







ಸರಕಾರದಲ್ಲಿ ಅನುದಾನದ ಕೊರತೆ: ಭಾಗೀರಥಿ ಮುರುಳ್ಯ


ರಾಮಕುಂಜ: ಕಡಬ ತಾಲೂಕಿನ ಕೊಯಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ.ಪಂ.ಮತ್ತು ಉದ್ಯೋಗ ಖಾತರಿ ಯೋಜನೆ ಅನುದಾನದಲ್ಲಿ ನಿರ್ಮಾಣವಾಗಲಿರುವ ಶಾಲಾ ರಂಗಮಂದಿರ ಮತ್ತು ಭೋಜನ ಶಾಲೆ ನಿರ್ಮಾಣಕ್ಕೆ ಶಿಲಾನ್ಯಾಸ ಡಿ.31ರಂದು ನಡೆಯಿತು.



ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸರ್ಕಾರದಲ್ಲಿ ಅನುದಾನದ ಕೊರತೆ ಇದೆ. ಇದರಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಈಗಾಗಲೇ ಇಲ್ಲಿಗೆ ತಾ.ಪಂ.ಮೂಲಕ ಐದೂವರೆ ಲಕ್ಷ ರೂ. ಅನುದಾನ ನೀಡಿದ್ದು, ಮುಂದಿನ ಡಿಸೆಂಬರ್ ಒಳಗಾಗಿ ಮತ್ತೆ 5 ಲಕ್ಷ ರೂ.ಅನುದಾನ ನೀಡುವುದಾಗಿ ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಗೌಡ ಶಾಸಕರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿ ಮಾತನಾಡಿ, ಈ ವರ್ಷ ನಮ್ಮ ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದೆ. ಇದರ ನೆನಪಿಗಾಗಿ ರಂಗಮಂದಿರ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದೇವೆ, ಇದಕ್ಕೆ ಕನಿಷ್ಠ 50 ರಿಂದ 60 ಲಕ್ಷ ರೂ.ಅನುದಾನ ಬೇಕಾಗಿದೆ. ಈಗಾಗಲೇ ತಾ.ಪಂ. 3.50 ಲಕ್ಷ ರೂ. ಮತ್ತು ಭೋಜನ ಶಾಲಾ ಕಟ್ಟಡಕ್ಕೆ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಿಂದ 6 ಲಕ್ಷ ರೂ.ಅನುದಾನ ಮಂಜೂರು ಆಗಿದೆ. ಉಳಿದಂತೆ 50 ಲಕ್ಷ ರೂ. ಅನುದಾನವನ್ನು ಶಾಸಕರು ನೀಡಬೇಕು ಎಂದು ಬೇಡಿಕೆ ಮುಂದಿಟ್ಟರು.
ಕಾರ್ಯಕ್ರಮದಲ್ಲಿ ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಶ್ ಶೆಟ್ಟಿ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿ, ಕೊಯಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಸಂದೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಯಿಲ ಗ್ರಾ.ಪಂ.ಕಾರ್ಯದರ್ಶಿ ಪಮ್ಮು, ಕೊಯಿಲ ಶ್ರೀ ಸದಾಶಿವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೀರಜ್ ಕುಮಾರ್ ರೈ, ಮಾಜಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಕೊಯಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಸದಸ್ಯರಾದ ಹರ್ಷಿತ್ ಕುಮಾರ್, ಸಫೀಯ, ಗ್ಯಾರಂಟಿ ಯೋಜನೆ ಸಮಿತಿ ಸದಸ್ಯ ಎ.ಕೆ. ಬಶೀರ್, ನಿವೃತ್ತ ಮುಖ್ಯಶಿಕ್ಷಕ ಕುಶಾಲಪ್ಪ ಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಅನುಪಮ ಸ್ವಾಗತಿಸಿ, ಶಿಕ್ಷಕ ಲಂಕೇಶ್ ವಂದಿಸಿದರು.










