನಮ್ಮದೇ ಆದ ಚಿಂತನೆ ಇದೆಯಾ? ನಾವು ಪ್ರಮಾಣ ಮಾಡಬೇಕಾಗಿದೆ. ಈ ಕ್ಷಣದಿಂದ ಅಪ್ಪಿತಪ್ಪಿಯೂ ರಸ್ತೆ ಬದಿಗೆ ಕಸ,ತ್ಯಾಜ್ಯ ಹಾಕುವುದಿಲ್ಲ, ಎಸೆಯುವುದಿಲ್ಲ ಅಂತ.
ಪ್ರಮಾಣ 4-ಕೋಳಿ ತ್ಯಾಜ್ಯವನ್ನು ನಿರ್ಜನ ಪ್ರದೇಶಗಳಲ್ಲಿ ಹಾಕುವುದಿಲ್ಲ;
ಅಬ್ಬಾ ನಮ್ಮ ಬೀದಿ ರಸ್ತೆಗಳಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರೈತೆ ಎದುರಾಗಿದೆ ಎಂದರೆ ಅದು ನಾವುಗಳೇ ಮಾಡಿಕೊಂಡ ದುರಂತ. ಈ ಕೋಳಿ ವ್ಯಾಪಾರ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಡಬೇಕಾದ ಅನಿವಾರೈತೆ ಇದೆ. ಕೋಳಿ ವ್ಯಾಪಾರ ಕೂಡ ಒಳ್ಳೆಯ ವ್ಯಾಪಾರ ಹಾಗುತ ಕೋಳಿ ತ್ಯಾಜ್ಯಗಳನ್ನು ರಸ್ತೆ ಬದಿಗೆ, ಹೊಳೆಗೆ ಬಿಸಾಡುವುದು ಎಂದರೆ ಇದಕ್ಕೆ ಅರ್ಥ ಇದೆಯಾ? ಇಂತಹ ಕೀಳು ಮಟ್ಟದ ಕೆಲಸಕ್ಕೆ ಇಳಿಯುವ ಮಂದಿಗೆ ಯಾವ ಹೆಸರಿಡಬೇಕೋ ಗೊತ್ತಿಲ್ಲ, ಕೋಳಿ ತ್ಯಾಜ್ಯ ಬಿನಾಡಿದ ವ್ಯಕ್ತಿ ನಾಳೆಯೂ ಅದೇ ಜಾಗಕ್ಕೆ ಬಂದು ಮೂಗು ಮುಚ್ಚಿಕೊಂಡು ತ್ಯಾಜ್ಯ ಬಿಸಾಡಿ ಹೋಗುತ್ತಾನೆ. ಯೋಚಿಸಿ ನಮ್ಮ ಮನಸ್ಸು ಸ್ವಚ್ಛವಾಗಿದೆ. ಇಂದಿನಿಂದಲೇ ಕೋಳಿ ತ್ಯಾಜ್ಯಕ್ಕೆ ನಮ್ಮ ಅಂಗಡಿ ಬದಿಯಲ್ಲೇ ಒಂದು ತ್ಯಾಜ್ಯಗುಂಡಿ ಮಾಡುತ್ತೇನೆ ಅದು ಬಿಟ್ಟು ರಸ್ತೆಗೆ, ಹೊಳೆಗೆ, ನಿರ್ಜನ ಪ್ರದೇಶಕ್ಕೆ, ಇನ್ಯಾರದೋ ಜಾಗಕ್ಕೆ ತ್ಯಾಜ್ಯ ಹಾಕುವುದಿಲ್ಲ ಎಂದು ಈ ಮೂಲಕ ಪ್ರಮಾಣ ಮಾಡುತ್ತೇನೆ.
