







ಲೋಗೋ, ಆಮಂತ್ರಣ ಪತ್ರ ಬಿಡುಗಡೆ – ಶಶಿಕುಮಾರ್ ಬಾಲ್ಯೊಟ್ಟು ಅವರಿಗೆ ಸನ್ಮಾನ


ಪುತ್ತೂರು: ಪುತ್ತೂರು ದೀಪೋತ್ಸವ ಸಮಿತಿ ಮತ್ತು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಸಹಯೋಗದೊಂದಿಗೆ ’ಒಂದು ದೀಪ ಭಕ್ತಿಯ ಸಂಕೇತವಾಗಲಿ, ಒಂದು ದೀಪ ಸಂಸ್ಕೃತಿಯ ಸಂಕೇತವಾಗಲಿ, ಒಂದು ದೀಪ ಸಾಮರಸ್ಯದ ಸಂಕೇತವಾಗಲಿ’ ಎಂಬ ಆಶಯದೊಂದಿಗೆ ನಡೆಯಲಿರುವ ಪುತ್ತೂರು ದೀಪೋತ್ಸವ -2026 ಇದರ ಲೋಗೋ ಅನಾವರಣ ಮತ್ತು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಅ.26ರಂದು ಬೆಳಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.




ಆರಂಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಆಮಂತ್ರಣವಿಟ್ಟು ಪ್ರಾರ್ಥನೆ ಮಾಡಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಅಜಯ್ ಅವರು ಲೋಗೋ ಅನಾವರಣ ಮಾಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮರ್ ರೈ ಬಾಲ್ಯೊಟ್ಟು ಅವರು ಆಮಂತ್ರಣ ಪತ್ರ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಮಹಾಲಿಂಗೇಶ್ವರ ದೇವರ ಸಾನಿಧ್ಯಕ್ಕೆ ಪೂರಕವಾದ ಕಾರ್ಯಕ್ರಮ:
ಪುತ್ತೂರು ದೀಪೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಅಶೋಕ್ ಕುಮಾರ್ ರೈ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀ ಮಹಾಲಿಂಗೇಶ್ವರ ದೇವರ ಪುಣ್ಯದ ಮಣ್ಣಿನಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ. ಇದು ಒಬ್ಬರು ಮಾಡುವ ಕಾರ್ಯಕ್ರಮವಲ್ಲ ಎಲ್ಲರೂ ಸೇರಿ ಮಾಡುವ ಕಾರ್ಯಕ್ರಮ ಆಗಿದೆ. ಹಾಗಾಗಿ ಇದಕ್ಕೆ ಮಹತ್ವ ಇದೆ. ಜೊತೆಗೆ ಮಹಾಲಿಂಗೇಶ್ವರ ದೇವರ ಸಾನಿಧ್ಯಕ್ಕೂ ಪೂರಕವಾದ ಕಾರ್ಯಕ್ರಮವಾಗಿದೆ ಎಂದರು. 10 ಸಾವಿರ ಮಹಿಳೆಯರು ದೇವಳದ ಮುಂಭಾಗದಲ್ಲಿ ದೀಪ ಪ್ರಜ್ವಲಿಸಬೇಕು. ಈ ಸಂದರ್ಭ ವಿಶೇಷ ಆರತಿಯನ್ನೂ ಅವರು ಮಾಡಬೇಕು. ಅದನ್ನು ಡ್ರೋನ್ ಮೂಲಕ ಸೆರೆ ಹಿಡಿಯಬೇಕು. ಈ ಕಾರ್ಯಕ್ರಮ ಎಲ್ಲರಿಗೂ ಗೊತ್ತಾಗಬೇಕು. ಇಲ್ಲಿ ನಿತ್ಯ ನಿರಂತರ ಕಾರ್ಯಕ್ರಮ ನಡೆಯುತ್ತಿರಬೇಕು. ಇದಕ್ಕಾಗಿ ಖಾಯಂ ವೇದಿಕೆ ನಿರ್ಮಾಣ ಮಾಡುವ ಉದ್ದೇಶವಿದೆ. ಪ್ರತಿ ದಿನ ಹರಿಕಥೆ, ಯಕ್ಷಗಾನ, ಮಕ್ಕಳ ನಾಟಕ ನಿರಂತರ ನಡೆಯುವ ಮೂಲಕ ಈ ಕ್ಷೇತ್ರ ಪ್ರಸಿದ್ಧಿಗೆ ಬರಬೇಕು ಎಂಬ ಕನಸು ಇದೆ. ಪುತ್ತೂರು ಅಭಿವೃದ್ಧಿ ಮತ್ತು ದೇವಳದ ಅಭಿವೃದ್ಧಿ ನನ್ನ ಕನಸಾಗಿದೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.

ಹೊಸತನದೊಂದಿಗೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನ:
ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅವರು ಮಾತನಾಡಿ, ಧರ್ಮಸ್ಥಳ ಕ್ಷೇತ್ರದಲ್ಲಿ ನಡೆಯುವ ಲಕ್ಷ ದೀಪೋತ್ಸವ ಪುತ್ತೂರಿನಲ್ಲೂ ವಿಜ್ರಂಬಿಸಬೇಕೆಂಬ ಕನಸಿತ್ತು. ಸಂಪ್ರದಾಯವನ್ನು ಉಳಿಸಿಕೊಂಡು ಹೊಸತನವನ್ನು ಎಲ್ಲರ ಸಹಕಾರದಿಂದ ತರುತ್ತಿದ್ದೇವೆ ಎಂದ ಅವರು ದೀಪೋತ್ಸವದಂದು ಬೆಳಿಗ್ಗೆ 7 ಗಂಟೆಗೆ ಭಜನಾ ಕಾರ್ಯಕ್ರಮ ಆರಂಭಗೊಳ್ಳಲಿದೆ. 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ, 11 ಗಂಟೆ ವಿವಿಧ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಯಿಂದ ತೆಂಕು ಮತ್ತು ಬಡಗು ತಿಟ್ಟುಗಳ ಕಲಾ ವೈಭವ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯಲಿದೆ. ತೆಂಕುತಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆ ಮತ್ತು ಬಡಗು ತಿಟ್ಟಿನಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ ಭಾಗವತಿಕೆಯಲ್ಲಿ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂಜೆ 6ಕ್ಕೆ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಸ್ಥಳೀಯ ಕೇರಳ ಮಲಿಯಾಳಿ ಸಮಾಜ ಬಾಂಧವರಿಂದ ’ಮೆಗಾ ತಿರುವಾದಿರ’ ಕಾರ್ಯಕ್ರಮ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ದೀಪೋತ್ಸವ ಸಂಭ್ರಮ ನಡೆಯಲಿದೆ. ಸಂಜೆ 6.30ಕ್ಕೆ ಧರ್ಮ ಸಭೆ ನಡೆಯಲಿದ್ದು, ಸಭೆಯಲ್ಲಿ ಸಹಕಾರರತ್ನ ಕೆ.ಸೀತಾರಾಮ ರೈ ಸವಣೂರು ಅವರಿಗೆ ಪುತ್ತೂರುದ ಮುತ್ತು ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾತ್ರಿ 8.30ರಿಂದ ಖ್ಯಾತ ಸಂಗೀತ ಕಲಾವಿದ ಡಾ. ವಿದ್ಯಾಭೂಷಣ ಮತ್ತು ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು ಪುತ್ತೂರಿಗೆ ಪ್ರಥಮವಾಗಿದೆ. ಮುಂದಿನ ವರ್ಷ ಇನ್ನೂ ಹೊಸತನವನ್ನು ಜನರ ಮುಂದೆ ಇಡಲಿದ್ದೇವೆ ಎಂದರು.

