






ಪುತ್ತೂರು: ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರತೀ ರೈತರ ವರ್ಗ ಜಾಗಕ್ಕೆ ತಾಗಿಕೊಂಡು ಇರುವ ಜಾಗವನ್ನು ಕುಮ್ಕಿ ಎಂದು ಅದರಲ್ಲಿ ಕೃಷಿ ಮಾಡುತ್ತಿದ್ದಾರೆ.ಈ ಭೂಮಿಯನ್ನು ಕೃಷಿ ಮಾಡಿಕೊಂಡಿರುವ ರೈತರಿಗೆ ಮಂಜೂರು ಮಾಡುತ್ತಿಲ್ಲ. ಬಗರ್ಹುಕುಂ ಅಥವಾ ಅಕ್ರಮ ಸಕ್ರಮ ದಲ್ಲೂ ಇದನ್ನು ರೈತರ ಹೆಸರಿಗೆ ಮಂಜೂರು ಮಾಡುವಲ್ಲಿ ಸುಪ್ರಿಂ ಕೋರ್ಟಿನಲ್ಲಿ ದಾವೆ ಇದೆ ಎಂದು ಕಂದಾಯ ಅಧಿಕಾರಿಗಳು ಹೇಳುತ್ತಾರೆ ಆದರೆ ಸರಕಾರದ ಕೊಟ್ಟ ವರದಿಯಲ್ಲಿ ಕುಮ್ಕಿ ವಿಚಾರದಲ್ಲಿ ಸುಪ್ರಿಂ ಕೋರ್ಟಿನಲ್ಲಿ ಯಾವುದೇ ದಾವೆ ಇಲ್ಲ ಎಂದು ತಿಳಿಸಿದ್ದಾರೆ. ಕುಮ್ಕಿ ಹಕ್ಕಿಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿದೆ ಆದರೆ ಈ ವಿಚಾರ ಇದುವರೆಗೂ ಯಾವುದೇ ಅಂತಿಮ ರೂಪವನ್ನು ಪಡೆದಿಲ್ಲ. ಸರಕಾರ ಈ ವಿಚಾರದಲ್ಲಿ ಕಾನೂನು ಮಾಡುವ ಮೂಲಕ ಕುಮ್ಕಿ ಹಕ್ಕನ್ನು ರೈತರಿಗೆ ಮಂಜೂರು ಮಾಡಬೇಕು ಎಂದು ಶಾಸಕರು ಅಧಿವೇಶನದಲ್ಲಿ ಆಗ್ರಹಿಸಿದರು.ಸರಕಾರದ ಸ್ವಾಧೀನದಲ್ಲಿರುವ ಜಾಗವನ್ನು ಮಂಜೂರು ಮಾಡಿದ್ದಲ್ಲಿ ಮುಂದಿನ ದಿನಗಳಲ್ಲಿ ಮಸಣಕ್ಕೂ ಜಾಗ ಖರೀದಿ ಮಾಡಬೇಕಾದ ಸ್ಥಿತಿ ಬರಬಹುದು ಎಂದು ಕಳೆದ ಬಾರಿ ಕಂದಾಯ ಸಚಿವರು ಹೇಳಿಕೆ ನೀಡಿದ್ದರು ಎಂಬುದನ್ನು ಸಭೆಯಲ್ಲಿ ನೆನಪಿಸಿದ ಶಾಸಕರು, ದ ಕ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯಲ್ಲಿ ರೈತರ ಸ್ವಾಧೀನದಲ್ಲಿದ್ದು ಕೃಷಿ ಮಾಡಿಕೊಂಡು ಬಂದಿರುವ ಜಾಗವನ್ನು ಮಂಜೂರಾತಿ ಮಾಡಿದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಇದು ಕೃಷಿಕರಿಗೆ ಪೂರಕವೂ ಆಗಲಿದೆ ಎಂದು ಶಾಸಕರು ಸಭೆಗೆ ತಿಳಿಸಿದರು.