ಪ್ರಮಾಣ 5- ಹರಿಯುವ ಹೊಳೆ ನೀರಿಗೆ ತ್ಯಾಜ್ಯ ಹಾಕುವುದಿಲ್ಲ;
ಇದಕ್ಕಿಂತ ದೊಡ್ಡ ದುರಂತ ಈ ನಾಡಿನಲ್ಲಿದೆಯಾ? ಹರಿಯುವ ನೀರಿಗೆ ತ್ಯಾಜ್ಯಗಳನ್ನು ಸುರಿಯುತ್ತಾರೆ. ಸತ್ತ ಪ್ರಾಣಿಗಳ ದೇಹವನ್ನು ಎಸೆಯುತ್ತಾರೆ. ನಾವು ಮನುಷ್ಯರೋ ಅಲ್ವೋ ಎನ್ನುವ ಭಯ ಕಾಡ್ತಾ ಇದೆ. ತಾಲೂಕಿನ ಹೆಚ್ಚಿನ ಹೊಳೆಗಳನ್ನು ಗಮನಿಸಿದರೆ ಅದರಲ್ಲಿ ತ್ಯಾಜ್ಯ ಇದ್ದೆ ಇದೆ, ಕೋಳಿ ತ್ಯಾಜ್ಯದಿಂದ ಹಿಡಿದು ಕಸ, ಪ್ಲಾಸ್ಟಿಕ್ ಎಲ್ಲವನ್ನು ಕೂಡ ಹೊಳೆಗೆ ಎಸೆದು ಹೋಗುತ್ತಾರೆ. ಇನ್ನು ದೊಡ್ಡ ದೊಡ್ಡ ನದಿಗಳಿಗೆ ಕಾರ್ಖಾನೆಗಳ ಕೊಳಚೆ ನೀರನ್ನು ಬಿಡುತ್ತಾರೆ. ಯೋಚಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ನಾವು ಸಂಕಷ್ಟ ಪಡಬೇಕಾದ ದಿನವಿದೆ. ಈ ಕ್ಷಣದಿಂದಲೇ ನಾವು ಪ್ರಮಾಣ ಮಾಡಬೇಕು. ಹೊಳೆ ನದಿ ನೀರಿಗೆ ಯಾವುದೇ ಕಾರಣಕ್ಕೂ ತ್ಯಾಜ್ಯಗಳನ್ನು ಹಾಕುವುದಿಲ್ಲ, ನೀರಿಗೆ ತ್ಯಾಜ್ಯ ಹಾಕುವವರನ್ನು ಕಂಡರೆ ಹಿಡಿದು ಪೊಲೀಸರಿಗೆ ಕೊಡುತ್ತೇನೆ. ನೀರಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಇದು ನಮ್ಮ ಪ್ರಮಾಣವಾಗಲಿ.
ಪ್ರಮಾಣ 6-ಸಾಧ್ಯವಾದಷ್ಟು ಬಟ್ಟೆ ಚೀಲಗಳನ್ನೇ ಉಪಯೋಗಿಸುತ್ತೇನೆ:
ಕಸತ್ಯಾಜ್ಯದ ಪ್ರಮಾಣ ಹೆಚ್ಚಾಗಲಿಕ್ಕೆ ಪ್ರಮುಖ ಕಾರಣ ನಾವು ಉಪಯೋಗಿಸುವ ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳೆ ಆಗಿವೆ. ಅಂಗಡಿಯಿಂದ ಹಾಲು ಕೊಂಡೋಗಬೇಕಾದರೂ ಪ್ಲಾಸ್ಟಿಕ್ ಚೀಲ ಉಪಯೋಗಿಸುತ್ತೇವೆ. ಕೆಲವೊಂದು ಅಂಗಡಿಗಳಲ್ಲಿ ಚಹಾ ಕುಡಿಯಲು ಕೂಡ ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಾರೆ. ಇನ್ನು ಪ್ರವಾಸ ಹೋದ ಸಂದರ್ಭದಲ್ಲಿ ಪ್ಲಾಸ್ಟಿಕ್ ಅಥವಾ ಇತರ ಉಪಯೋಗಿಸಿ ಬಿಸಾಡುವ ವಸ್ತುಗಳನ್ನೇ ಉಪಯೋಗಿಸುತ್ತೇವೆ. ನಾವು ಪ್ರಮಾಣ ಮಾಡಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಸಾಧ್ಯವಾದಷ್ಟು ಬಟ್ಟೆಯ ಚೀಲ, ಇತರ ವಸ್ತುಗಳನ್ನು ಬಳಸಲು. ಪ್ರವಾಸ ಹೋಗುವ ಸಂದರ್ಭದಲ್ಲಿ ಮನೆಯಿಂದಲೇ ಸ್ಟೀಲ್ ಪಾತ್ರೆ, ಲೋಟಗಳನ್ನು ತೆಗೆದುಕೊಂಡು ಹೋಗುವುದು ಸೂಕ್ತ. ಒಟ್ಟಿನಲ್ಲಿ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಹೆಚ್ಚಿಸಲು ನಾವು ಪ್ರಮಾಣ ಮಾಡೋಣ.
