






ಪುತ್ತೂರು:ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದಂಗಳವರಿಗೆ ಪೌರ ಸನ್ಮಾನ ಸಮಿತಿ ಪುತ್ತೂರು ಇದರ ವತಿಯಿಂದ ಅದ್ಧೂರಿ ಸ್ವಾಗತ ಹಾಗೂ ಪೌರ ಸನ್ಮಾನ ಕಾರ್ಯಕ್ರಮ ಡಿ.31ರಂದು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರಮಾರು ಗದ್ದೆಯಲ್ಲಿ ನಡೆಯಿತು.


ಉಡುಪಿಯಿಂದ ಆಗಮಿಸಿದ ಸ್ವಾಮೀಜಿಯವರನ್ನು ದರ್ಬೆ ವೃತ್ತದ ಬಳಿ ತುಳಸಿ ಹಾರಾರ್ಪಣೆ ಮಾಡಿ ಸ್ವಾಗತಿಸಲಾಯಿತು.ಅಲ್ಲಿಂದ ತೆರೆದ ವಾಹನದ ಮೂಲಕ ಭವ್ಯ ಶೋಭಾಯಾತ್ರೆಯೊಂದಿಗೆ ದೇವಸ್ಥಾನದ ದೇವರಮಾರು ಗದ್ದೆಗೆ ಕರೆತರಲಾಯಿತು.ದರ್ಬೆಯಿಂದ ಹೊರಟ ಶೋಭಾಯಾತ್ರೆಯು ಮುಖ್ಯ ರಸ್ತೆಯ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಬಳಿಯಿಂದಾಗಿ ದೇವಸ್ಥಾನದ ಗದ್ದೆಗೆ ಆಗಮಿಸಿತು.ಮಣಿಕಂಠ ಸಿಂಗಾರಿ ಮೇಳ, ಬ್ಯಾಂಡ್ ವಾಲಗ, ಕುಣಿತ ಭಜನೆ, ಆಕರ್ಷಕ ಕೊಡೆಗಳು ಹಾಗೂ ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಯವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.ನಂತರ ದೇವಸ್ಥಾನದ ಮುಂಭಾಗದಲ್ಲಿ ಅಳವಡಿಸಲಾಗಿದ್ದ ವೇದಿಕೆಯಲ್ಲಿ ಪೌರ ಸನ್ಮಾನ ನೆರವೇರಿತು.



ವಿಠಲ ದೇವರೇ ಪುತ್ತೂರಿಗೆ ಬಂದಿದ್ದಾರೆ-ವೇದವರ್ಧನ ಶ್ರೀ:
