ಕ್ರಾಂತಿವೀರ, ಸ್ವಾತಂತ್ರ್ಯ ಹೋರಾಟಗಾರ ಉಬಾರ್ ಮಂಜ ಬೈದ್ಯರ ಸಾಧನೆ ಜನರಿಗೆ ತಲುಪಿಸಲು ಸಮಿತಿ ರಚನೆ – ಸ್ಮಾರಕ, ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

0

ಪುತ್ತೂರು: ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರು. ಕ್ರಾಂತಿಕಾರಿ ರೈತ ನಾಯಕರೂ, ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯೂ ಆಗಿದ್ದ ಮಂಜಯ್ಯ ಬೈದ್ಯರ ಕ್ರಾಂತಿಯ ಹೋರಾಟದ ವಿಚಾರಗಳನ್ನು, ಜೀವನಗಾತೆ, ಅವರ ತ್ಯಾಗ ಬಲಿದಾನವನ್ನು ಜನರಿಗೆ ಇನ್ನಷ್ಟು ತಿಳಿಸುವ ಉದ್ದೇಶದಿಂದ ಅವರ ವಂಶಸ್ಥರನ್ನು ಒಳಗೊಂಡ ಕ್ರಾಂತಿಕಾರಿ ಮಂಜಯ್ಯ ಬೈದ್ಯ ಸಂಸ್ಮರಣ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಪುತ್ತೂರು ಅವರ ಹುಟ್ಟೂರು, ಅವರ ಕರ್ಮಭೂಮಿ ಹಾಗಾಗಿ ಇಲ್ಲಿ ವಿಶೇಷ ಮುತುವರ್ಜಿ ವಹಿಸಿಕೊಂಡು ಇಲ್ಲಿ ಪಕ್ಷ ರಹಿತ, ಜಾತ್ಯಾತೀತವಾಗಿ ಸಮಿತಿಯನ್ನು ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಮುದಾಯದವರನ್ನು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಸಮಿತಿ ರಚಿಸಲಾಗುವುದು. ಅಲ್ಲದೆ ಕ್ರಾಂತಿವೀರ ಮಂಜ ಬೈದ್ಯರ ಸ್ಮಾರಕ ನಿರ್ಮಾಣ ಮಾಡುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ದ.ಕ. ಜಿಲ್ಲಾ ಕ್ರಾಂತಿವೀರ ಮಂಜ ವೈದ್ಯ ಸಂಸ್ಮರಣಾ ಸಮಿತಿಯ ಅಧ್ಯಕ್ಷ ಸಂಪತ್ ಬಿ. ಸುವರ್ಣ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.


ಸಂಸ್ಮರಣಾ ಸಮಿತಿಯಿಂದ ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಎಂಬ ಮಾಹಿತಿ ಪತ್ರವನ್ನು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ಅಮರರಾದ ಮಂಜ ಬೈದ್ಯರ ಜೀವನ, ಹೋರಾಟ ಹಾಗೂ ವಿಚಾರಧಾರೆಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದ ದ.ಕ. ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಟಾನ ಬೆಳ್ತಂಗಡಿ ಇದರ ಆಶ್ರಯದಲ್ಲಿ ಅಪ್ರತಿಮ ದೇಶ ಭಕ್ತ, ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಪ್ಪಿನಂಗಡಿಯ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ ಸಾವಿರದ ಸಂಸ್ಕೃತಿಗೆ ಸಾವಿರದ ಇತಿಹಾಸ ಎನ್ನುವ ಪ್ರಚಾರ ಅಭಿಯಾನ ಕೈಗೊಳ್ಳಲಾಗಿದೆ. ಈಗಾಗಲೇ ಇಲ್ಲಿನ ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕರಾದ ಸಂಜೀವ ಮಠಂದೂರು ಸಹಿತ ಎಲ್ಲಾ ಜನಪ್ರತಿನಿಧಿಗಳಿಗೆ ಇದಕ್ಕೆ ಪೂರಕವಾಗಿ ನಮ್ಮ ಬೇಡಿಕೆಗಳಿಗೆ ಸ್ಪಂಧಿಸಿದ್ದಾರೆ. ಈ ಹಿಂದೆಯೂ ಬೇರೆ ಬೇರೆ ಸಮಿತಿಯವರು ಮಂಜಬೈದ್ಯರ ಪುತ್ಥಳಿ ನಿರ್ಮಾಣಕ್ಕೆ, ವೃತ್ತ ನಿರ್ಮಾಣಕ್ಕೆ ಮನವಿ ಸಲ್ಲಿಸಿರುವುದು ನಾವು ಗಮನಿಸಿದ್ದೇವೆ ಎಂದು ಅವರು ತಿಳಿಸಿದರು.


ಅಜಾನುಬಾಹು ಆಗಿದ್ದ ಮಂಜ ಬೈದ್ಯ:
ಮಂಗಲ ಪಾಂಡೆ ನೇತೃತ್ವದಲ್ಲಿ ನಡೆದ ಸಿಪಾಯಿ ದಂಗೆ ಎಂದು ಕರೆಯಲ್ಪಟ್ಟ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 20 ವರ್ಷಗಳ ಮೊದಲೇ ಅಂದರೆ 1837ರಲ್ಲಿ ನಡೆದ ಕಲ್ಯಾಣಪ್ಪನ ಕಾಟುಕಾಯಿ ಹೋರಾಟ ಅಥವಾ ಅಮರ ಸುಳ್ಯದ ಸ್ವಾತಂತ್ರ್ಯ ದಂಗೆಯಲ್ಲಿ ಮಂಜ ಬೈದ್ಯ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರೈತನಾಯಕ ಕೆದಂಬಾಡಿ ರಾಮೇಗೌಡರ ಜೊತೆಗೆ ಅವರಿಗೆ ಹೆಗಲೆಣೆಯಾಗಿ ಹೋರಾಡಿದವರು ಅಜಾನುಬಾಹು ಆಗಿದ್ದ ಏಳು ಕಾಲು ಅಡಿ ಎತ್ತರದ ಉಪ್ಪಿನಂಗಡಿ ಮಂಜ ಬೈದ್ಯರು. ಬ್ರಿಟಿಷರು ರೈತರ ಮೇಲೆ ಹೇರಿದ್ದ ಅನ್ಯಾಯದ ನಗದು ಕಂದಾಯ ನೀತಿಯ ವಿರುದ್ಧ ಸ್ವತಃ ಬ್ರಿಟಿಷ್ ಸರಕಾರದ ಉದ್ಯೋಗಿಯಾಗಿ ಮಂಜ ಬೈದ್ಯ ಅವರು ದಂಗೆ ಎದ್ದರು ಎಂದು ಸಂಪತ್ ಸುವರ್ಣ ವಿವರಿಸಿದರು.