ಪೇಟೆಯುದ್ದಕ್ಕೂ ಅಲಂಕಾರ, 3 ಕಡೆ ಬೃಹತ್ ಸ್ವಾಗತ ದ್ವಾರ:
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಉಪಾಧ್ಯಕ್ಷ ಕರುಣಾಕರ ರೈ ದೇರ್ಲ ಅವರು ಮಾತನಾಡಿ, 2010-12ರಲ್ಲಿ ಬ್ರಹ್ಮರಥ ಸಮರ್ಪಣೆ ಕೆಲಸ ಆಯಿತು. ಬಳಿಕ ರಥ ಬೀದಿಯ ಕಾಂಕ್ರೀಟ್ ಕೆಲಸವೂ ನಡೆಯಿತು. ಪ್ರಮುಖರು ಸೇರಿ ಉತ್ತಮ ಕೆಲಸ ಮಾಡುವಲ್ಲಿ ಜೊತೆಯಾಗಿದ್ದೆವು. ಆ ಬಳಿಕ ನಾನು ಸ್ವಲ್ಪ ಬೇರೆ ಬೇರೆ ಕೆಲಸದಲ್ಲಿ ಮಗ್ನನಾಗಿದ್ದೆ. ಇದೀಗ ಮತ್ತೆ ದೀಪೋತ್ಸವ ಕಾರ್ಯಕ್ರಮಕ್ಕೆ ಸೇರಿಕೊಂಡಿದ್ದೇವೆ. ಇಂತಹ ಕಾರ್ಯಕ್ರಮ ಮಾಡಬೇಕಾದರೆ ಸುಮಾರು 15 ರಿಂದ 19 ಲಕ್ಷ ರೂ. ಖರ್ಚು ಇದೆ. ದೀಪೋತ್ಸವದ ಸಲುವಾಗಿ ಪುತ್ತೂರು ಪೇಟೆಯಲ್ಲಿ ವಿದ್ಯುತ್ ದೀಪಗಳ ಅಲಂಕಾರ, ಮೂರು ಕಡೆ ದೊಡ್ಡ ದ್ವಾರ ನಿರ್ಮಾಣ ಆಗಲಿದೆ. ಒಟ್ಟಿನಲ್ಲಿ ಪುತ್ತೂರು ದೀಪೋತ್ಸವ ವಿಜ್ರಂಭನೆಯಿಂದ ನಡೆಯಲಿದೆ ಎಂದು ಅವರು ಹೇಳಿದರು.
ಪುತ್ತೂರಿನಲ್ಲಿ 2ನೇ ಜಾತ್ರೆಯಂತೆ ವಿಜ್ರಂಭಿಸಲಿ:
ಆಮಂತ್ರಣ ಪತ್ರ ಬಿಡುಗಡೆ ಮಾಡಿ ಸನ್ಮಾನ ಸ್ವೀಕರಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ, 7 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಅಭೂತಪೂರ್ವ ಭಜನೋತ್ಸವ ಮಾಡಿದ್ದೆವು. ಆ ಸಂದರ್ಭ ಸುಮಾರು 50 ಸಾವಿರ ಭಜಕರು ದಿನವಿಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತಹದ್ದೇ ಇನ್ನೊಂದು ಕಾರ್ಯಕ್ರಮ ಪುತ್ತೂರಿನಲ್ಲಿ ’ಪುತ್ತೂರು ದೀಪೋತ್ಸವ’ದ ಮೂಲಕ ಮೂಡಿ ಬರಲಿ ಎಂದು ಹಾರೈಸಿದರು.
ಪುತ್ತೂರು ಜಾತ್ರೆ ಮಾದರಿಯಲ್ಲಿ ಮೂಡಿ ಬರಲಿ:
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಅವರು ಮಾತನಾಡಿ, ಪುತ್ತೂರು ದೀಪೋತ್ಸವ ಪುತ್ತೂರು ಜಾತ್ರೆಯ ಮಾದರಿಯಲ್ಲಿ ಮೂಡಿ ಬರಲಿ ಎಂದು ಹೇಳಿ ಶುಭ ಹಾರೈಸಿದರು.
ಭಕ್ತಾದಿಗಳು ಹತ್ತೂರಿನಿಂದ ಪುತ್ತೂರಿಗೆ ಬರುವಂತಾಗಬೇಕು:
ಪುತ್ತೂರು ದೀಪೋತ್ಸವ ಸಮಿತಿಯ ಇನ್ನೋರ್ವ ಗೌರವಾಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ, ಇದೊಂದು ಉತ್ತಮ ಕಾರ್ಯಕ್ರಮವಾಗಿದೆ. ಅದ್ಭುತವಾಗಿ ಮೂಡಿ ಬರಲಿ. ಭಕ್ತಾಧಿಗಳು ಹತ್ತೂರಿನಿಂದ ಪುತ್ತೂರಿಗೆ ಬರುವಂತಾಗಲಿ ಎಂದು ಹೇಳಿದರು.
