ಕಾಡುಪ್ರಾಣಿಗಳಿಂದ ಕೃಷಿ ಹಾನಿ ತಡೆಯಲು ಕೇರಳ ಮಾದರಿಯಲ್ಲಿ ಅವಕಾಶ ನೀಡಬೇಕು- ಆರ್ಯಾಪು ಗ್ರಾಮ ಸಭೆಯಲ್ಲಿ ಆಗ್ರಹ

0

ಪುತ್ತೂರು:ಕೃಷಿಗೆ ಹಾನಿಯುಂಟು ಮಾಡುವ ಕಾಡುಪ್ರಾಣಿಗಳ ಉಪಟಳ ತಡೆಯಲು ಕೇರಳ ಮಾದರಿಯಲ್ಲಿ ಅವಕಾಶ ನೀಡಬೇಕು ಹಾಗೂ ಪ್ರಾಕೃತಿಕ ವಿಕೋಪದಿಂದ ಕೃಷಿ ಹಾನಿಗೂ ಕೇರಳ ಮಾದರಿಯಲ್ಲಿ ಪರಿಹಾರ ನೀಡಬೇಕು ಎಂದು ಆರ್ಯಾಪು ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ.


ಸಭೆಯು ಜ.19ರಂದು ಅಧ್ಯಕ್ಷೆ ಗೀತಾರವರ ಅಧ್ಯಕ್ಷತೆಯಲ್ಲಿ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.ಪಶು ಸಂಗೋಪನಾ ಇಲಾಖೆಯ ಡಾ.ಎಂ.ಪಿ ಪ್ರಕಾಶ್ ಚರ್ಚಾ ನಿಯಂತ್ರಣಾಽಕಾರಿಯಾಗಿದ್ದರು.ಅರಣ್ಯ ಇಲಾಖೆಯಿಂದ ಮಾಹಿತಿ ನೀಡುತ್ತಿರುವ ವೇಳೆ ಗ್ರಾಮಸ್ಥ ಗಿರೀಶ್ ರೈ ಮೂಲೆ ಅವರು ಮಿನಿಪದವು ಎಂಬಲ್ಲಿ ಅಕೇಶಿಯಾ ಮರಗಳು ಬೆಳೆದಿವೆ.ಅಲ್ಲಿ ಕಾಡು ಪ್ರಾಣಿಗಳ ಹಾವಳಿಯೂ ಇದ್ದು ಜನರು ಓಡಾಡುವುದೂ ಕಷ್ಟವಾಗಿದೆ.ಅಕೇಶಿಯಾ ಮರಗಳು ಮಾನವನ ಆರೋಗ್ಯಕ್ಕೂ ಹಾನಿಕರವಾಗಿದ್ದು ಅವುಗಳನ್ನು ತೆರವುಗೊಳಿಸಿ ಹಣ್ಣಿನ ಗಿಡಗಳನ್ನು ಬೆಳೆಸುವಂತೆ ತಿಳಿಸಿದರು.ಈ ಹಿಂದೆ ಎರಡು ಗ್ರಾಮಸಭೆಗಳಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ.ಇದೀಗ ಮೂರನೇ ಬಾರಿಗೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂದವರು ಹೇಳಿದಾಗ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ, ಪಂಚಾಯತ್ ಸಾಮಾನ್ಯ ಸಭೆಯಲ್ಲಿಯೂ ನಿರ್ಣಯ ಮಾಡಿ ಕಳುಹಿಸಲಾಗಿದೆ.ಇಲಾಖೆ ತೆರವುಗೊಳಿಸದಿದ್ದರೆ ಜನರೇ ತೆರವುಗೊಳಿಸಲಿದ್ದಾರೆ ಎಂದರು.ಗ್ರಾಮಸ್ಥ ಬಾಬು ಮರಿಕೆ ಮಾತನಾಡಿ, ಅಲ್ಲಿ ಅಕ್ರಮ ಚಟುವಟಿಕೆಗಳೂ ನಡೆಯುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.ನವೀನ್ ಕುಮಾರ್ ಮಾತನಾಡಿ, ಒಳತ್ತಡ್ಕ ಭಾಗದಲ್ಲಿಯೂ ಕಾಡುಪ್ರಾಣಿಗಳ ಹಾವಳಿಯಿದೆ ಎಂದರು. ಹಂದಿ, ಕೋತಿಗಳ ಹಾವಳಿಯಿಂದ ಕೃಷಿ ಹಾನಿಯಾಗುತ್ತಿರುವುದಾಗಿ ರಾಮ್‌ಪ್ರಸಾದ್ ತಿಳಿಸಿದರು.ಕೇರಳ ರಾಜ್ಯದಲ್ಲಿ ಕೃಷಿ ಹಾನಿಯುಂಟು ಮಾಡುವ ಹಂದಿ ಕೊಲ್ಲಲು ಅವಕಾಶವಿದೆ.ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಅವಕಾಶ ನೀಡಬೇಕು.ನೆರೆಯ ಕೇರಳದಲ್ಲಿ ಅವಕಾಶ ಇರುವಾಗ ಕರ್ನಾಟಕದಲ್ಲಿ ವ್ಯತ್ಯಾಸವೇಕೆ.ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಅವಕಾಶ ನೀಡುವಂತೆ ಸದಸ್ಯರು ಒತ್ತಾಯಿಸಿದರು.ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಕೃಷಿಗೆ ಹಾನಿಯುಂಟು ಮಾಡುವ ಕಾಡುಪ್ರಾಣಿಗಳ ಉಪಟಳ ತಡೆಯಲು ಕೇರಳ ಮಾದರಿಯಲ್ಲಿ ಅವಕಾಶ ನೀಡುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ನಿರ್ಣಯ ಕೈಗೊಳ್ಳಲಾಗಿದೆ.


