







ಕಡಬ: ಕುಮಾರಧಾರಾ ನದಿಗೆ ಉರುಂಬಿಯಲ್ಲಿ ಅಣೆಕಟ್ಟು ನಿರ್ಮಾಣದ ವಿರುದ್ದ ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿಯ ನಿರಂತರ ಹೋರಾಟದಿಂದ ಸರ್ಕಾರ ಅಣೆಕಟ್ಟು ನಿರ್ಮಾಣವನ್ನು ಕೈಬಿಟ್ಟಿರುವುದು ಸಂತಸದ ವಿಚಾರ . ಹೋರಾಟ ಸಮಿತಿ ಸತ್ಯನಾರಾಯಣ ಪೂಜೆಯ ಮೂಲಕ ಹೋರಾಟ ಆರಂಭಿಸಿದ್ದು, ದೇವರ ಅನುಗ್ರದಿಂದಾಗಿ ಹೋರಾಟಕ್ಕೆ ಫಲ ದೊರೆತಿದೆ. ಪರಿಸರ ಮತ್ತು ದೇವರು ಬೇರೆ ಅಲ್ಲ, ಪರಿಸರದ ಪ್ರೀತಿಯ ಮೂಲಕ ದೇವರನ್ನು ಕಾಣಬಹುದಾಗಿದೆ, ಅದನ್ನು ಇಲ್ಲಿ ಕಾಣುವಂತಾಗಿದೆ ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ಸಾಯಂಕಾಲ ಕಡಬ ತಾಲೂಕು ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ಕುಮಾರಧಾರಾ ನದಿ ತಟದಲ್ಲಿ ಪರಿಸರ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಸತ್ಯನಾರಾಯಣ ಪೂಜೆ, ಕುಮಾರಧಾರಾ ನದಿಗೆ ಗಂಗಾಪೂಜೆ ಮತ್ತು ಜೀವವೈವಿಧ್ಯ ಸಮಾವೇಶ ಮತ್ತು ಅಭಿನಂದನಾ ಸಭೆಯನ್ನು ಉದ್ದೇಶಿಸಿ ಆರ್ಶೀವಚನ ನೀಡಿದರು.



ಅಧ್ಯಕ್ಷತೆ ವಹಿಸಿದ್ದ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿ, ಪಶ್ಚಿಮಘಟ್ಟ ಜೀವವೈವಿಧ್ಯಗಳ ತಾಣವಾಗಿದ್ದು, ಸರ್ಕಾರಗಳು ಸುಸ್ಥಿರ ಅಭಿವೃದ್ಧಿ ಹೇಳಿಕೊಂಡು ವಿವಿಧ ಯೋಜನೆಗಳಿಗೆ ಕೋಟ್ಯಂತರ ಹಣ ವ್ಯಯ ಮಾಡುತ್ತದೆ ಆದರೆ ನಮ್ಮ ನದಿ, ಕಣಿವೆ, ಪಶ್ಚಿಮಘಟ್ಟ ಅಭಿವೃದ್ಧಿಗಾಗಿ ಯಾವುದೇ ಯೋಜನೆ ರೂಪಿಸುವುದಿಲ್ಲ. ಈಗಾಗಲೇ ಎತ್ತಿನ ಹೊಳೆ ಯೋಜನೆಗೆ 24 ಸಾವಿರ ಕೋಟಿ ಖರ್ಚು ಮಾಡಲಾಗಿದೆ, ಮುಂದೆ ಅದನ್ನು 36 ಸಾವಿರ ಕೋಟಿಗೆ ಏರಿಕೆ ಆಗಲಿದೆ, 19400 ಕೋಟಿಯಷ್ಟು ಕಾಡು ನಾಶ ಆಗಿದೆ, ಇಷ್ಟಲ್ಲಾ ಆಗಿಯೂ ಆದರೂ ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಕೆ ಸಾದ್ಯವಾಗಿಲ್ಲ, ಇದೀಗ ಅದರ ಸಲುವಾಗಿ ಮತ್ತು ಅದರ ಪರಿಸದಲ್ಲೇ ಮತ್ತೆ 3 ಡ್ಯಾಂಗಳು ನಿರ್ಮಾಣ ಆಗಲಿದೆ, ಇದು ಆದಲ್ಲಿ ಕೆಂಪುಹೊಳೆ, ಗುಂಡ್ಯ ಹೊಳೆಗೆಯ ಮೂಲಕ ಕುಮಾರಧಾರಾ, ನೇತ್ರಾವತಿಗೆ ಬರುವಂತಹ ಅಲ್ಪಸ್ವಲ್ಪ ನೀರು ಬರುವುದಕ್ಕೂ ತಡೆ ಆಗಲಿದೆ, ಮುಂದೊಂದು ದಿನ ಈ ಭಾಗಕ್ಕೆ ನೀರೇ ಇಲ್ಲದಂತಾಗಬಹುದು ಮತ್ತು ನಮ್ಮ ಪಶ್ಚಿಮಘಟ್ಟದ ಜೀವವೈವಿಧ್ಯವೂ ನಾಶ ಆಗಲಿದೆ, ಆದ ಕಾರಣ ಪಶ್ಚಿಮಘಟ್ಟ ಉಳಿವಿಗಾಗಿ ಗಟ್ಟಿ ಧ್ವನಿ ಎತ್ತಬೇಕಾಗಿದೆ. ಜನಾಂದೋಲನ ನಡೆಸಬೇಕಾಗಿದೆ ಎಂದರು.