ರವೀಂದ್ರ ಶೆಟ್ಟಿ ನುಳಿಯಾಲು ಅವರ ಕನಸು:
ಪುತ್ತೂರು ದೀಪೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ರವೀಶ್ ಪಡುಮಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎನ್.ರವೀಂದ್ರ ಶೆಟ್ಟಿ ನುಳಿಯಾಲು ಅವರು ಪುತ್ತೂರಿನಲ್ಲಿ ಉತ್ತಮ ಕಾರ್ಯಕ್ರಮ ಮಾಡುವ ಕನಸು ಕಟ್ಟಿದ್ದರು. ಇದೀಗ ಸತ್ಯದ ಬೆಳಕು ಅರಳಿಸುವ ಸಮಯ ಬಂದಿದ್ದು, ಹಿರಿಯರು ಮಾಡಿದ ಸಂಪ್ರದಾಯವನ್ನು ಉಳಿಸುವ ಕಾರ್ಯ ಮಾಡಲಾಗುತ್ತಿದೆ. ಪುತ್ತೂರು ದೀಪೋತ್ಸವವು ಮುಂದಿನ ವರ್ಷಗಳಲ್ಲಿಯೂ ಪುತ್ತೂರಿನ ಧಾರ್ಮಿಕ – ಸಾಂಸ್ಕೃತಿಕ ಬದುಕಿನಲ್ಲಿ ಒಂದು ಅರ್ಥ ಪೂರ್ಣ ಪರಂಪರೆಯಾಗಿ ಬೆಳೆಯಬೇಕು ಎಂಬುದು ಸಮಿತಿಯ ಸಂಕಲ್ಪವಾಗಿದೆ ಎಂದರು.

ವೇದಿಕೆಯಲ್ಲಿ ಮಹಿಳಾ ಸಮಿತಿ ಗೌರವ ಸಲಹೆಗಾರರಾದ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು. ಅಮಿತಾ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಪದ್ಮಿನಿ ಪಿ ರೈ ಪ್ರಾರ್ಥಿಸಿದರು. ಪುತ್ತೂರು ದೀಪೋತ್ಸವ ಸಮಿತಿ ಅಧ್ಯಕ್ಷ ಎನ್ ರವೀಂದ್ರ ಶೆಟ್ಟಿ ನುಳಿಯಾಲು ಸ್ವಾಗತಿಸಿ, ಕೋಶಾಽಕಾರಿ ಎಸ್ ದಾಮೋದರ್ ಪಾಟಾಳಿ ವಂದಿಸಿದರು. ಸಮಿತಿ ಸದಸ್ಯ ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಜೊತೆ ಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ, ಯಶುಭ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ದೀಪೋತ್ಸವ ಸಮಿತಿ ಸದಸ್ಯರಾದ ರವಿಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಲ್ಲಾಸ್ ಕೊಟ್ಯಾನ್, ಜಗನ್ಮೋಹನ್ ರೈ ಸೂರಂಬೈಲು, ಜಗಜೀವನದಾಸ್ ರೈ ಚಿಲ್ಮತ್ತಾರು, ಪದ್ಮನಾಭ ಶೆಟ್ಟಿ, ಮೋಹನ್ ಕೆ ನಂದಾದೀಪ, ಜೈರಾಜ್ ಭಂಡಾರಿ ನೋಣಾಲುಗುತ್ತು, ನಿತಿನ್ ಪಕ್ಕಳ, ಸುಽರ್ ನೋಂಡ, ರವಿ ಆಚಾರ್ಯ, ಪ್ರೇಮಾನಂದ, ವಿಶ್ವನಾಥ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ಕಿರಣ್ ಶೆಟ್ಟಿ ಪೆರ್ನೆ, ಪ್ರವೀಣ್ ಭಂಡಾರಿ ದರ್ಬೆ, ಸದಾಶಿವ ರೈ ಮಠಂತಬೆಟ್ಟು, ಭಾಸ್ಕರ ಬಾರ್ಯ, ಜಯಪ್ರಕಾಶ್ ರೈ ನೂಜಿಬೈಲು, ಡಾ. ಗೋಪಾಲಕೃಷ್ಣ ಎಂ, ಭಾಗ್ಯೇಶ್ ರೈ, ಪ್ರೀತಮ್ ಶೆಟ್ಟಿ ಕೇದಗೆ, ಶ್ರೀಧರ್ ಹೆಗ್ಡೆ ಏಳ್ಮುಡಿ, ಹರಿಣಾಕ್ಷಿ ಜೆ ಶೆಟ್ಟಿ, ಪ್ರೇಮಲತಾ ರಾವ್, ಗೀತಾ ಮೋಹನ್ ರೈ, ಭವ್ಯ, ಸ್ವರ್ಣಲತಾ ರೈ, ರೂಪಲೇಖ ಆಳ್ವ, ವರ್ಷಲ ಶೆಟ್ಟಿ, ಜಯಲಕ್ಷ್ಮೀ ಆರ್.