ಮಾ.15ಕ್ಕೆ ಬಹು ನಿರೀಕ್ಷಿತ ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕ ಲೋಕಾರ್ಪಣೆ

0

12 ವರ್ಷಗಳ ಪ್ರಯತ್ನಕ್ಕೆ ಯಶಸ್ಸು – ಕೃಷ್ಣನಾರಾಯಣ ಮುಳಿಯ

ಪುತ್ತೂರು: ತ್ಯಾಜ್ಯವನ್ನು ಬಳಸಿಕೊಂಡು ಬಯೋ ಸಿಎನ್‌ಜಿ ಗ್ಯಾಸ್ ಉತ್ಪಾದನೆ ಮಾಡುವ ಮೂಲಕ ಝೀರೋ ಡಂಪಿಂಗ್ ಯಾರ್ಡ್ ಮಾಡುವುದಲ್ಲದೆ ದೇಶದಲ್ಲೇ ನಗರಸಭೆ ವ್ಯಾಪ್ತಿಯಲ್ಲಿ ಪ್ರಥಮ ಘಟಕವಾಗಿ ಹೊರಹೊಮ್ಮಿರುವ ಪುತ್ತೂರು ಬನ್ನೂರಿನ ನೆಕ್ಕಿಲು ಎಂಬಲ್ಲಿನ ನೆಲಭರ್ತಿ ಸ್ಥಳ(ಲ್ಯಾಂಡ್‌ಫಿಲ್ ಸೈಟ್)ದಲ್ಲಿ ಗ್ಯಾಸ್ ಉತ್ಪಾದನೆ ಆರಂಭಿಸಲಾಗಿದ್ದು, ಇದೀಗ ಮಾರಾಟಕ್ಕೆ ಕೇಂದ್ರ ಸರಕಾರದ ಪೆಟ್ರೋಲಿಯಂ ಆಂಡ್ ಎಕ್ಸ್ಪ್ಲೋಸಿವ್ ಸೇಫ್ಟಿ ಆರ್ಗನೈಸೇಶನ್ (ಪೆಸೋ) ದಿಂದ ಹಸಿರು ನಿಶಾನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಮಾ.15ರಂದು ಕಂಪ್ರೆಸ್ಡ್ ಬಯೋ ಗ್ಯಾಸ್ (ಸಿ.ಬಿ.ಜಿ) ಘಟಕವು ಲೋಕಾರ್ಪಣೆಗೊಳ್ಳಲಿದೆ.


ಶಾಸಕ ಅಶೋಕ್ ಕುಮಾರ್ ರೈ ಯವರು ಘಟಕವನ್ನು ಉದ್ಘಾಟಿಸಲಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ನಡೆಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್, ನಗರ ಸಭೆ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ಮಾಜಿ ಶಾಸಕ ಸಂಜೀವ ಮಠಂದೂರು ಅತಿಥಿಗಳಾಗಿ ಆಗಮಿಸಲಿದ್ದಾರೆ.


ನಗರ ಸಭೆಯ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಚ್ ಆರ್ ಕೇಶವ್, ರಿಟಾಪ್ ಸೊಲ್ಯೂಷನ್‌ನ ಡಾ.ದಿವ್ಯಾ ಪ್ರಶಾಂತ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲ್ ಗೌರವ ಉಪಸ್ಥಿತಿಯಲ್ಲಿರುತ್ತಾರೆ ಎಂದು ಹೇಳಿದ ಅವರು ಪುತ್ತೂರು ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯದಿಂದ ಉತ್ಪಾದನೆಗೊಳ್ಳಲಿರುವ ಈ ಘಟಕವು ಕರ್ನಾಟಕ ರಾಜ್ಯದ ಪ್ರಥಮ ಸಿಎನ್‌ಜಿ ಉತ್ಪಾದನಾ ಘಟಕವಾಗಿರುತ್ತದೆ. ಕಳೆದ 12 ವರ್ಷಗಳಿಂದ ಈ ಯೋಜನೆಯ ಅನುಷ್ಟಾನಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದು, ಇದೀಗ ಕನಸು ನನಸಾಗುತ್ತಿದೆ. ಗ್ಯಾಸ್‌ನ್ನು ವಾಹನಗಳಿಗೆ ಸಿಎನ್‌ಜಿ ಇಂಧನವಾಗಿ ಮಾರಾಟ ಮಾಡಲಾಗುತ್ತದೆ. ಪ್ರತೀ 1 ಕೆ.ಜಿ. ಅನಿಲಕ್ಕೆ 1 ರೂಪಾಯಿ ರಾಜಸ್ವವನ್ನು ಅವರು ನಗರಸಭೆಗೆ ಪಾವತಿ ಮಾಡಲಾಗುವುದು ಎಂದು ಕೃಷ್ಣನಾರಾಯಣ ಮುಳಿಯ ತಿಳಿಸಿದರು.