ಪೌರ ಸನ್ಮಾನ ಸ್ವೀಕರಿಸಿದ ಶ್ರೀ ವೇದವರ್ಧನ ಶ್ರೀಪಾಂದಗಳವರು ಮಾತನಾಡಿ, ಪರ್ಯಾಯ ಅಂದರೆ ಕೇವಲ ಪೂಜೆಯಲ್ಲ.ರಾಜಸೂಯ ಯಾಗ, ಅಶ್ವಮೇಧ ಯಾಗದ ಕಲ್ಪನೆ.ಎಲ್ಲಾ ತೀರ್ಥ ಕ್ಷೇತ್ರಗಳ ದರ್ಶನ ಮಾಡಿ,ಪುಣ್ಯ ಸಂಪಾದನೆ ಮಾಡಿ ಭಕ್ತರನ್ನು ಕರೆದುಕೊಂಡು ಹೋಗಿ ಪರ್ಯಾಯದಲ್ಲಿ ಕುಳಿತುಕೊಳ್ಳುವುದಾಗಿದೆ.ಎಲ್ಲರೂ ಬಂದು ಪರ್ಯಾಯದಲ್ಲಿ ಭಾಗಿಗಳಾಗಬೇಕು. ಪರ್ಯಾಯ ಕಾರ್ಯಕ್ರಮಕ್ಕೂ ಭಕ್ತರೆಲ್ಲರೂ ಒಟ್ಟು ಸೇರಿ ಕೃಷ್ಣ ಸೇವೆ ಮಾಡಲು ನಿತ್ಯ ಉತ್ಸವ ಮಾಡುವುದು ಪದ್ದತಿ.ಪುತ್ತೂರಿನ ಜನತೆಯನ್ನು ಕರೆದುಕೊಂಡು ಬಂದಿದ್ದು ನೀವೆಲ್ಲರೂ ಪರ್ಯಾಯದಲ್ಲಿ ರಥ ಎಳೆಯುವ ಮೂಲಕ ಪರ್ಯಾಯ ಪೂರ್ಣಗೊಳಿಸಬೇಕು.ಪರ್ಯಾಯದಲ್ಲಿ ಸೇವೆ ಮಾಡುವುದರಿಂದ ಕಡಗೋಲು ಮತ್ತು ಹಗ್ಗ ಹಿಡಿದಿರುವ ಉಡುಪಿ ಕೃಷ್ಣ ಸಂಸಾರ ಎಂಬ ಸಾಗರವನ್ನು ಕಳೆದು ಮೋಕ್ಷ ಎಂಬ ಬೆಣ್ಣೆ ನೀಡಲಿದ್ದಾನೆ.ಕೃಷ್ಣ ಭಕ್ತರು ಮಾಡುವ ಪರ್ಯಾಯದಲ್ಲಿ ತಾವೆಲ್ಲರೂ ಬಂದು ಸಹಕಾರ ನೀಡಬೇಕು ಎಂದು ಹೇಳಿದರು.ಪುತ್ತೂರಿನ ಜನತೆ ಎಲ್ಲರೂ ಸೇರಿಕೊಂಡು ಮೆರವಣಿಗೆಯಲ್ಲಿ ಕರೆತಂದಿರುವುದು ನೋಟಕ್ಕೆ ಸ್ವಾಮೀಜಿಯವರನ್ನಾದರೂ ನಿಜವಾಗಿ ಕರೆದುಕೊಂಡು ಬಂದಿರುವುದು ಪರಮಾತ್ಮ ವಿಠಲ ದೇವರನ್ನು.ಪುತ್ತೂರಿನ ಜನತೆ ಉಡುಪಿ ಪರ್ಯಾಯದಲ್ಲಿ ಭಾಗಿಗಳಾಗಬೇಕು.ನಿಮ್ಮನ್ನು ಕರೆಯಲು ವಿಠಲ ದೇವರು ಬಂದಿದ್ದಾರೆ.ಒಮ್ಮೆಯಾದರೂ ಉಡುಪಿಗೆ ಬರಬೇಕು ಎಂದು ಆಮಂತ್ರಿಸಲು ವಿಠಲ ದೇವರೇ ಪುತ್ತೂರಿಗೆ ಬಂದಿದ್ದಾರೆ ಎಂದು ಸ್ವಾಮೀಜಿ ಹೇಳಿದರು.