ಭಾರತೀಯ ಜೀವ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ. ರಾಮಚಂದ್ರ ಮಾತನಾಡಿ ಎತ್ತಿನ ಹೊಳೆಯ ಮೂಲಕ ಚಿಕ್ಕಬಳ್ಳಾಪುರಕ್ಕೆ 24 ಟಿ.ಎಂ.ಸಿ. ನೀರು ಕೊಡುವುದಾಗಿ ಹೇಳಿಕೊಂಡಿದೆ, ಆದರೆ ಈ ಭಾಗದಲ್ಲಿ 110 ವರ್ಷಗಳ ಕಾಲ ಸುರಿದ ಮಳೆ ಪ್ರಮಾಣದ ಪ್ರಕಾರ ಇಲ್ಲಿ ಸಂಗ್ರಹ ಆಗುವ ನೀರು 12.85 ಟಿ.ಎಂ.ಸಿ. ಆಗಿರುತ್ತದೆ. ಇದರಲ್ಲಿ 9 ಟಿ.ಎಂ.ಸಿ. ಸ್ಥಳೀಯ ರೈತರಿಗೆ, 3 ಟಿ.ಎಂ.ಸಿ. ಮೀನುಗಳಿಗೆ ಹೋಗುತ್ತದೆ. ಇನ್ನು ಕೇವಲ ೦.85 ಟಿ.ಎಂ.ಸಿ. ನೀರು ಉಳಿಕೆಯಾಗುತ್ತಿದ್ದು, ಈ ನೀರನ್ನು ಅಲ್ಲಿಗೆ ಕೊಂಡೊಯ್ಯುವುದಾದರೂ ಹೇಗೆ ಎಂದ ಅವರು 19 ಸಾವಿರ ಕೋಟಿ ರೂಪಾಯಿ ವ್ಯಯ ಮಾಡಿ ಅಲ್ಲಿನ ಕೆರೆಗಳನ್ನು ಪುನರ್ಶ್ಚೇತನಗೊಳಿಸಿದರೆ ಅಲ್ಲಿ 165 ಟಿ.ಎಂ.ಸಿ. ನೀರು ಪಡೆಯಬಹುದಾಗಿದೆ ಎಂದರು.
ಕುಮಾರಧಾರಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರುಣಾಕರ ಗೋಗಟೆ ಮಾತನಾಡಿ ಉರುಂಬಿಯಲ್ಲಿ ಭರೂಕಾ ಕಂಪೆನಿ ಮೂಲಕ ಕುಕ್ಕೆ ಜಲ ವಿದ್ಯುತ್ ಯೋಜನೆ ನಿರ್ಮಿಸಲು ಮುಂದಾಗಿತ್ತು. ಅದರ ವಿರುದ್ಧ ಕಳೆದ 8 ವರ್ಷಗಳಿಂದ ನಡೆಸಿರುವ ಹೋರಾಟಕ್ಕೆ ಜಯ ದೊರೆತಿದ್ದು, ಸರ್ಕಾರ ಆ ಯೋಜನೆ ರದ್ದುಗೊಳಿಸಿರುವುದಾಗಿ ಆದೇಶ ಹೊರಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಜೀವವೈವಿಧ್ಯ ಸಂಸ್ಥೆಯ ಹಿರಿಯ ವಿಜ್ಞಾನಿ ಪ್ರೀತಂ, ನಿರ್ದೇಶಕಿ ಪವಿತ್ರ, ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಾನೂನು ಸಲಹೆಗಾರ ಶ್ರೀನಿವಾಸ್, ಹೋರಾಟ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ, ಎಲ್ಸಿ ತೋಮಸ್ ಮೊದಲಾದವರು ಇದ್ದರು. ಹೋರಾಟಕ್ಕೆ ಬೆಂಬಲಿಸಿದ ಪ್ರಮುಖರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸತ್ಯನಾರಾಯಣ ಪೂಜೆ ಬಳಿಕ ಗಂಗಾ ಪೂಜೆ ನಡೆಯಿತು. ಹೋರಾಟ ಸಮಿತಿ ಪ್ರಮುಖ ಕಿರಣ್ ಗೋಗಟೆ ವಂದಿಸಿದರು. ಉಪನ್ಯಾಸಕ ಅಜಿತ್ ಹೆಬ್ಬಾರ್ ನಿರೂಪಿಸಿದರು.












