







ಪುತ್ತೂರು: ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಸಮೀಪದ ಗೂನಡ್ಕ ಶಾರದಾ ಶಾಲೆ ಬಳಿ ಇಂದು (ಅ.25) ಮುಂಜಾನೆ ಸಂಭವಿಸಿದ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದು, ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಮೃತ ಬಾಲಕನನ್ನು ಪುಣಚ ಬರೆಂಗಾಯಿ ಮೂಲದ ನಾರಾಯಣ ನಾಯ್ಕ ಅವರ ಪುತ್ರ ತನುಷ್ (13) ಎಂದು ಗುರುತಿಸಲಾಗಿದೆ.



ಘಟನೆಯ ವಿವರ:
ಮೂಲತಃ ಬಂಟ್ವಾಳ ತಾಲೂಕಿನ ಪುಣಚ ಬರೆಂಗಾಯಿಯ ನಾರಾಯಣ ನಾಯ್ಕ ಮೈಸೂರು ಏರ್‌ಪೋರ್ಟ್‌ನಲ್ಲಿ ಉದ್ಯೋಗದಲ್ಲಿದ್ದು, ಪತ್ನಿ ವಿನುತಾಶ್ರೀ ಸಣ್ಣ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕುಟುಂಬ ಮೈಸೂರಿನಲ್ಲಿ ವಾಸವಿದ್ದು, ಬಂಟ್ವಾಳದ ಬರೆಂಗಾಯಿಯ ಮೂಲ ಮನೆಯಲ್ಲಿ ನಾರಾಯಣ ಅವರ ಅಕ್ಕ ಮತ್ತು ಮಕ್ಕಳು ವಾಸವಿದ್ದಾರೆ. ಊರಿನ ಶಾರದೋತ್ಸವ, ಹೊಸ ಅಕ್ಕಿ ಊಟ, ಅಗೇಲು ಕಾರ್ಯಕ್ರಮಕ್ಕಾಗಿ ಕುಟುಂಬ ಸಮೇತ ಊರಿಗೆ ಬಂದಿದ್ದರು ಎನ್ನಲಾಗಿದೆ. ಇಂದು ಮುಂಜಾನೆ ಪುಣಚದಿಂದ ಮೈಸೂರಿಗೆ ಹೊರಟಿದ್ದಾಗ ಗೂನಡ್ಕ ಬಳಿ ಕಾರು ಮತ್ತು ಎದುರಿನಿಂದ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಕಾರಿನಲ್ಲಿ ನಾರಾಯಣ ನಾಯ್ಕ (44), ಪತ್ನಿ ವಿನುತಾ ಶ್ರೀ (40), ತಾಯಿ ರತ್ನಾ (60), ಮಗ ತನುಷ್ (13) ಮತ್ತು ಮಗಳು ನಿಶಿತಾ (5) ಸೇರಿ 5 ಮಂದಿ ಇದ್ದರು. ಸ್ಥಳದಲ್ಲೇ ತನುಷ್ ಮೃತಪಟ್ಟಿದ್ದು, ಗಾಯಗೊಂಡ ನಾಲ್ವರನ್ನು ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.










