ಬೈಕ್ ಪಲ್ಟಿ : ಗಾಯಗೊಂಡಿದ್ದ ಲಿಖಿತ್ ರೈ ಚಿಕಿತ್ಸೆ ಫಲಿಸದೆ ಮೃತ್ಯು

0

ಉಪ್ಪಿನಂಗಡಿ: ನಿಯಂತ್ರಣ ತಪ್ಪಿ ಬೈಕ್ ಮಗುಚಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಹಿರೇಬಂಡಾಡಿ ನಿವಾಸಿ ಲಿಖಿತ್ ರೈ ಚಿಕಿತ್ಸೆಗೆ ಸ್ಪಂದಿಸದೇ ಎ.25ರ ನಸುಕಿನ ಜಾವ ಮೃತಪಟ್ಟಿದ್ದಾರೆ.

ಎ.22ರಂದು ಸಂಜೆ ಲಿಖಿತ್ ರೈ ಸಂಚರಿಸುತ್ತಿದ್ದ ಬೈಕ್ ಕೊಯಿಲ- ಹಿರೇಬಂಡಾಡಿ ರಸ್ತೆಯ ಶಾಖೆಪುರ ಎಂಬಲ್ಲಿ ರಸ್ತೆ ಪಕ್ಕದ ಗುಂಡಿಗೆ ಮುಗುಚಿ ಬಿದ್ದಿತ್ತು. ತಲೆಗೆ ಗಂಭೀರ ಗಾಯಗೊಂಡಿದ್ದ ಸವಾರ ಲಿಖಿತ್ ರೈ ಅವರನ್ನು ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಕೋಮಾ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಎ.24ರಂದು ಸಂಜೆ ವೇಳೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಲಿಖಿತ್ ರೈ ಎ.25ರಂದು ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ಲಿಖಿತ್ ರೈಯವರು ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿಯನ್ನು ಮುಗಿಸಿ ಕಾಲೇಜಿಗೆ ಸೇರುವ ತಯಾರಿಯಲ್ಲಿದ್ದರು.

ನೆರವಿಗೆ ಬಂದ ಪುತ್ತಿಲ ಪರಿವಾರ
ಮೃತರ ತಂದೆ ರವೀಂದ್ರ ರೈಯವರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಹಿರೇಬಂಡಾಡಿ ಘಟಕದ ಅಧ್ಯಕ್ಷರಾಗಿದ್ದು, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಪುತ್ರ ಲಿಖಿತ್ ರೈಯವರಿಗೆ ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆಯೇ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಟ್ರಸ್ಟ್‌ನ ಸದಸ್ಯರು ನೆರವಿಗೆ ಧಾವಿಸಿ ಬಂದಿದ್ದು, ಆಸ್ಪತ್ರೆಯಲ್ಲಿ ರಾತ್ರಿ ಹಗಲೆನ್ನದೆ ಲಿಖಿತ್ ರೈಯವರ ಕುಟುಂಬದವರ ಜೊತೆಯಲ್ಲಿ ನಿಂತು ತಮ್ಮಿಂದಾದ ನೆರವು, ಸಾಂತ್ವಾನಗಳನ್ನು ನೀಡಿದರು.

LEAVE A REPLY

Please enter your comment!
Please enter your name here