







ದೇವರ ಮೇಲೆ ಭಕ್ತಿ, ಶ್ರದ್ಧೆ ಬೇಕು. ಮೂಡನಂಬಿಕೆ ಇರಬಾರದು; ಸತ್ಯಪ್ರಿಯ ಕಲ್ಲೂರಾಯ


ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಇಲ್ಲಿ 48ನೇ ವರ್ಷದ ಮಕರಜ್ಯೋತಿ ಉತ್ಸವ ಹಾಗೂ ಭಜನಾ ಮಹೋತ್ಸವದ ಸಮಾರೋಪ ಸಮಾರಂಭ ಜ.14ರಂದು ಪ್ರಾತ:ಕಾಲ ಆರಂಭಗೊಂಡು ಜ.15ರಂದು ಪ್ರಾತ:ಕಾಲದ ತನಕ ನಡೆಯಿತು.




ಧಾರ್ಮಿಕ ಸಭೆ;
ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಅವರು, ಶ್ರೀ ಅಯ್ಯಪ್ಪ ಸ್ವಾಮಿಗೆ ಪುಷ್ಪಾಭಿಷೇಕ, ನೀಲಾಂಜನ ಸೇವೆ ನಡೆಯುವುದು ಅಪರೂಪ. ಇಂತಹ ಸೇವೆ ನೆಲ್ಯಾಡಿಯಲ್ಲಿ ನಡೆಯುತ್ತಿದೆ. ಭಗವಂತನ ಆರಾಧನೆಗೆ ನಾನಾ ಅವಕಾಶಗಳಿವೆ. ಭಗವಂತನ ಆರಾಧನೆಯಲ್ಲಿ ಭಕ್ತಿ, ಶ್ರದ್ಧೆ, ಪ್ರೀತಿ ಇರಬೇಕು ಎಂದು ಹೇಳಿದರು. ದೇವರ ಭಯವೇ ಜ್ಞಾನದ ಆರಂಭ. ಆದರೆ ಇತ್ತೀಚಿನ ದಿನಗಳಲ್ಲಿ ದೇವರ ಮೇಲಿನ ಭಕ್ತಿ ಕೇವಲ ಶೋಕಿಗೆ ಎಂಬಂತೆ ಆಗುತ್ತಿದೆ. ದೇವಸ್ಥಾನಕ್ಕೆ ಬರುವ ಶೇ.60ರಷ್ಟು ಮಂದಿ ಪಿಕ್‌ನಿಕ್‌ಗೆ ಬಂದವರೇ ಆಗಿರುತ್ತಾರೆ. ಪುರುಷರು ಚಡ್ಡಿ, ಮಹಿಳೆಯರು ಪ್ಯಾಂಟ್ ಹಾಕಿಕೊಂಡು ಬರುತ್ತಾರೆ. ದೇವಸ್ಥಾನಕ್ಕೆ ಯಾವ ರೀತಿ ಹೋಗಬೇಕು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ದೇವರ ಮೇಲೆ ಭಕ್ತಿ, ಶ್ರದ್ಧೆ ಬೇಕು. ಆದರೆ ಮೂಡನಂಬಿಕೆ ಇರಬಾರದು ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು ಅವರು, ನೆಲ್ಯಾಡಿ ಪೇಟೆಯಲ್ಲಿ ಸುಬ್ರಹ್ಮಣ್ಯ ಆಚಾರ್ ಅವರು ಸಣ್ಣ ತಟ್ಟಿಯ ಗುಡಿಯಲ್ಲಿ ಭಜನೆ ಆರಂಭಿಸಿದ್ದರು. ಮುಂದೆ ಈಗ ದೇವಸ್ಥಾನವಿರುವ ಜಾಗದಲ್ಲಿ ಭಜನಾ ಮಂದಿರ ನಿರ್ಮಾಣಗೊಂಡು ಬಳಿಕ ದೇವಸ್ಥಾನವಾಗಿ ಪರಿವರ್ತನೆಗೊಂಡಿದೆ. ಇಲ್ಲಿ ದೇವರ ಶಕ್ತಿ ಪೂರಿಪೂರ್ಣವಾಗಿದೆ. ಸಂಸ್ಕಾರ, ಸಂಘಟನೆ, ಸೇವೆ ನಿರಂತರವಾಗಿ ನಡೆಯುತ್ತಿದೆ ಎಂದರು.
ನೆಲ್ಯಾಡಿ ಹೆಚ್.ಪಿ.ಅಶ್ವಿನಿ ಫ್ಯುಯೆಲ್ ಸ್ಟೇಷನ್ ಮಾಲಕ ಆಶಾಶ್, ದೇವಸ್ಥಾನದ ಆಡಳಿತ ಸಮಿತಿ ಉಪಾಧ್ಯಕ್ಷ ರಘುನಾಥ, ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲು, ಭಜನಾ ಸಮಿತಿ ಅಧ್ಯಕ್ಷ ಕೃಷ್ಣಪ್ಪ ಕೆ.ನಿಡ್ಡೊಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫೆ.1ರಂದು ನೆಲ್ಯಾಡಿಯಲ್ಲಿ ನಡೆಯುವ ಹಿಂದೂಸಂಗಮದ ಕರಪತ್ರ ಬಿಡುಗಡೆಗೊಳಿಸಲಾಯಿತು. ಸೌತಡ್ಕ ಕ್ಷೇತ್ರದ ಪ್ರಧಾನ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಟಿ.ಕೆ.ಶಿವದಾಸನ್, ಡಾ.ಸದಾನಂದ ಕುಂದರ್ ಅವರಿಗೆ ಶಾಲು ಹಾಕಿ ಗೌರವಿಸಲಾಯಿತು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಮಾರ್ ವಂದಿಸಿದರು. ದೇವಸ್ಥಾನದ ಕೋಶಾಧಿಕಾರಿ ಸುಧೀರ್‌ಕುಮಾರ್ ನಿರೂಪಿಸಿದರು. ಅಶೋಕ ಆಚಾರ್ಯ ಜಾಲ್ಮನೆ ಪ್ರಾರ್ಥಿಸಿದರು.
ಧಾರ್ಮಿಕ ಕಾರ್ಯಕ್ರಮ;
ಜ.14ರಂದು ಪ್ರಾತ:ಕಾಲ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯರ ಪೌರೋಹಿತ್ಯದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಉಷಾಪೂಜೆ ನಡೆಯಿತು. ಶ್ರೀ ಮಹಾಗಣಪತಿ ಹೋಮ, ಸೀಯಾಳಾಭಿಷೇಕ, ತುಪ್ಪಾಭಿಷೇಕ, ಅಶ್ವತ್ಥಕಟ್ಟೆಯಲ್ಲಿ ಅಶ್ವತ್ಥ ಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ಮಹಾರಂಗಪೂಜೆ, ಮಹಾಅನ್ನಸಂತರ್ಪಣೆ ನಡೆಯಿತು. ಸಂಜೆ ಮಕರ ಜ್ಯೋತಿಯ ವಿಶೇಷವಾಗಿ ನೀಲಾಂಜನ ದೀಪ ದರ್ಶನಂ ಮೆರವಣಿಗೆ ನಡೆಯಿತು. ರಾತ್ರಿ ದೀಪಾರಾಧನೆ, ಪುಷ್ಪಾಭಿಷೇಕ ನಡೆಯಿತು. ರಾತ್ರಿ ಮಹಾಪೂಜೆ, ಜ.15ರಂದು ಬೆಳಿಗ್ಗೆ ಭಜನಾ ಮಂಗಳೋತ್ಸವ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ;
ಮಧ್ಯಾಹ್ನ ವಿದುಷಿ ಸುರೇಖಾಹರೀಶ್‌ರವರ ಶಿಷ್ಯವೃಂದ ಉಕ್ಷಿಪ್ತನೃತ್ಯ ಕಲಾಶಾಲೆ ನೆಲ್ಯಾಡಿ ಹಾಗೂ ಮಂಗಳೂರಿನ ವಿದ್ಯಾರ್ಥಿಗಳಿಂದ ನೃತ್ಯ ಸಿಂಚನ-ಭರತ ವೈಭವ ನಡೆಯಿತು. ರಾತ್ರಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮುಲ್ಕಿ ಮಂಗಳೂರು ಇವರಿಂದ ’ಬನತ ಬೆಮ್ಮೆರ್’ ಯಕ್ಷಗಾನ ಬಯಲಾಟ ನಡೆಯಿತು.
ಆಡಳಿತ ಸಮಿತಿ ಸದಸ್ಯರಾದ ಚಂದ್ರಶೇಖರ ಬಾಣಜಾಲು, ರವಿಪ್ರಸಾದ್ ಶೆಟ್ಟಿ, ಮೋಹನ ಕಟ್ಟೆಮಜಲು, ವಿನೋದ್‌ಕುಮಾರ್ ಬಾಕಿಜಾಲು, ಉಮೇಶಪೂಜಾರಿ ಪೊಸೊಳಿಗೆ, ರಕ್ಷಿತ್ ಎಮ್., ದಯಾನಂದ ಕೆ.ಆದರ್ಶ, ನಾರಾಯಣ ಶೆಟ್ಟಿ ಪಟ್ಟೆಜಾಲು, ಶೇಖರ ಭಂಡಾರಿ, ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ಅಣ್ಣಿ ಎಲ್ತಿಮಾರ್, ಭಜನಾ ಸಮಿತಿ ಕಾರ್ಯದರ್ಶಿ ಜನಾರ್ದನ ಹೆಗ್ಡೆ ಪಟ್ಟೆಜಾಲು, ಉಪಾಧ್ಯಕ್ಷರಾದ ರಮೇಶ್ ಶೆಟ್ಟಿ ಪರಂತಮೂಲೆ, ವಿಶಾಲಾಕ್ಷಿ ನಾರಾಯಣ ಆಚಾರ್ಯ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.










