






ಪುತ್ತೂರು:ಕೋಡಿಂಬಾಡಿ, ಪೆರ್ನೆ, ಬಿಳಿಯೂರು, ಪಡ್ನೂರು, ಬನ್ನೂರು ಗ್ರಾಮ ವ್ಯಾಪ್ತಿಗಳನ್ನೊಗೊಂಡ ಗುಡ್ಡವೊಂದಕ್ಕೆ ದಿಢೀರ್ ಬೆಂಕಿ ಬಿದ್ದ ಘಟನೆ ಜ.8ರಂದು ನಡೆದಿದ್ದು,ಬೆಳಗ್ಗಿನಿಂದ ಹತ್ತಿಕೊಂಡ ಬೆಂಕಿ ಒಂದೊಂದೇ ಗುಡ್ಡವನ್ನು ಆವರಿಸುತ್ತಿದೆ.ರಾತ್ರಿ ವೇಳೆಯೂ ಬೆಂಕಿ ಉರಿಯುತ್ತಲೇ ಇದ್ದು ಅಗ್ನಿಶಾಮಕದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಹಲವರು ಬೆಂಕಿ ಶಮನಕ್ಕೆ ಹರಸಾಹಸ ಪಡುತ್ತಿದ್ದಾರೆ.ಈ ನಡುವೆ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಅರಣ್ಯ ವೀಕ್ಷಕರೋರ್ವರಿಗೆ ವಿಷದ ಹಾವೊಂದು ಕಡಿದ ಘಟನೆಯೂ ನಡೆದಿದೆ.ತೀವ್ರ ಗಾಯಗೊಂಡ ಅರಣ್ಯ ವೀಕ್ಷಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.



ಕರ್ನಾಟಕ ಗೇರು ಅಭಿವೃದ್ಧಿ ನಿಗಮಕ್ಕೆ ಸೇರಿದ ಗುಡ್ಡ ಇದಾಗಿದ್ದು,ಸುಮಾರು 250 ಎಕರೆಯಷ್ಟು ವ್ಯಾಪ್ತಿ ಹೊಂದಿದೆ.ಗುಡ್ಡವಿಡೀ ಬೆಂಕಿ ವ್ಯಾಪಿಸುತ್ತಿದ್ದು, ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.ಮಧ್ಯಾಹ್ನದ ವೇಳೆಗೆ ಬನ್ನೂರು ಸೇಡಿಯಾಪು ಸಮೀಪ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಸ್ಥಳದ ಬಳಿಯ ನಡುತೋಪಿಗೆ ಬೆಂಕಿ ಹತ್ತಿಕೊಂಡಿದೆ.




ಗುಡ್ಡೆಯ ಬೆಂಕಿ ನಂದಿಸುವುದು ಸವಾಲು:
ಅಗ್ನಿಶಾಮಕದಳದ ವಾಹನ ಇದ್ದರೂ ಕಾಡು ಗುಡ್ಡೆಗೆ ಹೋಗುವುದು ಅಸಾಧ್ಯ.ಈ ನಡುವೆ ಅಲ್ಲಿಗೆ ಪರಿಕರ ಕೊಂಡೊಯ್ಯವುದು ಕೂಡಾ ಸವಾಲಿನ ಕೆಲಸವಾಗಿದೆ.ಸ್ಥಳದಲ್ಲಿ ಅರಣ್ಯ ಇಲಾಖೆಯವರು, ಗೇರು ಅಭಿವೃದ್ದಿ ನಿಗಮ ಮತ್ತು ಸಾರ್ವಜನಿಕರು ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಡುತ್ತಿದ್ದರು.

ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಅರಣ್ಯ ವೀಕ್ಷಕ ಶೇಖರ್ ಪೂಜಾರಿ ಎಂಬವರಿಗೆ ವಿಷಪೂರಿತ ಹಾವೊಂದು ಕಡಿದಿದೆ.ಸ್ಥಳದಲ್ಲಿದ್ದ ಗೇರು ನೆಡುತೋಪು ಅಧಿಕ್ಷಕ ರವಿಪ್ರಸಾದ್ ಅವರು ಗಾಯಾಳು ಶೇಖರ ಪೂಜಾರಿ ಅವರನ್ನು ತಕ್ಷಣವೇ ಕಾರಿನಲ್ಲಿ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.ಜೊತೆಗೆ ಬೆಂಕಿಯಿಂದ ಹಾವನ್ನೂ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಶೇಖರ್ ಪೂಜಾರಿ ಅವರಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ನೆಡುತೋಪು ಅಧಿಕ್ಷಕ ರವಿಪ್ರಸಾದ್ ಅವರ ಸಮಯಪ್ರeಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ಕೇಳಿ ಬರುತ್ತಿದೆ.










