ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಸಮಿತಿ ಘೋಷಣೆ

0

ದೇವಸ್ಥಾನದಲ್ಲಿ ಸಾಮೂಹಿಕ ಹಾಲು ಪಾಯಸ ಸೇವೆ, ರಂಗಪೂಜೆ

ಪುತ್ತೂರು: ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರದಲ್ಲಿ ಗ್ರಾಮಸ್ಥರ ಸೇವೆ ಪ್ರಾಮುಖ್ಯವಾದುದು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಮಿತಿಯವರು ದಿಟ್ಟ ನಿರ್ಧಾರದಿಂದ ಮುಂದಡಿ ಇಟ್ಟಿದ್ದಾರೆ. ಇದಕ್ಕೆ ಗ್ರಾಮಸ್ಥರೆಲ್ಲರೂ ಒಟ್ಟು ಸೇರಿ ಕೈಜೋಡಿಸಿ, ಸಮಿತಿಗೆ ಶಕ್ತಿ ನೀಡುವ ಮುಖಾಂತರ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ನೀವೂ ಸಾಕ್ಷಿಗಳಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರದಲ್ಲಿ ಎ.18ರಂದು ನಡೆದ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗಾಗಿ ರಚಿಸಲಾಗಿರುವ ನೂತನ ಜೀರ್ಣೋದ್ಧಾರ ಸಮಿತಿಯ ಘೋಷಣೆ ಹಾಗೂ ಸಾಮೂಹಿಕ ಹಾಲು ಪಾಯಸ ಸೇವೆ ಮತ್ತು ಸಾರ್ವಜನಿಕ ರಂಗಪೂಜೆ ಸೇವೆ ಕಾರ್ಯಕ್ರಮದಲ್ಲಿ ಅವರು ಜೀರ್ಣೋದ್ಧಾರ ಸಮಿತಿ ಘೋಷಣೆ ಮಾಡಿ ಮಾತನಾಡಿದರು.

ಜನರ ಆರ್ಥಿಕ ಸ್ಥಿತಿ ಹಿಂದಿಗಿಂತ ಸುಧಾರಣೆ ಅಗಿದೆ. ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶದಲ್ಲಿ ತೊಡಗಿಸಿಕೊಂಡು, ಆರ್ಥಿಕ ಸಹಕಾರ ನೀಡಿ ಧನ್ಯತಾ ಭಾವ ಪಡೆಯಬೇಕು ಎಂದರು. ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ ದೇವಸ್ಥಾನದಗಳ ಬ್ರಹ್ಮಕಲಶೋತ್ಸವದಲ್ಲಿ ತೊಡಗಿಸಿಕೊಂಡಿದ್ದ ನಾನು ಇದೀಗ ಇರ್ದೆ ದೇವಸ್ಥಾನದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ದೇವಸ್ಥಾನದಲ್ಲಿ ಯಾರೂ ರಾಜಕೀಯ ಮಾಡಬಾರದು. ಜೀರ್ಣೋದ್ಧಾರ ಕಾರ್ಯಗಳನ್ನು ಪ್ರಶ್ನಾ ಚಿಂತನೆ ನಡೆಸಿ ಮುಂದುವರಿಯಬೇಕು. ಸಾರ್ವಜನಿಕ ಹಣ ವಿನಿಯೋಗ ಮಾಡುವಾಗ ಮುಂಜಾಗ್ರತೆ ವಹಿಸಬೇಕು.ಕ್ಷೇತ್ರ ಬೇಳೆಯಲು ಜಾಗದ ಅವಶ್ಯಕತೆಯಿದ್ದು ಸರಕಾರಿ ಜಾಗ ಸೂಚಿಸಿದಲ್ಲಿ ಅದನ್ನು ಮಂಜೂರು ಮಾಡಿಸಲಾಗುವುದು. ಬೆಂದ್ರ್ ತೀರ್ಥ ಅಭಿವೃದ್ಧಿಗೂ ಸಹಕಾರ ನೀಡಲಾಗುವುದು. ಈಗಾಗಲೇ ಅಲ್ಲಿನ ಯುವಕ ತಂಡ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯುವಕರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಅವರನ್ನು ಸಮಿತಿಯಲ್ಲಿ ಸೇರಿಸಿಕೊಂಡು ಉಪ ಸಮಿತಿ ಮಾಡಿ ಮುಂದುವರಿಯಬೇಕು ಎಂದು ಹೇಳಿದರು.