ಕೃಷಿ ಹಾನಿಗೂ ಕೇರಳ ಮಾದರಿಯಲ್ಲಿ ಪರಿಹಾರ ನೀಡಬೇಕು:
ಪ್ರಾಕೃತಿಕ ವಿಕೋಪದಿಂದ ಕೃಷಿಗೆ ಹಾನಿಯುಂಟಾದರೆ ಕರ್ನಾಟಕದಲ್ಲಿ ಅಲ್ಪ ಪ್ರಮಾಣದ ಪರಿಹಾರ ಮಾತ್ರ ದೊರೆಯುತ್ತಿದೆ.ಕೇರಳದಲ್ಲಿ ದೊಡ್ಡ ಮೊತ್ತದ ಪರಿಹಾರ ದೊರೆಯುತ್ತಿದ್ದು ಅದೇ ರೀತಿ ಕರ್ನಾಟಕದಲ್ಲಿಯೂ ಕೃಷಿ ಹಾನಿಗೆ ಕೇರಳ ರಾಜ್ಯದ ಮಾದರಿಯಲ್ಲಿ ರೈತರಿಗೆ ಪರಿಹಾರ ನೀಡುವಂತೆ ಸದಸ್ಯ ಪುರುಷೋತ್ತಮ ರೈ ಒತ್ತಾಯಿಸಿದರು.


ಪ್ರಭಾವ ಬಳಸಿ ಅಕ್ರಮ-ಸಕ್ರಮ ಮಂಜೂರು:
ಆರ್ಯಾಪು ಮತ್ತು ಕುರಿಯ ಗ್ರಾಮಗಳು ನಗರ ಸಭಾ ವ್ಯಾಪ್ತಿಯ ಐದು ಕಿ.ಮೀ ವ್ಯಾಪ್ತಿಯಲ್ಲಿದ್ದು ಇಲ್ಲಿ ಅಕ್ರಮ ಸಕ್ರಮ, 94 ಸಿ ಮಂಜೂರು ಮಾಡಬಾರದು ಎಂಬ ಸರಕಾರದ ನಿಯಮವಿದ್ದರೂ ಕೆಲವರಿಗೆ 2018,2020ರಲ್ಲಿ ಮಂಜೂರಾಗಿದೆ. 2023ರಲ್ಲಿ 4.29 ಎಕ್ರೆ ಜಾಗ ಅಕ್ರಮ ಸಕ್ರಮದಲ್ಲಿ ಮಂಜೂರಾಗಿದೆ.ಪ್ರಭಾವ ಬಳಸಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ ಬೂಡಿಯಾರ್ ಪುರುಷೋತ್ತಮ ರೈ,ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಯಿಂದ ಗ್ರಾಮ ಆಡಳಿತಾಧಿಕಾರಿ ತನಕ ಒಂದೇ ನಿಯಮವಿದ್ದರೂ ಇಲ್ಲಿ ಮಾತ್ರ ಭಿನ್ನವಾಗಿದೆ.ಬಡವರು ಸಲ್ಲಿಸಿದ ಅರ್ಜಿಗಳು ಇನ್ನೂ ಅಗಿಲ್ಲ.ಶ್ರೀಮಂತರ ಅರ್ಜಿಗಳು ಆಗಿದೆ.ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.


