






ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ದಿನ ಮಧ್ಯಾಹ್ನ ಶ್ರೀ ದೇವರ ದರ್ಶನ ಬಲಿ ಉತ್ಸವದ ಬಳಿಕ ರಾತ್ರಿಯ ತನಕ ಅನ್ನಪ್ರಸಾದ ನಿರಂತರ ನಡೆದಿದ್ದು, ಮಧ್ಯಾಹ್ನದ ವೇಳೆ 60 ಸಾವಿರ ಮಂದಿಗೆ ಮಹಾ ಅನ್ನಸಂತರ್ಪಣೆ ನಡೆದಿದೆ.ಅದರಲ್ಲೂ ವಿಶೇಷವಾಗಿ ಮಹಾಅನ್ನಸಂರ್ಪಣೆಗೆ ಅನ್ನಪ್ರಸಾದ ಅಕ್ಷಯವಾಗಲೆಂದು ಕದಿಕೆ ಕಟ್ಟಿ ಪಲ್ಲಪೂಜೆ ನೆರವೇರಿಸಲಾಯಿತು.


ಮಧ್ಯಾಹ್ನದ ವೇಳೆಗೆ ದರ್ಶನ ಬಲಿ ಉತ್ಸವ ಮುಗಿದ ಬಳಿಕ ಕೆರೆಯ ಬಳಿಯಿರುವ ಅನ್ನಪೂರ್ಣ ಭೋಜನ ಮಂಟಪದಲ್ಲಿ ಅನ್ನಪ್ರಸಾದ ವಿತರಣೆಗೆ ಮಹಾ ಪಲ್ಲಪೂಜೆ ನಡೆಯಿತು.ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು.ಬ್ರಹ್ಮರಥದ ದಾನಿ ದಿ| ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗು ಮಕ್ಕಳಿಂದ ಅನ್ನಸಂತರ್ಪಣೆ ಸೇವೆ ನಡೆಯಿತು.



