ಮಹಿಳೆಯ ಮೇಲೆ ಆ್ಯಸಿಡ್ ಎರಚಿದ ಪ್ರಕರಣ: ಆರೋಪಿಗೆ ಜಾಮೀನು ಮಂಜೂರು

0

ಪುತ್ತೂರು:ಮಹಿಳೆಯ ಮೇಲೆ ಆ್ಯಸಿಡ್ ಎರಚಿದ ಪ್ರಕರಣವೊಂದರ ಆರೋಪಿಗೆ ಸುಮಾರು ಆರು ವರ್ಷಗಳ ಬಳಿಕ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.


ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಂಬಾಳ ನಿವಾಸಿ ಶ್ರೀಮತಿ ಸ್ವಪ್ನ ಎಂಬವರ ಮೇಲೆ ಆ್ಯಸಿಡ್ ದಾಳಿಯಾಗಿತ್ತು.ಅವರ ಗಂಡನ ಹಿರಿಯ ಸಹೋದರ ಜಯಾನಂದ ಎಂಬಾತ ಈ ಕೃತ್ಯ ಎಸಗಿದ್ದಾಗಿ ಆರೋಪಿಸಲಾಗಿದೆ.ದಿ.23-01-2020ರಂದು ಸಂಜೆ 4 ಗಂಟೆ ಸುಮಾರಿಗೆ ಸ್ವಪ್ನರವರ ವಾಸದ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಸ್ವಪ್ನರವರು ಮನೆಯ ಬಾಗಿಲನ್ನು ಹಾಕಿಕೊಂಡು ಮನೆಯ ಒಳಗೆ ಕಿಟಕಿ ಬಳಿ ನಿಂತುಕೊಂಡು ಮೊಬೈಲ್‌ನಲ್ಲಿ ವೀಡಿಯೋ ಮಾಡಲು ಮುಂದಾದಾಗ ಆರೋಪಿ ಜಯಾನಂದ ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳವನ್ನು ತೆಗೆದು ಅದರಲ್ಲಿದ್ದ ಆ್ಯಸಿಡ್‌ನ್ನು ಮನೆಯ ಹೊರಗಡೆಯಿಂದ ಎರಚಿದ್ದರಿಂದ ಸ್ವಪ್ನ ಅವರ ಮುಖಕ್ಕೆ, ಕುತ್ತಿಗೆಯ ಭಾಗಕ್ಕೆ ಮತ್ತು ಕೈಗೆ ತಾಗಿ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿತ್ತು. ಅವರನ್ನು ಬಳಿಕ ಮಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಸ್ವಪ್ನ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.


ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಜಯಾನಂದ ಜಾಮೀನಿನಲ್ಲಿ ಬಿಡುಗಡೆ ಕೋರಿ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಆರೋಪಿ ಪರ ವಾದ ಮಾಡಿದ ವಕೀಲ ಮಹೇಶ್ ಕಜೆ ಅವರು, ಆರೋಪಿಯು ಈಗಾಗಲೇ ಐದು ವರ್ಷಗಳಿಗಿಂತ ಹೆಚ್ಚಾಗಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಅಲ್ಲದೆ ಕರ್ನಾಟಕದ ಉಚ್ಚನ್ಯಾಯಾಲಯವು ಕೇಸನ್ನು ಬೇಗ ಮುಗಿಸಬೇಕು ಎಂದು ಆದೇಶಿಸಿರುತ್ತದೆ ಎಂಬಿತ್ಯಾದಿ ಅಂಶಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರಾದ ಶ್ರೀಮತಿ ಸರಿತಾ ಡಿ.ಅವರು ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here