ಭಾರೀ ಮಳೆಗೆ ಧ್ವಜವನ್ನು ಇಳಿಸುವ ಕೆಲಸ ಮಾಡದೆ ಸಣ್ಣ ಮಿಸ್ಟೇಕ್ ಆಗಿದೆ: ಶಾಸಕ ಅಶೋಕ್ ರೈ

0

‘ಸ್ಟೋರಿ ಕಟ್ಟುವವರಿಗೆ ಅದೇ ಕೆಲಸ- ಟೀಕೆಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ’


ಪುತ್ತೂರು: ದೇಶದ ಮೇಲೆ ಯುವಪೀಳಿಗೆಗೆ ಪ್ರೀತಿ ಹೆಚ್ಚಾಗಬೇಕು, ದೇಶದೊಳಗಿನ ಜನರಿಗೆ ನಾವೆಲ್ಲಾ ಒಂದು ಎನ್ನುವ ದೇಶಪ್ರೇಮ ಹೆಚ್ಚಾಗಬೇಕು, ತಾಲೂಕು ಮಟ್ಟದಲ್ಲಿ ಎತ್ತರದಲ್ಲಿ ದೇಶದ ಧ್ವಜ ಹಾರಬೇಕು ಎಂದು ಧ್ವಜಸ್ಥಂಭ ನಿರ್ಮಿಸಿದ್ದೆವು. ಆದರೆ ಜೋರಾಗಿ ಮಳೆ ಬರುವಾಗ ಈ ಧ್ವಜವನ್ನು ಕೆಳಕ್ಕೆ ಇಳಿಸುವ ಕೆಲಸ ಮಾಡಬೇಕಿತ್ತು. ಅದನ್ನು ಮಾಡದೆ ಸಣ್ಣ ತಪ್ಪಾಗಿದೆ. ಇನ್ನು ಹೊಸ ಧ್ವಜವನ್ನು ಅಳವಡಿಕೆ ಮಾಡುವ ಕೆಲಸ ಮಾಡುತ್ತೇವೆ. ಮಳೆಗಾಲದಲ್ಲಿ ತೆಗೆದಿಡುವ ಕೆಲಸ ಮಾಡಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.


ಇತ್ತೀಚೆಗೆ ರಾತ್ರಿ ವೇಳೆ ಸುರಿದ ಭಾರೀ ಮಳೆಗೆ ಪುತ್ತೂರಿನ ನೆಲ್ಲಿಕಟ್ಟೆ ಬಳಿ ರಾಜ್ಯದ ಮೂರನೇ ಅತಿ ಎತ್ತರದ ಧ್ವಜಸ್ಥಂಭದಲ್ಲಿ ಅಳವಡಿಕೆಯಾಗಿದ್ದ ರಾಷ್ಟ್ರಧ್ವಜ ಹಾನಿಗೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಜೋರಾಗಿ ಮಳೆ ಬರುವಾಗ ಈ ಧ್ವಜವನ್ನು ಕೆಳಕ್ಕೆ ಇಳಿಸುವ ಕೆಲಸ ಮಾಡಬೇಕಿತ್ತು. ಅದನ್ನು ಮಾಡದೆ ಸಣ್ಣ ತಪ್ಪಾಗಿದೆ. ನಗರಸಭೆಯ ಸಿಬ್ಬಂದಿ ಒಂದು ಬಟನ್ ಪ್ರೆಸ್ ಮಾಡಿದ್ದರೆ ಧ್ವಜ ಕೆಳಗೆ ಬಂದು ನಿಲ್ಲುತ್ತದೆ. ಮಳೆ ನಿಂತ ಮೇಲೆ ಮತ್ತೆ ಬಟನ್ ಪ್ರೆಸ್ ಮಾಡಿದರೆ ವಾಪಸ್ ಮೇಲಕ್ಕೆ ಹೋಗುತ್ತದೆ. ಆದರೆ ಮೊನ್ನೆ ಅನಿರೀಕ್ಷಿತವಾಗಿ ಮಳೆ ಬಂದಿದೆ. ಇಲ್ಲಿ ಯಾರೂ ಇರಲಿಲ್ಲ. ಜೊತೆಗೆ ಆ ಡ್ಯೂಟಿಯನ್ನು ಕೂಡ ಯಾರಿಗೂ ಹಂಚಿರಲಿಲ್ಲ. ಪುಣೆ, ಬೆಳಗಾವಿಯಲ್ಲಿರುವ ಧ್ವಜಗಳನ್ನು ಮಳೆಗಾಲದಲ್ಲಿ ಕೆಳಗೆ ಇಳಿಸುತ್ತಾರೆ. ಆದರೆ ಇಲ್ಲಿ ಅಧಿಕಾರಿಗಳಿಂದ ಮಿಸ್ಟೇಕ್ ಆಗಿದೆ. ಇನ್ನು ಹೊಸ ಧ್ವಜವನ್ನು ಅಳವಡಿಕೆ ಮಾಡುವ ಕೆಲಸ ಮಾಡುತ್ತೇವೆ. ಮಳೆಗಾಲದಲ್ಲಿ ತೆಗೆದಿಡುವ ಕೆಲಸ ಮಾಡುತ್ತೇವೆ. ವರ್ಷಕ್ಕೆ 4 ಬಾರಿ ಧ್ವಜಗಳನ್ನು ಬದಲಾವಣೆ ಮಾಡಲೇಬೇಕು. ಅದನ್ನು ಮಾಡುತ್ತೇವೆ ಎಂದು ಹೇಳಿದರು.


ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕಥೆಗಳನ್ನು ಹೆಣೆಯವುದು ಸರಿಯಲ್ಲ. ಸ್ಟೋರಿ ಕಟ್ಟುವ ಮನುಷ್ಯರಿಗೆ ಇದೇ ಕೆಲಸ. ಈವರೆಗೆ ಏನೂ ಮಾಡಲು ಆಗಿಲ್ಲ. ಇದರಿಂದ ಪುತ್ತೂರಿನ ಅಭಿವೃದ್ಧಿ ಆಗುವುದಿಲ್ಲ. ಈ ಟೀಕೆಗಳನ್ನು ಕಿವಿಗೇ ಹಾಕಿಕೊಳ್ಳುವುದಿಲ್ಲ. ಇನ್ನು ಮುಂದಕ್ಕೂ ದೇಶಪ್ರೇಮದ, ಧರ್ಮದ ಕೆಲಸಗಳಿಗೆ ಉತ್ತೇಜನ ಕೊಡುವ ಕೆಲಸವನ್ನು ಮಾಡುತ್ತೇವೆ ಎಂದು ಶಾಸಕರು ಹೇಳಿದರು.

LEAVE A REPLY

Please enter your comment!
Please enter your name here