






ಕಡಬ 47,21,21,634 ರೂ -ಪುತ್ತೂರು 42,42,21,098 ರೂ ಪರಿಹಾರ ಮೊತ್ತ ಪಾವತಿ


ಪುತ್ತೂರು:ರೈತರ ಪಾಲಿಗೆ ವರದಾನವಾಗಿರುವ ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆಯ 2024-25ನೇ ಸಾಲಿನ ವಿಮಾ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಜಮೆಯಾಗುತ್ತಿದ್ದು ಪುತ್ತೂರು ತಾಲೂಕಿನಲ್ಲಿ ಅಡಿಕೆ ಬೆಳೆಗೆ ರೂ.35,95,83,150 ಹಾಗೂ ಕಾಳುಮೆಣಸು ಬೆಳೆಗೆ ರೂ. 6,46,37,948 ಪರಿಹಾರ ಮೊತ್ತ ಪಾವತಿಯಾಗಿದೆ. ಕಡಬ ತಾಲೂಕಿನಲ್ಲಿ ಅಡಿಕೆ ಬೆಳೆ ಹಾಗೂ ಕಾಳುಮೆಣಸು ಬೆಳೆಗೆ ಒಟ್ಟು ರೂ.47,21,21,634 ಪಾವತಿಯಾಗಿದೆ.ಇನ್ನು 4ರಿಂದ 5 ಗ್ರಾಮಗಳ ರೈತರಿಗೆ ಪರಿಹಾರ ಮೊತ್ತ ಪಾವತಿ ಬಾಕಿ ಇದೆ ಎಂದು ಇಲಾಖಾ ಮಾಹಿತಿ ಲಭಿಸಿದೆ.