ಗೇರು ಕೃಷಿಗೆ ಜಾಗ ಲೀಸಿಗೆ ಕೊಡಲಾಗಿದೆ
ದ ಕ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಗೇರು ಕೃಷಿಗೆ ಸರಕಾರದ ಜಾಗವನ್ನು ಲೀಸಿಗೆ ಕೊಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೆತ್ರದಲ್ಲಿ ಸುಮಾರು 600 ಎಕ್ರೆ ಜಾಗ ಇಂದಿಗೂ ಗೇರು ನಿಗಮದ ಅಧೀನದಲ್ಲಿದೆ, ಗೇರು ಕೃಷಿ ಲೀಸ್ ಅವಧಿ ಮುಗಿದು ಹತ್ತು ವರ್ಷಗಳೇ ಕಳೇದಿದೆ ಆದರೆ ಜಾಗ ಇನ್ನೂ ಅವರ ಸ್ವಾಧೀನದಲ್ಲೇ ಇದೆ. ಗೇರು ಕೃಷಿಗೆ ಸರಕಾರ ಲಕ್ಷ ಗಟ್ಟಲೆ ಎಕ್ರೆ ಜಾಗವನ್ನು ಲೀಸಿಗೆ ಕೊಟ್ಟಿದೆ ಆದರೆ ಅನೇಕ ವರ್ಷಗಳಿಂದ ಕೃಷಿ ಮಾಡಿಕೊಂಡು ತಮ್ಮ ಸ್ವಾಧೀನದಲ್ಲಿರುವ ಜಾಗವನ್ನು ರೈತರಿಗೆ ನೀಡುತ್ತಿಲ್ಲ ಇದು ಯಾವ ನ್ಯಾಯ ಎಂದು ಸಭೆಯಲ್ಲಿ ಶಾಸಕರು ಸರಕಾರವನ್ನು ಪ್ರಶ್ನಿಸಿದರು. ಗೇರಿಗೆ ಕೊಡುವುದಾದರೆ ಕೃಷಿಕರಿಗೆ ಕೃಷಿ ಮಾಡಲು ಯಾಕೆ ಕೊಡುತ್ತಿಲ್ಲ ಇದಕ್ಕೆ ಹೊಸ ಕಾನೂನು ರೂಪಿಸಿ ಆ ಮೂಲಕ ಕುಮ್ಕಿ ಜಾಗವನ್ನು ರೈತರಿಗೆ ಮಂಜೂರು ಮಾಡಬೇಕಾಗಿದೆ ಎಂದು ಶಾಸಕ ಅಶೋಕ್ ರೈ ಆಗ್ರಹಿಸಿದರು.



ಪಹಣಿಯಲ್ಲಿ ಎಲ್ಲೂ ಕುಮ್ಕಿ ಬರೆದಿಲ್ಲ
ರೈತರ ವರ್ಗ ಜಾಗಕ್ಕೆ ತಾಗಿಕೊಂಡಿರುವ ಜಾಗ ಕುಮ್ಕಿ ಜಾಗ ಎಂದು ಪಹಣಿಪತ್ರದಲ್ಲಿ ನಮೂದಿಸಲಾಗಿಲ್ಲ ಆದರೆ ಬಗರ್ಹುಕುಂ ಅಕ್ರಮ ಸಕ್ರಮ ಮಂಜೂರಾತಿ ವೇಳೆ ಕಂದಾಯ ಅಧಿಕಾರಿಗಳು ಅದನ್ನು ಕುಮ್ಕಿ ಎಂದು ನಮೂದು ಮಾಡುತ್ತಾರೆ ಇದರಿಂದ ಅಕ್ರಮ ಸಕ್ರಮ ವಿಲೇವಾರಿಯಲ್ಲಿ ರೈತರಿಗೆ ಮಂಜೂರು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕರು ಸಭೆಯ ಗಮನಕ್ಕೆ ತಂದರು. ಸುಪ್ರಿಂ ಕೋರ್ಟಿನಲ್ಲಿ ಈ ವಿಚಾರದಲ್ಲಿ ಯಾವುದೇ ದಾವೆ ಇಲ್ಲ ಎಂದು ಸರಕಾರ ನೀಡಿದ ವರದಿಯಲ್ಲಿರುವಾಗ ಅದನ್ನು ಕುಮ್ಕಿಯನ್ನು ಸಕ್ರಮ ಮಾಡಲು ಏನು ತೊಂದರೆ ಇದೆ ಎಂದು ಪ್ರಶ್ನಿಸಿದರು.
ರೈತರು ಏನು ಮಾಡಬೇಕು?
