






ಪಾಣಾಜೆ: ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಅಡಿಕೆ ಎಲೆಚುಕ್ಕಿರೋಗ ನಿರ್ವಹಣೆ ಮತ್ತು ಕಾಳುಮೆಣಸು ಕೃಷಿ ಬಗ್ಗೆ ವಿಚಾರ ಸಂಕಿರಣವು ಜ. ೨೯ ರಂದು ಸಂಘದ ಸಭಾಭವನದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ʻಭಾರತದ ಆರ್ಥಿಕತೆಯಲ್ಲಿ ಕೃಷಿಕರ ಪಾಲು ಬಹುಪಾಲು ಇದ್ದರೂ, ಕೃಷಿಕರ ಸಮಸ್ಯೆಗಳಿಗೆ ಸರಿಯಾದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊರೊನಾ ಬಂದರೂ ಕೃಷಿಕರಿಗೆ ಏನೂ ಸಮಸ್ಯೆ ಆಗಿರಲಿಲ್ಲ. ಆದರೆ ಪ್ರಸ್ತುತ ಕೊರೊನಾಕ್ಕಿಂತ ಹೆಚ್ಚು ಹೊಡೆತವನ್ನು ಕೃಷಿಕ ಅನುಭವಿಸುತ್ತಿದ್ದಾನೆʼ ಎಂದು ಹೇಳಿದರು.




ಕಡ್ಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡ್ಲೆಯಿಲ್ಲ
ಈಗ ಕೃಷಿಕರ ಸ್ಥಿತಿ ಕಡ್ಲೆ ಇದ್ದಾಗ ಹಲ್ಲಿಲ್ಲ, ಹಲ್ಲಿದ್ದಾಗ ಕಡ್ಲೆಯಿಲ್ಲ’ ಎಂಬಂತಾಗಿದೆ. ಕೃಷಿಕರ ಉತ್ಪನ್ನಗಳಿಗೆ ಬೆಲೆ ಏರುತ್ತಿದೆ. ಆದರೆ ಫಸಲು ಉತ್ಪಾದನೆಯಲ್ಲಿ ಕೃಷಿಕ ನಾನಾ ರೀತಿಯಲ್ಲಿ ಸೋತಿದ್ದಾನೆ. ಹೀಗಾಗಿ ನಮ್ಮ ಸೊಸೈಟಿಯಿಂದ ಕೃಷಿಕರಿಗೆ ಕೇವಲ ಸಾಲ ಕೊಡುವುದಲ್ಲ, ಬದಲಾಗಿ ಕೃಷಿಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನೂ ಸಹಕಾರಿ ಸಂಘ ಮಾಡುವಲ್ಲಿ ನಾವು ಮುಂದಾಗಿದ್ದೇವೆʼ ಎಂದು ಬೋರ್ಕರ್ ಹೇಳಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಉಮೇಶ್ ರೈ ಗಿಳಿಯಾಲು, ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್ ಕೆ. ಉಪಸ್ಥಿತರಿದ್ದರು.
ಎರಡು ಅವಧಿಯಲ್ಲಿ ನಡೆದ ವಿಚಾರ ಸಂಕಿರಣ
ಎರಡು ಅವಧಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮೊದಲ ಅವಧಿಯಲ್ಲಿ ಕೃಷಿ ತಜ್ಞ ಪಿ.ಎನ್. ಭಟ್ ರವರು ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ಲಕ್ಷಣಗಳು, ಕಾರಣಗಳು, ಮುನ್ನೆಚ್ಚರಿಕಾ ಕ್ರಮಗಳು ಮತ್ತು ಸಮಗ್ರ ನಿರ್ವಹಣೆಯ ಬಗ್ಗೆ ತಮ್ಮ ಸ್ವ ಅನುಭವವನ್ನು ಹಂಚಿಕೊಂಡು ರೈತರ ಜೊತೆ ಸಂವಾದ ನಡೆಸಿದರು. ಎರಡನೇ ಅವಧಿಯಲ್ಲಿ ಖ್ಯಾತ ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡುವರು ಅಡಿಕೆಗೆ ಬೆಳೆಯ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವ ಅಡಿಕೆ ಕೃಷಿಕ ಕಾಳುಮೆಣಸು ಕೃಷಿಯನ್ನು ನಿರ್ವಹಣೆ ಮಾಡಿ ಹೇಗೆ ಯಶಸ್ಸು ಸಾಧಿಸಬಹುದೆಂಬುದನ್ನು ವಿವರಿಸಿದರು.
ಸಂಘದ ನಿರ್ದೇಶಕ ನಾರಾಯಣ ಪ್ರಕಾಶ್ ರವರು ಸ್ವಾಗತಿಸಿ, ಅಡಿಕೆ ಕೃಷಿಯಿಂದ ನೊಂದ ಕೃಷಿಕರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಘವು ಈ ಕಾರ್ಯಕ್ರಮ ಇಟ್ಟುಕೊಂಡಿದೆ. ಗ್ರಾಮೀಣ ಭಾಗದಲ್ಲಿ ನಮ್ಮ ಕೃಷಿಕರು ಯಾವುದೇ ರೀತಿಯಲ್ಲಿ ಸೋಲಬಾರದು. ಸೋತಾಗ ಅವನು ತನ್ನಲ್ಲಿರುವ ಜ್ಞಾನದಿಂದಾಗಿ ಮತ್ತೆ ಎದ್ದುನಿಲ್ಲುವಂತಾಗಬೇಕು. ರೈತರಲ್ಲಿ ಈ ಜ್ಞಾನವನ್ನು ನೀಡುವ ಉದ್ದೇಶದಿಂದ ಈ ವಿಚಾರ ಸಂಕಿರಣ ಪ್ರಸ್ತುತ ಎಂದೆನಿಸಿದೆʼ ಎಂದರು.
ಮಾಜಿ ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ ವಂದಿಸಿದರು. ಸಿಬಂದಿ ಪ್ರದೀಪ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯರು, ನಿಡ್ಪಳ್ಳಿ ಹಾಗೂ ಪಾಣಾಜೆ ವ್ಯಾಪ್ತಿಯ ಕೃಷಿಕರು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ತಜ್ಞರೊಡನೆ ಸಂವಾದ ನಡೆಸಿದರು.

ಸಹಕಾರಿ ಸಂಘಗಳು ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಬೇಕು
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ರವರು ಮಾತನಾಡಿ ʻಸಹಕಾರಿ ಸಂಘಗಳು ರೈತರಿಗೆ ಕೇವಲ ಸಾಲ ನೀಡುವುದು, ವಸೂಲು ಮಾಡುವುದು ಮಾತ್ರ ಆಗಬಾರದು. ರೈತರ ನೋವು ಸಂಕಷ್ಟಗಳಿಗೆ, ಕಷ್ಟಕಾಲದಲ್ಲಿ ಅವರನ್ನು ಎತ್ತಿ ಆತ್ಮವಿಶ್ವಾಸ ಹೆಚ್ಚಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಕಾಲಘಟ್ಟದಲ್ಲಿ ರೈತರಿಗೆ ಸರಿಯಾದ ಮಾಹಿತಿ ಕೊಡಬೇಕಾದದ್ದು ಸಹಕಾರಿ ಸಂಘಗಳಾದ ನಮ್ಮ ಕರ್ತವ್ಯʼ ಎಂದು ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಹೇಳಿದರು.










