






ಕಡಬ: ಸ್ನಾನಕ್ಕೆಂದು ನದಿ ನೀರಿಗೆ ಇಳಿದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ನದಿ ನೀರಿನಲ್ಲಿ ಕಣ್ಮರೆಯಾದ ಘಟನೆ ಏ.27ರಂದು ಸಂಜೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊರಿಯರ್ ಪ್ರದೇಶದಲ್ಲಿ ನಡೆದಿದ್ದು, ತಡರಾತ್ರಿ ಯುವಕನ ಮೃತದೇಹ ಪತ್ತೆಯಾಗಿದೆ.






ಕಡಬ ತಾಲೂಕಿನ ಮರ್ಧಾಳ ನಿವಾಸಿ ಮಂಜು ಎಂಬವರ ಪುತ್ರ ರಕ್ಷಿತ್ (26) ಮೃತ ಯುವಕ.
ಸೋಮವಾರ ಸಂಜೆ ತನ್ನ ಸ್ನೇಹಿತರ ಗುಂಪಿನೊಂದಿಗೆ ಐತ್ತೂರು ಗ್ರಾಮದ ‘ಅರಬ್ಬಿ ತೋಡು’ ಪ್ರದೇಶಕ್ಕೆ ಸ್ನಾನಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ರಕ್ಷಿತ್ ಅವರಿಗೆ ಈಜು ತಿಳಿದಿದ್ದರೂ ಸಹ, ನದಿಯ ನೀರಿನ ಸೆಳೆತ ಹೆಚ್ಚಿದ್ದ ಕಾರಣ ಅವರು ನಿಯಂತ್ರಣ ತಪ್ಪಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಗಾಬರಿಗೊಂಡ ಸ್ನೇಹಿತರು ಕೂಡಲೇ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಡಬ ಪೊಲೀಸರು ಮತ್ತು ಪುತ್ತೂರಿನ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಸ್ಥಳೀಯರು ಕೂಡ ಈ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು. ಆದರೆ ಕತ್ತಲಾದ ಕಾರಣ ಆರಂಭದಲ್ಲಿ ಶೋಧ ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು.
ರಾತ್ರಿ ವೇಳೆ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಮುಂದುವರಿಸಿತು. ನದಿಯ ಸುಮಾರು 30 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ರಕ್ಷಿತ್ ಅವರ ಮೃತದೇಹವನ್ನು ತಂಡವು ಹೊರತೆಗೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಘಟನೆಯ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










