






ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಉಗ್ರ ಪ್ರತಿಭಟನೆ – ಕಿಶೋರ್
ಸರಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲಿ – ಸಯ್ಯದ್ ಮೀರಾ ಸಾಹೇಬ್


ಕಡಬ: ಫಸಲ್ ಭೀಮಾ ಬೆಳೆ ವಿಮೆ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಹಾಗೂ ಕಡಬ ತಾಲೂಕು ಅಭಿವೃದ್ಧಿ, ರೈತ, ಕೃಷಿ, ಕಾರ್ಮಿಕರ ಹೋರಾಟ ಸಮಿತಿಯ ನೇತೃತ್ವದಲ್ಲಿ ಜ.12ರಂದು ಕಡಬ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.



ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಫಸಲ್ ಭೀಮಾ ಬೆಳೆ ವಿಮೆ ವಿತರಣೆಯಲ್ಲಿ ರೈತರಿಗೆ ಆಗಿರುವ ಅನ್ಯಾಯವನ್ನು 15 ದಿನದೊಳಗೆ ಸರಿಪಡಿಸದಿದ್ದರೆ ಪ್ರತಿ ಗ್ರಾಮಗಳಲ್ಲಿ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದು, ವಿವಿಧ ರೋಗಗಳಿಂದ ಕೃಷಿಯಲ್ಲಿ ರೈತರಿಗೆ ನಷ್ಟವಾಗಿದ್ದರೂ ಅತ್ಯಲ್ಪ ಪ್ರಮಾಣದ ಪರಿಹಾರ ನೀಡಲಾಗಿದೆ. ಅದರಿಂದಾಗಿ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಆದುದರಿಂದ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ 2003ನೇ ಇಸವಿಯ ಮಾನದಂಡದ ಪ್ರಕಾರ ವಿಮಾ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ಸರಕಾರ ರೈತರಿಗೆ ಆಗಿರುವ ಸಮಸ್ಯೆಯನ್ನು ಬಗೆಹರಿಸಲು ಮುಂದಾಗದಿದ್ದರೆ ಉಗ್ರ ರೀತಿಯ ಪ್ರತಿಭಟನೆ ಅನಿವಾರ್ಯ ಎಂದರು.
ಹೋರಾಟಗಾರ ಸೈಯದ್ಮೀರಾ ಸಾಹೇಬ್ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿಯಿಂದಾಗಿ ರೈತರ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳು ಸಂಪೂರ್ಣ ನಾಶಗೊಂಡಿದೆ. ಜೊತೆಗೆ ಎಲೆಚುಕ್ಕಿ ರೋಗವು ಬಾಧಿಸಿ ರೈತ ಕಂಗಾಲಾಗಿದ್ದಾನೆ. ಈಗ ವಿಮಾ ಕಂಪನಿಯ ಮೋಸ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದುದರಿಂದ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ರೈತರನ್ನು ಜಾಗೃತಗೊಳಿಸುವ ಉದ್ದೇಶದೊಂದಿಗೆ ಮತ್ತು ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆನ್ನುವ ಆಗ್ರಹದೊಂದಿಗೆ ಪ್ರತಿಭಟನೆ ನಡೆಸಲಾಗಿದೆ. ಸರಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಡಬ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ವೆಂಕಟ್ರಾಜ್ ಗೌಡ ಕೋಡಿಬೈಲು, ವಿಕ್ಟರ್ ಮಾರ್ಟಿಸ್ ಮಾತನಾಡಿ, ಬೆಳೆವಿಮೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು. ಪ್ರಮುಖರಾದ ಅಶೋಕ್ ಮೂಲೆಮಜಲು, ಯೋಗೇಂದ್ರ ಬನಾರಿ, ವಿನಯ ಬಳಕ್ಕ, ಚಂದ್ರಶೇಖರ ಹಳೆನೂಜಿ, ಹರ್ಷಿತ್ ಕಾರ್ಜ, ಶ್ರೀಶಕುಮಾರ್ ಎಣ್ಣೆಮಜಲು, ದೇವರಾಜ್ ಕೊಠಾರಿ, ಹರೀಶ್ ಕಾರ್ಜ, ಜಯಪ್ರಕಾಶ್ ಕೂಜುಗೋಡು, ಮುರಳೀಧರ ಎಣ್ಣೆಮಜಲು, ಗಣೇಶ್ ಪಿಲಿಕಜೆ, ಉಮೇಶ್ ಶೆಟ್ಟಿ ಸಾಯಿರಾಂ, ನಾರಾಯಣ ಪೂಜಾರಿ ಪಾಲಪ್ಪೆ, ಶಿವರಾಮ ಗೌಡ ಕಲ್ಕಳ, ವಿವೇಕಾನಂದ ಬೊಳ್ಳಾಜೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಮನವಿ ಸ್ವೀಕರಿಸಿ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು. ಉಪ ತಹಶೀಲ್ದಾರ್ ಶಾಯದುಲ್ಲಾ ಖಾನ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಸಹಾಯಕ ನಿರ್ದೇಶಕ (ತಾಂತ್ರಿಕ) ಶಿವಪ್ರಕಾಶ್ ಉಪಸ್ಥಿತರಿದ್ದರು. ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ ರಮಾನಂದ ಎಣ್ಣೆಮಜಲು ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯ ದಾಮೋದರ ಗುಂಡ್ಯ ವಂದಿಸಿದರು.
ಅವೈಜ್ಞಾನಿಕ ರೀತಿಯಲ್ಲಿ ಪರಿಹಾರ ವಿತರಣೆ
ಹವಾಮಾನದಲ್ಲಿ ಆಗುವ ವ್ಯತ್ಯಾಸದ ಆಧಾರದಲ್ಲಿ ಬೆಳೆಗಳಲ್ಲಿ ಆಗುವ ನಷ್ಟವನ್ನು ಸರಿದೂಗಿಸಲು ವಿಮೆ ಯೋಜನೆಯನ್ನು ಜಾರಿಗೆ ತರಲಾಗಿದೆ. ಹವಾಮಾನ ವೈಪರೀತ್ಯದಿಂದ ಫಸಲು ಕುಂಠಿತವಾದಾಗ ರೈತನಿಗೆ ಆದ ನಷ್ಟದ ಪ್ರಮಾಣವನ್ನು ಲೆಕ್ಕಹಾಕಿ ಪರಿಹಾರವನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಅವೈಜ್ಞಾನಿಕ ರೀತಿಯಲ್ಲಿ ವಿಮಾ ಪರಿಹಾರ ವಿತರಿಸಲಾಗಿದೆ. ಸರಕಾರ ಇದನ್ನು ಸರಿಪಡಿಸಬೇಕು.
ಕಿಶೋರ್ ಶಿರಾಡಿ, ಸಂಚಾಲಕರು ಮಲೆನಾಡು ಜನಹಿತ ರಕ್ಷಣಾ ವೇದಿಕೆ











