ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಪ್ರಾಮುಖ್ಯ: “ಸುಜ್ಞಾನ ಪೋಷಣೆ” ಕಾರ್ಯಕ್ರಮದಲ್ಲಿ ತಜ್ಞರ ಅಭಿಪ್ರಾಯ

0

ಕಡಬ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳನ್ನು ಕೇವಲ ಅಂಕಗಳಿಸುವ ಯಂತ್ರಗಳನ್ನಾಗಿ ಮಾಡದೆ, ಅವರನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಇಲ್ಲಿನ ಬೆಥನಿ ಜೀವನ್ ಜ್ಯೋತಿ ಸೆರೆನಿಟಿ ಸೆಂಟರ್ ನಲ್ಲಿ ಪೋಷಕರಿಗಾಗಿ “ಸುಜ್ಞಾನ ಪೋಷಣೆ” (Wise Parenting) ಎಂಬ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಪುತ್ತೂರು ಧರ್ಮಪ್ರಾಂತ್ಯದ ಮೋಸ್ಟ್.ರೆವ್.ಡಾ. ಗಿವರ್ಗೀಸ್ ಮಾರ್ ಮಕಾರಿಯೋಸ್ ರವರು ಆಶೀರ್ವಚನವನ್ನು ಹಾಗೂ ಸಂಸ್ಥೆಯ ನಿರ್ದೇಶಕರಾದ ರೆವ್. ಫಾ. ಸಕರಿಯಾಸ್ ನಂದಿಯಾಟ್ OIC ಅವರು ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿತರಾಗಿದ್ದ ಡಾ.ನಂದೀಶ್ ವೈ.ಡಿ.(ಸಹ ಪ್ರಾಧ್ಯಾಪಕರು, ಉಪ್ಪಿನಂಗಡಿ) ಅವರು ಮಾತನಾಡಿ, “ಪೋಷಕತ್ವ ಎನ್ನುವುದು ಒಂದು ಕಲೆ. ಮಕ್ಕಳ ಮೇಲೆ ಒತ್ತಡ ಹೇರುವ ಬದಲು, ಅವರ ಭಾವನೆಗಳನ್ನು ಅರ್ಥೈಸಿಕೊಂಡು ಬೆಂಬಲ ನೀಡುವುದು ಅಗತ್ಯವಾಗಿದೆ. ಡಿಜಿಟಲ್ ಯುಗದಲ್ಲಿ ಮಕ್ಕಳನ್ನು ಮೊಬೈಲ್ ವ್ಯಸನದಿಂದ ದೂರವಿಟ್ಟು, ಅವರಲ್ಲಿ ಓದುವ ಮತ್ತು ಆಟವಾಡುವ ಹವ್ಯಾಸವನ್ನು ಬೆಳೆಸಲು ಪೋಷಕರೇ ಮಾದರಿಯಾಗಬೇಕು,” ಎಂದು ಹೇಳುತ್ತಾ ತಮ್ಮ ಕರ್ತವ್ಯದಲ್ಲಿ ನಡೆದ ಹಲವು ಅನುಭವಯುತ ವಿಚಾರಗಳನ್ನು ಹಂಚಿಕೊಂಡರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ NGO ಮುಖ್ಯಸ್ಥರಾದ ಮುರುಗೇಶ್ ರವರು, ಮಕ್ಕಳ ಬಾಳಲ್ಲಿ ಯಾವ ರೀತಿ ಬೆಳಕನ್ನು ತರಬಹುದು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.

ಕಡಬ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಜಂಬೂ ರಾಜ್ ಮಹಾಜನ್ ರವರು “ಮಾದಕ ವ್ಯಸನ ಮುಕ್ತ ಯುವ ಜನತೆ” ಎಂಬ ವಿಷಯದಡಿ ಮಾತನಾಡಿ ಸರಕಾರದ ಕಾನೂನು ಸುವ್ಯವಸ್ಥೆಯನ್ನು ವಿವರಿಸಿದರು.

ಈ ಸಾರ್ಥಕ ಕಾರ್ಯಕ್ರಮದಲ್ಲಿ, ಶಾಲಾ ಮುಖ್ಯೋಪಾಧ್ಯಾಯಿನಿ ಶೈಲಾರವರು ಸ್ವಾಗತಿಸಿದರು.
ನೆರೆದ ಪೋಷಕರು ತಮ್ಮ ಸಂದೇಹಗಳಿಗೆ ತಜ್ಞರ ಬಳಿ ಪರಿಹಾರಗಳನ್ನು ಕಂಡುಕೊಂಡರು.
ಡಾ.ಉಷಾ ಮನೋಜ್ ರವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸೆರೆನಿಟಿ ಸೆಂಟರ್‌ನ ಮನೋಶಾಸ್ತ್ರಜ್ಞರು ಹಾಗೂ ವಿಶೇಷ ಶಿಕ್ಷಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here