






ಬೆಂಗಳೂರು:ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳ ಪೈಕಿ ಪ್ರಸಿದ್ಧ ನಾಗಕ್ಷೇತ್ರವಾಗಿರುವ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು ರಾಜ್ಯದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿ ಗುರುತಿಸಿಕೊಂಡಿದೆ.ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ.


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 2022-23ರಲ್ಲಿ ರೂ.123 ಕೋಟಿ, 2023-24ರಲ್ಲಿ ರೂ.146 ಕೋಟಿ, 2024-25ರಲ್ಲಿ ರೂ.155 ಕೋಟಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ಲಭ್ಯವಾಗಿದೆ.



ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 34,566 ದೇವಾಲಯಗಳಿದ್ದು,ಇವುಗಳಲ್ಲಿ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ 205 ದೇವಾಲಯಗಳು ಎ’ ವರ್ಗ, 193 ದೇವಾಲಯಗಳುಬಿ’ ವರ್ಗ ಹಾಗೂ 34,168 ದೇವಾಲಯಗಳು ಸಿ’ ವರ್ಗದಲ್ಲಿವೆ.
ಮುಜರಾಯಿ ದೇವಾಲಯಗಳ ಆದಾಯ ಹೆಚ್ಚಳ:
ಕಳೆದ ಮೂರು ವರ್ಷಗಳಿಂದ ದೇವಾಲಯಗಳ ವರಮಾನ ವರ್ಷವರ್ಷ ಹೆಚ್ಚಳವಾಗುತ್ತಿದೆ.ರಾಜ್ಯದ ಪ್ರಮುಖ 10 ದೇವಸ್ಥಾನಗಳಿಂದ 2022-23ರಲ್ಲಿ ರೂ.368 ಕೋಟಿ, 2023-24ರಲ್ಲಿ ರೂ.418 ಕೋಟಿ ಹಾಗೂ 2024-25ರಲ್ಲಿ ರೂ.433 ಕೋಟಿ ಆದಾಯ ಗಳಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಎ’ ವರ್ಗದ ದೇವಾಲಯಗಳಿಂದ ರೂ.2,216 ಕೋಟಿ ಮತ್ತು ಬಿ’ ವರ್ಗದ ದೇವಾಲಯಗಳಿಂದ ರೂ.103 ಕೋಟಿ ಆದಾಯ ಬಂದಿದೆ.25,171 ಪ್ರವರ್ಗಸಿ’ ದೇವಾಲಯಗಳಿಗೆ ವಾರ್ಷಿಕ ರೂ.72 ಸಾವಿರಗಳ ತಸ್ತೀಕ್ ಮೊತ್ತವನ್ನು ಹಾಗೂ ತಸ್ತೀಕ್ ಪಡೆಯದಿರುವ ಒಟ್ಟು 3,721 ದೇವಾಲಯಗಳಿಗೆ ವಾರ್ಷಿಕ ರೂ.72 ಸಾವಿರ ವರ್ಷಾಸನವನ್ನು ನೀಡಲಾಗುತ್ತಿದ್ದು, ಇದು ಆ ದೇವಾಲಯಗಳ ವಾರ್ಷಿಕ ಆದಾಯವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯಕ್ಕೆ ಒತ್ತು:
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ.ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ ಸೌಲಭ್ಯ, ಅನ್ನದಾಸೋಹ (ಪ್ರಸಾದ), ನಾಮಫಲಕ ಅಳವಡಿಕೆ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ, ವಿಶ್ರಮಿಸಲು ನೆರಳು ಮತ್ತು ಆಸನ, ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಕೆ ಮೊದಲಾದ ವ್ಯವಸ್ಥೆ ಕಲ್ಪಿಸಲಾಗಿದೆ.ಮೂರು ವರ್ಷಗಳಲ್ಲಿ ಅನ್ನದಾಸೋಹ ಮತ್ತು ಮೂಲಸೌಕರ್ಯಕ್ಕಾಗಿ ಎ’ ವರ್ಗದ ದೇವಾಲಯಗಳಿಗೆ ರೂ.1,647 ಕೋಟಿ ಮತ್ತುಬಿ’ ವರ್ಗದ ದೇವಾಲಯಗಳಿಗೆ ರೂ.76 ಕೋಟಿ ವೆಚ್ಚ ಭರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲವೂ ದೇವರ ಲೀಲೆ