ಮುಂದಿನ ಏಳೂವರೆ ತಿಂಗಳಲ್ಲಿ ಬ್ರಹ್ಮಕಲಶೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲಿದ್ದೇವೆ-ಶಶಿಕುಮಾರ್ ರೈ ಬಾಲ್ಯೊಟ್ಟು
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಕ್ಷೇತ್ರದಲ್ಲಿ ಸುಮಾರು 23ನೇ ವರ್ಷದ ಬಳಿಕ ಬ್ರಹ್ಮಕಲಶಕ್ಕೆ ಅಣಿಯಾಗುತ್ತಿದ್ದೇವೆ. ದೈವಜ್ಞರ ಸೂಚನೆಯಂತೆ ಮುಂದಿನ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ಮೇ.25ರಂದು ದೇವರಿಗೆ ಅನುಜ್ಞಾ ಕಲಶ ನಡೆದು ಬಾಲಾಲಯ ಪ್ರತಿಷ್ಠೆ ನಡೆಯಲಿದೆ. ನಂತರ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯುಗಳು ಪ್ರಾರಂಭಗೊಳ್ಳಲಿದೆ. ವಾಸ್ತು ಶಿಲ್ಪಿ ಮಹೇಶ್ ಮುಣಿಯಂಗಲ ಅವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಕಾರ್ಯಗಳು ವಾಸ್ತು ಬದ್ದವಾಗಿ ನಡೆಯಲಿದೆ. ಸಾಮಾಗ್ರಿಗಳ ದರ ಏರಿಕೆಯಾಗುತ್ತಿದ್ದು ಸಾಮಾಗ್ರಿಗಳ ಸಂಗಹ್ರಹಿಸಲಾಗುತ್ತಿದೆ. ಮೂರು ತಿಂಗಳಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಪೂರ್ಣಗೊಂಡು ಮುಂದಿನ ಏಳೂವರೆ ತಿಂಗಳಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲಿದ್ದೇವೆ. ಗ್ರಾಮಸ್ಥರೇ ದೇವಾಲಯದ ಆಸ್ತಿಯಾಗಿದ್ದು ಜೀರ್ಣೋದ್ದಾರದಲ್ಲಿ ಕೈ ಜೋಡಿಸಬೇಕು. ಬೈಲುವಾರು ಸಮಿತಿ ರಚಿಸಿದ್ದು ವಿಜ್ಞಾಪನಾ ಪತ್ರದೊಂದಿಗೆ ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಗ್ರಾಮಸ್ಥರು ಸ್ಪಂದಿಸಿಬೇಕು ಎಂದು ಅವರು ಮನವಿ ಮಾಡಿದರು.


ಜೀರ್ಣೋದ್ಧಾರ ಕಾರ್ಯಗಳಿಗೆ ಭಕ್ತಾದಿಗಳು ಭಕ್ತಿ ಪೂರ್ವಕ ಸಹಕಾರ ನೀಡಿ ಸಹಕರಿಸಿ-ವಿಠಲ ರೈ
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು ಮಾತನಾಡಿ, ಇರ್ದೆ ವಿಷ್ಣುಮೂರ್ತಿ ದೇವಸ್ಥಾನವು ಪುರಾತನ ಕ್ಷೇತ್ರವಾಗಿದೆ. ಕನ್ವಮಹರ್ಷಿ ತಪಸ್ಸು ಮಾಡಿದ ಸ್ಥಳ ಎಂಬುದು ಪುರಾನದಲ್ಲಿದೆ. ಗ್ರಾಮದ ದೇವಸ್ಥಾನ ಅಭಿವೃದ್ಧಿ ಆದಾಗ ಗ್ರಾಮ ಸದೃಡವಾಗಲು ಸಹಕಾರಿ. ಕದಿಕೆ ಚಾವಡಿಯು ಅಭಿವೃದ್ಧಿಗೊಂಡು ಹೊಸ ಚೈತನ್ಯ ವೃದ್ಧಿಯಾಗಲಿದೆ. ಅತೀ ಕನಿಷ್ಠ ಅವಧಿಯಲ್ಲಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾಮಗಾರಿಯು ಮಾದರಿಯಾಗಿ ಪೂರ್ಣ ಗೊಂಡು, ಬ್ರಹ್ಮಕಲಶ ನಡೆಯಲಿದೆ. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ಭಕ್ತಾದಿಗಳು ಭಕ್ತಿ ಪೂರ್ವಕ ಸಹಕಾರ ನೀಡುವಂತೆ ಅವರು ವಿನಂತಿಸಿದರು.