ಮುಂದಿನ ತಲೆಮಾರಿಗೆ ತಿಳಿಯುವಂತಾಗಲು ಸಮಿತಿ:
ಬ್ರಿಟಿಷ್ ಆಡಳಿತದ ಅಂದಿನ ತಾಲೂಕು ಕೇಂದ್ರ ಉಪ್ಪಿನಂಗಡಿಯ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿದ್ದ ಮಂಜ ಬೈದ್ಯರು ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದವರು. ಸ್ವಾತಂತ್ರ್ಯ ಹೋರಾಟದ ವಿಷಯ ತಿಳಿಯುತ್ತಲೇ ಸಿದ್ಧತೆ ಮಾಡಿಕೊಂಡು ಹತ್ತಾರು ಹೋರಾಟಗಾರರೊಂದಿಗೆ ತಾನು ಕುದುರೆಯನ್ನೇರಿ ಬಂದೂಕು ಧರಿಸಿ ವೀರ ಪೋಷಾಕಿನಲ್ಲಿ ಆ ತಂಡವನ್ನು ಸೇರಿಕೊಂಡರು. ಇಂಗ್ಲಿಷ್ ಭಾಷೆ ಬಲ್ಲ ಏಕೈಕ ವ್ಯಕ್ತಿ ಮಂಜ ಬೈದ್ಯರು ರೈತ ಹೋರಾಟಗಾರರೇ ತುಂಬಿದ್ದ ಆ ಗುಂಪನ್ನು ತಂಡದ ಸಮೇತ ಬಂದು ಸೇರಿದ್ದು ಹೋರಾಟಗಾರರ ತಂಡಕ್ಕೆ ಭೀಮ ಬಲ ತಂದು ಕೊಟ್ಟಿತ್ತು. ಉಪ್ಪಿನಂಗಡಿ ಮಂಜ ಬೈದ್ಯರು ಮತ್ತು ಅವರೊಂದಿಗಿನ ಕ್ರಾಂತಿಕಾರಿ ಪಡೆ 1837 ಏಪ್ರಿಲ್ 5ರಂದು ಮಂಗಳೂರಿನ ಬಾವುಟಗುಡ್ಡದಲ್ಲಿದ್ದ ಬ್ರಿಟಿಷರ ಧ್ವಜವನ್ನು ಕೆಳಗಿಳಿಸಿ ಕನ್ನಡಿಗರಾದ ಹಾಲೇರಿ ರಾಜವಂಶದ ಧ್ವಜವನ್ನು ಹಾರಿಸಿದ್ದರು. ಈ ಐತಿಹಾಸಿಕ ಘಟನೆಯಿಂದಾಗಿಯೇ ಆ ಸ್ಥಳಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ. ಈ ಮೂಲಕ ಸುಮಾರು 13 ದಿನಗಳ ಕಾಲ ಇಡೀ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ್ದರು. ಅನಂತರ ಬ್ರಿಟಿಷ್ ಸೈನ್ಯ ಕ್ರಾಂತಿಯನ್ನು ಹತ್ತಿಕ್ಕಿದಾಗ ಮಂಜ ಬೈದ್ಯರನ್ನು ಬಂಧಿಸಲಾಯಿತು. 1837 ಮೇ 27ರಂದು ಅವರನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬ್ರಿಟಿಷರು ಬಹಿರಂಗವಾಗಿ ಗಲ್ಲಿಗೇರಿಸಿದರು. ಜನರಲ್ಲಿ ಭಯ ಹುಟ್ಟಿಸಲು ಬ್ರಿಟಿಷರು ಇವರ ಮೃತದೇಹವನ್ನು ತಿಂಗಳುಗಟ್ಟಲೆ ಗಲ್ಲುಗಂಬದಿಂದ ಕೆಳಗಿಳಿಸದೆ ರಣಹದ್ದುಗಳು ತಿನ್ನುವಂತೆ ಹಾಗೆಯೇ ಬಿಡುವ ಕ್ರೂರ ಆದೇಶವನ್ನು ನೀಡಿದ್ದರು ಎಂದು ವಿವರಿಸಿದ ಸಂಪತ್ ಸುವರ್ಣ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಂಡ ಕಟ್ಟಿ, ಆರ್ಥಿಕ ಬಲ ತುಂಬಿ, ಹೋರಾಡಿ, ಒಂದೊಮ್ಮೆ ಸ್ವಾತಂತ್ಯವನ್ನು ಕೂಡಾ ಪಡೆದ ಹಿರಿಮೆಯೊಂದಿಗೆ ದೇಶಕ್ಕಾಗಿ ಬಲಿದಾನವಾಗಿ ಹೋದವರು ಉಪ್ಪಿನಂಗಡಿ ಮಂಜ ಬೈದ್ಯರು. ಇಂಥ ಮಹಾನ್ ಸ್ವಾತಂತ್ರ್ಯ ಹೋರಾಟಗಾರನ ಹಿರಿಮೆ ಗರಿಮೆ, ಬಲಿದಾನ ಇಂದಿನ ಹಾಗೂ ಮುಂದಿನ ತಲೆಮಾರಿಗೆ ತಿಳಿಯುವಂತಾಗಲು ಪ್ರಸ್ತುತ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ಸಂಪತ್ ಸುವರ್ಣ ಮಾಹಿತಿ ನೀಡಿದರು.


