ಗುಂಡ್ಯ: ಸ್ವಿಫ್ಟ್ ಕಾರು-ರಾಜಹಂಸ ಬಸ್ ನಡುವೆ ಭೀಕರ ಅಪಘಾತ : ಮೂವರು ಮೃತ್ಯು-ಓರ್ವನಿಗೆ ಗಂಭೀರ ಗಾಯ

0

ನೆಲ್ಯಾಡಿ: ಸ್ವಿಫ್ಟ್ ಕಾರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ರಾಜಹಂಸ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳ ಎಂಬಲ್ಲಿ ಮಾ.13ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕೊಕ್ಕಡ ಎಸ್.ಆರ್.ಆಯಿಲ್ ಮಿಲ್ ಮಾಲಕ, ಶಿಶಿಲ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ (56ವ.), ಉಜಿರೆ ಗ್ರಾಮದ ಮರಕಡ ನಿವಾಸಿ, ಕಕ್ಕಿಂಜೆ ಮಲ್ನಾಡ್ ಫೈನಾನ್ಸ್ ಮಾಲಕ ಶ್ರೀಧರ ಗೌಡ (61ವ.) ಹಾಗೂ ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿ ಜನಾರ್ದನ ಗೌಡ ಯಾನೆ ಉಮೇಶ್ ಗೌಡ (54ವ.) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕಾರಿನಲ್ಲಿದ್ದ ಉಜಿರೆ ಗ್ರಾಮದ ಕೂಡಿಗೆ ನಿವಾಸಿ ಸುರೇಶ್ (60ವ.) ಎಂಬವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಜ್ಜುಗುಜ್ಜಾದ ಕಾರು;
ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಡಿಸೈರ್ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸಿನ ಮುಂಭಾಗವೂ ಜಖಂಗೊಂಡಿದೆ. ದ್ವಿಪಥ ನೇರ ರಸ್ತೆಯಲ್ಲೇ ಅಪಘಾತ ನಡೆದಿದ್ದು ಅಪಘಾತದಿಂದಾಗಿ ಇತರೇ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿರಲಿಲ್ಲ. ಬಸ್ಸು ಮಧ್ಯಾಹ್ನ 1.30ಕ್ಕೆ ಧರ್ಮಸ್ಥಳ ಡಿಪೋದಿಂದ ಹೊರಟಿತ್ತು. ಸಕಲೇಶಪುರದಿಂದ ಕೊಕ್ಕಡ-ಬೆಳ್ತಂಗಡಿ ಬರುತ್ತಿದ್ದ ಸ್ವಿಫ್ಟ್ ಕಾರನ್ನು ಶ್ರೀಧರ ಗೌಡ ಅವರು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪರಸ್ಪರ ಸಂಬಂಧಿಕರು;
ಕಾರಿನಲ್ಲಿದ್ದ ನಾಲ್ವರೂ ಸಂಬಂಧಿಕರಾಗಿದ್ದರು ಎಂದು ತಿಳಿದುಬಂದಿದೆ. ಕೊಕ್ಕಡದಲ್ಲಿ ಎಸ್.ಆರ್.ಆಯಿಲ್ ಮಿಲ್ ಹೊಂದಿದ್ದ ಚಂದ್ರಶೇಖರ ಗೌಡ ಅವರು, ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಅವರು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿ, ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಚೇತನ ಅವರು ಬೆಳ್ತಂಗಡಿ ತಾ.ಪಂ.ನ ಮಾಜಿ ಸದಸ್ಯೆಯಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಜನಾರ್ದನ ಗೌಡ ಯಾನೆ ಉಮೇಶ್ ಗೌಡ ಅವರು ಕೃಷಿಕರಾಗಿದ್ದು, ಜೊತೆಗೆ ಆಟೋ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಕ್ಕಿಂಜೆಯಲ್ಲಿ ಫೈನಾನ್ಸ್ ಹೊಂದಿದ್ದ ಶ್ರೀಧರ ಗೌಡ ಅವರು ಸಹ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ;
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೂಮರೆಡ್ಡಿ, ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ., ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್, ಪ್ರೊಬೆಷನರಿ ಎಎಸ್ಪಿ ಅನನ್ಯ ಶ್ರೀವಾಸ್ತವ್, ನೆಲ್ಯಾಡಿ ಹೊರಠಾಣೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here