ದೇವಸ್ಯ: ರಸ್ತೆ ಮಧ್ಯೆಯೇ ಸೇತುವೆ ತಡೆಗೋಡೆ ವಾಹನ ಸವಾರರಿಗೆ ಕಾದಿದೆ ಅಪಾಯ…!

0

@ ಸಿಶೇ ಕಜೆಮಾರ್

ಪುತ್ತೂರು: ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರು ಪರ್ಲಡ್ಕದಿಂದ ಬೆಳಿಯೂರು ಕಟ್ಟೆ ರಸ್ತೆ ಮಧ್ಯೆ ದೇವಸ್ಯದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಸೇತುವೆಯ ಒಂದು ಬದಿಯ ತಡೆಗೋಡೆ ಮುಖ್ಯರಸ್ತೆಯ ಮಧ್ಯದಲ್ಲೇ ಇದ್ದು ವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಒಂದೊಮ್ಮೆ ಸೇತುವೆ ನಿರ್ಮಾಣ ಮಾಡಲಾಗಿದ್ದು ಇದು ಅಗಲ ಕಿರಿದಾದ ಸೇತುವೆ ಎಂಬ ಕಾರಣಕ್ಕೆ ಸೇತುವೆಯ ಇನ್ನೊಂದು ಬದಿಯನ್ನು ವಿಸ್ತರಣೆಗೊಳಿಸಲಾಗಿತ್ತು. ಈ ವೇಳೆ ಹಳೆಯ ಸೇತುವೆಯ ಒಂದು ಬದಿಯ ತಡೆಗೋಡೆ ರಸ್ತೆ ಮಧ್ಯೆ ಬಂದಿದ್ದು ಈ ತಡೆಗೋಡೆಯನ್ನು ತೆರವುಗೊಳಿಸದೇ ಹಾಗೆ ಬಿಡಲಾಗಿದೆ. ಇದೀಗ ಸೇತುವೆಯ ಮಧ್ಯ ಭಾಗದಲ್ಲಿ ಈ ತಡೆಗೋಡೆ ಇರುವುದರಿಂದ ವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡುತ್ತಿದೆ.


ಸೇತುವೆ ಅಗಲ ವಿಸ್ತರಣೆ
ದೇವಸ್ಯದಲ್ಲಿ ಈ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿತ್ತು ಆದರೆ ಈ ಸೇತುವೆಯ ಅಗಲ ಕಿರಿದು ಆಗಿದ್ದರಿಂದ ಏಕಕಾಲದಲ್ಲಿ ಎರಡು ಘನ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಎರಡು ಘನ ವಾಹನಗಳು ಬಂದರೆ ಈ ಸೇತುವೆ ಮೇಲಿಂದ ಪಾಸಾಗಲು ಅಸಾಧ್ಯವಾಗುತ್ತಿತ್ತು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿತ್ತು. ಇದನ್ನು ಮನಗಂಡು ಇದೇ ಸೇತುವೆಯ ಒಂದು ಭಾಗಕ್ಕೆ ಒಂದಷ್ಟು ಜಾಗ ಸೇರಿಸಿ ಮತ್ತೊಂದು ಸೇತುವೆ ನಿರ್ಮಾಣ ಮಾಡಲಾಯಿತು.


ಮತ್ತೊಂದು ಸೇತುವೆ ನಿರ್ಮಾಣ
ಹಳೆಯ ಸೇತುವೆಯ ಒಂದು ಭಾಗವನ್ನು ವಿಸ್ತರಣೆಗೊಳಿಸಿ ಮತ್ತೊಂದು ಸೇತುವೆ ನಿರ್ಮಾಣ ಮಾಡಲಾಗಿದೆ. ರಾಜ್ಯ ಸರಕಾರದ 50-54ನೇ ಅನುದಾನದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗಿದ್ದು ಆದರೆ ಸೇತುವೆ ನಿರ್ಮಾಣದ ಬಳಿಕ ಹಳೆಯ ಸೇತುವೆಯ ಒಂದು ಭಾಗದ ತಡೆಗೋಡೆಯನ್ನು ಮಾತ್ರ ತೆರವು ಮಾಡದೆ ಹಾಗೇ ಬಿಡಲಾಗಿದೆ. ಈ ತಡೆಗೋಡೆ ಇದೀಗ ವಾಹನ ಸವಾರರಿಗೆ ಸಂಕಷ್ಟವನ್ನು ತಂದೊಡ್ಡಿದೆ.