ಧರ್ಮಸ್ಥಳದ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಫಿರಂಗಿಗಳನ್ನು ಕಳುಹಿಸಿದ್ದರು:
ಮಂಜ ಬೈದ್ಯರ ದಂಗೆಯ ಇತಿಹಾಸದ ಕುರಿತು ವಿವರಿಸಿದ ಸಂಪತ್ ಅವರು ತುಳುನಾಡಿನ ರೈತ ದಂಗೆಯ ನಾಯಕರಾದ ಕಲ್ಯಾಣಪ್ಪ, ರಾಮೇಗೌಡ ಮತ್ತು ನಂಜಯ್ಯರ ನೇತೃತ್ವದಲ್ಲಿ ಸುಳ್ಯದಿಂದ ಬಂದಿದ್ದ ದಂಡಾಳುಗಳಿಗೆಲ್ಲ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಊಟ, ಉಪಹಾರಾದಿಗಳ ತಯಾರಿಗಾಗಿ ಗದ್ದೆಯಲ್ಲಿ ಚಪ್ಪರ ಹಾಕಿ ಅಡುಗೆಯ ಭಟ್ಟರುಗಳನ್ನು ನೇಮಕ ಮಾಡಲಾಗಿತ್ತು. ದಂಡಿನವರೆಲ್ಲ ಅಲ್ಲಿ ಹೋಗಿ ವಿಶ್ರಮಿಸಿಕೊಳ್ಳಬೇಕೆಂದು ವಿನಂತಿಸಿಕೊಂಡರು. ವ್ಯಾಪಾರಸ್ಥರ ಕೇಳಿಕೆಯಂತೆ ದಂಡಿನವರೆಲ್ಲ ದೇವಸ್ಥಾನದ ಎದುರಿನ ಮಜಲು ಗದ್ದೆಗೆ ತೆರಳಿದರು. ರಾತ್ರಿ ಊಟ ಮಾಡಿ ಮಲಗಿ ಸುಖವಾಗಿ ನಿದ್ರಿಸಿದರು. ಆ ದಿನ ಎಪ್ರಿಲ್ ತಿಂಗಳ ಮೊದಲ ದಿನ ಮುಂಜಾನೆ ಎದ್ದು ಎಲ್ಲರೂ ಹತ್ತಿರದ ಕೆರೆ, ಬಾವಿಗಳನ್ನರಸಿ ಕೊಂಡು ಹೋಗಿ ಸ್ನಾನಾದಿಗಳನ್ನು ಮುಗಿಸಿ ಶುಚಿರ್ಭೂತರಾಗಿ ಬಂದರು. ಕಲ್ಯಾಣಪ್ಪನ ಜೊತೆಗೂಡಿ ಹೋಗಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದರು. ಆಗ ಅಲ್ಲಿ ನಟ್ಟೋಜ ಮನೆತನದವರು ಇದ್ದರು. ಅವರಲ್ಲಿ ಹೇಳಿ ಎಳನೀರು ತರಿಸಿ ದೇವರಿಗೆ ಅಭಿಷೇಕ ಮಾಡಿಸಲಾಯಿತು. ಪ್ರಸಾದ ವಿತರಣೆ ಮಾಡಿದ ಬಳಿಕ ನಟ್ಟೋಜರು ತಮ್ಮ ಮನೆಯಿಂದ ಎಳನೀರು ತರಿಸಿ ದಂಡಿನಲ್ಲಿದ್ದ ಗಣ್ಯರಿಗೆಲ್ಲ ಕುಡಿಯಲು ಕೊಟ್ಟು ಶುಭಹಾರೈಸಿದರು. ದೇವಾಲಯದಿಂದ ಹೊರ ಬಂದಾಗ ಉಪ್ಪಿನಂಗಡಿ ಕಡೆಯಿಂದ ಒಂದು ಯುವಕರ ಪಡೆ, ಕಲ್ಯಾಣಪ್ಪನ ದಂಡಿನಲ್ಲಿ ಸೇರಿಕೊಳ್ಳಲು ಬರುತ್ತಿರುವುದು ಕಂಡಿತು. ಉಪ್ಪಿನಂಗಡಿಯಿಂದ ಬಂದ ಯುವಕರ ಪಡೆಯ ನಾಯಕ ಮಂಜ ಬೈದ್ಯರಾಗಿದ್ದರು. ಮಂಜ ಬೈದ್ದ ಉಪ್ಪಿನಂಗಡಿಯ ಒಬ್ಬ ರೈತರಾಗಿದ್ದರು. ಆತ ಇಂಗ್ಲಿಷ್ ಓದು ಬರಹ ಕಲಿತವನಾದ ಕಾರಣ ಆತನನ್ನು ಉಪ್ಪಿನಂಗಡಿಯ ತಾಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಬ್ರಿಟಿಷರು ನೇಮಿಸಿಕೊಂಡಿದ್ದರು. ಆಗ ಉಪ್ಪಿನಂಗಡಿಯಲ್ಲಿ ಅವಿಭಜಿತ ಪುತ್ತೂರು ತಾಲೂಕು ಕಚೇರಿ ಇತ್ತು ಮಂಜ ಬೈದ್ಯ ಬ್ರಿಟಿಷರಿಂದ ಸಂಬಳ ಪಡೆಯುತ್ತಿದ್ದರೂ ಬ್ರಿಟಿಷರ ಅನುಯಾಯಿಯಾಗಿರಲಿಲ್ಲ. ಬ್ರಿಟಿಷರ ವಿರೋಧಿಯಾಗಿದ್ದರು. ಬ್ರಿಟಿಷರನ್ನು ಈ ಊರಿಂದ ಓಡಿಸುವ ಕಾಲ ಯಾವಾಗ ಬರುತ್ತದೆ ಎಂದು ಕಾದುಕೊಂಡಿದ್ದರು. ಕಲ್ಯಾಣಪ್ಪನ ದಂಡು ಪುತ್ತೂರಲ್ಲಿ ಬಂದು ತಂಗಿದೆ ಎಂಬ ಸುದ್ದಿ ತಿಳಿದೊಡನೆ ಆತ ತನ್ನ ಗೆಳೆಯರು, ಬಂಧು ಬಾಂಧವರೊಡಗೂಡಿ ಕಚೇರಿಯಲ್ಲಿದ್ದ ಬ್ರಿಟಿಷ ಅಧಿಕಾರಿಗಳನ್ನೆಲ್ಲಾ ಬಂಧಿಸಿ ಖಜಾನೆಯ ಬೀಗ ಒಡೆದು ಅಲ್ಲಿದ್ದ ಅಪಾರ ಹಣವನ್ನು ಚೀಲದಲ್ಲಿ ತುಂಬಿಸಿ ಕುದುರೆಯ ಮೇಲೆ ಹೇರಿಕೊಂಡು ಹತ್ತಾರು ದೇಶಭಕ್ತ ಯುವಕರನ್ನು ಸೇರಿಕೊಂಡು ಪುತ್ತೂರಿಗೆ ಬಂದಿದ್ದರು. ಮಂಜ ಬೈದ ಕುದುರೆಯಿಂದಿಳಿದು ಬಂದು ರಾಮೆಗೌಡ, ಕಲ್ಯಾಣಪ್ಪ ಮತ್ತು ನಂಜಯ್ಯನವರೊಂದಿಗೆ ಮಾತನಾಡಿದರು. ತಾನು ತಂದ ಕಾಣಿಕೆಯನ್ನು ಕಲ್ಯಾಣಸ್ವಾಮಿಗೊಪ್ಪಿಸಿದರು. ತನ್ನೊಂದಿಗೆ ಬಂದ ನೂರಾರು ದಂಡಾಳುಗಳ ಜೊತೆಯಲ್ಲಿ ತಾನು ಕೂಡ ದಂಡಿನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಅಷ್ಟರವರೆಗೆ ದಂಡಾಳುಗಳ ಯೋಗಕ್ಷೇಮವನ್ನೆಲ್ಲ ಕೆದಂಬಾಡಿ ರಾಮೇ ಗೌಡರೇ ನೋಡಿಕೊಳ್ಳುತ್ತಿದ್ದರು. ಈಗ ಅವರಿಗೆ ಇನ್ನೊಬ್ಬ ದಂಡನಾಯಕ ಲಭಿಸಿದಂತಾಯಿತು. ಮಂಜ ಬೈದ್ಯರು ಆಂಗ್ಲ ಭಾಷೆ ಬಲ್ಲವರಾದುದು ಇನ್ನಷ್ಟು ಸಹಕಾರಿಯಾಯಿತು. ಮಂಜ ಬೈದರು ದಂಡಿಗೆ ಸೇರಿದುದರಿಂದ ದಂಡಿನಬಲ ಇಮ್ಮಡಿಗೊಂಡಂತಾಯಿತು. ಎಲ್ಲರೂ ಸೇರಿ ಉಪಾಹಾರ ಮುಗಿಸಿದರು.ಪುತ್ತೂರಿನಲ್ಲಿ ನಾವು ನಮ್ಮದಂಡಿನ ಬಲ ಪ್ರದರ್ಶನಗೊಳಿಸಿಲ್ಲ. ಅದನ್ನು ತೋರ್ಪಡಿಸಿ, ಪುತ್ತೂರಿನಲ್ಲೊಂದು ದರ್ಬಾರು ನಡೆಸಿ, ನಾವು ಮಂಗಳೂರಿನತ್ತ ಮುಂದುವರಿಯೋಣ ಎಂದು ಮಂಜ ಬೈದ್ಯರು ಹೇಳಿದರು. ಎಲ್ಲರೂ ಸಂತೋಷದಿಂದ ಅದಕ್ಕೊಪ್ಪಿದರು. ಧರ್ಮಸ್ಥಳದ ಆಗಿನ ಧರ್ಮಾಧಿಕಾರಿಗಳಾಗಿದ್ದ ಮಂಜಯ್ಯ ಹೆಗ್ಗಡೆಯವರು ಫಿರಂಗಿಗಳನ್ನು ಕಳುಹಿಸಿದರು. ಬಳಿಕ ದಂಡಾಳುಗಳೆಲ್ಲ ಮೆರವಣಿಗೆಗೆ ಸಜ್ಜಾದರು. ರಾಜನ ಪೋಷಾಕಿನಲ್ಲಿದ್ದ ಕಲ್ಯಾಣಪ್ಪ, ದಂಡನಾಯಕರ ಪೋಷಾಕಿನಲ್ಲಿದ್ದ ರಾಮೇಗೌಡ ಮತ್ತು ಮಂಜ ಬೈದ್ಯ ದಿವಾನನ ವೇಷದಲ್ಲಿದ್ದ ನಂಜಯ್ಯ ಕುದುರೆ ಏರಿ ಮುಂದೆ ಇದ್ದರು. ಅವರ ಹಿಂದಿನಿಂದ ಉಳಿದ ಅಶ್ವಾರೋಹಿಗಳಿದ್ದರು. ಪದಾತಿಗಳಿದ್ದರು. ದಂಡಾಳುಗಳನ್ನು ಎರಡು ವಿಭಾಗ ಮಾಡಿ ಒಂದು ವಿಭಾಗವನ್ನು ಕಲ್ಯಾಣಪ್ಪನಿಗಿಂತ ಮುಂದೆ ನಿಲ್ಲಿಸಲಾಯಿತು. ರಾಮೇಗೌಡರು ಆ ತಂಡಕ್ಕೆ ನಾಯಕನಾಗಿ ನಿಂತರು. ಉಳಿದೊಂದು ಪಡೆ ಹಿಂದಿನಿಂದ ಇತ್ತು. ಅದಕ್ಕೆ ಮಂಜ ಬೈದರು ನಾಯಕರಾಗಿದ್ದರು. ಕಲ್ಯಾಣಪ್ಪನ ಪಡೆ ದೇವಾಲಯದ ಮುಂಭಾಗದ ಮಜಲು ಗದ್ದೆಯಿಂದ ಹೊರಟು ದರ್ಬೆಯ ಗೇಟಿನವರೆಗೆ ಹೋಯಿತು. ಅಲ್ಲಿಂದ ಹಿಂತಿರುಗಿ ಕಲ್ಲೇಗಕ್ಕೆ ಮುಂದುವರಿಯಿತು. ದಂಡಾಳುಗಳು ಜೈಕಾರ ಹಾಕುತ್ತಿದ್ದರು. ರಸ್ತೆಯ ಇಕ್ಕಡೆಗಳಲ್ಲಿ ನಿಂತ ಜನರು ಜಯ ಘೋಷಣೆಯನ್ನು ಅವರಿಗೆ ಮಾಡುತ್ತಿದ್ದರು. ಕಲ್ಲೇಗದವರೆಗೆ ಹೋದ ದಂಡಾಳುಗಳು ಹಿಂತಿರುಗಿ ಬಂದು ಪುತ್ತೂರಿನ ಉಪಕಲೆಕ್ಟರನ ಕಚೇರಿ ಎದುರು ಜಮೆಗೊಂಡರು. ಊರವರು ಕೂಡ ಅಲ್ಲಿ ಬಹಳಷ್ಟು ಸಂಖ್ಯೆಯಿಂದ ಒಟ್ಟಾಗಿ ಸೇರಿದ್ದರು. ರಾಮೇಗೌಡರು ಕಲ್ಯಾಣ ಸ್ವಾಮಿಯನ್ನು ಕಲೆಕ್ಟರನ ಆಸನದಲ್ಲಿ ಕುಳಿತುಕೊಳ್ಳಿಸಿದರು. ಉಳಿದವರು ಅವರ ಹಿಂದೆ ನಿಂತರು. ರಾಮೇಗೌಡರು ಸುಳ್ಯ-ಪುತ್ತೂರು ಸ್ವತಂತ್ರ್ಯವಾಗಿದೆ. ಬ್ರಿಟಿಷರನ್ನು ಇಲ್ಲಿಂದ ಹೊಡೆದೋಡಿಸಲಾಗಿದೆ. ಕಲ್ಯಾಣ ಸ್ವಾಮಿಯನ್ನು ನಾವು ನಮ್ಮ ಮಹಾರಾಜನನ್ನಾಗಿ ಸ್ವೀಕರಿಸಿದ್ದೇವೆ. ಇನ್ನು ಬ್ರಿಟಿಷರಿಗೆ ಯಾರೂ ತೆರಿಗೆ ತೆರಬೇಕಾಗಿಲ್ಲ. ನಮ್ಮ ದಂಡಯಾತ್ರೆಗೆ ನೀವೆಲ್ಲ ತನು-ಮನ-ಧನದಿಂದ ಸಹಕರಿಸಬೇಕು. ಮಂಗಳೂರಿನವರೆಗೆ ತೆರಳಿ ತುಳು ರಾಜ್ಯವನ್ನು ವಶಪಡಿಸಿಕೊಳ್ಳಲು ನೀವು ಆಶೀರ್ವದಿಸಬೇಕು ಎಂದು ಹೇಳಿ ಕಲ್ಯಾಣ ಸ್ವಾಮಿಗೆ ಜಯಘೋಷ ಹಾಕಿದರು. ನಂತರ ಮಂಗಳೂರಿಗೆ ತೆರಳಿ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದರು. ಹೀಗೆ ಭಾರತಕ್ಕೆ ಸ್ವಾತಂತ್ಯ ದೊರಕುವ ಎಷ್ಟೋ ಸಮಯಕ್ಕೆ ಮುಂಚೆಯೇ ತುಳುನಾಡನ್ನು ಸ್ವತಂತ್ರ ಗೊಳಿಸಿದ ಹಿರಿಮೆ ಕೆದಂಬಾಡಿ ರಾಮೇಗೌಡರು ಮತ್ತು ಉಪ್ಪಿನಂಗಡಿ ಮಂಜ ಬೈದ್ಯ ಹಾಗೂ ತಂಡದವರದ್ದಾಗಿತ್ತು. ಆ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕದೆ ಇರುತ್ತಿದ್ದಲ್ಲಿ ತುಳುನಾಡಿನ ರೈತರ ಹೋರಾಟದ ಕಿಚ್ಚು ದೇಶವ್ಯಾಪಿಯಾಗುತ್ತಿತ್ತೇನೋ. ಇದೀಗ ಮಂಜ ಬೈದ್ಯರಿಲ್ಲ. ಅವರ ದೇಶಪ್ರೇಮ, ಹೋರಾಟದ ಕಿಚ್ಚು, ಸಂಘಟನಾ ಚಾತುರ್ಯ, ನಾಯಕತ್ವದ ಮಾದರಿ ನಮಗೆ ಆದರ್ಶವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಬೇಕಾದುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಸಂಸ್ಮರಣಾ ಸಮಿತಿಯಿಂದ ವಿವರಣೆ ನೀಡಲಾಯಿತು.


