ಕಾಪಿಕಾಡು ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ : ಮಾಣಿ ಗ್ರಾ.ಪಂ. ಮಾಜಿ ಅಧ್ಯಕ್ಷರು, ಸದಸ್ಯರ ಪ್ರಯತ್ನದಿಂದ ಸಮಸ್ಯೆಗೆ ಪರಿಹಾರ

0

ವಿಟ್ಲ: ಬಂಟ್ವಾಳ ತಾಲೂಕು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿಕಾಡು ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಗಡಿಯಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಟ್ಯಾಂಕ್ ನಿಂದ ಬರುವ ಪೈಪ್ ಲೈನು ಪಲ್ಕೆ ಎಂಬಲ್ಲಿ ರಸ್ತೆಯ ಕಾಮಗಾರಿಯ ವೇಳೆ ತುಂಡಾಗಿದ್ದು, ಅದು 24-25 ಅಡಿ ಆಳದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಇದ್ದ ಕಾರಣ ರಸ್ತೆಯ ಗುತ್ತಿಗೆದಾರ ಸಂಸ್ಥೆ ಕೆ.ಎನ್.ಆರ್ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಿಬ್ಬಂದಿಯವರು ಹಿಂಜರಿಯುತ್ತಿದ್ದರು. ಆದುದರಿಂದ, ಪ್ರತ್ಯೇಕ ಲೈನು ಮಾಡಲು ಕನಿಷ್ಟ ನೂರು ಮೀಟರ್ ಹೊಸ ಪೈಪು ಬೇಕಾಗಿತ್ತು. ಪೈಪು ಶೇಖರಣೆ ಇಲ್ಲದ ಕಾರಣ ದುರಸ್ಥಿ ಕಾರ್ಯ ವಿಳಂಬವಾಗಿತ್ತು.

ಈ ಸಂದರ್ಭದಲ್ಲಿ ಮಾಣಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಆಳ್ವ ಕೊಡಾಜೆ, ಇಬ್ರಾಹಿಂ.ಕೆ.ಮಾಣಿ ಮತ್ತು ಮಾಜಿ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್ ರವರು ಕೆ.ಎನ್.ಆರ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೋಹಿತ್ ರೆಡ್ಡಿ ಮತ್ತು ಸಂಸ್ಥೆಯ ಅಧಿಕಾರಿಗಳ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಿಬ್ಬಂದಿಯವರ ಜೊತೆಗೆ 7-8 ದಿನಗಳಿಂದ ನಿರಂತರ ಸಂಪರ್ಕವನ್ನು ಇಟ್ಟುಕೊಂಡು, ಹೊಸ ಪೈಪು ತರಿಸುವಲ್ಲಿ ಮತ್ತು ದುರಸ್ಥಿ ಜಾಗದಲ್ಲಿ ಖುದ್ದು ನಿಂತು ದುರಸ್ಥಿ ಮಾಡಿಸಿ ಮನೆಬಾಗಿಲಿಗೆ ನೀರು ಬರುವ ಹಾಗೆ ಮಾಡುವಲ್ಲಿ ಸಫಲರಾಗಿದ್ದಾರೆ.

ಗ್ರಾಮದ ಕುಡಿಯುವ ನೀರಿನ ಪೈಪ್ ದುರಸ್ಥಿ ಕಾರ್ಯಕ್ಕೆ ಶ್ರಮ ವಹಿಸಿದ ಮಾಣಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರುಗಳ ಮತ್ತು ಸದಸ್ಯರ ಈ ಕಾರ್ಯವನ್ನು ಸಾರ್ವಜನಿಕರು. ಶ್ಲಾಘಿಸಿದ್ದಾರೆ.


ಶಾಶ್ವತ ಪರಿಹಾರಕ್ಕೆ ಕ್ರಮ
ಮಾಣಿ ಗ್ರಾಮದ ಪಲ್ಕೆ ಪರಿಸರದಲ್ಲಿ ಇನ್ನೆರಡು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಹೆದ್ದಾರಿಯ ಪಕ್ಕದಲ್ಲಿರುವ ಪ್ರಮುಖ ಪೈಪುಗಳು ಸುಮಾರು 25 ಅಡಿಗಿಂತಲೂ ಹೆಚ್ಚು ಆಳದಲ್ಲಿದ್ದು, ಮುಂದಿನ ದಿನಗಳಲ್ಲಿ ದುರಸ್ಥಿಗೆ ಬಂದರೆ ಕಷ್ಟ ಎನ್ನುವುದನ್ನು ಅರಿತು, ಪೈಪನ್ನು ಸ್ಥಳಾಂತರಿಸಿ ಶಾಶ್ವತ ಪರಿಹಾರವನ್ನು ಕೈಗೊಳ್ಳಲು ಕೆ.ಎನ್.ಆರ್ ಕಂಪೆನಿಯ ಅಧಿಕಾರಿ ರೋಹಿತ್ ರೆಡ್ಡಿಯವರಿಗೆ ಮಾಣಿ ಪಂಚಾಯತ್ ನಿಂದ ಪತ್ರ ಬರೆಯುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಪಂಚಾಯತ್ ನ ಮಾಜಿ ಅಧ್ಯಕ್ಷರುಗಳು ಮತ್ತು ಸದಸ್ಯರು ಆಗ್ರಹಿಸಿದರು.

LEAVE A REPLY

Please enter your comment!
Please enter your name here