ಪ್ರಮಾಣ 7-ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಹಾಕುವುದಿಲ್ಲ:
ಇದು ಕೆಲವರಿಗೆ ಸಿಂಪಲ್ ಆಗಿ ಕಾಣಬಹುದು ಆದರೆ ಇದರಷ್ಟು ಗಂಭೀರ ಬೇರಾವುದು ಇಲ್ಲ. ಅಂಗಡಿಗೆ ಹೋಗಿ ಒಂದು ಬಾಟಲ್ ಜ್ಯೂಸ್ ಕುಡಿಯುತ್ತೇವೆ. ಅದರ ಬಾಟಲನ್ನು ಹಿಂದೆ ಮುಂದೆ ನೋಡದೆ ರಪಕ್ ಅಂತ ಹೊರಗೆ ತೋಡಿಗೆ ಬಿಸಾಡಿ ಬಿಡುತ್ತೇವೆ. ಇಣುಕಿ ನೋಡಿದರೆ ನಮ್ಮಂತೆ ಹಲವು ಮಂದಿ ಬಿಸಾಡಿದ ಬಾಟಲಿಗಳು ತೋಡಿನಲ್ಲಿದೆ. ಇವೆಲ್ಲವೂ ಮಳೆಗಾಲದಲ್ಲಿ ಎಲ್ಲಿಗೆ ಸೇರುತ್ತವೆ, ಯೋಚಿಸಿದರೆ ಭಯವಾಗುತ್ತದೆ. ಪ್ರತಿ ಅಂಗಡಿ, ಶಾಪಿಂಗ್ ಮಾಲ್, ಪಾರ್ಕ್, ಕ್ರೀಮ್ ಪಾರ್ಲರ್ ಎಲ್ಲ ಕಡೆಗಳಲ್ಲೂ ಕಸದ ಬುಟ್ಟಿ ಇಟ್ಟು ನಮ್ಮನ್ನು ಉಪಯೋಗಿಸಿ ಎಂದು ಬರೆಸಿರುತ್ತಾರೆ. ಎಷ್ಟು ಮಂದಿ ಕಸದ ಬುಟ್ಟಿ ಉಪಯೋಗಿಸುತ್ತಾರೆ? ನಾವು ವಿದ್ಯಾವಂತರು, ಬುದ್ಧಿವಂತರು ಹೌದು. ಕಸ ಹಾಕುವಾಗ ಮಾತ್ರ ಇದ್ಯಾವುದನ್ನು ಗಮನಿಸುವುದೇ ಇಲ್ಲ. ಆದ್ದರಿಂದ ಸಿಕ್ಕ ಸಿಕ್ಕ ಕಡೆಗಳಲ್ಲಿ ಕಸ ಹಾಕುವುದಿಲ್ಲ. ಕಸ ಬುಟ್ಟಿಗೆ ಕಸ ಹಾಕುತ್ತೇನೆ. ಬುಟ್ಟಿ ಇಲ್ಲದಿದ್ದರೆ ಅಂಗಡಿಯವರನ ಹತ್ತಿರ ಬುಟ್ಟಿ ಇಡಲು ಹೇಳುತ್ತೇನೆ ಎಂದು ಈ ಕ್ಷಣ ಪ್ರಮಾಣ ಮಾಡಬೇಕಾಗಿದೆ.
ಪ್ರಮಾಣ 8-ಪ್ರವಾಸಿ ತಾಣಗಳಲ್ಲಿ ಗಲೀಜು ಮಾಡುವುದಿಲ್ಲ:
ಇದು 2026 ರ ಕೊನೇಯ ಪ್ರಮಾಣ. ಹೆಚ್ಚಿನವರು ಒಂದಲ್ಲ ಒಂದು ದಿನ ಪ್ರವಾಸ ಹೋಗಿಯೇ ಹೋಗುತ್ತಾರೆ. ಅದು ದೇವಸ್ಥಾನಕ್ಕೆ ಆಗಿರಬಹುದು ಅಥವಾ ಪಾರ್ಕ್, ಬೀಚ್ ಆಗಿರಬಹುದು. ನಾನು ಎಷ್ಟೋ ಬೀಚ್ಗಳಲ್ಲಿ ನೋಡಿದ್ದೇನೆ. ಮರಳಲ್ಲಿ ಕೂತುಕೊಂಡು ಏನೇನೋ ತಿಂಡಿಗಳನ್ನು ತಿನ್ನುತ್ತೇವೆ ಜ್ಯೂಸ್, ನೀರು