







ಪುತ್ತೂರು: ಪುತ್ತೂರು ತಾಲೂಕು ಬನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಕಲಚೇತನರ ವಿಶೇಷ ಗ್ರಾಮ ಸಭೆಯು ಜ.9ರಂದು ನಡೆಯಿತು. ಪಂಚಾಯತ್ ಅಧ್ಯಕ್ಷೆ ಸ್ಮಿತಾ ಎನ್. ಅವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶೀನಪ್ಪ ಕುಲಾಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ, ಲೆಕ್ಕ ಸಹಾಯಕಿ ರಾಜೇಶ್ವರಿ, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಭವ್ಯ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




ಸಭೆಯಲ್ಲಿ ವಿಕಲಚೇತನರ ವಿಶೇಷ ಗ್ರಾಮ ಸಭೆಯ ಉದ್ದೇಶ, ವಿಕಲಚೇತನರ ಕಾಯ್ದೆ–2016ರಡಿ ಗುರುತಿಸಲಾದ 21 ವಿಧದ ವಿಕಲತೆಗಳ ಕುರಿತು ಮಾಹಿತಿ ನೀಡಲಾಯಿತು. ಬನ್ನೂರು ಗ್ರಂಥಾಲಯ ಅರಿವು ಕೇಂದ್ರದಲ್ಲಿ ದೃಷ್ಟಿ ಅಂಶವಿರುವ ವಿಕಲಚೇತನರಿಗೆ ಲಭ್ಯವಿರುವ ಬ್ರೈಲ್ ಲಿಪಿ, ಅಬಾಕಸ್, ಹಾವು–ಏಣಿ ಆಟದ ಉಪಕರಣಗಳ ಬಗ್ಗೆ ವಿವರಿಸಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಸಾರಿಕಾ ಅವರು ವಿಶೇಷ ಚೇತನರು ಗ್ರಂಥಾಲಯ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ತಾಲೂಕು ಪಂಚಾಯತ್ ವಿಕಲಚೇತನರ ಬಹುಉದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಅವರು ವಿಕಲಚೇತನರ ಇಲಾಖೆ ಯೋಜನೆಗಳು, ಎಂಡೋ ಪೀಡಿತರ ಪಿಂಚಣಿ, ಆರೋಗ್ಯ ಸೌಲಭ್ಯಗಳು, ಆರೈಕೆದಾರರ ಪಿಂಚಣಿ ಹಾಗೂ ಹಿರಿಯ ನಾಗರಿಕರ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕಿ ಗೀತಾ ವಿಜಯ್ ಅವರು ಬ್ಯಾಂಕ್ ಖಾತೆ ನಿರ್ವಹಣೆ ಹಾಗೂ ಆರೋಗ್ಯ ವಿಮೆಯ ಕುರಿತು ತಿಳಿಸಿದರು.
ಈ ವೇಳೆ ಹೊಸದಾಗಿ ವಿಕಲಚೇತನರ ಸಂಘಗಳಾದ ‘ಧರಿತ್ರಿ’ ಮತ್ತು ವಿಕಲಚೇತನರ ಆರೈಕೆದಾರರ ಸಂಘ ‘ಅನ್ನಪೂರ್ಣೀಶ್ವರಿ’ಗೆ ನಾಮಕರಣ ಮಾಡಿ, ಪಂಚಾಯತ್ ಅಧ್ಯಕ್ಷರ ಮೂಲಕ ಸಂಘಗಳಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು, ಶಾಲಾ ಮುಖ್ಯಗುರುಗಳು, ಅಂಗನವಾಡಿ ಕಾರ್ಯಕರ್ತರು, ಬನ್ನೂರು ಆರೋಗ್ಯ ಕೇಂದ್ರದ ಸಮುದಾಯಾಧಿಕಾರಿಗಳು, ವಿಕಲಚೇತನರು, ಪೋಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ಲೆಕ್ಕ ಸಹಾಯಕಿ ರಾಜೇಶ್ವರಿ ಧನ್ಯವಾದ ಸಮರ್ಪಿಸಿದರು.










