






ಪುತ್ತೂರು: ಇನ್ನೆರಡು ದಿನಗಳಲ್ಲಿ ಕರ್ನಾಟಕದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಕುತೂಹಲ ಮನೆಮಾಡಿದೆ. ಈ ನಡುವೆ ಬಹುತೇಕ ಕಾಂಗ್ರೆಸ್ ಶಾಸಕರು ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು, ಕೆಲವರು ದೆಹಲಿಗೂ ಪಯಣ ಬೆಳೆಸಿದ್ದಾರೆ.


ಸಚಿವ ಸ್ಥಾನಕ್ಕಾಗಿ ಎಲ್ಲೆಡೆ ಲಾಬಿ ನಡೆಯುತ್ತಿದೆ.ಆದರೆ ಇದೆಲ್ಲದರ ನಡುವೆ ಪುತ್ತೂರು ಶಾಸಕ ಅಶೋಕ್ ರೈ ಯಾವುದೇ ಲಾಬಿಗೂ ಮುಂದಾಗದೆ ತಮ್ಮ ಕ್ಷೇತ್ರದ ಜನರ ಜೊತೆ ಬೆರೆತಿದ್ದಾರೆ. ಸೋಮವಾರ ಎಂದಿನಂತೆ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರದಲ್ಲಿ ತೊಡಗಿಸಿಕೊಂಡಿದ್ದರು.“ಎಲ್ಲರೂ ಬೆಂಗಳೂರಿನಲ್ಲೇ ಇದ್ದಾರೆ, ನೀವು ಕ್ಷೇತ್ರದಲ್ಲಿದ್ದೀರಲ್ಲಾ” ಎಂದು ಕೇಳಿದಾಗ ಶಾಸಕರು ಹೀಗೆ ಪ್ರತಿಕ್ರಿಯಿಸಿದರು: “ನಾನು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುವುದಿಲ್ಲ. ಸಂಬಂಧಪಟ್ಟವರಿಗೆ ಗೊತ್ತಿದೆ ಯಾರಿಗೆ ಸಚಿವ ಸ್ಥಾನ ಕೊಡಬೇಕೆಂದು. ಈ ನಡುವೆ ಲಾಬಿ ಮಾಡಿ ಏನು ಪ್ರಯೋಜನ? ದೇವರು ನಮ್ಮ ಹಣೆಯಲ್ಲಿ ಏನು ಬರೆದಿರುತ್ತಾನೋ ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ಸಚಿವನಾಗಬೇಕು ಎಂದು ನನ್ನ ಹಣೆಯಲ್ಲಿ ಬರೆದಿದ್ದರೆ ಖಂಡಿತವಾಗಿಯೂ ಸಿಗುತ್ತದೆ.”“ನನಗೆ ನನ್ನ ಜನರ ಕ್ಷೇಮ ಮುಖ್ಯ. ಪ್ರತಿ ಸೋಮವಾರ ನನ್ನನ್ನು ಭೇಟಿಯಾಗಲು ನೂರಾರು ಮಂದಿ ಕಚೇರಿಗೆ ಬರುತ್ತಾರೆ. ನಾನಿಲ್ಲದೇ ಇದ್ದರೆ ಅವರಿಗೂ ಬೇಸರವಾಗುತ್ತದೆ” ಎಂದು ಅಶೋಕ್ ರೈ ಹೇಳಿದರು.













