






ಪುತ್ತೂರಿನ ಯಾವುದೇ ಸುದ್ದಿ ಯಾವುದೇ ಪತ್ರಿಕೆಯಲ್ಲಿ ಬರುವುದಿಲ್ಲ ಎಂಬ ಕಾರಣಕ್ಕೆ 38 ವರ್ಷಗಳ ಹಿಂದೆ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಪುತ್ತೂರಿನಲ್ಲಿ ಪ್ರಾರಂಭಿಸಿದ್ದೆವು. ಬೆಳ್ತಂಗಡಿ ಮತ್ತು ಸುಳ್ಯದಲ್ಲಿಯೂ ಅಂತಹುದೇ ಪರಿಸ್ಥಿತಿ ಇದ್ದುದರಿಂದ ಅಲ್ಲಿಯೂ ಆಯಾ ತಾಲೂಕಿನ ಸ್ಥಳೀಯ ಪತ್ರಿಕೆಯನ್ನು ಪ್ರಾರಂಭಿಸಿದ್ದೆವು.
ಜಗತ್ತಿನ ಎಲ್ಲೆಡೆ ಇರುವ ಸುಳ್ಯದವರು ಓದುವ ಪತ್ರಿಕೆಯಾಗಿ ಸುಳ್ಯ ಸುದ್ದಿ ಬಿಡುಗಡೆ, ಬೆಳ್ತಂಗಡಿಯವರು ಓದುವ ಪತ್ರಿಕೆಯಾಗಿ ಬೆಳ್ತಂಗಡಿ ಸುದ್ದಿಬಿಡುಗಡೆ, ಪುತ್ತೂರಿನವರು ಓದುವ ಪತ್ರಿಕೆಯಾಗಿ ಪುತ್ತೂರು ಸುದ್ದಿಬಿಡುಗಡೆ ಬೆಳೆದಿರುವುದು ತಮಗೆಲ್ಲಾ ತಿಳಿದಿದೆ. ಮುಂದೆ ಇ-ಪೇಪರ್ ಆಗಿ, ಸುದ್ದಿ ನ್ಯೂಸ್ ಚಾನೆಲ್ ಆಗಿ, ಫೆಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್‌ಗಳಲ್ಲಿಯೂ ಸುದ್ದಿ ಮಾಧ್ಯಮವಾಗಿ ಆಯಾ ಊರಿನ ಸುದ್ದಿಗಳು ಜಗತ್ತಿನಾಧ್ಯಂತ ದೊರಕುತ್ತಿವೆ.


ಪುತ್ತೂರಿನ ಸುದ್ದಿ ಮಾಧ್ಯಮ ಪುತ್ತೂರಿನಲ್ಲಿರುವವರ ಸುದ್ದಿಗೆ ಮಾತ್ರವಲ್ಲ – ಜಗತ್ತಿನಲ್ಲಿರುವ ಎಲ್ಲಾ ಪುತ್ತೂರಿನವರ ಮಾಧ್ಯಮವಾಗಿರಬೇಕೆಂಬ ಉದ್ದೇಶದಿಂದ – ಪುತ್ತೂರಿನವರು ಎಲ್ಲಿಯೇ ಇರಲಿ- ಸುದ್ದಿಯಲ್ಲಿರಲಿ ಎಂಬ ಘೋಷಣೆಯನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಇದರಿಂದ ಪುತ್ತೂರಿನವರು ಎಲ್ಲೇ ಇದ್ದರೂ ಪರಸ್ಪರ ಸಂಪರ್ಕಕ್ಕೆ, ಸಂವಹನಕ್ಕೆ, ಪ್ರಚಾರಕ್ಕೆ ಸುದ್ದಿ ಮಾಧ್ಯಮ ಸಹಕಾರಿಯಾಗಲಿದೆ. ಆ ಮೂಲಕ ಊರಿನ ಮತ್ತು ಜನರ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಬೇಕೆಂದಿದ್ದೇವೆ. ಪುತ್ತೂರಿನ ಪ್ರತಿಯೊಬ್ಬ ವ್ಯಕ್ತಿಯೂ ಪರವೂರಿನಲ್ಲಿರುವ ತನ್ನ ಸ್ನೇಹಿತ ಮತ್ತು ಸಂಬಂಧಿಕರ ಸಂಪರ್ಕವನ್ನು ಸುದ್ದಿ ಕಛೇರಿಗೆ ನೀಡುವ ಮೂಲಕ ಈ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ಆಶಿಸುತ್ತೇನೆ. ಈ ಯೋಜನೆಯು ಸುಳ್ಯ, ಬೆಳ್ತಂಗಡಿಗಳಲ್ಲಿ ಪ್ರಾರಂಭವಾಗಲಿದ್ದು, ಬಂಟ್ವಾಳ, ಮಂಗಳೂರಿಗೂ ವಿಸ್ತಾರಗೊಳ್ಳಲಿದೆ.
– ಡಾ.ಯು.ಪಿ ಶಿವಾನಂದ













