






ಪುತ್ತೂರು: ಕೊಡಿಪ್ಪಾಡಿಯ ಬಯಂಬೆಯಲ್ಲಿ ಸಾರ್ವಜನಿಕವಾಗಿ ಬಳಕೆಯಲ್ಲಿದ್ದ ರಸ್ತೆಯನ್ನು ವ್ಯಕ್ತಿಯೋರ್ವರು ಮುಚ್ಚಿರುವ ಕುರಿತ ದೂರಿಗೆ ಸಂಬಂಧಿಸಿ ತನ್ನ ಪಟ್ಟಾ ಸ್ಥಳಕ್ಕೆ ಅಕ್ರಮ ಪ್ರವೇಶ ಮಾಡಿ ಕೃಷಿ ನಿರ್ವಹಿಸಲು ಹಾಕಿದ ಬೇಲಿ ಮತ್ತು ಆವರಣೆಗೋಡೆಯನ್ನು ನಾಶ ಮಾಡಿದ್ದಾರೆಂದು ಆರೋಪಿಸಿ ದಿನೇಶ್ ಮಯ್ಯ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.


ಖಾಸಗೀ ವ್ಯಕ್ತಿಯೊಬ್ಬರು ತಮ್ಮ ವರ್ಗ ಜಾಗವೆಂದು, ಚಾಲ್ತಿಯಲ್ಲಿದ್ದ ಸಂಪರ್ಕ ರಸ್ತೆಯನ್ನು ಕಲ್ಲು ಕಟ್ಟುವ ಮೂಲಕ ರಸ್ತೆ ಸಂಪರ್ಕಕ್ಕೆ ಅಡಚಣೆ ಮಾಡಿರುವುದಾಗಿ ರಸ್ತೆಯ ಫಲಾನುಭವಿಗಳು ಆರೋಪಿಸಿದ್ದರು. ಆದರೆ,ವಾಸ್ತವವಾಗಿ ನನ್ನ ಹಕ್ಕಿನ ಪಟ್ಟಾ ಸ್ಥಳವಾದ ಕಬಕ ಗ್ರಾಮದ ಸ.ನಂ.217/9-0.44 ಎಕ್ರೆಯಲ್ಲಿ ತೋಟವಿದ್ದು, ನಾನು ತೋಟದಲ್ಲಿದ್ದಾಗ ಫೆ.4ರಂದು ಕಂದಾಯ ನಿರೀಕ್ಷಕರು, ಸ್ಥಳೀಯರು ಅಕ್ರಮ ಪ್ರವೇಶ ಮಾಡಿ ನನಗೆ ಮತ್ತು ನನ್ನ ಪತ್ನಿಗೆ ಜೀವ ಬೆದರಿಕೆಯೊಡ್ಡಿದ್ದಾರೆ.ನನ್ನ ಕಲ್ಲಿನ ಆವರಣ ಗೋಡೆಯನ್ನು ಒಡೆದು ಕೃಷಿ ಕೃತಾವಳಿಯನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿ ದಿನೇಶ್ ಮಯ್ಯ ಅವರು ಫೆ.6ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.



ಎಲ್ಲರ ಮನೆಗೂ ರಸ್ತೆಯಿದೆ-ದಿನೇಶ್ ಮಯ್ಯ ಸ್ಪಷ್ಟನೆ
ನನ್ನಿಂದ ಖರೀದಿ ಮಾಡಿದ ಜಾಗದಲ್ಲಿ ಹರೀಶ್ ಭಟ್ ತಂದೆ ಸುಬ್ರಹ್ಮಣ್ಯ ಭಟ್ ಮತ್ತು ಇತರರು ಪ್ರಸ್ತುತ ಮನೆ ನಿರ್ಮಿಸಿದ್ದು, ಎಲ್ಲರ ಮನೆಗೂ ಕಾರ್ಜಾಲು ಪೆರಿಯತ್ತೊಡಿ ರಸ್ತೆಯಲ್ಲಿ ಕವಲೊಡೆದ ರಸ್ತೆಯ ಹಕ್ಕನ್ನು (ಪಿಯುಟಿ-1-01861-2006-07)ರಿಜಿಸ್ಟ್ರೇಷನ್ ಕರಾರು ಪತ್ರವನ್ನು ಮೇಲಿನ ಎಲ್ಲಾ ಖರೀದಿದಾರರಿಗೂ ಇತರರಿಂದ ನೊಂದಣಿ ಮಾಡಿಸಿಕೊಟ್ಟಾಗಿದೆ. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ವಿಷಯ ತಿಳಿದ ಕಂದಾಯ, ನಗರಸಭೆ ಮತ್ತು ಇತರರು ಸ್ಥಳದಿಂದ ಹೋಗಿದ್ದು ಸೌಹಾರ್ದತೆಯಲ್ಲಿ ಬಗೆಹರಿಸಿಕೊಳ್ಳಿ ಎಂದು ಹೇಳಿ ತೆರಳಿದ್ದಾರೆ ಎಂದು ದಿನೇಶ್ ಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.