ಸುಬ್ರಹ್ಮಣ್ಯ ದೇವಸ್ಥಾನದ ಮೇಲಿನ ನಂಬಿಕೆಯಿಂದ ಬರುವ ಭಕ್ತರ ಸಂಖ್ಯೆ ವರ್ಷ ವರ್ಷ ಜಾಸ್ತಿಯಾಗುತ್ತಿದೆ.ಇಲ್ಲಿ ಪೂಜೆ,ಸೇವೆ ಮಾಡಿಸಿದರೆ ಇಷ್ಟಾರ್ಥ ಸಿದ್ಧಿ ಜೊತೆಗೆ ಹರಕೆ ಸಂದಾಯವಾಗುತ್ತದೆ ಎನ್ನುವ ಹಲವು ದೃಷ್ಟಾಂತಗಳಿವೆ.ನಾಗದೋಷ ಪರಿಹಾರಕ್ಕಾಗಿ ಹಿಂದೂ,ಮುಸ್ಲಿಂ, ಕ್ರೈಸ್ತರು ಸೇರಿದಂತೆ ಧರ್ಮಭೇದವಿಲ್ಲದೆ ಜನರು ಬರುತ್ತಾರೆ.ನಾಗದೋಷ ಪರಿಹಾರವೂ ಆಗುತ್ತದೆ.ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಆರಂಭಿಸಿದ ನಂತರದಿಂದ ಕ್ಷೇತ್ರಕ್ಕೆ ಬರುವ ಸಾಮಾನ್ಯ ಮಹಿಳೆಯರ ಸಂಖ್ಯೆ ಸಾಕಷ್ಟು ಹೆಚ್ಚಳಗೊಂಡಿದೆ.ಈ ಎಲ್ಲದರ ಕಾರಣದಿಂದಾಗಿ ದೇವಳದ ಆದಾಯವೂ ಹೆಚ್ಚಳಗೊಂಡಿದೆ.ಇದೆಲ್ಲವೂ ದೇವರ ಲೀಲೆ,ದೇವರ ಅನುಗ್ರಹ
-ಹರೀಶ್ ಇಂಜಾಡಿ,ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ದೇವಾಲಯಗಳಲ್ಲಿ ಸಂಗ್ರಹವಾಗುವ ಆದಾಯದಿಂದ ದೇವಾಲಯಗಳ ಸಮಗ್ರ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಕರ್ಯ ಕಲ್ಪಿಸಲಾಗಿದೆ.ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ
-ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ
600 ಕೋಟಿ ರೂ.ವೆಚ್ಚದ ಯೋಜನೆ
ಅನುಮೋದನೆ ಹಂತದಲ್ಲಿದೆದೇವಾಲಯದ ಆದಾಯದ ಜೊತೆ ಖರ್ಚು ಕೂಡಾ ಜಾಸ್ತಿಯಾಗುತ್ತಿದೆ.ಆದರೂ ಈಗಾಗಲೇ ನಮ್ಮಲ್ಲಿ 700 ಕೋಟಿ ರೂ.ಡೆಪಾಸಿಟ್ ಇದೆ.ಬೇಕಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದೇವೆ.600 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆ ಸರಕಾರದ ಅನುಮೋದನೆ ಹಂತದಲ್ಲಿದೆ.ಅನುಮೋದನೆ ದೊರೆತ ಕೂಡಲೇ ಟೆಂಡರ್ ಆಗಿ ಕೆಲಸ ಆರಂಭವಾಗಲಿದೆ.5 ಸಾವಿರ ಜನ ಕುಳಿತುಕೊಳ್ಳುವ ಡೈನಿಂಗ್ ಹಾಲ್,ಸುತ್ತು ಪೌಳಿ ಇದು ಮೊದಲು ಆಗಬೇಕಾಗಿದೆ.
ಆಶ್ಲೇಷ ಬಲಿ ಪೂಜೆ ಮಂದಿರ, ವಸತಿಗೃಹಗಳು ಸೇರಿದಂತೆ 600 ಕೋಟಿ ರೂ.ವೆಚ್ಚದ ಕೆಲಸಗಳ ಯೋಜನೆ ಕೈಗೆತ್ತಿಕೊಂಡಿದ್ದೇವೆ. ಸುತ್ತು ಪೌಳಿ ಹಾಳಾಗಿ ಹಲವು ವರ್ಷಗಳಾಗಿರುವುದರಿಂದ ಸುತ್ತು ಪೌಳಿ ಮೊದಲು ಆಗಬೇಕಾಗಿದೆ.ಇನ್ನೊಂದು ಆರು ತಿಂಗಳೊಳಗೆ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರೆಯಲಿದೆ ಎನ್ನುವ ವಿಶ್ವಾಸವಿದೆ-
ಹರೀಶ್ ಇಂಜಾಡಿ,ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ2024-25ನೇ ಸಾಲಿನ ರಾಜ್ಯದ 10 ಶ್ರೀಮಂತ ದೇವಾಲಯಗಳು ಮತ್ತು ಆದಾಯದ ವಿವರ
1.ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ- ರೂ.155 ಕೋಟಿ 2. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ-ರೂ. 71 ಕೋಟಿ
3.ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ-ರೂ.50 ಕೋಟಿ 4.ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ-ರೂ.36 ಕೋಟಿ
5.ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ-ರೂ.30 ಕೋಟಿ 6.ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನ-ರೂ.29 ಕೋಟಿ
7.ಕೊಪ್ಪಳದ ಹುಲಿಗೆಮ್ಮ ದೇವಸ್ಥಾನ-ರೂ. 17 ಕೋಟಿ 8.ಬ್ರಹ್ಮಾವರ ಮಂದಾರ್ತಿಯ ದುರ್ಗಾಪರಮೇಶ್ವರಿ-ರೂ.16 ಕೋಟಿ
9.ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ-ರೂ.13 ಕೋಟಿ 10.ಬೆಂಗಳೂರು ಬನಶಂಕರಿ -ರೂ.11 ಕೋಟಿ