ತರಬೇತಿ ಹಂತದಲ್ಲಿರುವ ಅಧಿಕಾರಿಗಳ ನಿರಂತರ ಭೇಟಿ
ಹಸಿ ತ್ಯಾಜ್ಯದಿಂದ ಸಿಎನ್‌ಜಿ (ಸಿಬಿಜಿ) ಉತ್ಪಾದನಾ ಘಟಕವು ಇಂದೋರ್‌ನಲ್ಲಿ ಮಹಾನಗರ ಪಾಲಿಕೆಯಿಂದ ನಡೆಯುತ್ತಿದೆ. ಅದರು ಬಿಟ್ಟರೆ ನಗರಸಭೆ ವ್ಯಾಪ್ತಿಯಲ್ಲಿ ಪುತ್ತೂರಿನಲ್ಲೇ ದೊಡ್ಡ ಘಟಕವಿರುವುದು. ಹಾಗಾಗಿ ನಗರಸಭೆ ಹಂತದ ಪರಿಸರ ಅಭಿಯಂತರರ ತರಬೇತಿ ಹಂತದಲ್ಲಿರುವ ಅಧಿಕಾರಿಗಳಿಗೆ, ಇತರ ಪೌರ ಕಾರ್ಮಿಕರಿಗೆ ಪ್ರಾಯೋಗಿಕ ತರಬೇತಿಗಾಗಿ ಪುತ್ತೂರು ನಗರಭೆಯ ಸಿಎನ್‌ಜಿ ಘಟಕಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಈಗಾಗಲೇ ಸುಮಾರು 80 ಮಂದಿ ಭೇಟಿ ನೀಡಿದ್ದಾರೆ ಎಂದು ಕೃಷ್ಣನಾರಾಯಣ ಮುಳಿಯ ಹೇಳಿದರು.


ಹಸಿ, ಒಣ ಕಸ ವಿಂಗಡಿಸಿ ಕೊಡುವಂತೆ ಮನವಿ
ಕಸ ಸಂಗ್ರಹಕ್ಕೆ ಮನೆ ಮನೆಗೆ ಪೌರಕಾರ್ಮಿಕರು ಬರುತ್ತಾರೆ. ಹಾಗೆ ಬರುವಾಗ ಹಸಿ, ಒಣ, ದ್ರವ ಕಸವನ್ನು ವಿಂಗಡಿಸಿಕೊಡಬೇಕು. ಉದಾಹರಣೆಗೆ ಹಾಲಿನ ಪ್ಯಾಕೇಟ್ ಕಟ್ ಮಾಡಿದ ಸಣ್ಣ ತುಂಡು ಹಸಿಕಸದೊಂದಿಗೆ ಬರುವುದು, ಇನ್ನಿತರ ಸಣ್ಣ ಪ್ಯಾಕೇಟ್‌ಗಳು ಬಯೋಗ್ಯಾಸ್ ಘಟಕಕ್ಕೆ ಸೇರಬಾರದು. ಅದೇ ರೀತಿ ಸಣ್ಣ ಕಬ್ಬಿಣದ ಚೂರು, ಗ್ಲಾಸ್‌ಗಳ ಚೂರುಗಳು ಮೆಷಿನ್‌ಗೆ ಹೋಗಿ ಮೆಷನ್ ಕೆಡುವ ಹಂತಕ್ಕೆ ಬರುತ್ತದೆ. ಒಂದೊಂದು ಮೆಷಿನ್ ದುರಸ್ಥಿಗೆ ಬಹಳ ವೆಚ್ಚ ತಗಲುತ್ತದೆ. ಹಾಗಾಗಿ ಮನೆ ಮನೆಯಿಂದ ಕಸ ನೀಡುವ ವೇಳೆ ವಿಂಗಡಿಸಿ ಕೊಡುವಂತೆ ಕೃಷ್ಣನಾರಾಯಣ ಮುಳಿಯ ಅವರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ನ ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ರೋಟರಿ ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ಪ್ರಾಜೆಕ್ಟ್ ಡೈರೆಕ್ಟರ್ ರಾಜೇಶ್ ಬೆಜ್ಜಂಗಳ, ರೋಟರಿ ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ನ ನಿರ್ದೇಶಕ ವಿಶ್ವಾಸ್ ಶೆಣೈ, ಸುಮಂತ್ ಉಪಸ್ಥಿತರಿದ್ದರು.