ಮನವಿ ಸಲ್ಲಿಕೆ:
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಸರಕಾರ ಹಾಗೂ ಶಾಸಕರ ನಿಧಿಯಿಂದ ಅನುದಾನ ಒದಗಿಸುವುದು ಹಾಗೂ ದೇವಸ್ಥಾನಕ್ಕೆ ಅವಿನಾಭಾವ ಸಂಬಂಧವಿರುವ ಬೆಂದ್ರ್‌ತೀರ್ಥವನ್ನು ಆಡಳಿತ ದೇವಸ್ಥಾನದ ಆಡಳಿತ ಸಮಿತಿ ನೀಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.


ಸನ್ಮಾನ:
ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿರುವ ಶಾಸಕ ಅಶೋಕ್ ಕುಮಾರ್ ರೈಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.


ಜೀರ್ಣೋದ್ಧಾರ ಸಮಿತಿ ಸಂಚಾಲಕ ರಾಧಾಕೃಷ್ಣ ರೈ ಬಾಲ್ಯೊಟ್ಟುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶುಭಕರ ರೈ ಬೈಲಾಡಿ ಮನವಿ ಪತ್ರ ವಾಚಿಸಿದರು. ಕಾರ್ಯದರ್ಶಿ ವತ್ಸಲಾ ರಾಜಾರಾಮ ಭಟ್ ವಂದಿಸಿದರು. ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು.


ಸಾಮೂಹಿಕ ಹಾಲು ಪಾಯಸ, ರಂಗಪೂಜೆ ಸೇವೆ:
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ ದೇವರ ಅನುಗ್ರಹ ಪ್ರಾಪ್ತಿಗಾಗಿ ಮಧ್ಯಾಹ್ನ ಸಾಮೂಹಿಕ ಹಾಲು ಪಾಯಸ ಸೇವೆ ಹಾಗೂ ರಾತ್ರಿ ಸಾರ್ವಜನಿಕ ರಂಗಪೂಜೆ ಸೇವೆಗಳು ಅರ್ಚಕ ಅನಂತರಾಮ ಮಡ್ಕುಳ್ಳಾಯ ಅವರು ನೇತೃತ್ವದಲ್ಲಿ ನೆರವೇರಿತು.

ರೂ.1.52 ಕೋಟಿ ವಾಗ್ದಾನ
ಸರಕಾರದಿಂದ ರೂ.25ಲಕ್ಷ ಅನುದಾನ ಹಾಗೂ ತನ್ನ ವೈಯಕ್ತಿಕವಾಗಿ ರೂ.2ಲಕ್ಷ ನೀಡುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಘೋಷಣೆ ಮಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ರೂ.25ಲಕ್ಷ ನೀಡುವುದಾಗಿ ಘೋಷಣೆ ಮಾಡಿದರು. ಉಳಿದಂತೆ 50 ಮಂದಿಯನ್ನು ಗುರುತಿಸಿ ಅವರ ಮೂಲಕ ತಲಾ ರೂ.2ಲಕ್ಷದಂತೆ ರೂ.1ಕೋಟಿ ದೇಣಿಗೆ ಸಂಗ್ರಹಿಸುವ ಹೊಣೆ ನೀಡಲಾಗಿದ್ದು ಒಟ್ಟು ರೂ.1.52ಕೋಟಿ ದೇಣಿಗೆಯ ವಾಗ್ದಾನ ಸಭೆಯಲ್ಲಿ ಬಂದಿದೆ.

