






ಪುತ್ತೂರು: ಸಾಲ್ಮರದ ದಾರುಲ್ ಹಸನಿಯಾ ಅಕಾಡೆಮಿಯಲ್ಲಿ ಪವಿತ್ರ ಹಿಫ್ಲುಲ್ ಖುರ್‌ಆನ್ ಮತ್ತು ‘ಸಮಸ್ತ’ದ ಅಧೀನದ ಎಸ್.ಎನ್.ಇ.ಸಿ. (SNEC) ಸಮನ್ವಯ ಶಿಕ್ಷಣದ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿಗೆ ಚಾಲನೆ ನೀಡಲಾಯಿತು. ಕಳೆದ ಏಳು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ದಾರುಲ್ ಹಸನಿಯಾ ಅಕಾಡೆಮಿಯ ಹಿಫ್ಲುಲ್ ಖುರ್‌ಆನ್ ಕಾಲೇಜಿನಲ್ಲಿ ಪ್ರಸ್ತುತ ಅರುವತ್ತು ವಿದ್ಯಾರ್ಥಿಗಳು ಪವಿತ್ರ ಖುರ್‌ಆನ್ ಕಂಠಪಾಠದ ಅಧ್ಯಯನ ಮಾಡುತ್ತಿದ್ದಾರೆ. ಇದುವರೆಗೆ ಸುಮಾರು ಮೂವತ್ತು ವಿದ್ಯಾರ್ಥಿಗಳು ಪವಿತ್ರ ಖುರ್‌ಆನ್ ಸಂಪೂರ್ಣವಾಗಿ ಕಂಠಪಾಠ ಮಾಡಿ ಪೂರ್ಣಗೊಳಿಸಿದ್ದಾರೆ. ಇದೇ ವೇಳೆ ಸಂಸ್ಥೆಯಲ್ಲಿ ಶಾಲೆಯ ಏಳನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ‘ಸಮಸ್ತ’ದ ಅಧೀನದ ಎಸ್.ಎನ್.ಇ.ಸಿ. ಸಮನ್ವಯ ಶಿಕ್ಷಣದ ಶರೀಅ ಪ್ಲಸ್ ‘ಸನಾಇ’ ಕೋರ್ಸ್ ಆರಂಭಗೊಳ್ಳಲಿದೆ. ಇದರ ಹೊಸ ದಾಖಲಾತಿಗೆ ಪುತ್ತೂರು ಅಶ್ಮಿ ಕಂಫರ್ಟ್ ಹಾಲ್‌ನಲ್ಲಿ ನಡೆದ ದಾಖಲಾತಿ ಉದ್ಘಾಟನಾ ಸಮಾರಂಭದಲ್ಲಿ ಸಯ್ಯಿದ್ ಯಹ್ಯಾ ತಂಙಳ್ ಅಲ್ ಹಾದಿ ಸಾಲ್ಮರ ಅವರ ಪುತ್ರ ಸಯ್ಯಿದ್ ಶಾಝಿಲ್ ತಂಙಳ್ ಅವರಿಗೆ ಮೊದಲ ದಾಖಲಾತಿ ಪತ್ರವನ್ನು ನೀಡಿ ಚಾಲನೆ ನೀಡಿದರು.


ಉಳಿದ ವಿದ್ಯಾರ್ಥಿಗಳಿಗಾಗಿ ಎಸ್.ಎನ್.ಇ.ಸಿ.ಯ ಆನ್‌ಲೈನ್ ಮೂಲಕ ದಾಖಲಾತಿ ಅರ್ಜಿಗಳನ್ನು ಸಲ್ಲಿಸಲಾಯಿತು. ಮುಂದಿನ ತಿಂಗಳು ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ಮೊದಲ ದಾಖಲಾತಿ ಪತ್ರವನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಎನ್.ಇ.ಸಿ. ಕರ್ನಾಟಕ ಕೋ-ಆರ್ಡಿನೇಟರ್ ಸಮಿತಿ ಅಧ್ಯಕ್ಷ ಸಯ್ಯಿದ್ ಅಕ್ರಂ ಅಲಿ ಅವರು ಮಾತನಾಡಿ ‘ಸಮಸ್ತ’ದ ಅಧೀನದಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಆರಂಭವಾದ ಎಸ್.ಎನ್.ಇ.ಸಿ. ಸಮನ್ವಯ ಶಿಕ್ಷಣವು ಇಂದು ಅತ್ಯಂತ ಬೇಡಿಕೆಯ ಪಠ್ಯಕ್ರಮವಾಗಿ ಬೆಳೆಯುತ್ತಿದ್ದು, ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದೆ ಎಂದು ಹೇಳಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಮಾತನಾಡಿ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುವುದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ಬೆಳಗಿಸಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ರಿಯಾಝ್ ಇಂಜಿನಿಯರ್, ಡಾ. ಶರಫರಾಝ್, ಅಬ್ದುಲ್ ಕರೀಂ ದಾರಿಮಿ ಸೇರಿದಂತೆ ಅನೇಕ ಗಣ್ಯರು ಮಾತನಾಡಿ, ಸಂಸ್ಥೆಯ ಮುಂದಿನ ಶೈಕ್ಷಣಿಕ ವರ್ಷದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಹಾಗೂ ಪುತ್ತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಕೋಶಾಧಿಕಾರಿ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ ಶುಭ ಕೋರಿದರು.
ಸಮಾರಂಭದಲ್ಲಿ ಸಯ್ಯಿದ್ ಯಹ್ಯಾ ತಂಙಳ್ ಅಲ್ ಹಾದಿ ಸಾಲ್ಮರ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಯ್ಯಿದ್ ಹಬೀಬುರ್ರಹ್ಮಾನ್ ತಂಙಳ್ ಕಲ್ಲೇರಿ, ಸಯ್ಯಿದ್ ಮುಈನ್ ತಂಙಳ್, ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಅಬ್ದುಲ್ ರಹಿಮಾನ್ ಹಾಜಿ ಬಾಳಾಯ, ಉಮರ್ ಹಾಜಿ ಸಂಪ್ಯ, ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ಅಶ್ರಫ್ ಹಾಜಿ ಗೋಳಿಕಟ್ಟೆ, ಬಶೀರ್ ಹಾಜಿ ದರ್ಬೆ, ಮುನೀರ್ ಕಬಕ, ಯು.ಪಿ. ಅಬ್ಬಾಸ್ ಹಾಜಿ, ಆರ್.ಪಿ ರಝಾಕ್ ಪಡೀಲ್, ಅಬ್ದುಲ್ ಜಲೀಲ್ ದಾರಿಮಿ ಆತೂರು, ಸಿರಾಜುದ್ದೀನ್ ಫೈಝಿ ಕರಾಯ, ಅಶ್ರಫ್ ರಹ್ಮಾನಿ ಪಡೀಲ್, ಶಾಹಿರ್ ಯಮಾನಿ ಕಲ್ಲಗುಡ್ಡೆ, ಶಾಕಿರ್ ಮುಸ್ಲಿಯಾರ್ ಕಬಕ, ಸಾಬಿರ್ ಫೈಝಿ ಕಲ್ಲೇಗ, ಹಾಶಿಂ ರಹ್ಮಾನಿ ಸಾಲ್ಮರ, ಎ.ಎಂ ಅಶ್ರಫ್ ಪರ್ಲಡ್ಕ, ಖಲಂದರ್ ಶಾಫಿ ಮದನಿ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು. ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.










