ಶಾಸಕ ಅಶೋಕ್ ರೈಯವರ ವೇಗಕ್ಕೆ ಠಕ್ಕರ್ ನೀಡಲು ಬಿಜೆಪಿಯಿಂದ ಕಣಕ್ಕೆ ಇಳಿಯುವವರು ಯಾರು?

0

ವಿಶೇಷ ವರದಿ : ಸಂತೋಷ್ ಕುಮಾರ್ ಶಾಂತಿನಗರ


ಪುತ್ತೂರು: ಅನುದಾನ, ಅಭಿವೃದ್ಧಿ, ಆಲೋಚನೆ ಮತ್ತು ಅನುಷ್ಠಾನದ ಮೂಲಕ ಪಕ್ಷಾತೀತವಾಗಿ ಬೆಂಬಲ ಪಡೆಯುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ವೇಗಕ್ಕೆ ಠಕ್ಕರ್ ನೀಡಲು ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಬಹುದು ಎಂದು ಎಲ್ಲೆಡೆ ಚರ್ಚೆಯಾಗತೊಡಗಿದೆ. ಈ ಮೂಲಕ ರಾಜ್ಯ ಬಿಜೆಪಿಯ ಪ್ರಯೋಗ ಶಾಲೆಯಂತಿರುವ ಪುತ್ತೂರಿನಲ್ಲಿ ಮತ್ತೆ ರಾಜಕೀಯ ಕ್ಷೇತ್ರ ಸಕ್ರಿಯವಾಗತೊಡಗಿದೆ.

ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮುಂದಿನ ಅಭ್ಯರ್ಥಿ ಯಾರಾಗಬಹುದು ಎಂಬ ಲೆಕ್ಕಾಚಾರ ಈಗಲೇ ಆರಂಭಗೊಂಡಿದೆ. ಸಂಘಟನಾ ಚಾತುರ್ಯದ ಮೂಲಕ ರಾಷ್ಟ್ರಮಟ್ಟದಲ್ಲಿಯೇ ಗುರುತಿಸಿಕೊಂಡು ಬಿಜೆಪಿಯ ಭದ್ರಕೋಟೆ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೈ ತಪ್ಪಿ ಹೋಗಿರುವ ಶಾಸಕ ಸ್ಥಾನವನ್ನು ಮತ್ತೆ ಪಡೆಯಬೇಕಾದರೆ ಯಾವ ಮಾನದಂಡ ಅನುಸರಿಸಬೇಕು ಎಂದು ಬಿಜೆಪಿ ಚಿಂತನ ಮಂಥನ ನಡೆಸುತ್ತಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ತೀವ್ರ ಹಿನ್ನಡೆಯನ್ನು ಸರಿ ಪಡಿಸಿಕೊಂಡು ದೇವ ದುರ್ಲಭ ಕಾರ್ಯಕರ್ತರು ಒಪ್ಪುವ ಸಹಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಈಗಾಗಲೇ ಆರ್‌ಎಸ್‌ಎಸ್ ಫರ್ಮಾನು ಹೊರಡಿಸಿದೆ. ಹಾಗಾಗಿ ಬಿಜೆಪಿ ನಾಯಕರು ಅಳೆದು ತೂಗಿ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಆದ್ದರಿಂದ ದಿನಕ್ಕೊಬ್ಬರ ಹೆಸರು ರೇಸ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಈ ಕ್ಷಣದವರೆಗೆ ಯಾವ ಅಭ್ಯರ್ಥಿಯ ಹೆಸರೂ ಅಂತಿಮ ಆಗಿಲ್ಲ. ಅಭ್ಯರ್ಥಿ ಆಯ್ಕೆ ಕುರಿತು ಇನ್ನೂ ಅಧಿಕೃತ ಚರ್ಚೆಯೇ ಆಗಿಲ್ಲ ಎಂದು ರಾಜ್ಯ ಬಿಜೆಪಿಯ ಮೂಲಗಳಿಂದ ತಿಳಿದು ಬಂದಿದೆ.