ಕುಡಿಯುತ್ತೇವೆ. ತಿಂದು ಕುಡಿದು ಆದ ಮೇಲೆ ತಿಂಡಿಯ ರ್ಯಾಪರ್, ನೀರಿನ ಬಾಟಲ್ಗಳನ್ನು ಮರಳಿನಲ್ಲಿ ಬಿಟ್ಟು ಎದ್ದು ಬರುತ್ತೇವೆ. ಕಸ, ತ್ಯಾಜ್ಯ ಹಾಕಬೇಡಿ ಎಂದು ದೊಡ್ಡದಾಗಿ ಬೋರ್ಡ್ ಹಾಕಿರುತ್ತಾರೆ ಆದರೂ ನಾವು ಕಸ, ತ್ಯಾಜ್ಯ ಹಾಕುತ್ತೇವೆ. ಪ್ರವಾಸಿ ಕೇಂದ್ರಗಳನ್ನು ಕಸದ ರಾಶಿ ಕೇಂದ್ರ ಮಾಡುತ್ತೇವೆ. ಕಸ,ತ್ಯಾಜ್ಯ ಹಾಕಲು ಅಲ್ಲಿ ಬೇಕಾದ ವ್ಯವಸ್ಥೆ ಮಾಡಿದ್ದರೂ ನಾವು ಅದನ್ನು ಉಪಯೋಗಿಸುವುದಿಲ್ಲ. ಇದು ನಮ್ಮ ಮೂರ್ಖತನ. ಆದ್ದರಿಂದ ನಮ್ಮ ಪ್ರಮಾಣ ಹೀಗಿರಲಿ, ದೇವಸ್ಥಾನವಾಗಿರಲಿ. ಪ್ರವಾಸಿ ತಾಣವಾಗಿರಲಿ ಯಾವುದೇ ಕಾರಣಕ್ಕೂ ಅಲ್ಲಿಯ ವರಿಸರಕ್ಕೆ ಯಾವುದೇ ತೊಂದರೆ ಮಾಡುವುದಿಲ್ಲ ಕಸ, ತ್ಯಾಜ್ಯಗಳನ್ನು ಹಾಕುವುದಿಲ್ಲ ಅಂತ.
ಸ್ವಚ್ಛ ಗ್ರಾಮದತ್ತ ನಮ್ಮ ಚಿತ್ರ ಎಂಬ ನಿಟ್ಟಿನಲ್ಲಿ 2026 ಕ್ಕೆ ನಾವು ಈ 8 ಪ್ರಮಾಣಗಳನ್ನು ಕೈಗೊಳ್ಳಬೇಕಾಗಿದೆ. ಕೇವಲ ಪ್ರಮಾಣ ಮಾಡಿದರೆ ಸಾಲದು ಪ್ರಮಾಣದಂತೆ ನಡೆದುಕೊಳ್ಳುವುದು ಮುಖ್ಯ. ಮೊದಲು ನಮ್ಮ ಮನಸ್ಸು ಸ್ವಚ್ಛವಾಗಲಿ, ಆ ಬಳಿಕ ಮನೆ, ಅಂಗಳ, ಬೀದಿ ಮುಂದಕ್ಕೆ ಗ್ರಾಮ, ನಾಡು, ದೇಶ, ನಮ್ಮ ಮನಸ್ಸೇ ಸ್ವಚ್ಛವಾಗದೇ ಇದ್ದರೆ ಯಾವುದೂ ಸಾಧ್ಯವಿಲ್ಲ. ಇದು ನನ್ನ ಮನಸ್ಸಿಗೆ ಬಂದಂತಹ ಕೆಲವು ಪ್ರಮಾಣದ ವಿಷಯಗಳು ಇನ್ನಷ್ಟು ವಿಷಯಗಳು ನಿಮ್ಮ ಮನಸ್ಸಿನಲ್ಲಿಯೂ ಇರಬಹುದು. ಬನ್ನಿ ನಾವೆಲ್ಲರೂ ಸ್ವಚ್ಛಗ್ರಾಯದತ್ತ ಸಾಗೋಣ… 2026 ನಮಗೆಲ್ಲರಿಗೂ ಒಳ್ಳೆಯದನ್ನು ಮಾಡಲಿ, ಒಳ್ಳೆಯ ಪರಿಸರ ನಮ್ಮದಾಗಲಿ, ನಾವು ನಡೆಯುವ ಬೀದಿಗಳಲ್ಲಿ ಪ್ರಕೃತಿಯ ಕಂಪು ಪಸರಿಸಲಿ, ಕೊಳೆತ ದುರ್ವಾಸನೆ ಬೇಡ ಎನ್ನುವುದೇ ಎಲ್ಲರ ಆಶಯ…