ಉಪ್ಪಿನಂಗಡಿಯಲ್ಲಿ ವೃತ್ತ ನಿರ್ಮಾಣಕ್ಕೆ ಶಾಸಕರೇ ಪತ್ರಿಕಾಗೋಷ್ಟಿಯಲ್ಲಿ ಉಲ್ಲೇಖಿಸಿದ್ದರು:
ಜಿಲ್ಲಾ ಸಮಿತಿ ಪ್ರಧಾನ ಸಂಚಾಲಕ ಡಾ. ರಾಜರಾಮ್ ಕೆ.ಪಿ ಅವರು ಮಾತನಾಡಿ ಹಲವಾರು ಹೋರಾಟಗಾರ ತ್ಯಾಗ ಬಲಿದಾನದಿಂದ ನಾವು ಇವತ್ತು ಸ್ವತಂತ್ರರಾಗಿದ್ದೇವೆ. ಈ ನಿಟ್ಟಿನಲ್ಲಿ ಅವರನ್ನು ನೆನೆಪಿಸುವುದು ನಮ್ಮ ಕರ್ತವ್ಯ ಎಂದು ಮಂಜಬೈದ್ಯರನ್ನು ಸ್ಮರಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲ ಸಮಿತಿ ರಚನೆ ಮಾಡಿದ್ದೇವೆ. ಉಪ್ಪಿನಂಗಡಿಯಲಿ ಮಂಜಬೈದ್ಯರ ವೃತ್ತ ನಿರ್ಮಾಣಕ್ಕೆ ಈ ಹಿಂದೆಯೇ ಶಾಸಕ ಅಶೋಕ್ ಕುಮಾರ್ ರೈ ಅವರು ಪತ್ರಿಕಾಗೋಷ್ಟಿಯಲ್ಲಿ ಉಲ್ಲೇಖಿಸಿದ್ದರು. ಇದರ ಜೊತೆಗೆ ಬೇರೆ ಸಮಿತಿಯಿಂದ ಈ ಕುರಿತು ಶಾಸಕರಿಗೆ ಮನವಿ ನೀಡಿದ್ದೇವೆ. ಕೆದಂಬಾಡಿ ರಾಮಯ್ಯ ಗೌಡರು, ಎನ್.ಕಿಲ್ಲೆ ಸಹಿತ ಹಲವಾರು ಮಂದಿ ತುಳುನಾಡಿನ ದೇಶ ಭಕ್ತರು ಇದ್ದಾರೆ. ಅದೇ ರೀತಿ ಮಂಜಬೈದ್ಯರು ಕೂಡಾ ಪುತ್ತೂರು ತಾಲೂಕಿನ ವೀರ ಪುರುಷರು. ಅವರ ಉಪಕಾರಸ್ಮರಣೆಯನ್ನು ನಾವು ಮಾಡಬೇಕಾಗಿದೆ ಎಂದರು.


ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಉದ್ದೇಶ:
ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಪುತ್ತೂರು ತಾಲೂಕಿನ ಪ್ರಧಾನ ಸಂಚಾಲಕ ಆರ್.ಸಿ.ನಾರಾಯಣ ಅವರು ಮಾತನಾಡಿ ಸ್ವಾತಂತ್ರ್ಯ ಹೋರಾಟಗಾರರ ನೆನಪು ಮತ್ತು ಮನನ ಮಾಡುವ ನಿಟ್ಟಿನಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿಯನ್ನು, ವೃತ್ತ ನಿರ್ಮಾಣ ಮಾಡಿದ್ದೇವೆ. ಆದರೆ ಮಂಜಬೈದ್ಯರ ಸ್ಮರಣೆ ಕಾರ್ಯಕ್ರಮ ಆಗಿರಲಿಲ್ಲ. ಈ ಕುರಿತು ರಾಮಕೃಷ್ಣ ಆಚಾರ್ ಅವರ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ರೈತ ಪರ ಹೋರಾಟಗಾರರಾಗಿದ್ದ ಮಂಜಬೈದ್ಯರು ಬ್ರಿಟೀಷರ ವಿರುದ್ಧ ಹೋರಾಟ ಮಾಡಿದವರು. ಈ ನಿಟ್ಟಿನಲ್ಲಿ ಅವರನ್ನು ಬಿಕರ‍್ನ ಕಟ್ಟೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು. ಈ ಇತಿಹಾಸವನ್ನು ರಾಮಕೃಷ್ಣ ಆಚಾರ್ ಅವರ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಮಂಜಬೈದ್ಯರ ಸಂಸ್ಮರಣೆಯನ್ನು ಮೇ.27ಕ್ಕೆ ಕಾರ್ಯಕ್ರಮ ನಡೆಯಲಿದೆ. ಆ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕೆಂದರು.