ಆಯುಷ್ಮಾನ್ ಇದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಹಣಕ್ಕಾಗಿ ಬೇಡಿಕೆ:
ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಸರಿಯಾದ ಚಿಕಿತ್ಸಾ ಸೌಲಭ್ಯಗಳು ದೊರೆಯುತ್ತಿಲ್ಲ.ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವೆನ್‌ಲಾಕ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಹೋದಾಗ ಅಲ್ಲಿ ಹಣ ಪಾವತಿಸುವಂತೆ ಪೀಡಿಸುತ್ತಿದ್ದಾರೆ.20 ಸಾವಿರ ಪಾವತಿಸಬೇಕು, 25 ಸಾವಿರ ಪಾವತಿಸುವಂತೆ ಪೀಡಿಸುತ್ತಿರುವುದಾಗಿ ಬಾಬು ಮರಿಕೆ ಆರೋಪಿಸಿದರು.


ನಮ್ಮ ಮನೆಗೆ ರಸ್ತೆಯಿಲ್ಲ, ನಮಗೆ ನ್ಯಾಯಕೊಡಿ:
ಕಂದಾಯ ಇಲಾಖೆಯಿಂದ ಮಾಹಿತಿ ನೀಡುತ್ತಿರುವ ವೇಳೆ ಮಹಿಳೆಯರಿಬ್ಬರು ಮಾತನಾಡಿ, ನಮ್ಮ ಮನೆ ಬಳಿಯಲ್ಲಿ ರಸ್ತೆ ಬದಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ.ಇದರಿಂದ ನಮ್ಮ ಮನೆಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ. ಈಗ ನಮ್ಮ ಮನೆಗೆ ರಸ್ತೆಯಿಲ್ಲ. ರಸ್ತೆ ಬದಿ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ್ದು ಯಾರು. ಇದರ ಬಗ್ಗೆ ಮೂರು ಬಾರಿ ದೂರು ನೀಡಿದ್ದೇವೆ. ನಮಗೆ ನ್ಯಾಯ ದೊರೆತಿಲ್ಲ ಎಂದು ಆರೋಪಿಸಿದರು. ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿ ಅಶ್ವಿನಿ ಮಾತನಾಡಿ, ರಸ್ತೆ ಬಿಡುವ ಸಂದರ್ಭದಲ್ಲಿ ಅವರೇ ಮಾತುಕತೆ ನಡೆಸಿಕೊಂಡು ರಸ್ತೆ ಬಿಟ್ಟಿದ್ದಾರೆ.ಈಗ ಸಮಸ್ಯೆ ಬಂದ ಬಳಿಕ ನಮಗೆ ದೂರು ನೀಡಿದ್ದಾರೆ.ಆದರೂ ಆ ಮನೆಗೆ ಪ್ರತ್ಯೇಕ ರಸ್ತೆ ಸೌಲಭ್ಯವಿದೆ ಎಂದು ತಿಳಿಸಿದರು.ಸದಸ್ಯ ಹರೀಶ್ ನಾಯಕ್ ಮಾತನಾಡಿ, ಸದರಿ ಸಮಸ್ಯೆಯ ಬಗ್ಗೆ ಮಾತುಕತೆ ನಡೆಸಲಾಗಿದ್ದು ಅದು ಫಲಪ್ರದವಾಗಿಲ್ಲ. ಮತ್ತೊಮ್ಮೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ನಡೆಸಲಾಗುವುದು ಎಂದರು. ಗ್ರಾಮಸ್ಥ ಗಿರೀಶ್ ರೈ ಮಾತನಾಡಿ, ಮನೆಗೆ ಈಗಾಗಲೇ ರಸ್ತೆಯಿದೆ. ರಸ್ತೆ ಇಲ್ಲದೆ ಅವರಿಗೆ ಸಮಸ್ಯೆ ಉಂಟಾಗಿಲ್ಲ. ಆದರೂ ಮತ್ತೊಮ್ಮೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು.ಅದು ಆಗದೇ ಹೋದಲ್ಲಿ ಅಧಿಕಾರಿಗಳ ಮೂಲಕ ಮುಂದುವರಿಸುವ ಎಂದು ತಿಳಿಸಿದರು.