ಗುರುಗಳಿಂದ ದೇಶಕ್ಕೆ ಒಳಿತಾಗುವ ಕಾರ್ಯ-ರವೀಶ ತಂತ್ರಿ:
ಗುರುವಂದನೆ ಮಾಡಿದ ಕುಂಟಾರು ರವೀಶ ತಂತ್ರಿಯವರು ಮಾತನಾಡಿ, ಶ್ರೀಕೃಷ್ಣ ಪೂಜೆ ನೆರವೇರಿಸಲಿರುವ ಗುರುಗಳು ಸರ್ವಜ್ಞ ಪೀಠ ಏರುವ ಮೊದಲು ದಿಗ್ವಿಜಯ ಮಾಡುವುದು ಸಂಪ್ರದಾಯ.ಪುರಪ್ರವೇಶ ಆದ ಬಳಿಕ ಸ್ವಾಗತ ನೀಡಿ ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತದೆ.ಈಗ ಎರಡು ವರ್ಷಕ್ಕೊಮ್ಮೆ ಪರ್ಯಾಯ ಪೀಠ ಏರುವ ಪ್ರಕ್ರಿಯೆ ನಡೆಯುತ್ತಿದೆ. ಪರ್ಯಾಯ ಏರಲಿರುವ ಗುರುಗಳು ಸಮಾಜ, ದೇಶಕ್ಕೆ ಒಳಿತಾಗುವ ಕಾರ್ಯಕೈಗೊಂಡು ಸಮಾಜಕ್ಕೆ ಅರ್ಪಣೆ ಮಾಡುತ್ತಾರೆ.ಆ ಕಾರ್ಯದೊಂದಿಗೆ ಕೈ ಜೋಡಿಸಬೇಕಾದ ದೊಡ್ಡ ಜವಾಬ್ದಾರಿ ಹಿಂದು ಸಮಾಜಕ್ಕಿದೆ.ಅಂತಹ ಸಂದೇಶ ರವಾನಿಸಲು, ಹಿಂದು ಸಮಾಜಕ್ಕೆ ಸಂಪ್ರದಾಯ ತಿಳಿಸಲು ಪರ್ಯಾಯ ಗುರುಗಳು ತೀರ್ಥಯಾತ್ರೆ ಮಾಡುತ್ತಿರುವುದಾಗಿದೆ.ಪರಂಪರೆಯನ್ನು ಇಂದಿನ ಸಮಾಜಕ್ಕೆ ತಿಳಿಸಲು ಧಾರ್ಮಿಕ ಭಾವನೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ಕೇರಳಲ್ಲಿ ಚುನಾವಣೆಯಲ್ಲಿ ಗೆದ್ದ ಅನ್ಯ ಮತದವರು ಸುಪ್ರಭಾತವನ್ನು ನಿಲ್ಲಿಸಲು ಮುಂದಾಗಿದ್ದು ಇದು ಮುಂದೆ ದೇಶದಾದ್ಯಂತ ವ್ಯಾಪಿಸುವ ಸಾಧ್ಯತೆಯಿದ್ದು ಜಾಗರೂಕರಾಗಿರಬೇಕು.ಧರ್ಮ ಅಂದಾಗ ನಾವೆಲ್ಲರೂ ಹಿಂದು ಸಮಾಜದ ಸಂಸ್ಕಾರ, ಸಂಸ್ಕೃತಿ ಉಳಿಸಲು ಸೈನಿಕ ಎಂಬ ಭಾವನೆಯೊಂದಿಗೆ ಇಂತಹ ಗುರುಗಳ ಮಾರ್ಗದರ್ಶನ ಪಡೆದು ಮುಂದುರಿಯಬೇಕು ಎಂದು ರವೀಶ ತಂತ್ರಿ ಹೇಳಿದರು.