ವೃತ್ತಕ್ಕೆ ಮಂಜಬೈದ್ಯರ ನಾಮಕರಣಕ್ಕೆ ಉಪ್ಪಿನಂಗಡಿ ಪಂಚಾಯತ್‌ನಲ್ಲಿ ಹಿಂದೆಯೇ ಒತ್ತಾಯಿಸಿದ್ದೆ:
ಪುತ್ತೂರು ಸಮಿತಿಯ ಸಂಚಾಲಕ ಸುರೇಶ್ ಅತ್ರಿಮಜಲು ಅವರು ಮಾತನಾಡಿ ಯಾವಾಗ ರಾಮೇಗೌಡರ ಹೋರಾಟ ಸಮಿತಿ ಮೂಲಕ ರಾಮಯ್ಯ ಗೌಡರ ಪುತ್ಥಳಿಯನ್ನು ಮಂಗಳೂರಿನಲ್ಲಿ ಸ್ಥಾಪನೆ ಮಾಡಿದ್ದೇವೂ ಆಗ ಇತಿಹಾಸ ಗೊತ್ತಾಯಿತ್ತು. ಆಗ ಮಂಜಬೈದ್ಯರ ಬಗ್ಗೆ ವಿಚಾರ ಬಗ್ಗೆ ಮಾಹಿತಿ ಕಳೆ ಹಾಕಿದಾಗ ಉಪ್ಪಿನಂಗಡಿಯವರು ಎಂಬ ಮಾಹಿತಿ ತಿಳಿದ ಕೂಡಲೇ ನಾನು ಪಂಚಾಯತ್‌ನಲ್ಲಿ ಹಲವಾರು ಬಾರಿ ಉಪ್ಪಿನಂಗಡಿಯಲ್ಲಿ ವೃತ್ತಕ್ಕೆ ಮಂಜಬೈದ್ಯರ ನಾಮಕರಣ ಮಾಡಲು ಒತ್ತಾಯಿಸಿದ್ದೆ. ಆದರೆ ಮಂಜಬೈದ್ಯರ ಸ್ಪಷ್ಟ ಮಾಹಿತಿ ಇರಲಿಲ್ಲ. ಆದರೆ ಮತ್ತೆ ಮಾಹಿತಿ ಕೆದಕಿದಾಗ ಅವರ ವಂಶಸ್ಥರು ನಮ್ಮ ಮನೆಯ ಪಕ್ಕದವರೇ ಆಗಿದ್ದರು. ಈ ಕುರಿತು ಇತಿಹಾಸ ಪಡೆಯಲು ಹಿರಿಯ ಪತ್ರಕರ್ತರಾಗಿದ್ದ ಗೋಪಾಲಕೃಷ್ಣ ಕುಂಟಿನಿಯವರು ಬಹಳ ಶ್ರಮ ಪಟ್ಟಿದ್ದಾರೆ ಎಂದವರು ತಿಳಿಸಿದರು. ಒಟ್ಟಿನಲ್ಲಿ ಉಪ್ಪಿನಂಗಡಿಯಲ್ಲಿ ವೃತ್ತವಾಗಲಿ, ಪ್ರತಿಮೆಯಾಗಲಿ ಎಲ್ಲದಕ್ಕೂ ಧರ್ಮಾತಿತ, ಜಾತ್ಯಾತೀತವಾಗಿ ನಾವು ಒತ್ತಾಯಿಸುತ್ತೇವೆ ಎಂದರು.


ಮಂಜಬೈದ್ಯರ ಸಂಸ್ಮರಣೆ ನಿರಂತರ ನಡೆಯಬೇಕು:
ಗೌರವ ಸಲಹೆಗಾರರು ಮತ್ತು ಮಂಜ ಬೈದ್ಯರ ವಂಶಸ್ಥರಾಗಿರುವ ವೆಂಕಪ್ಪ ಪೂಜಾರಿ ನನ್ನ ಹಿರಿಯರು ಹೇಳಿದ ಮಾಹಿತಿಯಂತೆ ಹೆರಿಗೆ ಮಾಡಿಸುತ್ತಿದ್ದ ಅಜ್ಜಿಯ ವಂಶಸ್ಥರರು ಮಂಜಬೈದ್ಯರು ಎಂದು ವಿವರಿಸಿದ ಅವರು ಮಂಜಬೈದ್ಯರು ಅಜಾನುಬಾಹುವಾಗಿದುದ, 7 ಪೀಟ್ ಉದ್ದವಾಗಿದ್ದರು ಎಂದು ನನ್ನ ಅಜ್ಜಿ ಹೇಳಿದ್ದರು. ಮಂಜಬೈದ್ಯರು ಬ್ರಿಟೀಷರ ಖಜಾನೆ ಲೂಟಿ ಮಾಡಿದ್ದಾರೆಂಬ ಆರೋಪದಡಿಯಲ್ಲಿ ಬ್ರಿಟೀಷರು ಬೆಳಗ್ಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಂಜಬೈದ್ಯರನ್ನು ಹಿಡಿದುಕೊಂಡು ಹೋಗಲು ಬಂದಿದ್ದರು. ಆಗ ಮಂಜಬೈದ್ಯರು ಅವರನ್ನು ಹತ್ಯೆ ಮಾಡಿ ಕಾಡಿ ಓಡಿ ಹೋಗಿದ್ದರು. ಅದಾದ ಬಳಿಕ ಏನಾಯಿತು ಎಂದು ಗೊತ್ತಿಲ್ಲ ಎಂದು ನಮ್ಮ ಹಿರಿಯರು ಹೇಳಿರುವ ಮಾತು. ಆದರೆ ಇದೀಗ ಅವರು ದಾಖಲೆಯ ಪ್ರಕಾರ ಬ್ರಿಟೀಷರಿಂದ ಬಂಧನಕ್ಕೆ ಒಳಗಾಗಿ ಗಲ್ಲಿಗೇರಿಸಿದ ವಿಚಾರ ಈಗ ನಮಗೆ ಗೊತ್ತಾಗಿದೆ. ಮುಂದೆ ಮಂಜಬೈದ್ಯರ ಸಂಸ್ಮರಣೆ ನಡೆಯಬೇಕಾಗಿದೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ರಮಾನಾಥ್ ವಿಟ್ಲ, ಮಂಜಯ್ಯ ಬೈದ್ಯ ಅವರ ವಂಶದ ಜನಾರ್ದನ ಪೂಜಾರಿ, ವಸಂತ, ಪುತ್ತೂರು ಸಮಿತಿ ಸಂಚಾಲಕರಾಗಿರುವ ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಇನ್ನೋರ್ವ ಸಂಚಾಲಕ ಸುನಿಲ್ ದಡ್ಡು, ಬೆಳ್ತಂಗಡಿ ಸಮಿತಿ ಸಂಚಾಲಕ ಶಶಿಧರ್, ಉಪ್ಪಿನಂಗಡಿ ಯುವವಾಹಿನಿ ಅಧ್ಯಕ್ಷ ಮನೋಜ್ ಸಾಲ್ಯಾನ್, ಕಾರ್ಯದರ್ಶಿ ರಮೇಶ್ ಬಿಳಿಯೂರು ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಮಂಜ ಬೈದ್ಯರ ಸ್ಮಾರಕ ನಿರ್ಮಾಣ, ವೃತ್ತ ನಿರ್ಮಾಣ ಸಹಿತ ಹಲವು ಬೇಡಿಕೆ
