







ಶಿಕ್ಷಕರಿಗೆ, ಸಮಾಜದ ನಾಗರಿಕರಿಗೆ ಸದಾ ಗೌರವ ನೀಡುತ್ತಿದ್ದ ವ್ಯಕ್ತಿ-ಎಸ್.ಬಿ ಶ್ರೀನಿವಾಸ್


-ರವಿರವರು ಕ್ಲಬ್ ನ ಯೋಚನೆ, ಯೋಜನೆಗಳಿಗೆ ಜೀವ ತುಂಬುತ್ತಿದ್ದರು-ಉಲ್ಲಾಸ್ ಪೈ



-ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಭಾವನೆಯುಳ್ಳ ದೊಡ್ಡ ವ್ಯಕ್ತಿತ್ವ-ಜಿ.ಕೆ ಪ್ರಸನ್ನ
-ಅಲ್ಪಾವಧಿಯ ಆಯುಷ್ಯದಲ್ಲಿ ನೆನಪಿನಲ್ಲಿ ಉಳಿಯುವ ಕಾರ್ಯಗಳನ್ನು ಮಾಡಿರುತ್ತಾರೆ-ಉಲ್ಲಾಸ್ ಕೋಟ್ಯಾನ್
-ಎಲ್ಲರಿಗೂ ಒಳಿತನ್ನು ಆಶಿಸುವ ಗುಣ ರವಿಯವರದ್ದಾಗಿದೆ-ಜೋನ್ ಕುಟಿನ್ಹಾ
ಪುತ್ತೂರು: ಇತ್ತೀಚಿಗೆ ಹೃದಯಾಘಾತದಿಂದ ಅಗಲಿದ ಶಾಂತಿಗೋಡು ಕಲ್ಕಾರ್ ದಿ.ಕೊರಗಪ್ಪ ಪೂಜಾರಿ ಹಾಗೂ ದಿ.ಕಮಲರವರ ಪುತ್ರ ರವೀಂದ್ರ ಕೆ. ಕಲ್ಕಾರ್ ರವರ ಶ್ರದ್ಧಾಂಜಲಿ ಸಭೆಯು ಮಾ.3 ರಂದು ಬೈಪಾಸ್ ರಸ್ತೆಯ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪೂರ್ವಾಹ್ನ ಜರಗಿತು.

ಶಿಕ್ಷಕರಿಗೆ, ಸಮಾಜದ ನಾಗರಿಕರಿಗೆ ಸದಾ ಗೌರವ ನೀಡುತ್ತಿದ್ದ ವ್ಯಕ್ತಿ-ಎಸ್.ಬಿ ಶ್ರೀನಿವಾಸ್:
ಸರ್ವೆ ಎಸ್.ಜಿ.ಎಂ ಶಾಲೆಯ ವಿಶ್ರಾಂತ ಮುಖ್ಯಗುರು ಹಾಗೂ ಅಗಲಿದ ರವೀಂದ್ರ ಕಲ್ಕಾರುರವರ ಶಿಕ್ಷಕರಾಗಿರುವ ಎಸ್.ಬಿ ಶ್ರೀನಿವಾಸ್ ಮಾತನಾಡಿ, ನನ್ನ ಪ್ರೀತಿಯ ಶಿಷ್ಯನಾಗಿರುವ ರವಿ ಕಲ್ಕಾರುರವರು ತೀರಿಕೊಂಡ ವಿಷಯ ನನಗೆ ಅರಗಿಸಿಕೊಳ್ಳಲಾಗಲಿಲ್ಲ. ರವಿ ಕಲ್ಕಾರ್ ರವರನ್ನು ಶಾಂತಿಗೋಡು ಶಾಲೆಯಿಂದ ಭಕ್ತಕೋಡಿ ಶಾಲೆಗೆ ನಾನೇ ಕರೆದುಕೊಂಡು ಹೋಗಿ ದಾಖಲಿಸಿದ್ದೆ. ರವಿರವರು ಶಿಕ್ಷಕರಿಗೆ, ಸಮಾಜದ ನಾಗರಿಕರಿಗೆ ಸದಾ ಗೌರವ ನೀಡುತ್ತಿದ್ದ ವ್ಯಕ್ತಿಯಾಗಿದ್ದರು. ಒಳಿತು ಮಾಡೋ ಮನುಷ ಎಂಬ ಹಾಡನ್ನು ರವಿರವರು ಕೊನೆಯ ಬಾರಿಗೆ ಹಾಡಿರೋದು ಈಗಲೂ ಮನಸ್ಸಿನಲ್ಲಿ ಗುನುಗುನಿಸುತ್ತಿದೆ. ಕ್ರಿಕೆಟ್ ಅಂದರೆ ರವಿಗೆ ಪಂಚಪ್ರಾಣ. ವಿದೇಶದಲ್ಲಿದ್ದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಸ್ಟೀವ್ ವ್ಹಾ ಹಾಗೂ ಮಾರ್ಕ್ ವ್ಹಾ ಸಹೋದರರ ಜೊತೆ ಫೊಟೊ ಕ್ಲಿಕ್ಕಿಸಿಕೊಂಡಿದ್ದರು. ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದ ರವಿರವರ ಅಗಲಿಕೆಯ ದುಃಖವನ್ನು ಸಹಿಸಲು ಭಗವಂತನು ಅನುಗ್ರಹಿಸಲಿ ಎಂದರು.

ರವಿರವರು ಕ್ಲಬ್ ನ ಯೋಚನೆ, ಯೋಜನೆಗಳಿಗೆ ಜೀವ ತುಂಬುತ್ತಿದ್ದರು-ಉಲ್ಲಾಸ್ ಪೈ:
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ ಮಾತನಾಡಿ, ಅಗಲಿದ ರವಿ ಕಲ್ಕಾರ್ ರವರು ನಮ್ಮ ರೋಟರಿ ಸಿಟಿ ಕ್ಲಬ್ ನಲ್ಲಿ ಏಳು ತಿಂಗಳ ಹಿಂದೆ ಸೇರ್ಪಡೆಗೊಂಡಿದ್ದರು. ಈ ಕಿರು ಅವಧಿಯಲ್ಲಿ ರವಿರವರು ಕ್ಲಬ್ ನ ಯೋಚನೆ ಹಾಗೂ ಯೋಜನೆಗಳಿಗೆ ಜೀವ ತುಂಬುತ್ತಾ ಬಂದವರು. ರೋಟರಿ ಮುಖಾಂತರ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದು ನಮ್ಮೊಂದಿಗೆ ಹೇಳುತ್ತಿದ್ದ. ಹಲವಾರು ಶಾಲೆಯ ವಿದ್ಯಾರ್ಥಿಗಳಿಗೆ ಶೂ, ಬೆಲ್ಟ್ ಹಾಗೂ ಐಡಿಗಳನ್ನು ನೀಡುವ ಮೂಲಕ ಕ್ಲಬ್ ಗೆ ಒಂದು ಪ್ರಾಜೆಕ್ಟ್ ಆಗಿ ಮೂಡಿತ್ತು. ಮಕ್ಕಳೊಂದಿಗೆ ದೂರವಿದ್ದು ವಿದೇಶದಲ್ಲಿ ದುಡಿಯುತ್ತಿದ್ದ ಸಂದರ್ಭದಲ್ಲಿ ಇನ್ನು ಮುಂದೆ ಮಕ್ಕಳೊಂದಿಗೆ ಸ್ವದೇಶದಲ್ಲಿದ್ದು ಮಕ್ಕಳೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳುತ್ತೇನೆ ಎಂದು ಸ್ವದೇಶಕ್ಕೆ ಆಗಮಿಸಿ ಬದುಕು ಕಟ್ಟಿಕೊಂಡ ಪರಿ ಮೆಚ್ಚುವಂತಹುದು. ಆದರೆ ರವಿರವರು ಇಷ್ಟು ಬೇಗ ನಮ್ಮನ್ನಗಲುತ್ತಾರೆ ಎಂದು ಊಹಿಸಲಸಾಧ್ಯ. ಭಗವಂತನು ರವಿರವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ಕರುಣಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.
ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಭಾವನೆಯುಳ್ಳ ದೊಡ್ಡ ವ್ಯಕ್ತಿತ್ವ-ಜಿ.ಕೆ ಪ್ರಸನ್ನ:
ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರರಾದ ಜಿ.ಕೆ ಪ್ರಸನ್ನ ಮಾತನಾಡಿ, ನಮ್ಮ ನೆಚ್ಚಿನ ಮಾಸ್ಟ್ರು ಎಚ್.ಬಿ ಶ್ರೀನಿವಾಸ್ ರವರ ಪ್ರತಿ ವರ್ಷದ ಹುಟ್ಟುಹಬ್ಬಕ್ಕೆ ಎಲ್ಲರೊಂದಿಗೆ ಸೇರಿಕೊಂಡು ಪೂರ್ವ ತಯಾರಿ ಮಾಡುತ್ತಿದ್ದರು ರವಿಯವರು. ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಭಾವನೆಯುಳ್ಳ ದೊಡ್ಡ ವ್ಯಕ್ತಿತ್ವ ಅವರದಾಗಿತ್ತು ಮಾತ್ರವಲ್ಲ ಚಿಕ್ಕ ವ್ಯಕ್ತಿಯಲ್ಲೂ ಮಾತನಾಡಿಸುವ ಗುಣವೂ ಅವರಲ್ಲಿತ್ತು ಎಂದು ಹೇಳಿ ನುಡಿನಮನ ಸಲ್ಲಿಸಿದರು.
ಅಲ್ಪಾವಧಿಯ ಆಯುಷ್ಯದಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಡಿರುತ್ತಾರೆ-ಉಲ್ಲಾಸ್ ಕೋಟ್ಯಾನ್:
ಪುತ್ತೂರು ಬಿಲ್ಲವ ಸಂಘದ ವಿದ್ಯಾನಿಧಿ ಯೋಜನೆಯ ಸಂಚಾಲಕ ಉಲ್ಲಾಸ್ ಕೋಟ್ಯಾನ್ ಮಾತನಾಡಿ, ಜನನ ಆಕಸ್ಮಿಕ ಆದರೆ ಮರಣ ಶಾಶ್ವತ. ಜನನ ಹಾಗೂ ಮರಣದ ನಡುವೆ ನಾವು ಸಮಾಜದಲ್ಲಿ ಹೇಗೆ ಜೀವಿಸುತ್ತಿದ್ದೇವೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ರವಿರವರು ತನ್ನ ಅಲ್ಪಾವಧಿಯ ಆಯುಷ್ಯದಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಡಿರುತ್ತಾರೆ ಎಂಬುದು ನಿಜ. ವಿದೇಶದಲ್ಲಿ ದುಡಿದು ಸ್ವದೇಶಕ್ಕೆ ಬಂದು ಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚುವ ಮೂಲಕ ನೆಮ್ಮದಿಯ ಜೀವನವನ್ನು ಕಂಡುಕೊಂಡಿದ್ದರು. ಇದೀಗ ಅವರ ಆಕಸ್ಮಿಕ ಅಗಲಿಕೆ ಎಲ್ಲರಿಗೂ ನೋವುಂಟು ಮಾಡಿದೆ. ದೇವರು ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂಬುದು ಪ್ರಾರ್ಥನೆಯಾಗಿದೆ ಎಂದರು.