ಪಂಚಾಯತ್‌ನ ಬೋರ್‌ನಿಂದ ನೀರು ಕಳ್ಳತನ:
ಆರ್ಯಾಪು ಗ್ರಾಮದ ಸಂಪ್ಯದಲ್ಲಿದ್ದ ಪಂಚಾಯತ್‌ನ ಕೊಳವೆ ಬಾವಿಗೆ ಪಂಪ್ ಅಳವಡಿಸಿ ಅದರಿಂದ ನೀರನ್ನು ಅಕ್ರಮವಾಗಿ ಖಾಸಗಿಯವರು ಹಲವು ವರ್ಷಗಳಿಂದ ಬಳಕೆ ಮಾಡುತ್ತಿದ್ದು ಸರಕಾರಿ ಬೋರ್‌ನಿಂದ ನೀರು ಕಳ್ಳತನವಾಗುತ್ತಿದೆ.ಇದನ್ನು ತನಿಖೆ ನಡೆಸಿ,ಕ್ರಮಕೈಗೊಳ್ಳುವಂತೆ ಗ್ರಾಮಸ್ಥ ಕೇಶವ ಸುವರ್ಣ ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಪಿಡಿಓ ನಾಗೇಶ್ ಮಾತನಾಡಿ, ಸದರಿ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.


ಸಕ್ಕರೆ ಬದಲು ಜೇನು ತುಪ್ಪ ನೀಡಿ:
ಅಂಗನವಾಡಿ ಕೇಂದ್ರಗಳಲ್ಲಿ ಸಕ್ಕರೆ, ಇತರ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ.ಸಕ್ಕರೆಯಲ್ಲಿ ವಿಷಕಾರಿ ಅಂಶಗಳಿರುವುದರಿಂದ ಅದನ್ನು ಶಾಲೆಗಳಲ್ಲಿ ಮಕ್ಕಳಿಗೆ ನೀಡಿ ಮಕ್ಕಳ ಆರೋಗ್ಯ ಹಾಳು ಮಾಡುವ ಬದಲು ಜೇನು ತುಪ್ಪ ನೀಡಬೇಕು. ಜೇನು ತುಪ್ಪ ಆರೋಗ್ಯಕ್ಕೂ ಉತ್ತಮ. ಇದರಿಂದ ಜೇನು ಕೃಷಿಕರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.


ಆರೋಗ್ಯ ಉಪ ಕೇಂದ್ರದ ಜಾಗಕ್ಕೆ ಗಡಿಗುರುತು ಮಾಡಿ:
ಆರ್ಯಾಪು ಮತ್ತು ಕುರಿಯ ಗ್ರಾಮಗಳಲ್ಲಿ ಆರೋಗ್ಯ ಉಪ ಕೇಂದ್ರ ನಿರ್ಮಾಣಕ್ಕೆ ಕಷ್ಟಪಟ್ಟು ಜಾಗ ಮಂಜೂರುಗೊಳಿಸಲಾಗಿದೆ.ಆದರೆ ಆರೋಗ್ಯ ಇಲಾಖೆ ಅದರ ಗಡಿ ಗುರುತು ಮಾಡಿಲ್ಲ.ಜಾಗಕ್ಕೆ ಶೀಘ್ರವಾಗಿ ಗಡಿಗುರುತು ಮಾಡಿ ಭದ್ರಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.