ಅರುಣ್ ಪುತ್ತಿಲರಿಗೆ ಅರುಣ್‌ಶ್ಯಾಮ್ ಪ್ರತಿಸ್ಪರ್ಧಿ ಎಂದು ಚರ್ಚೆಯೇ ಆಗಿಲ್ಲ!:
ಹಿಂದೂ ಸಂಘಟನೆಗಳ ಮೂಲಕ ಪ್ರವರ್ಧಮಾನಕ್ಕೆ ಬಂದು ಬಳಿಕ ಬಲಾಢ್ಯ ನಾಯಕನಾಗಿ ಬೆಳೆದಿರುವ ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಇನ್ನೂ ಸಂಘ ಪರಿವಾರದ ನಾಯಕರು ಮನಪೂರ್ವಕವಾಗಿ ಒಪ್ಪಿಕೊಂಡಿಲ್ಲ. ಬಜರಂಗದಳದ ಮೂಲಕ ಗುರುತಿಸಿಕೊಂಡು ಸಾವಿರಾರು ಕಾರ್ಯಕರ್ತರ ಪಡೆ ಸೃಷ್ಟಿಸಿದ್ದರೂ ಆ ನಂತರದ ಬೆಳವಣಿಗೆಯಲ್ಲಿ ಶ್ರೀರಾಮಸೇನೆಯ ಮೂಲಕ ಬಿಜೆಪಿಗೆ ಅರುಣ್ ಪುತ್ತಿಲ ಸಡ್ಡು ಹೊಡೆದು ನಿಂತಿದ್ದನ್ನು ಕರಾವಳಿಯ ಹೈಕಮಾಂಡ್ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇನ್ನೂ ಮರೆತಿಲ್ಲ. ಪ್ರಭಾಕರ ಭಟ್ಟರ ಅಂತಿಮ ನಿಶಾನೆ ಸಿಗದೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗುವಂತಿಲ್ಲ. ಹಾಗಾಗಿ ಬಿಜೆಪಿಯ ಕಾರ್ಯಕರ್ತರಿಗೆ ಮತ್ತು ಕೆಲವು ನಾಯಕರಿಗೆ ಅರುಣ್ ಕುಮಾರ್ ಬಿಜೆಪಿಗೆ ಬರಬೇಕು ಎಂಬ ಮನಸ್ಸಿದ್ದರೂ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳುವ ಮೂಲಕ ಎರಡನೇ ಸ್ಥಾನ ಪಡೆದು ಸೋತರೂ ಗೆದ್ದಂತಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಬೇಕು ಎಂಬ ಪ್ರಯತ್ನ ಕೆಲವರಿಂದ ತೆರೆಯ ಮರೆಯಲ್ಲಿ ನಡೆಯುತ್ತಿದ್ದರೂ ಫಲಪ್ರದವಾಗುತ್ತಿಲ್ಲ. ಪುತ್ತೂರು ಬಿಜೆಪಿಯ ಪಂಚ ಪಾಂಡವರ ಒಪ್ಪಿಗೆ ಸಿಗದೆ ಅರುಣ್ ಪುತ್ತಿಲ ಅವರು ಬಿಜೆಪಿಯಿಂದ ಕಣಕ್ಕಿಳಿಯುವುದು ಕಷ್ಟ ಸಾಧ್ಯ. ಹಾಗಾಗಿ ಕಳೆದ ಬಾರಿ ಪುತ್ತೂರಿಗೆ ಪುತ್ತಿಲ ಎಂದು ಘೋಷವಾಕ್ಯ ಮೊಳಗಿಸಿದ್ದವರು ಈ ಸಲ ವಿಧಾನಸೌಧಕ್ಕೆ ಪುತ್ತಿಲ ಎಂಬ ಧ್ಯೇಯ ವಾಕ್ಯದೊಂದಿಗೆ ಪುತ್ತಿಲ ಪರಿವಾರವನ್ನು ಸಂಘಟಿಸುತ್ತಿದ್ದಾರೆ. ವಿಧಾನಸಭಾ ಕ್ಷೇತ್ರದ ಬೂತ್ ಬೂತ್‌ಗಳಲ್ಲಿ ಪುತ್ತಿಲ ಪರಿವಾರಕ್ಕೆ ಈಗಾಗಲೇ ಪದಾಧಿಕಾರಿಗಳನ್ನು ನೇಮಿಸಿ ಚುನಾವಣಾ ಅಖಾಡವನ್ನು ಅಣಿಗೊಳಿಸಲಾಗುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರೆ ಪುತ್ತಿಲ ಪರಿವಾರವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದು. ಇಲ್ಲದಿದ್ದರೆ ಪುತ್ತಿಲ ಪರಿವಾರದ ಮೂಲಕ ಮತ್ತೊಮ್ಮೆ ಅರುಣ್ ಪುತ್ತಿಲ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಮತ್ತೊಮ್ಮೆ ಪ್ರಬಲ ಏಟು ನೀಡುವುದು ಎಂಬುದು ಪುತ್ತಿಲ ಪರಿವಾರದ ಪ್ರಮುಖರ ಲೆಕ್ಕಾಚಾರವಾಗಿದೆ. ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಬಂಡಾಯವಾಗಿ ಕಣಕ್ಕಿಳಿಯುವುದೇ ಆದರೆ ಅವರನ್ನು ಸಮರ್ಥವಾಗಿ ಎದುರಿಸಬೇಕು. ಕಳೆದ ಬಾರಿಯಂತೆ ಆಶಾ ತಿಮ್ಮಪ್ಪ ಗೌಡ ಅಂತವರನ್ನು ಕಣಕ್ಕಿಳಿಸಬಾರದು ಎಂಬುದು ಬಿಜೆಪಿ ದೃಢ ನಿಲುವು ತಳೆದಿದೆ. ಆ ಹಿನ್ನೆಲೆಯಲ್ಲಿಯೇ ಬಿಜೆಪಿಯಿಂದ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಮಾತು ಕೇಳಿ ಬರಲಾರಂಭಿಸಿದೆ. ಆದರೆ ಈ ಕ್ಷಣದವರೆಗೆ ಅರುಣ್ ಶ್ಯಾಮ್ ಪುತ್ತೂರು ಅವರಿಗೆ ಬಿಜೆಪಿಯಿಂದ ಅಂತಹ ಯಾವ ಸೂಚನೆಯೂ ಬಂದಿಲ್ಲ. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಕೇಸು ದಾಖಲಾದಾಗ ಸಮರ್ಥವಾಗಿ ವಾದ ಮಂಡಿಸಿ ನ್ಯಾಯ ದೊರಕಿಸಿಕೊಡುತ್ತಿದ್ದಾರೆ ಎಂಬ ಹೆಗ್ಗಳಿಕೆ ಪಡೆದಿರುವ ಅರುಣ್ ಶ್ಯಾಮ್ ಅವರ ಪರ ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳಿಗೆ, ಆರ್‌ಎಸ್‌ಎಸ್ ನಾಯಕರಿಗೆ, ಬಿಜೆಪಿ ಪ್ರಮುಖರಿಗೆ ಮತ್ತು ಪ್ರಮುಖವಾಗಿ ಕಾರ್ಯಕರ್ತರಿಗೆ ತುಂಬಾ ಒಲವಿದೆ. ಅರುಣ್ ಪುತ್ತಿಲ ಅವರ ವರ್ಚಸ್ಸು, ಜಾತಿ, ಸಂಘಟನಾ ಬಲಕ್ಕೆ ಸಮಾನವಾಗಿ ಅರುಣ್‌ಶ್ಯಾಮ್ ಅವರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆ ನಡೆದಿದೆ ಹೊರತು ಅಽಕೃತ ತೀರ್ಮಾನ ಇನ್ನೂ ಆಗಿಲ್ಲ. ಎಬಿವಿಪಿಯ ಮೂಲಕ ಸಂಘ ಪರಿವಾರಕ್ಕೆ ಪ್ರವೇಶಿಸಿ ಹೈಕೋರ್ಟ್‌ನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿಯೂ ಕಾರ್ಯ ನಿರ್ವಹಿಸಿದ್ದ ಅರುಣ್ ಶ್ಯಾಮ್ ಅವರು ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿದ್ದಾಗ ವಿಮಾನ ನಿಲ್ದಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಮೊದಲ ಸಾಲಿನಲ್ಲಿ ನಿಂತು ಸ್ವಾಗತಿಸಿದ ನಂತರ ಪ್ರಮುಖ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜತೆಗೆ ಪುತ್ತೂರಿನಲ್ಲಿ ನಡೆದ ಬಿಜೆಪಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನದಲ್ಲಿ ಅರುಣ್‌ಶ್ಯಾಮ್ ಭಾಗವಹಿಸಿರುವುದರಿಂದ ಅವರು ಅಭ್ಯರ್ಥಿಯಾಗುವುದು ಖಚಿತ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಪುಣಚ ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಿಜೆಪಿ ಗ್ರಾಮಾಂತರ ಮಂಡಲದ ಮತ್ತು ಪುತ್ತೂರು ತೆಂಕಿಲದಲ್ಲಿರುವ ವಿವೇಕಾನಂದ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಬಿಜೆಪಿ ನಗರದ ಮಂಡಲದ ಮಹಾ ಅಭಿಯಾನದಲ್ಲಿ ಅರುಣ್‌ಶ್ಯಾಮ್ ಭಾಗವಹಿಸಿರುವುದು ನಿಜ. ಆದರೆ ಪಕ್ಷದ ಅಭ್ಯರ್ಥಿಯನ್ನಾಗಿಸುವ ಕಾರಣಕ್ಕಾಗಿಯೇ ಅವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಲ್ಲ. ರಾಷ್ಟ್ರೀಯ ಚಿಂತನೆ ಉಳ್ಳ ಪ್ರಖರ ನ್ಯಾಯವಾದಿಯಾಗಿರುವುದರಿಂದ ಅವರು ಬಿಜೆಪಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಲ್ಪಟ್ಟಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ಡಾ. ಪುತ್ತೂರಾಯ, ಮಠಂದೂರು, ಕಿಶೋರ್, ಮುರಳಿಕೃಷ್ಣ ಸಹಿತ ಹಲವರ ಹೆಸರೂ ಇದೆ:
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಅರುಣ್‌ಶ್ಯಾಮ್ ಮಾತ್ರವಲ್ಲದೆ ಇನ್ನೂ ಹಲವರು ಹೆಸರು ರೇಸ್‌ನಲ್ಲಿದೆ. ಹಿಂದೂ ಸಂಘಟನೆಗಳ ಫೈರ್ ಬ್ರಾಂಡ್ ನಾಯಕರಾಗಿರುವ ಡಾ. ಎಂ.ಕೆ. ಪ್ರಸಾದ್ ಅವರಂತೆ ಅಗ್ರೆಸ್ಸಿವ್ ನಾಯಕರಲ್ಲದಿದ್ದರೂ ತನ್ನ ಸರಳತೆ, ಎಲ್ಲರೊಂದಿಗೆ ಬೆರೆಯುವ ಗುಣ, ಸೌಮ್ಯವಾದಿ ಮನಸ್ಸಿನ ಮೂಲಕ ಹಲವರ ಮನಸ್ಸು ಗೆದ್ದಿರುವ ಖ್ಯಾತ ವೈದ್ಯ ಡಾ. ಸುರೇಶ್ ಪುತ್ತೂರಾಯ, ಸಿಟ್ಟಿಂಗ್ ಎಂಎಲ್‌ಎ ಆಗಿದ್ದರೂ ಯಾವ ಸಕಾರಣವೂ ನೀಡದೆ ಹೈಕಮಾಂಡ್‌ನಿಂದ ಟಿಕೆಟ್ ನಿರಾಕರಿಸಲ್ಪಟ್ಟಿದ್ದರೂ ಪಕ್ಷ ಸಂಘಟನೆಯಲ್ಲಿ ಶಿಸ್ತಿನ ಸಿಪಾಯಿಯಂತೆ ತೊಡಗಿಸಿಕೊಂಡಿರುವ ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಜರಂಗದಳದ ಮಾಜಿ ಮುಂದಾಳು ಮುರಳಿಕೃಷ್ಣ ಹಸಂತಡ್ಕ, ಯುವ ಉದ್ಯಮಿ ಉಜ್ವಲ್ ಪ್ರಭು ಮುಂತಾದವರ ಹೆಸರು ಮುಖ್ಯವಾಗಿ ಕೇಳಿ ಬರುತ್ತಿದೆ. ಆದರೆ ಯಾರ ಹೆಸರು ಕೂಡ ಇನ್ನೂ ಅಧಿಕೃತವಾಗಿಲ್ಲ. ಚುನಾವಣೆಗೆ ಇನ್ನೂ ಹಲವು ಸಮಯ ಇರುವಾಗ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಪದ್ಧತಿಯೂ ಈಗ ಇಲ್ಲ. ಹಾಗಾಗಿ ಯಾರ ಹೆಸರು ಖಚಿತವಾಗಿಲ್ಲ ಎಂದು ಪಕ್ಷದ ಮೂಲಗಳಿಂದ ಗೊತ್ತಾಗಿದೆ.

ನಳಿನ್ ಕುಮಾರ್ ಹೆಸರೂ ರೇಸ್‌ನಲ್ಲಿ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸಂಸದರಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ನಳಿನ್ ಕುಮಾರ್ ಕಟೀಲು ಅವರ ಹೆಸರು ಕೂಡ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಕೇಳಿ ಬರುತ್ತಿದೆ. ಮೂಲತಃ ಪುತ್ತೂರು ಭಾಗದವರೇ ಆಗಿರುವ ನಳಿನ್ ಕುಮಾರ್ ಅವರು ಸತತವಾಗಿ ಗೆದ್ದು ಬಂದಿದ್ದರೂ ಅವರಿಗೆ ಮರು ಆಯ್ಕೆಗೆ ಪಕ್ಷ ಅವಕಾಶ ನೀಡಿಲ್ಲ. ಆದರೂ ಪಕ್ಷದ ವಿರುದ್ಧ ಅವರು ಹೋಗಿಲ್ಲ. ಬಂಡಾಯ ನಾಯಕನಾಗಿಲ್ಲ. ಹೊಸ ಸಂಸದ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ದಂಡ ನಾಯಕನಂತೆ ಕೆಲಸ ಮಾಡಿ ಗೆಲುವಿಗಾಗಿ ಶ್ರಮಿಸಿದ್ದಾರೆ. ಆದ್ದರಿಂದ ಅವರಿಗೆ ಅವಕಾಶ ನೀಡಬೇಕು. ಆದರೆ ಇನ್ನು ಸಂಸದ ಸ್ಥಾನಕ್ಕೆ ಅವರಿಗೆ ಅವಕಾಶ ನೀಡುವುದು ಕಷ್ಟ. ಆದ್ದರಿಂದ ರಾಜ್ಯ ರಾಜಕಾರಣಕ್ಕೆ ಕರೆ ತಂದು ನಳಿನ್ ಅವರನ್ನು ಶಾಸಕ ಅಭ್ಯರ್ಥಿಯನ್ನಾಗಿಸಬೇಕು ಎಂಬುದು ಪಕ್ಷದ ಕೆಲವು ಪ್ರಮುಖರ ಲೆಕ್ಕಾಚಾರವಾಗಿದೆ. ಹನುಮಗಿರಿ ಸೇರಿದಂತೆ ನೂರಾರು ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಮುಂಚೂಣಿ ನಾಯಕನಾಗಿ ನಿಂತು ಯಶಸ್ವಿಗೊಳಿಸಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಲು ಖ್ಯಾತ ವಕೀಲರೋರ್ವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here