ಎಲ್ಲರಿಗೂ ಒಳಿತನ್ನು ಆಶಿಸುವ ಗುಣ ರವಿಯವರದ್ದಾಗಿದೆ-ಜೋನ್ ಕುಟಿನ್ಹಾ;
ರೋಟರಿ ಕ್ಲಬ್ ಪುತ್ತೂರು ಸಿಟಿ ಪೂರ್ವಾಧ್ಯಕ್ಷ ಜೋನ್ ಕುಟಿನ್ಹಾ ಮಾತನಾಡಿ, ಎಲ್ಲರಿಗೂ ಒಳಿತನ್ನು ಆಶಿಸುವ ಗುಣ ರವಿಯವರದ್ದಾಗಿದೆ. ಜೀವನ ಎಂಬುದು ಶಾಶ್ವತವಲ್ಲ ಆದರೆ ಜೀವನದಲ್ಲಿ ಮನುಷ್ಯ ಹೇಗೆ ಹೆಸರು ಜೀವನ ನಡೆಸಿ ಹೆಸರು ಗಳಿಸುತ್ತಾನೆ ಅದುವೇ ಶಾಶ್ವತವಾಗಿ ಉಳಿಯುವಂತಹುದು ಎಂಬುದಕ್ಕೆ ಅಗಲಿದ ರವಿರವರು ಸಾಕ್ಷಿಯಾಗಿದ್ದಾರೆ. ರವಿರವರು ಹೆಸರಿಗಾಗಿ ಕೆಲಸ ಮಾಡಿದವರಲ್ಲ, ಅವರ ಸಮಾಜ ಸೇವೆ ಕಾರ್ಯಗಳೇ ಅವರಿಗೆ ಹೆಸರನ್ನು ತಂದಿತ್ತಿದೆ. ಎಲ್ಲರೊಂದಿಗೆ ಬೆರೆತು ಎಲ್ಲರ ಪ್ರೀತಿ, ವಿಶ್ವಾಸ ಗಳಿಸುವ ಗುಣ ಅವರಲ್ಲಿತ್ತು ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.
ಅಗಲಿದ ರವೀಂದ್ರ ಕಲ್ಕಾರ್ ರವರ ಪತ್ನಿ ಕೆಪಿಟಿಸಿಎಲ್(ಕೆಇಬಿ) ಕಿರಿಯ ಅಭಿಯಂತರರಾದ ಪವಿತ್ರ ಎಚ್, ಪುತ್ರಿ ರನ್ವಿ, ಪುತ್ರ ರವೀಷ್, ಸಹೋದರ ದಿನೇಶ್ ಕಲ್ಕಾರ್, ಅತ್ತಿಗೆ ಸುಲೋಚನಾ, ಸಹೋದರಿಯರು ಹಾಗೂ ಕುಟುಂಬಸ್ಥರು, ಹಿತೈಷಿಗಳು, ಬಂಧುಮಿತ್ರರು ಉಪಸ್ಥಿತರಿದ್ದರು. ಅಗಲಿದ ರವಿ ಕಲ್ಕಾರ್ ರವರ ಮಾವ ಶೇಖರ್ ಪೂಜಾರಿ ಶಿಬಾರ್ಲರವರು ಕಾರ್ಯಕ್ರಮ ನಿರೂಪಿಸಿದರು.
ಮೌನ ಪ್ರಾರ್ಥನೆ.. ಪುಷ್ಪಾರ್ಚನೆ..
ಅಗಲಿದ ರವೀಂದ್ರ ಕೆ.ಕಲ್ಕಾರ್ ರವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಆಗಮಿಸಿದ ರವಿ ಕಲ್ಕಾರ್ ರವರ ಕುಟುಂಬಸ್ಥರು, ಹಿತೈಷಿಗಳು, ಬಂಧುಮಿತ್ರರು ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸುತ್ತಾ ಬಳಿಕ ರವಿ ಕಲ್ಕಾರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.