ದ.ಕ.ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಹವಾಮಾನ ಆಧಾರಿತ ಬೆಳೆ ವಿಮೆ ಮೊತ್ತ ಕೃಷಿಕರ ಖಾತೆಗೆ ಕಳೆದ ಡಿಸೆಂಬರ್ 8ರಿಂದ ಜಮೆಯಾಗಲು ಆರಂಭವಾಗಿತ್ತು. ಆದರೆ ಈ ಬಾರಿ ಕಡಿಮೆ ಮೊತ್ತದ ವಿಮಾ ಪರಿಹಾರ ಬಂದಿರುವುದರ ಬಗ್ಗೆ ಕೃಷಿಕರು ಅಸಮಾಧಾನ ಹೊಂದಿದ್ದರು.ಕಳೆದ ಮಳೆಗಾಲದಲ್ಲಿ ವಿಪರೀತವಾಗಿ ಸುರಿದ ಮಳೆ ಗಾಳಿಗೆ ಬಿದ್ದ ಅಡಿಕೆ ಮರ, ಕೊಳೆರೋಗ ಬಾಧೆ ಇವುಗಳಿಂದ ಅಡಿಕೆ ಕೃಷಿಕರು ನಷ್ಟ ಅನುಭವಿಸಿದ್ದು ಬೆಳೆ ವಿಮಾ ಪರಿಹಾರ ಮೊತ್ತವನ್ನೇ ನಂಬಿದ್ದರು. ಹೆಚ್ಚಿನ ವಿಮಾ ಮೊತ್ತದ ನಿರೀಕ್ಷೆಯಲ್ಲಿದ್ದ ರೈತರು ಬಳಿಕ ಕಡಿಮೆ ವಿಮಾ ಮೊತ್ತ ಜಮೆಯಾಗುತ್ತಿದ್ದಂತೆ ಕಂಗಾಲಾಗಿದ್ದರು.ಬಳಿಕ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ರೈತರು ತಮ್ಮ ಅಹವಾಲು ಸಲ್ಲಿಸಿದ್ದರು. ಬಳಿಕ ಶಾಸಕರುಗಳಾದ ಅಶೋಕ್ ಕುಮಾರ್ ರೈ, ಕಿಶೋರ್ ಕುಮಾರ್ ಬೊಟ್ಯಾಡಿರವರು ಕಡಿಮೆ ಬೆಳೆ ವಿಮೆ ಪಾವತಿಯ ಕುರಿತು ಸದನದಲ್ಲಿಯೂ ಧ್ವನಿ ಎತ್ತಿದ್ದರು.ಇದೀಗ ಮತ್ತೆ ವಿಮಾ ಮೊತ್ತ ಪಾವತಿಯಾಗುತ್ತಿರುವುದರಿಂದ ಕೃಷಿಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ತಡವಾಗಿ ಬಂದ ಅಡಿಕೆ ವಿಮಾ ಮೊತ್ತ:
ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದ್ದು ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಮಾತ್ರ ವಿಮಾಕಂತು ಪಾವತಿಸಲು ಇಲ್ಲಿ ಅವಕಾಶ ಇದೆ.ಈ ಬಾರಿಯ ವಿಮಾ ಮೊತ್ತ ಪಾವತಿಯಲ್ಲಿ ಹೆಚ್ಚಿನ ರೈತರಿಗೆ ಕಾಳುಮೆಣಸು ಬೆಳೆಯ ವಿಮಾ ಪಾವತಿ ಮಾತ್ರ ಆರಂಭದಲ್ಲಿ ಬಂದಿದ್ದು ಅಡಿಕೆ ವಿಮಾ ಮೊತ್ತ ಪಾವತಿಯಾಗಿರಲಿಲ್ಲ.ಈ ಕಾರಣದಿಂದ ರೈತರಲ್ಲಿ ಗೊಂದಲ ಉಂಟಾಗಿತ್ತು. ಇದೀಗ ಅಡಿಕೆ ಬೆಳೆಯ ವಿಮಾ ಮೊತ್ತವೂ ಜಮೆಯಾಗುತ್ತಿದ್ದು ಕೆಲವೇ ಗ್ರಾಮದ ರೈತರಿಗೆ ಪಾವತಿಗೆ ಬಾಕಿ ಇದೆ.
ಕೆಲವು ಗ್ರಾಮಗಳ ರೈತರಿಗೆ ಬಾಕಿ:
ಕೆಲವು ಗ್ರಾಮಗಳ ರೈತರಿಗೆ ಅಡಿಕೆ ವಿಮಾ ಮೊತ್ತ ಪಾವತಿಯಾಗಲು ಬಾಕಿ ಇದೆ.ಬಲ್ನಾಡು, ಬನ್ನೂರು, ಕೊಡಿಪ್ಪಾಡಿ, ಕೋಡಿಂಬಾಡಿ ಹಾಗೂ ನರಿಮೊಗರು ಗ್ರಾಮದ ರೈತರಿಗೆ ಅಡಿಕೆ ವಿಮಾ ಪರಿಹಾರ ಮೊತ್ತ ಪಾವತಿಗೆ ಬಾಕಿ ಇದೆ.ಅಲ್ಲದೆ ಕೊಳ್ತಿಗೆ ಗ್ರಾಮದ ರೈತರಿಗೆ ಕಾಳುಮೆಣಸು ವಿಮಾ ಪರಿಹಾರ ಮೊತ್ತ ಪಾವತಿ ಬಾಕಿ ಇದೆ. ಈ ತಿಂಗಳ ಕೊನೆಯಲ್ಲಿ ಎಲ್ಲಾ ರೈತರಿಗೆ ಮೊತ್ತ ಪಾವತಿಯಾಗಲಿದೆ.ಪುತ್ತೂರು ತಾಲೂಕಿನಲ್ಲಿ ಅಡಿಕೆ ಬೆಳೆಗೆ ಸಂಬಂಧಿಸಿ 9,762 ಹೆಕ್ಟೇರ್ ಪ್ರದೇಶದ 43,706 ಸರ್ವೆನಂಬರ್ಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 30322 ಸರ್ವೆ ನಂಬರ್ಗಳಿಗೆ ವಿಮಾ ಪರಿಹಾರ ಮೊತ್ತ ಪಾವತಿಯಾಗಿದ್ದು 13784 ಸರ್ವೆ ನಂಬರ್ಗೆ ಪಾವತಿಗೆ ಬಾಕಿ ಇದೆ.ಕಾಳುಮೆಣಸು ಬೆಳೆಗೆ ಸಂಬಂಧಿಸಿ 7557 ಹೆಕ್ಟೇರ್ ಪ್ರದೇಶದ 24,685 ಸರ್ವೆನಂಬರ್ಗಳಿಂದ ಅರ್ಜಿ ಸಲ್ಲಿಕೆಯಾಗಿದೆ. ಇದರಲ್ಲಿ 21,489 ಸರ್ವೆ ನಂಬರ್ಗಳಿಗೆ ವಿಮಾ ಪರಿಹಾರ ಮೊತ್ತ ಪಾವತಿಯಾಗಿದ್ದು 3196 ಸರ್ವೆ ನಂಬರ್ಗೆ ಪಾವತಿಗೆ ಬಾಕಿ ಇದೆ. ಕಡಬ ತಾಲೂಕಿನಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗೆ ಸಂಬಂಧಿಸಿ 75,468 ಸರ್ವೆನಂಬರ್ಗಳಿಗೆ ಮೊತ್ತ ಪಾವತಿಯಾಗಿದೆ. ರೈತರು ಸಲ್ಲಿಸಿದ್ದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು ಮುಂದಿನ ಕೆಲ ದಿನಗಳಲ್ಲಿ ಪೂರ್ತಿ ಮೊತ್ತ ಪಾವತಿಯಾಗಲಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.