ರೂ.3.50ಕೋಟಿ ಜೀರ್ಣೋದ್ಧಾರ ಕಾರ್ಯಗಳು
ಕ್ಷೇತ್ರದಲ್ಲಿ ಗಣಪತಿ, ದುರ್ಗೆ ವಿಗ್ರಹ ಬದಲಾವಣೆ, ಗರ್ಭಗುಡಿ, ನಮಸ್ಕಾರ ಮಂಟಪದ ಛಾವಣಿ ದುರಸ್ಥಿಮಾಡಿ ತಾಮ್ರದ ಹೊದಿಕೆ, ದೇವಾಲಯದ ಮುಖ್ಯ ಧ್ವಾರವನ್ನು ಅಗಲೀಕರಣ, ಗೋಪುರಕ್ಕೆ ಗ್ರಾನೈಟ್ ಅಳವಡಿಕೆ, ದೇವಾಲಯದ ಹೊರಾಂಗಣದಲ್ಲಿ ನೀರು ಸೋರಿಕೆಯಾಗದಂತೆ ಸುತ್ತ 19,600ಚದರ ಅಡಿ ವಿಸ್ತಿರ್ಣದಲ್ಲಿ ಶೀಟ್‌ನ ಛಾವಣಿ, ಪಾಕಶಾಲೆ ದುರಸ್ಥಿ, ಕದಿಕೆ ಚಾವಡಿಯಲ್ಲಿ ಪಂಚಮುಖದ ಕೀರ್ತಿಮುಖ ಮಂಟಪ, ಸುತ್ತ ಅವರಣಗೋಡೆ, ನೆಲಕ್ಕೆ, ಇಂಟರ್‌ಲಾಕ್, ದೈವದ ಬಂಡಿಯ ಕೊಠಡಿ ನಿರ್ಮಾಣ ಸೇರಿದಂತೆ ಸುಮಾರು 3.50ಕೋಟಿಯಲ್ಲಿ ಜೀರ್ಣೋದ್ಧಾರ ಕಾರ್ಯಗಳು ನಡೆದು ಬ್ರಹ್ಮಕಲಶೋತ್ಸವ ನಡೆಯಲಿದೆ. ಕ್ಷೇತ್ರಕ್ಕೂ ಬೇಂದ್ರ್‌ತೀರ್ಥಕ್ಕೂ ಅವಿನಾಭಾವ ಸಂಬಂಧವಿದ್ದು ದೇವಸ್ಥಾನದ ಜೊತೆಗೆ ಅದರ ಅಭಿವೃದ್ಧಿ ನಡೆಯಲಿದೆ.
-ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ

ಕಾಳೆಲೆಯುವ ಕೆಲಸ ದಯವಿಟ್ಟು ಮಾಡಬಾರದು:
ದೇವಾಲಯದ ಎಲ್ಲಾ ಕೆಲಸಗಳು ಪ್ರಶ್ನಾ ಚಿಂತನೆಯಂತೆ ನಡೆಯಲಿದೆ. ದೇವರ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು. ನಾವು ಮಾನವರು. ತಪ್ಪು ಯಾರಿಂದಲೂ ನಡೆಯಬಹುದು. ಅದನ್ನು ತಿದ್ದಿಕೊಳ್ಳವ ಕಾರ್ಯವಾಗಬೇಕೇ ಹೊರತು ದೂರುವ ಕೆಲಸ ಮಾಡಬಾರದು. ದಯವಿಟ್ಟು ಯಾರೂ ಕೂಡ ನೆಗೆಟಿವ್ ಆಗಿ ಮಾತನಾಡಬಾರದು. ನಿಮ್ಮ ಅಭಿಪ್ರಾಯಗಳಿದ್ದರೆ ಸಭೆಯಲ್ಲಿ ತಿಳಿಸಿ, ಚರ್ಚಿಸಬೇಕು. ಕಾಳೆಲೆಯುವ ಕೆಲಸ ಯಾರೂ ಮಾಡಬಾರದು. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು. ನಮ್ಮ ಗ್ರಾಮದ ದೇವರ ಕ್ಷೇತ್ರ ಎಂಬ ಭಾವನೆಯಿಂದ ಅಭಿವೃದ್ಧಿಯಲ್ಲಿ ಸಮಿತಿಯ ಜೊತೆಗೆ ಕೈಜೋಡಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದರು.

LEAVE A REPLY

Please enter your comment!
Please enter your name here