ಕೆ, ನಯನ ರೈ, ಸುಮಂಗಲ ಶೆಣೈ, ಕೃಷ್ಣವೇಣಿ ಕೆ ರೈ, ರಮಣಿ ಗಾಣಿಗ, ಗೀತಾ ಡಿ ರೈ, ಯಶುಭ ರೈ, ಶ್ರದ್ದಾ ಎಸ್ ಶೆಟ್ಟಿ, ರೇವತಿ ಜೇನುಗೂಡು, ಆಶಾ ಯೋಗೀಶ್ ಪೂಜಾರಿ ಶಾಂತಿಗೋಡು, ಸಾವಿತ್ರಿ ಎಸ್ ನಾಯ್ಕ, ಸುರೇಖಾ ಎಸ್ ರೈ, ನಯನ ರೈ ಅರಿಯಡ್ಕ, ನಳಿನಿ ರೈ, ಡಾ. ಸೋನಾ ಪ್ರದೀಪ್, ಕೃಷ್ಣವೇಣಿ ಆರ್ ರೈ ನುಳಿಯಾಲು, ದಿವ್ಯ ಸಂತೋಷ್ ರೈ, ಪವಿತ್ರ ಎಸ್ ರೈ ಕೋಡಿಂಬಾಡಿ, ಅಮಿತಾ ಗೌತಮ್, ಪ್ರೇಮ, ಪವಿತ್ರ ಎಸ್ ಶೆಟ್ಟಿ, ಪೂರ್ಣಿಮ, ವಸಂತಿ ರೈ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಅವರು ದೇವಳದಲ್ಲಿ ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಅವರಿಗೆ ಆಮಂತ್ರಣವನ್ನು ನೀಡಿ ಗೌರವಿಸಿದರು.
ಬ್ರಹ್ಮಕಲಶದ ಬಳಿಕ ರಾತ್ರಿಯೂ ಅನ್ನಪ್ರಸಾದ
ದೇವಸ್ಥಾನದ ಅಭಿವೃದ್ಧಿಯಾಗಲು ಭಕ್ತರ ಸಂಖ್ಯೆ ನಿರಂತರ ಹೆಚ್ಚುತ್ತಿರಬೇಕು. ಹಾಗಾಗಿ ಭಕ್ತರಿಗೆ ಬೇಕಾದ ಮೂಲ ಸೌಕರ್ಯದ ಜೊತೆಗೆ ನಿರಂತರ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರಬೇಕು. ಈಗ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ನಡೆಯುತ್ತಿದೆ. 2028ರ ಜನವರಿಯಲ್ಲಿ ನಡೆಯುವ ಬ್ರಹ್ಮಕಲಶದ ಬಳಿಕ ರಾತ್ರಿಯೂ ಅನ್ನಪ್ರಸಾದ ವಿತರಣೆ ನಡೆಯಲಿದೆ. ಇದರಿಂದ ಭಕ್ತರ ಸಂಖ್ಯೆಯೂ ಹೆಚ್ಚಳವಾಗುತ್ತದೆ. ಸದ್ಯ ದೇವಸ್ಥಾನದಲ್ಲಿ ಹಲವು ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಇಷ್ಟು ದೊಡ್ಡ ದೇವಸ್ಥಾನದಲ್ಲಿ ಒಂದು ವಾಶ್ ರೂಮ್ ಸರಿಯಾಗಿಲ್ಲ. ಮುಂದಿನ ಒಂದು ವರ್ಷದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹೇಗೆ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನೋಡಿ.
-ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು










