ವಿಟ್ಲ: ಬೆಕ್ಕನ್ನು ರಕ್ಷಿಸಲು ಬಾವಿಗಿಳಿದು ಸಿಲುಕಿಕೊಂಡ ಬಾಲಕ – ಸುರಕ್ಷಿತವಾಗಿ ಮೇಲಕ್ಕೆತ್ತಿದ ಫ್ರೆಂಡ್ಸ್ ವಿಟ್ಲ ತಂಡ

0

ವಿಟ್ಲ: ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಬಾಲಕನೊಬ್ಬ ಸುಮಾರು 60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಶಿವಾಜಿನಗರದಲ್ಲಿ ನಡೆದಿದೆ. ಬಳಿಕದ ಬೆಳವಣಿಗೆಯಲ್ಲಿ ಸ್ಥಳಕ್ಕೆ ಆಗಮಿಸಿದ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ವಿಟ್ಲರವರು ಬಾಲಕನನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.


ವಿಟ್ಲ ಶಿವಾಜಿನಗರದ ಕೃಷ್ಣ ನಾಯ್ಕರವರ ಮನೆಯ ಬಳಿಯಿರುವ ಸುಮಾರು 60 ಅಡಿ ಆಳದ ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಬೆಕ್ಕೊಂದು ಬಿದ್ದಿತ್ತು. ಬಾವಿಯ ಒಳಗಿನಿಂದ ಬೆಕ್ಕು ಕೂಗುವುದು ಮನೆಯವರಿಗೆ ಕೇಳಿಸಿದ್ದರಿಂದ ವಿಷಯ ತಿಳಿಯಿತು. ಈ ವೇಳೆ ಕೃಷ್ಣ ನಾಯ್ಕ ಅವರ ಅಪ್ರಾಪ್ತ ಮೊಮ್ಮಗ ತಾನೇ ಕೆಳಗಿಳಿದು ಬೆಕ್ಕನ್ನು ತರುವುದಾಗಿ ಹೇಳಿದ್ದರಿಂದ ಹಗ್ಗದ ಸಹಾಯದಿಂದ ಆತನನ್ನು ಕೆಳಗಿಳಿಸಲಾಯಿತು.


ಕೆಳಗಿಳಿದ ಬಾಲಕ ಬೆಕ್ಕನ್ನು ಬಕೆಟ್‌ನಲ್ಲಿ ಹಾಕಿ ಮೇಲಕ್ಕೆ ಕಳುಹಿಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರೂ ಬಳಿಕ ಆತನಿಗೆ ಮೇಲಕ್ಕೆ ಬರಲು ಸಾಧ್ಯವಾಗದೆ ಒಂದು ಗಂಟೆಯ ಕಾಲ ಬಾವಿಯೊಳಗೇ ಬಾಕಿಯಾಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಫ್ರೆಂಡ್ಸ್ ವಿಟ್ಲದ ಮುರಳೀಧರರವರಿಗೆ ವಿಷಯ ತಿಳಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಮುರಳಿಧರ ವಿಟ್ಲರವರು ಹುಡುಗನಿಗೆ ಧೈರ್ಯ ತುಂಬಿ ಹಗ್ಗದ ಸಹಾಯದಿಂದ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ.

LEAVE A REPLY

Please enter your comment!
Please enter your name here