ಹಿಂದೂ ಸಮಾಜಕ್ಕೆ ಸ್ವಾಮೀಜಿಯವರ ಮಾರ್ಗದರ್ಶನ ಅಗತ್ಯ-ಡಾ.ಸುರೇಶ್ ಪುತ್ತೂರಾಯ:
ಅಧ್ಯಕ್ಷತೆ ವಹಿಸಿದ್ದ ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಶಿರೂರು ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಸ್ವಾಮೀಜಿಯವರ ಪೌರ ಸನ್ಮಾನಕ್ಕಾಗಿ ನಡೆದ ಮೆರವಣಿಗೆಯಲ್ಲಿ ಪುತ್ತೂರಿನ ಸಮಸ್ತ ಹಿಂದು ಬಾಂಧವರೆಲ್ಲರೂ ಒಟ್ಟು ಸೇರುವ ಮೂಲಕ ಒಗ್ಗಟ್ಟು ಪ್ರದರ್ಶನವಾಗಿದೆ.ಪರ್ಯಾಯಾರೋಹಣ ಮಾಡಲಿರುವ ಸ್ವಾಮೀಜಿಯವರಿಂದ ಮುಂದಿನ ಎರಡು ವರ್ಷ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ಬಹಳಷ್ಟು ಅವಶ್ಯಕತೆಯಿದೆ.ಕ್ಲಿಷ್ಟ ಪರಿಸ್ಥಿತಿಯಲ್ಲಿ ಹಿಂದು ಸಮಾಜ ಹೇಗೆ ಮುಂದುವರಿಯಬೇಕೆಂದು ಶ್ರೀಗಳು ಮಾರ್ಗದರ್ಶನ ಮಾಡಲಿದ್ದಾರೆ.ಎರಡು ವರ್ಷಗಳ ಪರ್ಯಾಯ ಸಮಯ ಅವರು ಹಿಂದು ಸಮಾಜಕ್ಕೆ ಇನ್ನಷ್ಟು ಮಾರ್ಗದರ್ಶನ ನೀಡಲಿ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಪೌರ ಸನ್ಮಾನ ಸಮಿತಿ ಗೌರವಾಧ್ಯಕ್ಷ ಯು.ಪೂವಪ್ಪ, ನಗರ ಸಭಾ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ಪೌರ ಸನ್ಮಾನ ಸಮಿತಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪೌರ ಸನ್ಮಾನ:
ಪರ್ಯಾಯ ಪೀಠಾರೋಹಣ ಮಾಡಲಿರುವ ಶ್ರೀ ವೇದ ವರ್ಧನ ಶ್ರೀಪಾದಂಗಳರನ್ನು ಪೌರ ಸನ್ಮಾನ ಸಮಿತಿಯಿಂದ ಬೃಹತ್ ಹೂ ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು.ಬಳಿಕ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಮುಳಿಯ ಜ್ಯುವೆಲ್ಸ್, ಯುವವಾಹಿನಿ ವಿಟ್ಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಭಾರತೀಯ ಜನತಾ ಪಕ್ಷ ಪುತ್ತೂರು ಮಂಡಲ, ಶಿವಳ್ಳಿ ಸಂಪದ ಪುತ್ತೂರು, ಯಾದವ ಸಭಾ ತಾಲೂಕು ಸಮಿತಿ, ಗುರೂಜಿ ಯುವಕ ಮಂಡಲ ಅಡ್ಯನಡ್ಕ, ಶಾರದಾ ಪ್ರಭು, ವಿಶ್ವಕರ್ಮ ಸಮಾಜ ಬೀರಮಲೆ, ವಿಜಯ ಶಾಮಿಯಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಶ್ಚಹಿಂದು ಪರಿಷತ್ ಪುತ್ತೂರು ಪ್ರಖಂಡ, ಟೌನ್ಬ್ಯಾಂಕ್ ಪುತ್ತೂರು, ಪರಿವಾರ ಬಂಟರ ಸಂಘ ಪುತ್ತೂರು, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು, ಅನೆಗುಂದಿ ಗುರುಸೇವಾ ಪರಿಷತ್ ಮಹಾಮಂಡಲ ಪುತ್ತೂರು ವಲಯ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಸಂಸ್ಥಾನ ಪುತ್ತೂರು ವಲಯ ಅಧ್ಯಕ್ಷ ವೇಣುಗೋಪಾಲ ಸಹಿತ ಹಲವು ಮುಖಂಡರು ಹಾಗೂ ಸಂಘ ಸಂಸ್ಥೆಗಳಿಂದ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು.