ಸಂಸ್ಕೃತಿ ಉಳಿಸುವ ಕ್ರೀಡೆಗೆ ಅವಕಾಶ ನೀಡಬೇಕು:
ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಮೃಗಬೇಟೆ, ಕೋಳಿ ಅಂಕಗಳೂ ಸೇರಿದೆ.ಈ ಸಾಂಪ್ರದಾಯಿಕ ಆಚರಣೆಗಳನ್ನು ಕೆಲವೊಂದು ಕಾನೂನಿನ ಮೂಲಕ ತಡೆಹಿಡಿಯಲಾಗುತ್ತಿದೆ.ಕೆಲವು ಸಾಂಪ್ರದಾಯಿಕ ಆಚರಣೆಗಳಲ್ಲಿ ಮಾತ್ರ ಮೃಗಬೇಟೆ ಆಚರಣೆಯಲ್ಲಿದೆ. ಹೀಗಾಗಿ ತುಳುನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕೋಳಿ ಅಂಕ, ಮೃಗಬೇಟೆಗೆ ಅವಕಾಶ ನೀಡಬೇಕು ಎಂದು ಸದಸ್ಯ ಪುರುಷೋತ್ತಮ ರೈ ಆಗ್ರಹಿಸಿದರು.


ನಿಮಗೇಕೆ ಸನ್ಮಾನವಿಲ್ಲ?:
ಪಂಚಾಯತ್‌ನಿಂದ ಪ್ರತಿ ಗ್ರಾಮ ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯ ಸಾಧಕರನ್ನು ಗುರುತಿಸಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ನಿಮಗೂ ಸನ್ಮಾನ, ಪ್ರಶಸ್ತಿಗಳು ದೊರೆಯಬೇಕಲ್ಲ. ಆದರೆ ಪಂಚಾಯತ್‌ಗೆ ಯಾಕೆ ಯಾವುದೇ ಸನ್ಮಾನ, ಗೌರವ, ಪ್ರಶಸ್ತಿಗಳು ದೊರೆಯುವುದಿಲ್ಲ ಎಂದು ಗ್ರಾಮಸ್ಥೆ ಲೀಲಾ ಅವರು ಪ್ರಶ್ನಿಸಿದರು.


ಉಪಾಧ್ಯಕ್ಷ ಅಶೋಕ್ ನಾಯ್ಕ ಎನ್., ಸದಸ್ಯರಾದ ವಸಂತ ಶ್ರೀದುರ್ಗ, ಸರಸ್ವತಿ, ದೇವಕಿ, ಸುಬ್ರಹ್ಮಣ್ಯ ಬಲ್ಯಾಯ, ಶ್ರೀನಿವಾಸ ರೈ, ರತ್ನಾವತಿ, ಪೂರ್ಣಿಮಾ ರೈ, ಪವಿತ್ರ ರೈ ಬಿ., ಚೇತನ್ ಡಿ.ಐ., ಯತೀಶ್ ದೇವ, ಕಸ್ತೂರಿ, ಪವಿತ್ರ ಎನ್., ನಳಿನಿ, ರಶೀದಾ ಬಿ., ರೇವತಿ ಬಿ.ಹೆಚ್., ರಕ್ಷಿತಾ ಎ., ನೇಮಾಕ್ಷ ಸುವರ್ಣ, ನಾಗೇಶ್ ಎಂ., ಕಲಾವತಿ, ಯಾಕೂಬ್ ಯಾನೆ ಸುಲೈಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಒ ನಾಗೇಶ್ ಎಂ ವರದಿ ಮಂಡಿಸಿದರು. ಕಾರ್ಯದರ್ಶಿ ಮೋನಪ್ಪ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಆಡಳಿತ ಮಂಡಳಿಗೆ ಅಭಿನಂದನೆ
ಇದು ಪಂಚಾಯತ್‌ನ ಹಾಲಿ ಆಡಳಿತ ಮಂಡಳಿಯ ಕೊನೆಯ ಗ್ರಾಮ ಸಭೆಯಾಗಿದೆ.ಈ ಅವಧಿಯಲ್ಲಿ ಪಂಚಾಯತ್‌ನ ಆಡಳಿತ ಮಂಡಳಿಯು ಉತ್ತಮ ಆಡಳಿತ ನಡೆಸಿದೆ.ಗ್ರಾಮಸ್ಥರ ಸಮಸ್ಯೆಗಳಿಗೆ ಉತ್ತಮ ಸ್ಪಂದನೆ ನೀಡಿದ್ದಾರೆ. ಆರ್ಯಾಪು ನಾಲ್ಕನೇ ವಾರ್ಡ್‌ನ ಸದಸ್ಯರು ಸೇರಿದಂತೆ ಪಂಚಾಯತ್ ಎಲ್ಲಾ ಸದಸ್ಯರು ರಾಜಕೀಯ ರಹಿತವಾಗಿ ಆಡಳಿತ ನಡೆಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದು ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸುವುದಾಗಿ ಗ್ರಾಮಸ್ಥ ಬಾಬು ಮರಿಕೆ ತಿಳಿಸಿದರು.