ರಸ್ತೆ ಮಧ್ಯೆಯೇ ಇರುವ ತಡೆಗೋಡೆ
ನೂತನ ಸೇತುವೆ ನಿರ್ಮಾಣದ ವೇಳೆ ಹಳೆಯ ಸೇತುವೆಯ ಒಂದು ಬದಿಯ ತಡೆಗೋಡೆ ರಸ್ತೆ ಮಧ್ಯೆಯೇ ಬಂದಿದ್ದು ಈ ತಡೆಗೋಡೆಯನ್ನು ತೆರವು ಮಾಡದೆ ಹಾಗೆ ಬಿಡಲಾಗಿದೆ. ಬೃಹತ್ ಗಾತ್ರದ ತಡೆಗೋಡೆ ಇದಾಗಿರುವುದರಿಂದ ಇದು ವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಿದೆ. ಈಬಗ್ಗೆ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್‌ರವರನ್ನು ಸಂಪರ್ಕಿಸಿದರೆ ಕೆಲವೇ ದಿನಗಳಲ್ಲಿ ರಿಪ್ಲೆಕ್ಟ್ ಸ್ಟಿಕ್ಕರ್ ಅಳವಡಿಸುತ್ತೇವೆ ಒಂದು ವೇಳೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಕಂಡುಬಂದರೆ ತಡೆಗೋಡೆಯನ್ನು ತೆರವುಗೊಳಿಸುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.


ವೈಹಿಕಲ್ ರೋಲಿಂಗ್ ಆಗುವುದರಿಂದ ಅಪಾಯ ಜಾಸ್ತಿ…!

ಕುಂಜೂರಿನಿಂದ ದೇವಸ್ಯ ಜಂಕ್ಷನ್ ತನಕ ರಸ್ತೆಯು ಎತ್ತರ ತಗ್ಗು ಇರುವುದು ಅಲ್ಲದೆ ಸೇತುವೆ ಪಕ್ಕ ರಸ್ತೆ ಸ್ವಲ್ಪ ಮಟ್ಟಿನ ತಿರುವು ಪಡೆದುಕೊಂಡಿದ್ದು ವೇಗವಾಗಿ ಬರುವ ವಾಹನಗಳು ಇಲ್ಲಿ ರೋಲಿಂಗ್ ಆಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ವಾಹನ ರೋಲಿಂಗ್ ಆದರೆ ಚಾಲಕನ ನಿಯಂತ್ರಣಕ್ಕೆ ಸಿಗದೆ ತಡೆಗೊಡೆಗೆ ಡಿಕ್ಕಿ ಹೊಡೆಯುವ ಅಪಾಯ ಇದೆ. ಎಲ್ಲಾದರೂ ಡಿಕ್ಕಿ ಹೊಡೆದರೆ ದೊಡ್ಡ ಮಟ್ಟಿನ ಅಪಾಯ ಸಂಭವಿಸುವ ಸಾಧ್ಯತೆ ಇದೆ.

ರಿಪ್ಲೆಕ್ಟ್ ಸ್ಟಿಕ್ಕರ್ ಕೂಡ ಹಾಕಿಲ್ಲ…?
ರಸ್ತೆ ನೇರವಾಗಿದೆ ಎಂದುಕೊಂಡು ವಾಹನ ಸವಾರರು ಅತೀ ವೇಗದಿಂದ ಬಂದರೆ ಸೇತುವೆ ಪಕ್ಕಕ್ಕೆ ತಲುಪುವಾಗ ತಬ್ಬಿಬ್ಬುಗೊಳ್ಳುವ ಸಾಧ್ಯತೆ ಇದೆ. ಈ ತಡೆಗೋಡೆಗೆ ಯಾವುದೇ ರಿಪ್ಲೆಕ್ಟ್ ಸಿಕ್ಕರ್ ಅಳವಡಿಸದೇ ಇರುವುದರಿಂದ ರಾತ್ರಿ ಸಮಯದಲ್ಲಿ ಅಪಾಯ ಜಾಸ್ತಿ ಇದೆ. ರಿಪ್ಲೆಕ್ಟ್ ಸ್ಟಿಕ್ಕರ್ ಅಳವಡಿಸಿದರೂ ಇದು ಅಪಾಯಕಾರಿಯಾಗಿದ್ದು ಇದನ್ನು ತೆಗೆಯುವುದು ಸೂಕ್ತ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

‘ ಮೊದಲು ಅಗಲ ಕಿರಿದಾದ ಸೇತುವೆ ಇದ್ದು ಇದರಿಂದ ಸಮಸ್ಯೆಯಾಗುತ್ತಿದೆ ಎಂದುಕೊಂಡು ಇದೀಗ ಸೇತುವೆಯನ್ನು ವಿಸ್ತರಿಸಿ ಹೊಸ ಸೇತುವೆ ನಿರ್ಮಾಣ ಮಾಡಲಾಗಿದ್ದು ಇದೀಗ ಹಳೆಯ ಸೇತುವೆಯ ತಡೆಗೋಡೆಯನ್ನು ರಸ್ತೆ ಮಧ್ಯೆ ಹಾಗೇ ಬಿಡಲಾಗಿದೆ. ಇದು ತುಂಬಾ ಅಪಾಯಕಾರಿಯಾಗಿದ್ದು ಇಲ್ಲಿ ವಾಹನ ರೋಲಿಂಗ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ತಡೆಗೋಡೆಯನ್ನು ತೆಗೆಯುವುದು ಸೂಕ್ತವಾಗಿದೆ.’

ವಸಂತ ಶ್ರೀದುರ್ಗಾ, ಮಾಜಿ ಸದಸ್ಯರು ಆರ್ಯಾಪು ಗ್ರಾ.ಪಂ

LEAVE A REPLY

Please enter your comment!
Please enter your name here