ರಾಮಕುಂಜ: ಸಿಡಿಲು ಬಡಿದು ಮನೆಗೆ ಹಾನಿ – 1 ಲಕ್ಷಕ್ಕೂ ಅಧಿಕ ನಷ್ಟ

0

ರಾಮಕುಂಜ: ಗ್ರಾಮದ ನೀರಾಜೆ ಸಮೀಪ ಕೂಟೇಲು ಎಂಬಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಮನೆ ಗೋಡೆ ಬಿರುಕುಬಿಟ್ಟು, ವಿದ್ಯುತ್ ಉಪಕರಣಗಳು ಹಾನಿಗೊಂಡ ಘಟನೆ ಏ.16ರಂದು ರಾತ್ರಿ ನಡೆದಿದೆ.

ರಾಮಕುಂಜ ಗ್ರಾಮದ ಕೂಟೇಲು ನಿವಾಸಿ ಸಫೀಯ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ರಾತ್ರಿ ಮಳೆಯೊಂದಿಗೆ ಅಬ್ಬರಿಸಿದ ಸಿಡಿಲು ತೆಂಗಿನ ಮರವೊಂದಕ್ಕೆ ಬಡಿದು ಕ್ಷಣಾರ್ಧದಲ್ಲಿ ಮನೆಯ ಗೋಡೆಗೆ ಬಡಿದಿದೆ. ಮನೆಯ ಹೊರಗಡೆ 3 ಕಡೆಯಲ್ಲಿ ಗೋಡೆಗೆ ಸಿಡಿಲು ಬಡಿದಿದ್ದು, ಒಳಗಿನ ಗೋಡೆಯಲ್ಲಿ ರಂಧ್ರ ಕೊರೆದ ರೀತಿಯಲ್ಲಿ ಬಿರುಕು ಬಿಟ್ಟಿದೆ.

ಮನೆಯಲ್ಲಿನ ವಿದ್ಯುತ್ ಉಪಕರಣಗಳು ಹಾನಿಗೊಂಡಿದೆ. ಮನೆಯ ವಿದ್ಯುತ್ ಸಂಪರ್ಕದ ವೈರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಹೋಗಿ ಕರಕಲಾಗಿದೆ. ಮನೆಯ ಕಿಟಕಿಯ ಗಾಜುಗಳು ತುಂಡಾಗಿ ನೆಲಕ್ಕುರುಳಿ ಬಿದ್ದಿದೆ. ತೆಂಗಿನ ಮರ ಭಾಗಶಃ ಹೊತ್ತಿ ಉರಿದಿದೆ. ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಸುಮಾರು 1 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ರಾಮಕುಂಜ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here