60 ಸಾವಿರಕ್ಕೂ ಮಿಕ್ಕಿ ಅನ್ನಪ್ರಸಾದ ವಿತರಣೆ:
ಜಾತ್ರೋತ್ಸವದ ದರ್ಶನ ಬಲಿ ಉತ್ಸವದ ದಿನ ಸುಮಾರು 60 ಸಾವಿರ ಮಂದಿಗೆ ಅನ್ನಸಂತರ್ಪಣೆ ನಡೆದಿದೆ.ಅನ್ನಸಂತರ್ಪಣೆ ನಡೆಯುವ ಸ್ಥಳವೂ ವಿಶಾಲವಾಗಿರುವುದರಿಂದ ಅಲ್ಲಿ ಯಾವುದೇ ತೊಂದರೆ ಆಗದಂತೆ ಸಲೀಸಾಗಿ ಎಲ್ಲರೂ ಅನ್ನಪ್ರಸಾದ ಸ್ವೀಕರಿಸುತ್ತಿದ್ದರು.ಜೊತೆಗೆ ವಿಶೇಷ ಪಲ್ಲಪೂಜೆ ನಡೆದಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸಿಡಿಮದ್ದು ಪ್ರದರ್ಶನವೇ ವಿಶೇಷ:
ಈ ಬಾರಿ ಪುತ್ತೂರು ಜಾತ್ರೆಯಲ್ಲಿ ಸಿಡಿಮದ್ದು ಸೇವೆಯೇ ವಿಶೇಷವಾಗಿ ಮೂಡಿ ಬರಲಿದೆ.ಭಕ್ತರಿಂದ ಸೇವಾ ರೂಪವಾಗಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ.ಮಧ್ಯಾಹ್ನ ಅನ್ನಪ್ರಸಾದ ಸೇವೆಯಲ್ಲೂ ನಿರೀಕ್ಷೆಗೂ ಮೀರಿ ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ.ಈ ಎಲ್ಲಾ ವ್ಯವಸ್ಥೆಗಳು ಶಾಸಕರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತಿಳಿಸಿದ್ದಾರೆ.
ಮುತ್ತಪ್ಪ ರೈ ದೇರ್ಲ ಕುಟುಂಬದಿಂದ ಅನ್ನದಾಸೋಹ:
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬ್ರಹ್ಮರಥವನ್ನು ಸಮರ್ಪಿಸಿದ್ದ ದಿ.ಮುತ್ತಪ್ಪ ರೈ ದೇರ್ಲ ಅವರ ಸಹೋದರಿ, ಸಹೋದರರು, ಮಕ್ಕಳು ಹಾಗು ದೇರ್ಲ ಕುಟುಂಬಸ್ಥರಿಂದ ಅನ್ನದಾಸೋಹ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಅವರು ಪಲ್ಲಪೂಜೆ ನೆರವೇರಿಸಿದರು.ಈ ಸಂದರ್ಭ ಮುತ್ತಪ್ಪ ರೈ ದೇರ್ಲ ಅವರ ಸಹೋದರ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಉದ್ಯಮಿ ಎನ್.ಕರುಣಾಕರ ರೈ, ಅಶ್ವಿನ್ ರೈ ದೇರ್ಲ ಮತ್ತು ಶಾಸಕ ಅಶೋಕ್ ಕುಮಾರ್ ರೈ ದಂಪತಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರು ಹಾಗು ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.
ಪ್ರತಿ ದಿನ ಬಗೆ ಬಗೆಯ ಪಾಯಸಗಳು
ಜಾತ್ರೆ ಆರಂಭದ ದಿನದಿಂದ ನಿತ್ಯ ಅನ್ನಪ್ರಸಾದ ವಿತರಣೆಯ ಸಂದರ್ಭ ಬಗೆ ಬಗೆಯ ಪಾಯಸಗಳನ್ನು ಮಾಡಲಾಗುತ್ತಿದೆ.ಅನ್ನಪ್ರಸಾದದಲ್ಲಿ ಉಪ್ಪಿನಕಾಯಿ, ಪಲ್ಯ, ಗಸಿ, ಅನ್ನ, ಸಾರು, ಹುಳಿ ಸಾರು, ಮಜ್ಜಿಗೆ ನೀರು, ಪಾಯಸ ಇರಲಿದೆ.ಅದರಲ್ಲೂ ನಿತ್ಯ ಬಗೆ ಬಗೆಯ ಪಾಯಸಗಳನ್ನು ಮಾಡಲಾಗುತ್ತಿದೆ.ಕಡ್ಲೆಬೇಳೆ, ಹೆಸರುಬೇಳೆ, ಗೋಧಿಕಡಿ, ಕ್ಯಾರೆಟ್, ಹಾಲು, ಸಾಗು ಸೇವಿಗೆ ಪಾಯಸಗಳನ್ನು ಏ.17ರ ತನಕ ಮಾಡಲಾಗಿದೆ.ಈ ನಡುವೆ ಲಡ್ಡು, ಜಿಲೇಬಿಗಳನ್ನೂ ನೀಡಲಾಗಿದೆ.
ಎತ್ತರದ ಕದಿಕೆಯಲ್ಲಿ ಅನ್ನಪ್ರಸಾದ ಶೇಖರಣೆ
ಅನ್ನಪ್ರಸಾದವನ್ನು ಎತ್ತರದ ಕದಿಕೆಯಲ್ಲಿ ಶೇಖರಣೆ ಮಾಡಲಾಗಿತ್ತು.ಅದಕ್ಕೆ ಪಲ್ಲಪೂಜೆ ನೆರವೇರಿಸಲಾಗಿದೆ.ಬಿದಿರಿನ ಮೂಲಕ ಕದಿಕೆ ನಿರ್ಮಾಣ ಮಾಡಲಾಗಿದೆ ಎಂದು ಪಾಕತಜ್ಞ ಹರೀಶ್ ರಾವ್ ಅವರು ತಿಳಿಸಿದ್ದಾರೆ.