ಸುಪ್ರಜಾ ರಾವ್ ಪ್ರಾರ್ಥಿಸಿದರು. ಸ್ವಾಗತ ಸಮಿತಿಯ ಸಾಜ ರಾಧಾಕೃಷ್ಣ ಆಳ್ವ ಸ್ವಾಗತಿಸಿದರು.ಪೌರ ಸನ್ಮಾನ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ದಂಪತಿ ಸ್ವಾಮೀಜಿಯವರನ್ನು ಫಲಪುಷ್ಪ ನೀಡಿ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಚಾಲಕ ರವಿಕುಮಾರ್ ರೈ ಕೆದಂಬಾಡಿ ಮಠ ಸನ್ಮಾನ ಪತ್ರ ವಾಚಿಸಿದರು.ಶಿವಪ್ರಸಾದ್ ತಲೆಪ್ಪಾಡಿ ಕಾರ್ಯಕ್ರಮ ನಿರೂಪಿಸಿ, ಹರಿಪ್ರಸಾದ್ ಯಾದವ್ ವಂದಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಛಾದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ, ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಹಿಂದೂ ಜಾಗರಣಾ ವೇದಿಕೆಯ ಅಜಿತ್ ರೈ ಹೊಸಮನೆ, ಉದ್ಯಮಿ ಶಿವರಾಮ ಆಳ್ವ, ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು,ನ್ಯಾಯವಾದಿ ನರಸಿಂಹ ಪ್ರಸಾದ್, ಶ್ರೀಕೃಷ್ಣ ಉಪಾಧ್ಯಾಯ, ಅನಿಲ್ ತೆಂಕಿಲ, ಭೀಮಯ್ಯ ಭಟ್, ರೂಪೇಶ್ ನಾಯ್ಕ್, ಸೀತಾರಾಮ ರೈ ಕೆದಂಬಾಡಿಗುತ್ತು, ವಿದ್ಯಾಧರ ಜೈನ್, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ರಾಜೇಶ್ ಬನ್ನೂರು, ಶಶಾಂಕ ಕೊಟೇಚಾ, ನಿತೀಶ್ ಶಾಂತಿವನ, ರಾಜೇಶ್ ರೈ ಪರ್ಪುಂಜ, ಜಯಲಕ್ಷ್ಮೀ ಶಗ್ರಿತ್ತಾಯ, ವಿದ್ಯಾಗೌರಿ, ಪ್ರೇಮಲತಾ ರಾವ್, ದೀಕ್ಷಾ ಪೈ, ಹರಿಣಾಕ್ಷಿ ಜೆ. ಶೆಟ್ಟಿ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಹಿಸಿದ್ದರು.
ಇಂದಿನ ಮೆರವಣಿಗೆಯಲ್ಲಿ ಭಾಗಹಿಸಿದವರೆಲ್ಲರೂ ಉಡುಪಿಗೆ ಬರಬೇಕು.ಉಡುಪಿಯಲ್ಲಿಯೂ ಪುತ್ತೂರು ಇದೆ.ಹಾಗಾಗಿ ಎಲ್ಲವೂ ನಿಮ್ಮದೆ, ಪರ್ಯಾಯೂ ನಿಮ್ಮದೆ, ಕೃಷ್ಣನೂ ನಿಮ್ಮವನೆ. ಹಾಗಾಗಿ ತಾವೆಲ್ಲರೂ ಪರ್ಯಾಯಕ್ಕೆ ಬಂದು 10 ದಿನ ಅಲ್ಲೇ ಇದ್ದು ಪರ್ಯಾಯದಲ್ಲಿ ಭಾಗಿಗಳಾಗಬೇಕು.ಎಲ್ಲೆಲ್ಲೋ ಪ್ರವಾಸಕ್ಕೆ ಹೋಗುವ ಬದಲು ಉಡುಪಿಗೆ ಬನ್ನಿ. ಕೃಷ್ಣನ ಸೇವೆ ಮಾಡಿ. ಇದು ನಿಮ್ಮೆಲ್ಲರ ಪರ್ಯಾಯ. ತಾವೆಲ್ಲರೂ ಭಾಗವಹಿಸಿ ಪರ್ಯಾಯ ಪೂರ್ಣಗೊಳಿಸಬೇಕು
-ವೇದವರ್ಧನ ಶ್ರೀಪಾಂದಗಳವರು, ಶಿರೂರು