ಮಂಜಯ್ಯ ಬೈದ್ಯ ಅವರ ಸ್ಮಾರಕವನ್ನು ಹಾಗೂ ಕಂಚಿನ ಪುತ್ಥಳಿಯನ್ನು ಉಪ್ಪಿನಂಗಡಿಯಲ್ಲಿ ನಿರ್ಮಾಣ ಮಾಡಬೇಕು, ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಥವಾ ನಗರದ ಪ್ರಮುಖ ಜಾಗದಲ್ಲಿ ಮಂಜ ಬೈದ್ಯರ ಪ್ರತಿಮೆ ಸ್ಥಾಪಿಸಬೇಕು. ಸರಕಾರಿ ಉದ್ಯೋಗಿಯಾಗಿದ್ದ ಮಂಜ ಬೈದ್ಯರ ನೆನಪಿಗೆ ಅವಿಭಜಿತ ಪುತ್ತೂರು ತಾಲೂಕಿನ(ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರು) ಯಾವುದಾದರೂ ಮಿನಿ ವಿಧಾನ ಸೌಧಕ್ಕೆ, ಸರಕಾರಿ ಕಾಲೇಜಿಗೆ ಮಂಜ ಬೈದ್ಯರ ಹೆಸರನ್ನು ಇಡಬೇಕು. ಉಪ್ಪಿನಂಗಡಿ-ಗುರುವಾಯನಕೆರೆ ಮುಖ್ಯ ರಸ್ತೆಗೆ ಉಪ್ಪಿನಂಗಡಿ ಮಂಜ ಬೈದ್ಯರ ಹೆಸರು ಇಡಬೇಕು. ಬೆಳ್ತಂಗಡಿ ಉಪ್ಪಿನಂಗಡಿ ಮಧ್ಯ ಭಾಗ ಕಲ್ಲೇರಿಯಲ್ಲಿ ಮಂಜ ಬೈದ್ಯರ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕು, ಶಾಲಾ ಪಠ್ಯ ಪುಸ್ತಕಗಳಲ್ಲಿ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟದ ವಿಚಾರ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಕರಾವಳಿಯ ಯೋಧರ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು., ಸರಕಾರಿ ಆಚರಣೆಗಳಲ್ಲಿ ಮಂಜ ಬೈದ್ಯರ ಹುಟ್ಟು ಹಬ್ಬವನ್ನೂ, ವೀರ ಹುತಾತ್ಮ ದಿನವನ್ನು ಆಚರಿಸಬೇಕು, ಮಂಜ ವೈದ್ಯರನ್ನು ಗಲ್ಲಿಗೇರಿಸಿದ ಮಂಗಳೂರಿನ ಬಿಕರ್ನಕಟ್ಟೆಯ ಬಳಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು ಎಂದು ಹೇಳಿದ ಸಂಪತ್ ಸುವರ್ಣ ಅವರು ಈ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಮಿತಿಯ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.

ಬಿಕರ್ನಕಟ್ಟೆ ಹೆಸರು ಯಾಕೆ ಬಂತು?
1837ರ ಮೇ 27ರಂದು ಮಂಗಳೂರಿನಲ್ಲಿ ಬ್ರಿಟಿಷರು ಮಂಜ ಬೈದ್ಯರನ್ನು ಗಲ್ಲಿಗೇರಿಸಿದರು. ಬ್ರಿಟಿಷರು ಕ್ರೌರ್ಯದ ಪರಮಾವಧಿಯಾಗಿ, ಜನರಲ್ಲಿ ಭಯ ಹುಟ್ಟಿಸಲು ಮಂಜ ಬೈದ್ಯರ ಶವವನ್ನು ಬಿಕರ್ನಕಟ್ಟೆಯ ಬಯಲಿನಲ್ಲಿ ಕಾಗೆ, ಹದ್ದುಗಳು ತಿನ್ನುವಂತೆ ಹಾಗೆಯೇ ನೇತು ಹಾಕಿದ್ದರು ಎಂದು ಇತಿಹಾಸ ಹೇಳುತ್ತದೆ. ಈ ಭೀಕರ ಮರಣದ ಸಾಕ್ಷಿಯಾದ ಸ್ಥಳವಾಗಿದ್ದರಿಂದಲೇ ಈ ಜಾಗಕ್ಕೆ ಮುಂದೆ ಭೀಕರ ಮರಣದ ಕಟ್ಟೆ, ಬಿಕರ್ನಕಟ್ಟೆ’ ಎಂಬ ಹೆಸರು ಬಂದಿತು ಎಂಬ ಜನ ಪ್ರತೀತಿ ಇದೆ ಎಂದು ಸಂಪತ್ ಸುವರ್ಣ ತಿಳಿಸಿದರು.

LEAVE A REPLY

Please enter your comment!
Please enter your name here