ಘಟಕದಿಂದ ಪರಿಸರಕ್ಕೆ ಆಗುವ ಪ್ರಯೋಜನಗಳು
ಸುತ್ತುಮುತ್ತಲಿನ ಮನೆಯಲ್ಲಿ ಇರುವವರಿಗೆ ಕೆಟ್ಟ ವಾಸನೆಯಿಂದ ಮುಕ್ತಿ. ಮೀಥೇನ್ , ಅಔಶಿ ನಿಂದ 10 ಪಟ್ಟು ಹೆಚ್ಚು ಪರಿಸರಕ್ಕೆ ಹಾನಿಕಾರಕ. ಅದು ವಾತಾವರಣಕ್ಕೆ ಬಿಡುಗಡೆ ಆಗುವುದಿಲ್ಲ. ಕಸ ಡಂಪ್ ಮಾಡಲು ಉಪಯೋಗ ಆಗುವ ಸ್ಥಳದ ಉಳಿತಾಯ. ಸಿಬಿಜಿ ಯನ್ನು ಅಡುಗೆಗೆ ಯಾ ವಾಹನಕ್ಕೆ ಉಪಯೋಗಿಸಿದರೆ, ವಿದೇಶ ವಿನಿಮಯದ ಉಳಿತಾಯ, ವಾಹನಕ್ಕೆ ಡೀಸೆಲ್ ಬದಲು ಉಪಯೋಗಿಸಿದಾಗ, ಪರಿಸರಕ್ಕೆ ಬಿಡುಗಡೆಯಾಗುವ ಕೆಟ್ಟ ಹೊಗೆಯಿಂದ ಮುಕ್ತಿ. ಡಂಪಿಂಗ್ ಯಾರ್ಡ್ ಇಂದ ಹೊರಸೂಸುವ ಲಿಚೆಟ್ ದ್ರವ ಅಂತರ್ಜಾಲವನ್ನು ಕಲುಷಿತಗೊಳಿಸುತ್ತದೆ. ಇದು ಕ್ಯಾನ್ಸರ್ ಕಾರಕ. ಇದರಿಂದ ಮುಕ್ತಿ. ಹೊರಬಂದ ಸ್ಲರಿ ಒಂದು ಉತ್ತಮ ಸಾವಯುವ ಗೊಬ್ಬರವಾಗಿ ಸಿಗಲಿದೆ. ಘಟಕದಲ್ಲಿ ಸುಮಾರು 6 ರಿಂದ 10 ಜನಕ್ಕೆ ಉದ್ಯೋಗಾವಕಾಶ ಸಿಗಲಿದೆ.
ಕೃಷ್ಣನಾರಾಯಣ ಮಳಿಯ ಅಧ್ಯಕ್ಷರು, ರೋಟರಿ ಸ್ವಚ್ಛ ಭಾರತ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು

LEAVE A REPLY

Please enter your comment!
Please enter your name here