







ವಿಟ್ಲ: ಮದುವೆ ಸಮಾರಂಭ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದಾಗ ಚಾಲಕನಿಗೆ ನಿದ್ದೆ ಮಂಪರು ಆವರಿಸಿ ನಿಯಂತ್ರಣ ತಪ್ಪಿದ ಕ್ರೆಟಾ ಕಾರು ರಸ್ತೆ ಬದಿ ನಿಲ್ಲಿಸಿದ್ದ ಟಿಲ್ಲರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಟ್ಲದ ಚಂದಳಿಕೆ ಬಳಿ ನಡೆದಿದೆ.


ಕೇಪು ನಿವಾಸಿ ಅದ್ರಾಮ ಮತ್ತು ಮನೆಯವರು ತಮ್ಮ ಕ್ರೆಟಾ ಕಾರಿನಲ್ಲಿ ತುಮಕೂರಿನಲ್ಲಿ ನಡೆದ ಮದುವೆ ಸಮಾರಂಭ ಮುಗಿಸಿ ವಿಟ್ಲಕ್ಕೆ ಬರುತ್ತಿದ್ದರು. ಚಂದಳಿಕೆ ಸಮೀಪ ಮುಂಜಾನೆ ವೇಳೆ ಚಾಲಕನಿಗೆ ನಿದ್ದೆ ಆವರಿಸಿದ್ದರಿಂದ ಕಾರು ನಿಯಂತ್ರಣ ತಪ್ಪಿದೆ.



ಗುಜರಿ ವ್ಯಾಪಾರಿಯೊಬ್ಬರು ಹಲವು ಸಮಯಗಳಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟಿಲ್ಲರ್‌ಗೆ ಕಾರು ರಭಸದಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ.ಅಪಘಾತದ ತೀವ್ರತೆಗೆ ಕ್ರೆಟಾ ಕಾರು ಭಾರಿ ಪ್ರಮಾಣದಲ್ಲಿ ಜಖಂಗೊಂಡಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎಂಜಿನ್ ಭಾಗ ಹೊರಗೆ ಬಂದಿದೆ. ಟೈರ್, ಬಂಪರ್ ಸೇರಿದಂತೆ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಡಿಕ್ಕಿಯ ರಭಸಕ್ಕೆ ಟಿಲ್ಲರ್ ಕೂಡ ಪಲ್ಟಿಯಾಗಿ ನಜ್ಜುಗುಜ್ಜಾಗಿದೆ.ಅದೃಷ್ಟವಶಾತ್ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









