







ಪುತ್ತೂರು:ಪ್ರಕರಣವೊಂದಕ್ಕೆ ಸಂಬಂಧಿಸಿ ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹಾಜರಾದ ಇಬ್ಬರ ಜೊತೆ ಸಂಬಂಧ ಪಡೆದವರೂ ಬಂದು ಠಾಣೆಯಲ್ಲಿ ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ,ಕಾನ್‌ಸ್ಟೇಬಲ್ ಒಬ್ಬರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಆರೋಪಿಗಳಾದ ಸಚಿನ್ ಕುಮಾರ್,ಪ್ರದೀಪ್ ಶೆಟ್ಟಿ, ಹರಿಪ್ರಸಾದ್, ಗೀತಾ ಶೆಟ್ಟಿ, ಅಕ್ಷತಾ ಶೆಟ್ಟಿಯವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಘಟನೆ ವಿವರ: 2025ನೇ ಡಿ.31ರಂದು ಪುತ್ತೂರು ಸಂಚಾರ ಪೊಲೀಸರು ಹಾರಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ಪ್ರದೀಪ್ ಶೆಟ್ಟಿ ಮತ್ತು ಹರಿಪ್ರಸಾದ್ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆಯೊಡ್ಡಿದ್ದ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಕುರಿತು ಆರೋಪಿಗಳಿಗೆ ತನಿಖೆಗಾಗಿ ಠಾಣೆಗೆ ಹಾಜರಾಗಲು ನೋಟೀಸ್ ನೀಡಲಾಗಿತ್ತು.2026ರ ಫೆ.14ರಂದು ಆರೋಪಿಗಳಾದ ಪ್ರದೀಪ್ ಶೆಟ್ಟಿ ಮತ್ತು ಹರಿಪ್ರಸಾದ್ ಅವರು ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಬಂದಿದ್ದರು.ಈ ವೇಳೆ ಅವರ ಜೊತೆ ಪ್ರಕರಣಕ್ಕೆ ಸಂಬಂಧಿಸದ ಸಚಿನ್ ಕುಮಾರ್, ಗೀತಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ಎಂಬವರು ಬಂದಿದ್ದರು.ಪೊಲೀಸರು ಪ್ರದೀಪ್ ಶೆಟ್ಟಿ ಮತ್ತು ಹರಿಪ್ರಸಾದ್ ಅವರನ್ನು ವಿಚಾರಿಸುತ್ತಿದ್ದ ವೇಳೆ ಗೀತಾ ಶೆಟ್ಟಿ, ಸಚಿನ್, ರಕ್ಷಿತಾ ಶೆಟ್ಟಿಯವರು ಗಲಾಟೆ ಮಾಡುವ ಉದ್ದೇಶದಿಂದ ತನಿಖಾಧಿಕಾರಿಯಾಗಿರುವ ಇನ್ಸ್‌ಪೆಕ್ಟರ್ ಜೋನ್ಸನ್ ಡಿ’ಸೋಜ ಅವರ ವಿರುದ್ಧ ಏರು ಧ್ವನಿಯಲ್ಲಿ ಮಾತನಾಡಿ ಗಲಾಟೆ ಮಾಡಲು ಆರಂಭಿಸಿದ್ದರು.ಈ ವೇಳೆ ಅಲ್ಲೇ ಇದ್ದ ಕಾನ್‌ಸ್ಟೇಬಲ್ ಕಿಶನ್ ವೈ ಅವರು ಗಲಾಟೆ ಮಾಡದಂತೆ ತಿಳಿಸಿದಾಗ ಸಚಿನ್ ಕುಮಾರ್ ಅವರು ಕಾನ್‌ಸ್ಟೇಬಲ್‌ಗೆ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ ಪ್ರದೀಪ್ ಶೆಟ್ಟಿ ಕೂಡಾ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಪ್ರಕರಣದಲ್ಲಿ ಮಹಜರು ತಯಾರಿಸದಂತೆ ಕರ್ತವ್ಯಕ್ಕೆ ಅಡ್ಡಿಡಡಿಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿಕೊಂಡು ಫೆ.14 ರಾತ್ರಿ ಗೀತಾ ಶೆಟ್ಟಿ ಮತ್ತು ಅಕ್ಷತಾ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.