ಗ್ರಾಮ ಸಭಾ ಪುರಸ್ಕಾರ
ಗ್ರಾಮ ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯ ವಿವಿಧ ಕ್ಷೇತ್ರದ ಸಾಧಕರನ್ನು ಗೌರವ ಗ್ರಾಮ ಸಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು ಈ ಸಾಲಿನಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಿ.ಎ ಅಂತಿಮ ಪರೀಕ್ಷೆಯಲ್ಲಿ ರ‍್ಯಾಂಕ್ ವಿಜೇತ ಕೊಡ್ಲಾರು ಅಂಕಿತ್ ಎನ್.ಕೆ., ಇಂಜಿನಿಯರಿಂಗ್‌ನಲ್ಲಿ ರ‍್ಯಾಂಕ್ ವಿಜೇತ ರಾಹುಲ್ ಕೆ., ಕಲಾ ಕ್ಷೇತ್ರದಲ್ಲಿ ಯಕ್ಷಗಾನ ವೇಷ ಭೂಷಣ ವಿನ್ಯಾಸಕಾರ ವೆಂಕಟೇಶ ಮಯ್ಯ ಖಂಡಿಗ ಹಾಗೂ ವೃತ್ತಿ ಕ್ಷೇತ್ರದಲ್ಲಿ ಪಂಚಾಯತ್ ನೀರು ನಿರ್ವಾಹಕ ಅಬ್ದುಲ್ ಖಾದರ್ ಅವರಿಗೆ ರೂ.5೦೦೦ ನಗದು ಹಾಗೂ ಸನ್ಮಾನಿಸಿ, ಗೌರವ ಗ್ರಾಮ ಸಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ಈ ಗ್ರಾಮ ಸಭೆಯು ನಮ್ಮ ಆಡಳಿತ ಅವಧಿಯ ಕೊನೆಯ ಗ್ರಾಮಸಭೆಯಾಗಿದೆ.ಕಳೆದ ಐದು ವರ್ಷದ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗಿದೆ.24 ಮಂದಿ ಸದಸ್ಯರೂ ಏಕ ಮನಸ್ಸಿನಿಂದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಗ್ರಾಮಸ್ಥರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಾಗಿದೆ. ಅಭಿವೃದ್ಧಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿಶೇಷ ಪ್ರಯತ್ನವಿದೆ. ಗ್ರಾಮದ ಅಭಿವೃದ್ಧಿಗೆ ಮುಂದೆಯೂ ಗ್ರಾಮಸ್ಥರು ಕೈಜೋಡಿಸಬೇಕು.ಪಂಚಾಯತ್‌ಗೆ ಸಲ್ಲಿಸಬೇಕಾದ ತೆರಿಗೆ, ನೀರಿನ ಶುಲ್ಕಗಳನ್ನು ಸಕಾಲದಲ್ಲಿ ಪಾವತಿಸಿ, ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು. -ಗೀತಾ, ಅಧ್ಯಕ್ಷರು, ಆರ್ಯಾಪು ಗ್ರಾ.ಪಂ

LEAVE A REPLY

Please enter your comment!
Please enter your name here