ತಮ್ಮ ವರ್ಗ ಜಾಗದಲ್ಲಿ ತಾಗಿಕೊಂಡಿರುವ ಮತ್ತು ಅನಾದಿ ಕಾಲದಿಂದ ಕೃಷಿ ಮಾಡಿಕೊಂಡು ಬಂದಿರುವ ಜಾಗವನ್ನು ಕುಮ್ಕಿ ಎಂದು ನಮೂದಿಸಿ ಅದನ್ನು ರೈತರ ಹೆಸರಿಗೆ ನೀಡದೇ ಇದ್ದಲ್ಲಿ ರೈತರು ಏನು ಮಾಡಬೇಕು? ಯಾರಲ್ಲಿ ಕೇಳಬೇಕು? ಎಂದು ಪ್ರಶ್ನಿಸಿದ ಶಾಸಕರು ಹೊಸ ಕಾನೂನು ಜಾರಿಮಾಡುವ ಮೂಲಕ ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಕುಮ್ಕಿ ಜಾಗವನ್ನು ಅನುಭವಿಸಬಹುದು ಆದರೆ ರೈತರ ಹೆಸರಿಗೆ ನೀಡಲ್ಲ
ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಕುಮ್ಕಿ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಸರಕಾರಿ ಜಾಗ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹೆಸರಿನಿಂದ ಕರೆಯಲ್ಪಡುತ್ತದೆ. ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಇದಕ್ಕೆ ಕುಮ್ಕಿ ಎಂದು ಕರೆಯುತ್ತಿದ್ದು ಇದು ಕೃಷಿಕನ ವರ್ಗ ಜಾಗಕ್ಕೆ ತಾಗಿಕೊಂಡಿದ್ದು ಇದರಲ್ಲಿರುವ ಸೊಪ್ಪು ಸೇರಿದಂತೆ ಕೃಷಿಗೆ ಬಳಸಲ್ಪಡುವ ಯಾವುದೇ ವಸ್ತುಗಳನ್ನು ಪಡೆದುಕೊಳ್ಳಬಹುದು ಅಥವಾ ಈ ಭೂಮಿಯನ್ನು ಕೃಷಿಗಾಗಿ ಅನುಭವಿಸುವ ಹಕ್ಕು ರೈತರಿಗೆ ಇದೇ ವಿನಾ ಆ ಜಾಗವನ್ನು ಯಾವುದೇ ಕಾರಣಕ್ಕೂ ರೈತರ ಹೆಸರಿಗೆ ಮಂಜೂರಾತಿ ಸಾಧ್ಯವಿಲ್ಲ ಎಂದು ಕಂದಾಯ ಸಚಿವರ ಪರವಾಗಿ ಮಾತನಾಡಿದ ಅರಣ್ಯ ಸಚಿವ ಈಶ್ವರಖಂಡ್ರೆ ಸಭೆಗೆ ತಿಳಿಸಿದರು. ಸರಕಾರಿ ಜಾಗವನ್ನು ಗೇರು ಕೃಷಿಗೆ ನೀಡಿದ್ದೀರಿ ಆದರೆ ಕೃಷಿ ಮಾಡಿ ಅದನ್ನು ಅನುಭವಿಸಿಕೊಂಡು ಬರುವ ರೈತರಿಗೆ ಕುಮ್ಕಿ ಭೂಮಿ ನೀಡುತ್ತಿಲ್ಲ ಎಂದು ಶಾಸಕರು ಸಭೆಯಲ್ಲಿ ತಿಳಿಸಿದ್ದಾರೆ. ಈ ವಿಚಾರವನ್ನು ನಾನು ಕಂದಾಯ ಸಚಿವರ ಗಮನಕ್ಕೆ ತರುವುದಾಗಿ ಸಚಿವರು ಹೇಳಿದರು.
ನಾವು ಕಾನೂನು ಮಾಡ್ಲಿಕ್ಕೆ ಇರುವವರು
ನಾವು ಕಾನೂನು ಮಾಡಲಿಕ್ಕೆ ಇರುವವರು. ಕುಮ್ಕಿ ವಿಚಾರದಲ್ಲಿ ಹೊಸ ಕಾನೂನು ತಂದು ಆ ಮೂಲಕ ಕುಮ್ಕಿಯನ್ನು ರೈತರ ಹೆಸರಿಗೆ ಮಂಜೂರು ಮಾಡಿಸಬೇಕು ಎಂದು ಶಾಸಕರು ಸಭೆಯಲ್ಲಿ ಆಗ್ರಹಿಸಿದರು. ಕುಮ್ಕಿ ಜಾಗದಲ್ಲಿ ರೈತರು ಶೆಡ್ ಕಟ್ಟಿದರೂ ಅದನ್ನು ತೆರವು ಮಾಡುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ಗೇರು ಕೃಷಿಗೆ ಲೀಸಿಗೆ ಕೊಟ್ಟ ಲಕ್ಷಗಟ್ಟಲೆ ಎಕ್ರೆ ಜಾಗವನ್ನು ಸರಕಾರ ವಾಪಸ್ ಪಡೆಯಬೇಕು ಎಂದು ಶಾಸಕರು ಸಭೆಯಲ್ಲಿ ಆಗ್ರಹಿಸಿದರು.
ಸಿ ಎಂ ಜೊತೆ ನಡೆಸಿ ತೀರ್ಮಾನಿಸಿ: ಸಭಾಧ್ಯಕ್ಷರು
ಕುಮ್ಕಿ ಹಕ್ಕಿನ ಬಗ್ಗೆ ಶಾಸಕರು 7 ನಿಮಿಷ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದಾರೆ. ಕಂದಾಯ ಸಚಿವರು ಸಭೆಯಲ್ಲಿ ಉಪಸ್ಥಿತಿ ಇಲ್ಲದ ಕಾರಣ ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕಂದಾಯ ಸಚಿವರನ್ನೊಳಗೊಂಡ ಅಧಿಕಾರಿಗಳ ಸಭೆ ನಡೆಸಿ ಮುಂದಿ ತೀರ್ಮಾನ ಕೈಗೊಳ್ಳಿ ಎಂದು ಸಭಾಧ್ಯಕ್ಷರು ಸಲಹೆ ನೀಡಿದರು.










