10 ವರ್ಷಗಳ ಗುಡಿಸಲು ಜೀವನಕ್ಕೆ ಅಂತ್ಯ: ಧರ್ಮಸ್ಥಳ ಯೋಜನೆಯಿಂದ ಮನೆ ಹಸ್ತಾಂತರ

0

ಕಡಬ: ಸುಮಾರು 10 ವರ್ಷಗಳಿಂದ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಇದೀಗ ಸುರಕ್ಷಿತ ಆಶ್ರಯ ದೊರಕಿದ ಸಂತಸದ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ಕಟ್ಟೆಮಜಲು ನಿವಾಸಿ ಕೇಶವ ಅವರಿಗೆ ನೂತನ ಮನೆ ನಿರ್ಮಿಸಿ ಶನಿವಾರ ಹಸ್ತಾಂತರಿಸಲಾಯಿತು.
ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಅವರ ಕನಸಿನ ಯೋಜನೆಯಾದ ವಾತ್ಸಲ್ಯ ಯೋಜನೆ ಅಸಹಾಯಕ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಶ್ರಯ ಒದಗಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದೆ. ಕೇಶವ ಅವರ ಕುಟುಂಬವು ಇಬ್ಬರು ಮಕ್ಕಳೊಂದಿಗೆ ಸಂಕಷ್ಟಕರ ಪರಿಸ್ಥಿತಿಯಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಕಾರ್ಯಕರ್ತರ ಪರಿಶೀಲನೆಯ ಬಳಿಕ ಮನೆ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿತ್ತು.


ಸುಮಾರು ₹1.90 ಲಕ್ಷ ವೆಚ್ಚದಲ್ಲಿ ಒಂದು ತಿಂಗಳ ಅವಧಿಯಲ್ಲಿ ಮನೆ ನಿರ್ಮಿಸಿ ಹಸ್ತಾಂತರಿಸಲಾಗಿದ್ದು, ಕೇಶವ ಅವರು ಈಗಾಗಲೇ ಯೋಜನೆಯಡಿ ಮಾಸಾಶನವನ್ನು ಪಡೆಯುತ್ತಿರುವುದು ಗಮನಾರ್ಹವಾಗಿದೆ. ಮನೆ ಹಸ್ತಾಂತರಿಸಿದ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ, ಧರ್ಮಸ್ಥಳದ ವತಿಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಲಕ್ಷಾಂತರ ಬಡ ಕುಟುಂಬಗಳಿಗೆ ನೆರವು ನೀಡಲಾಗಿದೆ. ಮಾತೃಶ್ರೀ ಹೇಮಾವತಿ ಹೆಗ್ಗಡೆ ಆರಂಭಿಸಿದ ವಾತ್ಸಲ್ಯ ಯೋಜನೆ ಅಸಹಾಯಕ ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡುವ ಪುಣ್ಯದ ಕಾರ್ಯವಾಗಿದ್ದು, ಬಡವರ ಕಣ್ಣೀರು ಒರೆಸುವ ಕೆಲಸವಾಗುತ್ತಿದೆ ಎಂದರು.


ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್. ಮಾತನಾಡಿ, ಆರ್ಥಿಕವಾಗಿ ದುರ್ಬಲ ಕುಟುಂಬಗಳನ್ನು ಮುಖ್ಯ ವಾಹಿನಿಗೆ ತರಲು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸ್ವಾವಲಂಬಿಯಾಗಿ ಬದುಕಬೇಕೆಂಬುದೇ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು. ಕಟ್ಟೆಮಜಲು ಧೂಮಾವತಿ ದೇವಸ್ಥಾನದ ಅಧ್ಯಕ್ಷ ಸದಾನಂದ ಗೌಡ ಅವರು ವಾತ್ಸಲ್ಯ ಮನೆಯ ನಾಮಫಲಕವನ್ನು ಅನಾವರಣಗೊಳಿಸಿದರು. ವಲಯ ಒಕ್ಕೂಟದ ಅಧ್ಯಕ್ಷ ಕುಶಲಪ್ಪಗೌಡ ಅಧ್ಯಕ್ಷತೆ ವಹಿಸಿದರು.


ಈ ಸಂದರ್ಭದಲ್ಲಿ ನೆಲ್ಯಾಡಿ ಶಿಲ್ಪ ಕಾಂಪ್ಲೆಕ್ಸ್ ಮಾಲಕ ಶಿವಣ್ಣ ಪಿ. ಹೆಗ್ಡೆ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ರಮೇಶ್ ತುಕಾರಾಮ ರೈ, ಮೇಸ್ತ್ರಿ ರವಿ ಸೇರಿದಂತೆ ಹಲವು ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿಗಳಾದ ನಮಿತಾ ಶೆಟ್ಟಿ ಮತ್ತು ಅಶ್ವಿನಿ ಪ್ರಾರ್ಥನೆ ನೆರವೇರಿಸಿದರು. ವಲಯ ಮೇಲ್ವಿಚಾರಕ ಆನಂದ ಡಿ.ಬಿ. ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ ಜಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here